ಗುಲ್ಬರ್ಗಾ

ಅಭಿವೃದ್ಧಿ ಚರ್ಚೆಗಿಲ್ಲ ಕಿಮ್ಮತ್ತು, ಆರೋಪ- ಪ್ರತ್ಯಾರೋಪಕ್ಕೆ ಒತ್ತು

Published On :

ವಿಶೇಷ ವರದಿ
ಕ.ಪ್ರ. ವಾರ್ತೆ ್ಣ ರಾಯಚೂರು ್ಣ ಮಾ.28
ರಾಯಚೂರು ಲೋಕಸಭೆ ಚುನಾವಣೆ ಕ್ಷೇತ್ರವೀಗ ಅಕ್ಷರಶಃ ಜಿದ್ದಾಜಿದ್ದಿಯ ಕಣ. ಪ್ರತಿ ಬಾರಿ ಚುನಾವಣೆಯಲ್ಲಿ ಅಭ್ಯರ್ಥಿಗಳು ಅಭಿವೃದ್ಧಿಗೆ ಸಂಬಂಧಿಸಿ ಭರವಸೆ ನೀಡುವುದು ರೂಢಿ. ಆದರೆ ಪ್ರಸಕ್ತ ಚುನಾವಣೆಯಲ್ಲಿ ಆರೋಪ- ಪ್ರತ್ಯಾರೋಪಗಳಿಗೇ ಹೆಚ್ಚಿನ ಒತ್ತು ನೀಡುತ್ತಿದ್ದು, ಪ್ರಚಾರದ ಅಬ್ಬರದಲ್ಲಿ ಅಭಿವೃದ್ಧಿಯೇ ತೆರೆಮರೆಗೆ ಸರಿದಿದೆ.
ರಾಯಚೂರು ಲೋಕಸಭೆ ಕ್ಷೇತ್ರ(ಎಸ್ಟಿ ಮೀಸಲು) ಈಗ ಎರಡು ರಾಜಕೀಯ ಕುಟುಂಬಗಳ ಮಧ್ಯದ ಸಂಘರ್ಷ ತಾಣವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಬಿ.ವಿ. ನಾಯಕ ಹಾಗೂ ಬಿಜೆಪಿಯ ಶಿವನಗೌಡ ನಾಯಕರ ಮಧ್ಯೆ ರಾಜಕೀಯ ಬಲಾಬಲ ಪ್ರದರ್ಶನಕ್ಕೆ ಕಣ ವೇದಿಕೆಯಾಗಿದೆ.
ಸಾಮಾನ್ಯವಾಗಿ ಚುನಾವಣೆ ಸಂದರ್ಭದಲ್ಲಿ ರಾಜಕೀಯ ನಾಯಕರು, ಅಭ್ಯರ್ಥಿಗಳು ಪ್ರಚಾರಕ್ಕೆ ತೆರಳಿದಲ್ಲೆಲ್ಲಾ ಆಯಾ ಪ್ರದೇಶದ ಸಮಸ್ಯೆಗಳನ್ನು ಪರಿಹರಿಸುವ ಮಾತನಾಡುವುದು ಸಹಜ. ಜಿಲ್ಲೆಯ ಮಟ್ಟಿಗೆ ಕಳೆದ ಅನೇಕ ಚುನಾವಣೆಗಳಲ್ಲಿಯೂ ಇಂಥ ಪರಿಸ್ಥಿತಿ ಕಂಡುಬಂದಿದೆ.
ಎರಡು ಕುಟುಂಬಗಳ ಜಿದ್ದಾಜಿದ್ದಿ: ಆದರೆ ದೇವದುರ್ಗ ವಿಧಾನಸಭೆ ಕ್ಷೇತ್ರದಲ್ಲಿ ನಡೆದ ಕಳೆದ 2008ರ ಚುನಾವಣೆಯ ನಂತರದಲ್ಲಿನ ಎಲ್ಲ ಚುನಾವಣೆಗಳಲ್ಲಿ ರಾಜಕೀಯ ಎಂಬುದು ವೆಂಕಟೇಶ ನಾಯಕ ಅವರ ಕುಟುಂಬ ಮತ್ತು ಶಿವನಗೌಡ ನಾಯಕರ ಮಧ್ಯದ ಜಿದ್ದಾಜಿದ್ದಿಗೆ ದಾರಿ ಮಾಡಿದೆ.
ಹಿಂದುಳಿದ ದೇವದುರ್ಗ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿಸುವ ಮಾತುಗಳು 2008ರ ನಂತರದ ಚುನಾವಣೆಯ ನಂತರದಲ್ಲಿ ಆಗಿನ ಸಚಿವ ಹಾಗೂ ಹಾಲಿ ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕರಿಂದ ಕೇಳಿಬಂದು ತಕ್ಕಮಟ್ಟಿಗೆ ಪ್ರಗತಿಯೂ ಸಾಧ್ಯವಾಗಿದೆ. ಹಾಗೆಯೇ 1,648 ಕೋಟಿ ಅನುದಾನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಡುಗಡೆಯಾಗಿದ್ದು ಅದು ದುರ್ಬಳಕೆಯಾಗಿದೆ ಎಂಬ ಆರೋಪವೂ ಕಾಂಗ್ರೆಸ್ ವಲಯದಿಂದ ಕೇಳಿಬಂದಿದೆ.
ಆರೋಪ- ಪ್ರತ್ಯಾರೋಪ: ದೇವದುರ್ಗ ಕ್ಷೇತ್ರಕ್ಕೆ ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಬೆಂಬಲಿಸಿದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಶಿವನಗೌಡ ನಾಯಕರಿಗೆ ಸೋಲಾಯಿತು. ಈಗ ಅದೇ ಶಿವನಗೌಡ ನಾಯಕ ಅವರು ಬಿಜೆಪಿಯಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ಬಿ.ವಿ. ನಾಯಕ ಸೇರಿದಂತೆ ಆ ಪಕ್ಷದ ಎಲ್ಲ ಹಿರಿಯ ನಾಯಕರು ಬಿಜೆಪಿ ಅಭ್ಯರ್ಥಿಯ ಭ್ರಷ್ಟಾಚಾರದ ಆರೋಪವನ್ನೇ ಪ್ರಚಾರಕ್ಕೆ ಸರಕಾಗಿ ಮಾಡಿಕೊಂಡಿರುವುದು ಸ್ಪಷ್ಟ.
ಅದೇ ರೀತಿ ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕ ಸಹ ಕಾಂಗ್ರೆಸ್ ಅಭ್ಯರ್ಥಿ ಆರೋಪಗಳೆಲ್ಲವೂ ನಿರಾಧಾರ. ಸಾಕ್ಷ್ಯಾಧಾರಗಳಿದ್ದರೆ ಬಹಿರಂಗ ಚರ್ಚೆಗೆ ಆಹ್ವಾನಿಸುವುದರಲ್ಲಿಯೇ ಒಟ್ಟಾರೆ ಪ್ರಸಕ್ತ ಚುನಾವಣೆಯ ಪ್ರಚಾರ ಗಿರಕಿ ಹೊಡೆಯುತ್ತಿದೆ. ಈ ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳು, ಮತದಾರರ ನಿರೀಕ್ಷೆಗೇಳೇನು ಎಂದು ಅರಿಯುವ ಪ್ರಯತ್ನ ಅಭ್ಯರ್ಥಿಗಳು ಮಾಡುತ್ತಿಲ್ಲ ಎಂಬ ಆರೋಪ ವ್ಯಾಪಕವಾಗಿದೆ.
ನೇಪಥ್ಯಕ್ಕೆ ಸರಿದ ಅಭಿವೃದ್ಧಿ ವಿಚಾರ: ಭ್ರಷ್ಟಾಚಾರದ ಆರೋಪ, ನರೇಂದ್ರ ಮೋದಿ ಅಲೆಯ ಗದ್ದಲ ಒಂದೆಡೆಯಾದರೆ, ಮತ್ತೊಂದೆಡೆ ಕಾಂಗ್ರೆಸ್ ಪಕ್ಷವು ಕ್ಷೇತ್ರದಲ್ಲಿ ಹಿರಿಯ ನಾಯಕ ವೆಂಕಟೇಶ ನಾಯಕ ಅವರ ಕುಟುಂಬಕ್ಕೆ ಹೆಚ್ಚಿನ ಅವಕಾಶ ನೀಡಿದ ವಿಚಾರಗಳೇ ಕಣದಲ್ಲಿ ತುಂಬಿ ಹೋಗಿದ್ದು, ಅಭಿವೃದ್ಧಿ ಸಂಬಂಧಿ ವಿಚಾರಗಳಿಗೆ ಅವಕಾಶವಿಲ್ಲದಂತಾಗಿದೆ. ಹಾಗೆಯೇ ಆಯಾ ಪಕ್ಷಗಳ ಕಾರ್ಯಕರ್ತರೂ ಸಹ ಅಭ್ಯರ್ಥಿಗಳು ಇಂಥ ಆರೋಪ ಮಾಡುವುದನ್ನೇ ನಿರೀಕ್ಷಿಸತೊಡಗಿರುವುದು ಮತದಾರರ ನಿರೀಕ್ಷೆಗಳಿಗೆ ಬೆಲೆಯಿಲ್ಲದಂತೆ ಮಾಡಿವೆ.
ಅಭಿವೃದ್ಧಿಪರ ಚಿಂತನೆ, ಆಲೋಚನೆ ಬದಲಿಗೆ ಕ್ಷೇತ್ರದಲ್ಲೀಗ ವ್ಯಕ್ತಿಗತ ಆರೋಪ ಪ್ರತ್ಯಾರೋಪದಲ್ಲಿಯೇ ಚುನಾವಣೆ ಎದುರಿಸುವುದು ಪ್ರಾಮುಖ್ಯತೆ ಪಡೆಯುತ್ತಿರುವುದು ದಿನಗಳೆದಂತೆ ನಿಚ್ಚಳವಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.