ಕೈ ಹಿಡಿದ ಕಮಕನೂರ್, ಸರತಿಯಲ್ಲಿ ಇನ್ನೂ ಹಲವರು
ಕ.ಪ್ರ. ವಾರ್ತೆ ಗುಲ್ಬರ್ಗ ಮಾ.13
ಗುಲ್ಬರ್ಗ ಲೋಕಸಭೆ ಅಖಾಡದಲ್ಲೀಗ ಪಕ್ಷಾಂತರ ಪರ್ವ ಶುರುವಾಗಿದೆ. ಘಟಾನುಘಟಿ ನಾಯಕ ಮಲ್ಲಿಕಾರ್ಜುನ ಖರ್ಗೆ ಗುಲ್ಬರ್ಗ ಕಾಂಗ್ರೆಸ್ ಹುರಿಯಾಳಾಗಿರುವುದರಿಂದ ಈ ಬಾರಿ ಕಾಂಗ್ರೆಸ್ ಬೆಂಬಲಿಸಿ ಮರಕೋತಿ ಆಟ ಹೆಚ್ಚಿನ ಪ್ರಮಾಣದಲ್ಲಿ ನಡೆಯುವ ಸಾಧ್ಯತೆ ಇದೆ.
ಈ ಆಟದ ಶುಭಾರಂಭ ಎಂಬಂತೆ ಮುಂಚೆ ಕಾಂಗ್ರೆಸ್ನಲ್ಲೇ ಇದ್ದು ಸ್ಥಳೀಯ ಸಂಸ್ಥೆಗಳಿಂದ ಮೇಲ್ಮನೆಗೆ ಚುನಾವಣೆ ನಡೆದ ಸಂದರ್ಭದಲ್ಲಿ ತಮಗೆ ಟಿಕೆಟ್ ಕೊಡಲಿಲ್ಲವೆಂದು ಮುನಿಸಿಕೊಂಡು ಕೈ ತೊರೆದಿದ್ದ ಕೋಲಿ ಸಮಾಜ ಮುಖಂಡ, ಹಿಂದುಳಿದ ವರ್ಗ ಆಯೋಗದ ಮಾಜಿ ಸದಸ್ಯ ತಿಪ್ಪಣ್ಣ ಕಮಕನೂರ್ ಕೈ ಹಿಡಿದಿದ್ದಾರೆ. ಇದರೊಂದಿಗೆ ಈ ಲೋಕಸಭೆ ಚುನಾವಣೆಯಲ್ಲಿನ ಪಕ್ಷಾಂತರಕ್ಕೆ ಚಾಲನೆ ದೊರಕಿದೆ.
ಮೂಲಗಳ ಪ್ರಕಾರ ಇನ್ನೂ ಅನೇಕರು ಕೈ ಹಿಡಿಯುವ ಸಾಧ್ಯತೆಗಳಿವೆ ಎನ್ನಲಾಗಿದೆಯಾದರೂ ಈ ಕುರಿತಂತೆ ಯಾವುದೇ ಅಂತಿಮ ನಿರ್ಣಯವಾಗಿಲ್ಲ, ಖರ್ಗೆ ನಾಮಪತ್ರ ಸಲ್ಲಿಸಿದ ನಂತರದ ದಿನಗಳಲ್ಲಿ ಬಿಜೆಪಿ ಹಾಗೂ ಕೆಜೆಪಿ ಗೊಂದಲದಲ್ಲಿ ಬೇಸರಗೊಂಡಿರುವ ಅನೇಕರು ಕೈಯತ್ತ ವಾಲುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.
ಕಮಕನೂರ್ಗೆ ಸ್ವಾಗತಿಸಿದ ಖರ್ಗೆ: ಗುಲ್ಬರ್ಗದಲ್ಲಿ ಗುರುವಾರ ನಡೆದ ಕಾಂಗ್ರೆಸ್ ಪಕ್ಷದ ಭಾರತ ನಿರ್ಮಾಣ ಸಮಾವೇಶ, ಪಾದಯಾತ್ರೆಯ ಸಮಾರಂಭದಲ್ಲಿ ಕಮಕನೂರ್ ಕಾಂಗ್ರೆಸ್ ಸೇರಿದರು. ಮಲ್ಲಿಕಾರ್ಜುನ ಖರ್ಗೆ, ಧರಂಸಿಂಗ್ ಇವರನ್ನು ಕಾಂಗ್ರೆಸ್ ಬಾವುಟ ನೀಡಿ ಸ್ವಾಗತಿಸಿದರು.
ಮುಂಚೆಯೇ ಕಾಂಗ್ರೆಸ್ ಪಕ್ಷದಲ್ಲಿದ್ದ ಕಮಕನೂರ್ ಕಾರಣಾಂತರದಿಂದ ಹೊರಗೆ ಹೋಗಿದ್ದರು. ಇದೀಗ ಖರ್ಗೆ- ಧರಂ ಸಮ್ಮುಖದಲ್ಲಿ ಮನೆಗೆ ಮರಳಿದಂತಾಗಿದೆ ಎಂದು ಸಮಾರಂಭದಲ್ಲಿ ಮಾತನಾಡಿದ ನಾಯಕರೆಲ್ಲರೂ ಕಮಕನೂರ್ ಅವರಿಗೆ ಶುಭ ಕೋರಿದರು.
ಬಿಜಿಪಿ- ಉಸ್ತಾದ್ ಒಲವು: ಬಿಜೆಪಿಯಲ್ಲಿರುವ ಉದ್ಯಮಿ ಬಿಜಿ ಪಾಟೀಲ್, ಕೆಜೆಪಿ ಸೇರಿದ್ದ, ಇದೀಗ ಯಾವ ಕಡೆಯೂ ಗುರುತಿಸಿಕೊಳ್ಳದೆ ತಟಸ್ಥರಾಗಿರುವ ಉಸ್ತಾದ್ ಸಾದತ್ ಹುಸೇನ್ ಕಾಂಗ್ರೆಸ್ ಪರ ಒಲವು ತೋರಿದ್ದಾರೆ ಎಂಬುದು ಪಕ್ಷದ ಉನ್ನತ ಮೂಲಗಳ ಮಾಹಿತಿ.
ಬಿಜಿ ಪಾಟೀಲ್ ಅವರ ಜೊತೆ ಈಗಾಗಲೇ ಪಕ್ಷದ ಹಿರಿಯರ ಮಾತುಕತೆಯಾಗಿದೆ. ಇನ್ನೇನು ಅವರನ್ನು ಯಾವಾಗ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆ ಮಾಡಿಕೊಳ್ಳಬೇಕು ಎಂಬುದಕ್ಕೆ ಮುಹೂರ್ತ ನಿಗದಿಯಾಗಬೇಕಷ್ಟೆ ಎನ್ನಲಾಗಿದೆ. ಇನ್ನು ಹಿರಿಯ ವಕೀಲ ಉಸ್ತಾದ ಸಾದತ್ ಹುಸೇನ್ ಅವರೂ ಕೈ ಹಿಡಿಯುವ ತವಕದಲ್ಲಿದ್ದಾರೆ ಎನ್ನಲಾಗಿದ್ದು ಈ ಕುರಿತಂತೆ ಸ್ಥಳೀಯವಾಗಿ ಗುಲ್ಬರ್ಗ (ಉ) ಶಾಸಕರಾಗಿರುವ ಖಮರುಲ್ ಇಸ್ಲಾಂ ತಮ್ಮ ಸಮ್ಮತಿ ಸೂಚಿಸಬೇಕಾಗಿದೆಯಂತೆ.
ಏಕೆಂದರೆ 2013ರ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಉಸ್ತಾದ್ ಸಾದತ್ ಹುಸೇನ್, ಅವರ ಪುತ್ರ ನಾಸೀರ್ ಹುಸೇನ್ ಕೆಜೆಪಿ ಸೇರಿದ್ದರಲ್ಲದೆ ನಾಸೀರ್ ಹುಸೇನ್ ಖಮರುಲ್ ಇಸ್ಲಾಂ ವಿರುದ್ಧ ಸ್ಪರ್ಧಿಸಿದ್ದರು. ಗುಲ್ಬರ್ಗ ಉತ್ತರ ಶಾಸಕರೊಂದಿಗೆ ಸ್ಪರ್ಧಿಸಿರುವ ಉಸ್ತಾದ್ ಕುಟುಂಬ ಮತ್ತೆ ಕೈ ಹಿಡಿಯುವ ತವಕದಲ್ಲಿದ್ದರೂ ಈ ಕುರಿತಂತೆ ಸ್ಥಳೀಯವಾಗಿ ಶಾಸಕರ ಅಭಿಪ್ರಾಯ ಆಲಿಸಲು ಜಿಲ್ಲಾ ಕಾಂಗ್ರೆಸ್ ನಿರ್ಣಯಿಸಿದೆ. ಇದರಿಂದಾಗಿಯೇ ಈ ಸೇರ್ಪಡೆ ತುಸು ವಿಳಂಬವಾಗುತ್ತಿದೆ.
ಕಾರ್ಪೋರೇಟರ್ಗಳ ಒಲವು: ಕೆಜೆಪಿಯ ನಾಲ್ಕಾರು ಪಾಲಿಕೆ ಸದಸ್ಯರುಗಳೂ ಸಹ ಕಾಂಗ್ರೆಸ್ ಸೇರುವ ತವಕದಲ್ಲಿದ್ದಾರೆ ಎನ್ನಲಾಗಿದೆಯಾದರೂ ಈ ಬಗ್ಗೆ ಮಾತುಕತೆ ಶುರುವಾಗಿದೆ. ಈಗಾಗಲೇ ತಿಪ್ಪಣ್ಣ ಕಮಕನೂರ್ ಪುತ್ರ ಪಮೇಶ ಕಮಕನೂರ್ ಕೆಜೆಪಿ ಪಾಲಿಕೆ ಸದಸ್ಯರೇ ಆಗಿದ್ದಾರೆ. ತಂದೆ ತಿಪ್ಪಣ್ಣ ಅವರೇ ಕೈ ಹಿಡಿದಿದ್ದರಿಂದ ರಮೇಶ ಅವರೂ ಸಹಜವಾಗಿಯೇ ಕೈಯತ್ತ ವಾಲಿದ್ದಾರೆ. ಇವರ ನೇತೃತ್ವದಲ್ಲೇ ಪಾಲಿಕೆಯಲ್ಲಿ ರಾಜಕೀಯವಾಗಿ ಕಾಂಗ್ರೆಸ್ಗೆ ಕೆಜೆಪಿ ಸದಸ್ಯರನ್ನು ಎಳೆದು ತರುವ ಕೆಲಸ ಸಾಗಿದೆ ಎನ್ನಲಾಗಿದೆ.
ಇನ್ನೇನು ಮಾ.18 ರಂದು ಮೇಯರ್, ಉಪ ಮೇಯರ್ ಚುನಾವಣೆ ಘೋಷಣೆಯಾಗಿರುವುದರಿಂದ ಈ ಚುನಾವಣೆಯವರೆಗೂ ಪಕ್ಷಾಂತರಕ್ಕೆ ಮುಹೂರ್ತ ನಿಗದಿಯಾಗದೆ ಹೋದರೂ ಚುನಾವಣೆಯ ನಂತರವಾದರೂ ಈ ಕೆಲಸ ಚುರುಕಾಗಿ ನಡೆಯುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಇದಲ್ಲದೆ ಜೇವರ್ಗಿ, ಚಿತ್ತಾಪುರ, ಸೇಡಂ, ಅಫಜಲ್ಪುರ ಸೇರಿದಂತೆ ಎಲ್ಲಾ ಅಸೆಂಬ್ಲಿ ಘಟಕಗಳಿಂದಲೂ ಪ್ರಮುಖ ನಾಯಕರು, ಕಾರ್ಯಕರ್ತರು ವಿವಿಧ ಪಕ್ಷಗಳನ್ನು ತೊರೆದು ಕೈ ಹಿಡಿಯುವ ಆಸಕ್ತಿ ತೋರಿದ್ದಾರೆ. ಈ ಬಗ್ಗೆ ಆಯಾ ಕ್ಷೇತ್ರಗಳ ಶಾಸಕರ ಅಭಿಪ್ರಾಯ ಆಲಿಸಲು ಜಿಲ್ಲಾ ಘಟಕ ಮುಂದಾಗಿದೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್ ಪಕ್ಷದ ತತ್ವ- ಸಿದ್ಧಾಂತಗಳ ಮೇಲೆ ನಂಬಿಕೆ ಇಟ್ಟು ಬರುವವರಿಗೆ ಸ್ವಾಗತ. ಅನೇಕರು ಹಿಂದೆ ಪಕ್ಷದಲ್ಲಿದ್ದು ಯಾವುದೋ ಕಾರಣಕ್ಕೆ ಹೊರಹೋಗಿದ್ದಾರೆ. ಅಂತಹವರಲ್ಲಿ ಅನೇಕರು ಮರಳಿ ಮನೆಗೆ ಬರುತ್ತಿದ್ದಾರೆ. ಹಿರಿಯ ನಾಯಕರನ್ನು ಸಂಪರ್ಕಿಸಿ ಇಂತಹ ಪಕ್ಷಾಹ್ವಾನಗಳಿಗೆ ಹಸಿರು ನಿಶಾನೆ ತೋರಿಸಲಾಗುತ್ತಿದೆ. ಬರುವ ದಿನಗಳಲ್ಲಿ ಆಯಾ ಕ್ಷೇತ್ರಗಳ ಶಾಸಕರನ್ನು ಸಂಪರ್ಕಿಸಿ ಪ್ರಮುಖರ ಆಗಮನದ ಅಭಿಪ್ರಾಯ ಆಲಿಸಿ ಮುಂದಡಿ ಇಡುವ ನಿರ್ಧಾರ ಮಾಡಲಾಗಿದೆ. ಷರತ್ತುಗಳಿಲ್ಲದೆ ಯಾರಾದರೂ ಕಾಂಗ್ರೆಸ್ ಪಕ್ಷಕ್ಕೆ ಬರುತ್ತೇವೆ ಎಂದಾದರೆ ಅಂತಹವರಿಗೆ ಸ್ವಾಗತ. ಪಕ್ಷ ಬಲವರ್ಧನೆಗೆ, ಸಂಘಟನೆಗೆ ಎಲ್ಲರೂ ಸೇರಿ ಕೆಲಸ ಮಾಡಬೇಕಾಗಿದೆ.
ಭಾಗಣಗೌಡ ಸಂಕನೂರ್, ಜಿಲ್ಲಾಧ್ಯಕ್ಷರು, ಕಾಂಗ್ರೆಸ್ ಸಮಿತಿ ಗುಲ್ಬರ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

