ಗುಲ್ಬರ್ಗಾ

ರೈತರಿಗೆ ದ್ರಾಕ್ಷಿ ಹುಳಿಯಾಯ್ತು!

Published On :

ಕ.ಪ್ರ. ವಾರ್ತೆ  ಗುಲ್ಬರ್ಗ  ಮಾ.4
ಅಕಾಲಿಕವಾಗಿ ಸುರಿದ ಆಲಿಕಲ್ಲು ಮಳೆ ಬಿಸಿಲೂರು ಗುಲ್ಬರ್ಗ ಜಿಲ್ಲೆಯ ಆಳಂದ, ಅಫಜಲ್ಪುರ, ಗುಲ್ಬರ್ಗ ದ್ರಾಕ್ಷಿ ಬೆಳೆಗಾರರ ಪಾಲಿಗೆ ಮಾರಕವಾಗಿ ಪರಿಣಮಿಸಿದೆ. ಸೋಮವಾರ ಸಂಜೆ 1 ಗಂಟೆ ಸುರಿದ ಬಿರುಗಾಳಿ, ಆಲಿಕಲ್ಲು ಮಳೆ ತಡಕಲ್‌ನಿಂದ ಶುರುವಾಗಿದ್ದು ಆಳಂದದ ಹತ್ತಿಪ್ಪತ್ತು ಹಳ್ಳಿಗಳನ್ನು ಹಬ್ಬಿದ್ದಲ್ಲದೆ ಅಲ್ಲಿದ್ದ ದ್ರಾಕ್ಷಿ ತೋಟಗಳನ್ನೆಲ್ಲ ಹಾಳು ಮಾಡಿದೆ.
ದ್ರಾಕ್ಷಿ ಬೆಳೆಗಾರರ ಸಂಘದ ನಿರ್ದೇಶಕ ಚೆನ್ನಬಸಪ್ಪ ಪಾಟೀಲ್ ಪ್ರಕಾರ ಜಿಲ್ಲೆಯಲ್ಲಿ 500 ಎಕರೆ ದ್ರಾಕ್ಷಿ ತೋಟ ಹಾಳಾಗಿದೆ. ಆಳಂದ ಹಾಗೂ ಅಫಜಲ್ಪುರದಲ್ಲಂತೂ ಹಾನಿ ವಿಪರೀತವಾಗಿದೆ. ಗುಡೂರಿನ ಪ್ರಭು ಕುಂಬಾರ, ವಿಶ್ವನಾಥ ಹಾಗೂ ಲಕ್ಷ್ಮೀಪುತ್ರ ಸೇರಿದಂತೆ ಅನೇಕ ರೈತರ ದ್ರಾಕ್ಷಿ ತೋಟಗಳು ಮಳೆಗೆ ಸಂಪೂರ್ಣ ನಾಶವಾಗಿವೆ.
ಸಾಲ ತೀರಿಸೋದು ಹೇಗೆ?: ದ್ರಾಕ್ಷಿ ತುಂಬ ನಿರ್ವಹಣೆ ಅಗತ್ಯವಿರುವ ಬೆಳೆ. ಎಕರೆಗೆ ಏನಿಲ್ಲವೆಂದರೂ ಹತ್ತಿಪ್ಪತ್ತು ಸಾವಿರ ರುಪಾಯಿ ವೆಚ್ಚ ಮಾಡಿರುವ ರೈತರು ಮಳೆಯಿಂದ ಅದೆಲ್ಲವೂ ನೀರಲ್ಲಿ ಹೋಮ ಮಾಡಿದಂತೆ ಆಯ್ತು ಎಂದು ಅಳುತ್ತಿದ್ದಾರೆ. ದ್ರಾಕ್ಷಿಗೆ ಬೆಳೆವಿಮೆ ಅನ್ವಯವಾಗದು. ಬೆಳೆ ಹಾಳಾಗಿದ್ದರೂ ಸಾಲ ನೀಡಿದ ಬ್ಯಾಂಕ್‌ನವರು ವಸೂಲಿ ನಿಲ್ಲಿಸೋದಿಲ್ಲ. ಹೀಗಾಗಿ ಬರುವ ದಿನಗಳಲ್ಲಿ ಸಾಲ ಹೇಗೆ ತೀರಿಸೋದು ಎಂದು ಆತಂಕವಾಗಿದೆ ಎಂದು ರೈತರು ಕಂಗಾಲಾಗಿದ್ದಾರೆ.
ಬೆಳಮಗಿ, ಕರಹರಿ, ಸನಗುಂದಿ, ತಡಕಲ್, ಅಫಜಲ್ಪುರದ ಗುಡೂರ್, ತೆಲ್ಲೂರ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಆಲಿಕಲ್ಲು ಮಳೆ ವಿಪರೀತ ಹಾನಿ ಉಂಟು ಮಾಡಿದೆ. ಹಿಂದೆಂದೂ ಕಂಡರಿಯದ ಆಲಿಕಲ್ಲುಗಳನ್ನು ಕಂಡೆವು. 2 ದಿನವಾದರೂ ಆಲಿಕಲ್ಲು ಹೊಲಗದ್ದೆಗಳಲ್ಲಿ ಹಾಗೇ ಉಳಿದುಕೊಂಡಿದೆ ಎಂದು ರೈತರು ತಾವು ಕಂಡ ಹಿಪಾತವನ್ನು ವಿವರಿಸುತ್ತಿದ್ದಾರೆ.
ಸರ್ಕಾರದತ್ತ ನಿರೀಕ್ಷೆ: ದ್ರಾಕ್ಷಿ ವಿಪರೀತ ಹಾಳಾಗಿದೆ. ಸರ್ಕಾರ ತಕ್ಷಣ ತಮ್ಮ ನೆರವಿಗೆ ಬರಬೇಕು. ಪ್ರಕೃತಿಕ ವಿಕೋಪದಡಿಯಲ್ಲಿ ಈ ರೀತಿ ಹಾನಿ ಸಂಭವಿಸಿದೆ. ಸರ್ಕಾರ ರೈತರಿಗೆ ಆಗಿರುವ ಹಾನಿಯನ್ನು ಭರಿಸಲು ಮುಂದೆ ಬರಬೇಕು ಎನ್ನುತ್ತಾರೆ ರಾಜ್ಯ ದ್ರಾಕ್ಷಿ ಬೆಳೆಗಾರರ ಸಂಘದ ನಿರ್ದೇಶಕ ಸಿಡಿ ಪಾಟೀಲ್.
'ಕನ್ನಡಪ್ರಭ' ಜೊತೆ ಮಾತನಾಡಿದ ಪಾಟೀಲರು, ದ್ರಾಕ್ಷಿ ಬೆಳೆಗಾರರ ಹಾನಿ ಹೆಚ್ಚಾಗಿದೆ. ಸರ್ಕಾರ ದ್ರಾಕ್ಷಿ ರೈತರ ಕೈ ಹಿಡಯಲೇಬೇಕು. ಈಗಾಗಲೇ ತೋಟಗಾರಿಕೆ ಅಧಿಕಾರಿಗಳು ಹೊಲಗದ್ದೆಗಳಲ್ಲಿ ಸುತ್ತಾಡಿ ಹಾನಿ ಅಂದಾಜು ಮಾಡುತ್ತಿದ್ದಾರೆ. ಸರ್ಕಾರ ರೈತರ ಕೈ ಹಿಡಿಯಲೇಬೇಕು ಎಂದು ಪಾಟೀಲ್ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.