ಗುಲ್ಬರ್ಗಾ

ರಾಜಕೀಯ ಭಟ್ಟಂಗಿಗಳ ಕೂಪ

Published On :

ಗುಲ್ಬರ್ಗ: ರಾಜಕೀಯ ವ್ಯವಸ್ಥೆಯಲ್ಲಿ ಬದಲಾವಣೆ ಅಗತ್ಯ, ಭಟ್ಟಂಗಿಗಳ ಕೂಪದಲ್ಲಿ ರಾಜಕೀಯ ಕ್ಷೇತ್ರ ಒದ್ದಾಡುತ್ತಿದೆ ಎಂದು ಶಾಸಕ ಕೆ.ಆರ್. ರಮೇಶ್‌ಕುಮಾರ ವಿಷಾದ ವ್ಯಕ್ತಪಡಿಸಿದರು.
ನಗರದ ಕನ್ನಡ ಭವನದಲ್ಲಿ ಹಿರಿಯ ಪತ್ರಕರ್ತ ಕೆ.ಎನ್. ರೆಡ್ಡಿ ಪರಿಕಲ್ಪನೆ, ಸಾಹಿತ್ಯ, ನಿರ್ದೇಶನ ಮತ್ತು ನಿರ್ಮಾಣದ ಧೀಮಂತ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಕುರಿತ ಸಾಕ್ಷ್ಯಚಿತ್ರ ಬಿಚ್ಚು ಮನಸ್ಸಿನ ದಿಟ್ಟ ಸಮಾಜವಾದಿ ಪಟೇಲ್ ನಾವು ಕಂಡತೆ, ಕಂಡಷ್ಟು ಪುಸ್ತಕ ಮತ್ತು ಸಾಟಿಯಿಲ್ಲದ ಪಟೇಲ್ ಹಾಡುಗಳ ಸಿಡಿ ಲೋಕಾರ್ಪಣೆ ಸಮಾರಂಭದಲ್ಲಿ ಸಾಕ್ಷ್ಯಚಿತ್ರ ಬಿಡುಗಡೆ ಮಾಡಿ ಮಾತನಾಡಿದರು.
ಸತ್ಯವನ್ನು ಮರೆಮಾಚುವ, ದೇಶವನ್ನು ನಿರ್ನಾಮ ಮಾಡುವ ಭಟ್ಟಂಗಿಗಳ ಮಧ್ಯೆ ಬದುಕುತ್ತಿದ್ದೇವೆ. ಭಟ್ಟಂಗಿಗಗಳ ಕೊರತೆಯನ್ನು ಯಾವ ರಾಜಕೀಯ ಪಕ್ಷಗಳಲ್ಲಿ ಇರಲಿಕ್ಕಿಲ್ಲ. ಭಟ್ಟಂಗಿಗಳನ್ನು ಭೇದಿಸಿ, ಮೀರಿ ನಡೆದವರನ್ನು ಸಮಾಜ ರಕ್ಷಣೆ ಮಾಡಬೇಕು. ಆದರೆ, ಕೆಲ ಸಂದರ್ಭಗಳಲ್ಲಿ ಸಮಾಜದಿಂದ ನಿರಾಶಾದಾಯಕ ಉತ್ತರ ಬರುತ್ತದೆ ಎಂದ ಅವರು, ವಿಚಾರಗಳ ತಿಳಿವಳಿಕೆ ಇಲ್ಲದೆ ಅಪಪ್ರಚಾರ ಸಲ್ಲ. ಸುತ್ತಲೂ ಅಪಪ್ರಚಾರವೇ ಹೆಚ್ಚಾಗಿದೆ. ಇದರಿಂದ ಮೂಲಗುಣಕ್ಕೆ ಧಕ್ಕೆ ತರಲಾಗುತ್ತದೆ ಎಂದು ವಿವರಿಸಿದರು. ಜೀವಂತವಿದ್ದಾಗ ಗೌರವಿಸುವುದನ್ನು ಬಿಟ್ಟು ಸತ್ತ ಮೇಲೆ ಎಲ್ಲವನ್ನು ಆರಾಧಿಸುತ್ತೇವೆ. ಆದರೆ ಧೀಮಂತ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಒಬ್ಬ ವ್ಯಕ್ತಿಯಲ್ಲ, ಸಾಮಾಜಿಕ ಶಕ್ತಿಯಾಗಿ ಹೊರಹೊಮ್ಮಿದವರು ಎಂದು ಅವರು ಪ್ರಸ್ತಾಪಿಸಿದರು.
ಕಸಾಪ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ 'ನಾವು ಕಂಡಂತೆ ಕಂಡಷು' ಪಟೇಲ್‌ರ ಕುರಿತ ಕೃತಿಯನ್ನು ಪರಿಚಯಿಸಿದರು. ಮಾಜಿ ಸಚಿವ ಕೆ.ಬಿ. ಶಾಣಪ್ಪ, ರಾಜ್ಯಸಭೆ ಸದಸ್ಯ ಬಸವರಾಜ ಪಾಟೀಲ ಸೇಡಂ, ಶಾಸಕ ಅಲ್ಲಮಪ್ರಭು ಪಾಟೀಲ, ಕಾಂಗ್ರೆಸ್ ಮುಖಂಡ ಸಿ. ನಾರಾಯಣಸ್ವಾಮಿ, ಸಹಕಾರಿ ಧುರೀಣ ಡಿ.ಆರ್. ಪಾಟೀಲ ಇದ್ದರು. ಹಿರಿಯ ಪತ್ರಕರ್ತ ಕೆ.ಎನ್. ರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಾಕ್ಷ್ಯಚಿತ್ರದಲ್ಲಿ ಪಟೇಲರ ಸಮಗ್ರ ವ್ಯಕ್ತಿತ್ವ ಅಡಗಿದೆ. ಕೆಲ ಸಾಕ್ಷ್ಯಚಿತ್ರಗಳು ವ್ಯಕ್ತಿಯನ್ನು ವೈಭವಿಕರಿಸಿರುವುದನ್ನು ಗಮನಿಸುತ್ತೇವೆ. ಆದರೆ, ಪಟೇಲರ ಸಾಕ್ಷ್ಯಚಿತ್ರವು ಅವರ ದೌರ್ಬಲ್ಯಗಳು, ಸವಾಲುಗಳು, ಜನತೆಯಲ್ಲಿ ಅವರ ದೃಷ್ಟಿಕೋನ ಹೀಗೆ ನಾನಾ ಅವತರಣಿಕೆಯನ್ನು ಬಿಂಬಿಸಲಾಗಿದೆ ಎಂದು ಹೇಳಿದರು. ರಾಜಶೇಖರ ಮಾಮಗ ನಿರೂಪಿಸಿದರು. ಕಸಾಪ ಗೌರವ ಕಾರ್ಯದರ್ಶಿ ಸುರೇಶ ಬಡಿಗೇರ ಸ್ವಾಗತಿಸಿದರು. ವಿವಿಧ ಪಕ್ಷಗಳ ಮುಖಂಡರು, ಸಾಹಿತಿಗಳು, ಕನ್ನಡಪರ ಸಂಘಟನೆಗಳ ಮುಖಂಡರು, ಪಟೇಲರ ಅಭಿಮಾನಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.