ಅಳಿವಿನಂಚಲ್ಲಿರುವ ದಕ್ಷಿಣದ ಭಾಷೆಗಳ ಅಧ್ಯಯನಕ್ಕೆ ಗುಲ್ಬರ್ಗ ಸಿಯುಕೆ ಅಂಗಳ
ಶೇಷಮೂರ್ತಿ ಅವಧಾನಿ
ಗುಲ್ಬರ್ಗ: ಈಗಾಗಲೇ ಶಾಸ್ತ್ರೀಯ ಕನ್ನಡ ಅಧ್ಯಯನ ಪೀಠ ಹೊಂದಿರುವ ಇಲ್ಲಿನ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ(ಸಿಯುಕೆ)ದಲ್ಲಿ ಶೀಘ್ರವೇ ಅಳಿವಿನ ಅಂಚಿನಲ್ಲಿರುವ ಭಾಷೆಗಳ ಅಧ್ಯಯನ ಕೇಂದ್ರ ತಲೆ ಎತ್ತಲಿದೆ.
ಇವು ವಿಶ್ವವಿದ್ಯಾಲಯ ಧನಸಹಾಯ ಆಯೋಗ(ಯುಜಿಸಿ) ಪ್ರಾಯೋಜಿತ ಯೋಜನೆಯಾಗಿದೆ. ಅಳಿವಿನ ಅಂಚಿನಲ್ಲಿರುವ ಭಾರತೀಯ ಭಾಷೆಗಳ ಅಧ್ಯಯನ, ಅವುಗಳ ವೈಶಿಷ್ಟ್ಯತೆಯ ದಾಖಲೀಕರಣ, ಆ ಭಾಷೆಗಳ ಮಹತ್ವ, ಮರು ಸ್ಥಾಪನೆ ಮತ್ತು ಸಂವಹನಕ್ಕೆ ಇರಬಹುದಾದ ಅನುಕೂಲಗಳ ಬಗ್ಗೆ ವೈಜ್ಞಾನಿಕ ಅಧ್ಯಯನಕ್ಕೆ ಯುಜಿಸಿ ಸಂಕಲ್ಪ ಮಾಡಿದೆ.
ಕರ್ನಾಟಕ- ಕೇರಳ ಕೇಂದ್ರೀಯ ವಿವಿ ಸಹಭಾಗಿತ್ವ: ಭಾಷೆ, ಪ್ರದೇಶ, ಭೌಗೋಳಿಕ ಅಂಶಗಳನ್ನಾಧರಿಸಿ ಯುಜಿಸಿ ಅಧ್ಯಯನ ಕೇಂದ್ರಗಳ ಸ್ಥಾಪನೆಗೆ ಕೇಂದ್ರೀಯ ವಿವಿಗಳನ್ನು ಆಯ್ಕೆ ಮಾಡುತ್ತಿದೆ. ಅಳಿವಿನಂಚಿನಲ್ಲಿರುವ ಭಾಷೆಗಳ ಅಧ್ಯಯನದ ಈ ಮಹತ್ವದ ಯೋಜನೆ ಗುಲ್ಬರ್ಗದ ಕರ್ನಾಟಕ ಕೇಂದ್ರೀಯ ವಿವಿ ಹಾಗೂ ಕಾಸರಗೋಡಿನಲ್ಲಿರುವ ಕೇರಳ ಕೇಂದ್ರೀಯ ವಿವಿ ಪರಸ್ಪರ ಸೇರಿ ಚಾಲನೆ ನೀಡಬೇಕು ಎಂದು ಯುಜಿಸಿ ಹೇಳಿದೆ.
ಯೋಜನೆಗೆ ಗುಲ್ಬರ್ಗಲ್ಲಿರುವ ಸಿಯುಕೆ ಪ್ರಧಾನ ಸಂಸ್ಥೆ. ಶಾಂತಿ ನಿಕೇತನದಲ್ಲಿರುವ ಭಾಷಾ ಅಧ್ಯಯನ ಸಂಸ್ಥೆ ಜೊತೆಗೂಡಿ ಮಾಹಿತಿ ಕಲೆಹಾಕಬೇಕು. ನಂತರ ಕಾಸರಗೋಡಲ್ಲಿರುವ ಕೇರಳ ಕೇಂದ್ರೀಯ ವಿವಿ ಜೊತೆಗೂಡಿ ದಕ್ಷಿಣ ಭಾರತದ ರಾಜ್ಯಗಳ ವಿನಾಶದ ಭಾಷೆಗಳ ಅಧ್ಯಯನ ನಡೆಸಬೇಕು ಎಂದು ಯುಜಿಸಿ ತನ್ನ ಆದೇಶದಲ್ಲಿ ಹೇಳಿದೆ.
3.6 ಕೋಟಿ ಅನುದಾನ: ಯುಜಿಸಿ ತನ್ನ ಈ ಯೋಜನೆಗೆ ಗುಲ್ಬರ್ಗ ಹಾಗೂ ಕಾಸರಗೋಡಲ್ಲಿರುವ ಕೇಂದ್ರೀಯ ವಿವಿಗಳಿಗೆ 3.6 ಕೋಟಿ ಅನುದಾನ ಸಹ ಬಿಡುಗಡೆ ಮಾಡಿದೆ. ದಕ್ಷಿಣ ಭಾರತ ರಾಜ್ಯಗಳಲ್ಲಿನ ಅಳಿವಿನಂಚಿನಲ್ಲಿರುವ ಭಾಷೆಗಳ ಮಾಹಿತಿ ಕಲೆಹಾಕಿ ಅಧ್ಯಯನ ಆರಂಭಿಸುವಂತೆ ಹೇಳಿದೆ. ಅಧ್ಯಯನ ಹೇಗೆ ಆರಂಭಿಸಬೇಕು ಎಂಬುದರ ನೀಲ ನಕಾಶೆಗಾಗಿ ಸಿಯುಕೆ ಶೀಘ್ರದಲ್ಲೇ 2 ದಿನಗಳ ಕಾರ್ಯಾಗಾರ ಹಮ್ಮಿಕೊಳ್ಳಲಿದೆ.
ಕ್ಷೇತ್ರ ಸಂಚಾರ, ದಾಖಲೆಗಳ ಸಂಗ್ರಹ, ಭಾಷೆ- ಪದಕೋಶಗಳ ಸಂಗ್ರಹ, ಪರಾಮರ್ಶೆ, ವಿಶ್ಲೇಷಣೆಯಂತಹ ಹಲವು ಹಂತಗಳಲ್ಲಿ ಭಾಷಾ ಅಧ್ಯಯನ ಸಾಗಬೇಕು, ಅಧ್ಯಯನ ಪಕ್ಕಾ ಆಗಿರಬೇಕು ಎಂದು ಬಯಸಿರುವ ಯುಜಿಸಿ 5 ವರ್ಷಗಳ ಅವಧಿಗೆ ಈ ಯೋಜನೆ ಮುಂದುವರಿಸುವ ಇರಾದೆ ಹೊಂದಿದೆ.
ಗುಲ್ಬರ್ಗ ಸಿಯುಕೆ ಪ್ರಧಾನ ಸಂಸ್ಥೆ: ದಕ್ಷಿಣ ಭಾರತದಲ್ಲಿರುವ ಕೇಂದ್ರೀಯ ವಿವಿಗಳ ಪೈಕಿ ಗುಲ್ಬರ್ಗದ ಕರ್ನಾಟಕ ಕೇಂದ್ರೀಯ ವಿವಿಯನ್ನೇ ಈ ಕೆಲಸಕ್ಕೆ ಆರಿಸಿಕೊಂಡಿರುವ ಯುಜಿಸಿ ಇಡೀ ಯೋಜನೆಗೆ ಈ ವಿವಿಯನ್ನೇ ಪ್ರಧಾನ ಸಂಸ್ಥೆಯನ್ನಾಗಿ ಗುರುತಿಸಿದೆ. ಕಾಸರಗೋಡಿನಲ್ಲಿರುವ ಕೇರಳ ಕೇಂದ್ರೀಯ ವಿವಿಯಲ್ಲಿನ ಅಧ್ಯಯನಗಳೂ ಗುಲ್ಬರ್ಗ ಸಿಯುಕೆ ಜೊತೆಗಿನ ಪರಸ್ಪರ ಚರ್ಚೆಯೊಂದಿಗೆ ಸಾಗಬೇಕು ಎಂದಿರುವ ಯುಜಿಸಿ ಭಾಷಾ ಅಧ್ಯಯನದ ತನ್ನ ಯೋಜನೆಯಲ್ಲಿ ಗುಲ್ಬರ್ಗ ಸಿಯುಕೆಗೆ ಹೆಚ್ಚಿನ ಮಹತ್ವ ನೀಡಿದೆ.
ಕರ್ನಾಟಕದಲ್ಲಿ ಗಂಭೀರ ಪರಿಸ್ಥಿತಿ
ಅಳಿವಿನಂಚನ್ನು ತಲುಪಿರುವ ಭಾಷೆಗಳ ವಿಚಾರದಲ್ಲಿ ಕರ್ನಾಟಕ ಗಂಭೀರ ಪರಿಸ್ಥಿತಿ ಎದುರಿಸುತ್ತಿದೆ. ಪೀಪಲ್ಸ್ ಲಿಂಗ್ವಿಸ್ಟಿಕ್ ಸರ್ವೆ ಆಫ್ ಇಂಡಿಯಾ ನಡೆಸಿರುವ ಸಮೀಕ್ಷೆಯಲ್ಲಿ ಕೊರಗ, ಇರುಳ, ಸೋಲಿಗ, ಬಂದಗಾ, ಯೆರವಾ, ಗೌಳಿ, ಬೆಟ್ಟ ಕುರುಬ, ಜೇನು ಕುರುಬ, ಸಿದ್ದಿ, ಹಕ್ಕಿಪಿಕ್ಕಿ 10 ಸಮುದಾಯ ಬಳಸುವ ಭಾಷೆಗಳು ಅಳಿವಿನ ಅಂಚಿನಲ್ಲಿವೆ. ಇನ್ನೂ ಅನೇಕ ಭಾಷೆಗಳು ಇದೇ ಸ್ಥಿತಿ ತಲುಪಿರುವ ಸಾಧ್ಯತೆಗಳು ಇವೆ. ಭಾಷೆಗಳ ನಾಶ ಕರ್ನಾಟಕದಲ್ಲಿ ಏರುಗತಿಯಲ್ಲಿದೆ ಎಂದು ಸಮೀಕ್ಷೆ ಒತ್ತಿ ಹೇಳಿರುವುದೇ ಸದ್ಯದ ಆತಂಕದ ವಿಚಾರ. ಬಿಜಾಪುರ, ಬೆಳಗಾವಿ, ಗುಲ್ಬರ್ಗದಲ್ಲಿರುವ ವಾರಲಿ, ಚೆಂಚು, ದಖನಿ ಭಾಷೆಗಳನ್ನು ಬಳಸುವವರ ಸಂಖ್ಯೆ ತುಂಬ ವಿರಳ ಎಂದು ಸಮೀಕ್ಷೆ ಗುರುತಿಸಿದೆ. ಸಮೀಕ್ಷೆಯಲ್ಲಿ 42 ಭಾಷೆಗಳು ವಿನಾಶದ ಅಂಚು ತಲುಪಿರುವ ಬಗ್ಗೆ ಹೇಳಲಾಗಿದೆ.
ವಿನಾಶದ ಅಂಚಿನಲ್ಲಿರುವ ಭಾಷೆಗಳ ಅಧ್ಯಯನ ಯೋಜನೆಗೆ ಯುಜಿಸಿ ಗುಲ್ಬರ್ಗದ ಸಿಯುಕೆ ಆಯ್ಕೆ ಮಾಡಿದ್ದು ತುಂಬ ಅಭಿಮಾನದ ವಿಚಾರ. ಯೋಜನೆಯ ರೂಪುರೇಷೆ ಬಗ್ಗೆ ಶೀಘ್ರವೇ ಚಿಂತನೆ ನಡೆಸಿ, ಅತಿ ವಿಶಿಷ್ಟ ಹಾಗೂ ಮಹತ್ವದ ಈ ಅಧ್ಯಯನಕ್ಕೆ ಚಾಲನೆ ನೀಡುತ್ತೇವೆ.
ಟಿ ಡಾ. ಎಂ.ಎನ್. ಸುಧೀಂದ್ರರಾವ್, ಕುಲಪತಿ, ಕರ್ನಾಟಕ ಕೇಂದ್ರೀಯ ವಿವಿ, ಗುಲ್ಬರ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

