ಗುಲ್ಬರ್ಗಾ

ಖದೀಮರ ಪತ್ತೆಗೆ ವಿಪ್ರರ ಆಗ್ರಹ

Published On :

ಕ.ಪ್ರ. ವಾರ್ತೆ ್ಣ ಗುಲ್ಬರ್ಗ ್ಣ ಮಾ.5
ಸೇಡಂ ತಾಲೂಕಿನ ಕಾಗಿಣಾ ತೀರದ ಪವಿತ್ರ ತಾಣ ಮಳಖೇಡ ಉತ್ತರಾದಿ ಮಠದ ಆವರಣದಲ್ಲಿ ಪೂಜೆಗೆ ಬಳಸುತ್ತಿದ್ದ ಬೆಳ್ಳಿ ತೊಟ್ಟಿಲು ಖದೀಮರ ಪಾಲಾಗಿರುವ ಪ್ರಕರಣ ಮಾ.3 ರಂದು ವರದಿಯಾಗಿದೆ.
ಕಟ್ಟಿಗೆಯ ತೊಟ್ಟಿಲಿಗೆ ಸುಮಾರು 8 ಕೆಜಿ ಬೆಳ್ಳಿಯನ್ನು ಹೊದಿಕೆ ಮಾಡಿಸಲಾಗಿತ್ತು. ಈ ತೊಟ್ಟಿಲನ್ನು 8 ವರ್ಷದಿಂದ ಪೂಜೆಗೆ ಬಳಸಲಾಗುತ್ತಿತ್ತು. ಮಠದ ವೃಂದಾವನ ಸಮುಚ್ಚಯದ ಅಂಗಳದಲ್ಲೇ ತೂಗುಹಾಕಿದ್ದ ತೊಟ್ಟಿಲನ್ನು ದುಷ್ಕರ್ಮಿಗಳು ಕಳವು ಮಾಡಿದ್ದಾರೆ.
ಹೊದಿಕೆ ಮಾಡಿದ್ದ 8 ಕೆಜಿ(ಅಂದಾಜು ಮೌಲ್ಯ 3.84 ಲಕ್ಷ)ಯಷ್ಟು ಬೆಳ್ಳಿಯನ್ನು ಕಿತ್ತುಕೊಂಡು, ಕಟ್ಟಿಗೆ ತೊಟ್ಟಿಲನ್ನು ಪಕ್ಕದಲ್ಲಿರುವ ನದಿಗೆ ಎಸೆದಿದ್ದಾರೆ. ಇದರ ಜೊತೆಗೇ ಮಠದ ಹುಂಡಿಯನ್ನೂ ಹೊತ್ತೊಯ್ದಿದ್ದಾರೆ ಎಂದು ಮಾ.3ರಂದು ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉತ್ತರಾದಿ ಮಠದ ವ್ಯವಸ್ಥಾಪಕ ವೆಂಕಣ್ಣಾಚಾರ್ಯ ಪೂಜಾರಿ ದೂರು ಸಲ್ಲಿಸಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಪ್ರರ ಕಳವಳ: ಉತ್ತರಾದಿ ಮಠದಲ್ಲಿ ಧಾರ್ಮಿಕ ಕಾರ್ಯಗಳಿಗೆ ಬಳಸುತ್ತಿದ್ದ ಬೆಳ್ಳಿ ತೊಟ್ಟಿಲನ್ನೇ ಕಳವು ಮಾಡಿರುವ ಸಂಗತಿ ಮಠದ ಭಕ್ತ ಸಮೂಹಕ್ಕೆ ಬೇಸರ ತಂದಿದೆ. ಜೊತೆಗೇ ದಶಕದಷ್ಟು ಹಳೆದಾದ ಈ ತೊಟ್ಟಿಲು ಏಕಾಏಕಿ ಕಳ್ಳರ ಪಾಲಾಗಿರುವುದು ವಿಪ್ರ ಸಮೂಹದಲ್ಲಿ ಆತಂಕವನ್ನುಂಟು ಮಾಡಿದೆ.
ಈ ಕುರಿತಂತೆ ವಿಪ್ರ ಸಮುದಾಯದ ಹಿರಿಯರು ಬುಧವಾರ ಒಂದೆಡೆ ಸೇರಿ ಡಾ. ಕೃಷ್ಣಾಜಿ ಕುಲ್ಕರ್ಣಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳನ್ನು ಕಂಡು ಘಟನೆಯನ್ನು ವಿವರಿಸಿ ಖದೀಮರ ಪತ್ತೆಗೆ ಆಗ್ರಹಿಸಿದ್ದಾರೆ. ಮಳಖೇಡ ಮಠ ಪವಿತ್ರ ಕ್ಷೇತ್ರ. ಇಲ್ಲಿ ಪೊಲೀಸ್ ಭದ್ರತೆ ಬಿಗಿಗೊಳಿಸುವಂತೆಯೂ ಆಗ್ರಹಿಸಿದ್ದಾರೆ.
ಶಂಕರಾಚಾರ್ಯ ಸೇವಾ ಸಮಿತಿ ಆಗ್ರಹ
ಬೆಳ್ಳಿ ತೊಟ್ಟಿಲು ಕಳವಿನ ಪ್ರಸಂಗವನ್ನು ಉಗ್ರವಾಗಿ ಖಂಡಿಸಿರುವ ಆದಿಶಂಕರ ಸೇವಾ ಸಮಿತಿ ಸದಸ್ಯರು, ತಕ್ಷಣ ಪ್ರಕರಣದಲ್ಲಿ ಭಾಗಿಯಾಗಿರುವ ದುಷ್ಕರ್ಮಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ನಾರಾಯಣರಾವ ಜಾವಳಿ, ಪಾಂಡುರಂಗ ದೇಶಮುಖ, ರಾಮಾಚಾರ್ಯ ಘಂಟಿ, ಪ್ರಕಾಶ ಕುಲ್ಕರ್ಣಿ, ಪಂಡಿತ ಗೋಪಾಲಾಚಾರ್ಯ ಅಕ್ಮಂಚಿ, ರವಿ ಲಾತೂರಕರ್, ವೆಂಕಟೇಶ ಮಾಲೀಪಾಟೀಲ್, ಗುರುರಾಜ ಕುಲ್ಕರ್ಣಿ, ಶ್ಯಾಮರಾವ ಕುಲ್ಕರ್ಣಿ ಸೇರಿದಂತೆ ಅನೇಕರು ಸಮಿತಿಯಲ್ಲಿದ್ದರು.
ಬೆಳಗ್ಗೆ ಪೂಜೆಗೆ ಹೋದಾಗ ಗೊತ್ತಾಯ್ತು
ಕಾಗಿಣಾ ನದಿ ತೀರದಿಂದ ಉತ್ತರಾದಿ ಮಠದೊಳಗೆ ಪ್ರವೇಶಿಸಲು ದ್ವಾರವಿದೆ. ಜೊತೆಗೇ ಮುಂಭಾಗದಿಂದಲೂ ಪ್ರವೇಶಕ್ಕೆ ದ್ವಾರಗಳಿವೆ. ವೃಂದಾವನ ಪ್ರಾಂಗಣದ ಪಕ್ಕದಲ್ಲೇ ಬೆಳ್ಳಿ ತೊಟ್ಟಿಲು ಸದಾಕಾಲ ತೂಗುಹಾಕಲಾಗಿರುತ್ತದೆ. ಜೊತೆಗೇ ದ್ವಾರಗಳನ್ನು ಮಠದವರು ನಿತ್ಯವೂ ಭದ್ರಪಡಿಸಿಯೇ ವಿರಮಿಸುತ್ತಾರೆ.
ಆದರೆ, ಮಾ.2ರ ರಾತ್ರಿ 10.30ರವರೆಗೂ ಬೆಳ್ಳಿ ತೊಟ್ಟಿಲು ಮಠದ ಪ್ರಾಂಗಣದಲ್ಲಿ ತನ್ನ ಸ್ಥಾನದಲ್ಲೇ ಇರುವುದನ್ನು ನೋಡಿರುವ ಮಠದ ವಾಸಿಗಳು, ಮಾರನೆ ದಿನ ಬೆ.6 ಗಂಟೆಗೆ ಪೂಜೆಗೆ ಹೋದಾಗ ತೊಟ್ಟಿಲು, ಹುಂಡಿ ಕಾಣೆಯಾಗಿರುವುದನ್ನು ಗಮನಿಸಿದ್ದಾರೆ. ಗಾಬರಿಗೊಂಡು ಹುಡುಕಾಡಿದ್ದಾರೆ.
ನದಿ ತೀರದೆಡೆ ಇದ್ದಂತಹ ಬಾಗಿಲು ಮುರಿದು ಕಳ್ಳರು ಪ್ರಾಂಗಣದೊಳಗೆ ಹೊಕ್ಕು ಬೆಳ್ಳಿ ತೊಟ್ಟಿಲು ಕಳವು ಮಾಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಈ ಪ್ರಕರಣದ ಕುರಿತಂತೆ ಮಳಖೇಡ ಪೊಲೀಸರನ್ನು ಮಾತನಾಡಿಸಲು 'ಕನ್ನಮಪ್ರಭ' ಪ್ರಯತ್ನಿಸಿತಾದರೂ ಅಲ್ಲಿನ ಪಿಎಸ್‌ಐ ಸಂಪರ್ಕಕ್ಕೆ ಸಿಗಲಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.