ಗುಲ್ಬರ್ಗಾ

ಕಿಟಕಿಯಿಂದಲೇ ಕೈಚಳಕ ಪ್ರದರ್ಶಿಸಿದ ಕಳ್ಳರು!

Published On :

ಕನ್ನಡಪ್ರಭ ವಾರ್ತೆ , ಗುಲ್ಬರ್ಗ , ಮೇ 21
ಕಳ್ಳರು ಬಾಗಿಲು ಮುರಿಯದೆ, ದಾಂದಲೆ ಮಾಡದೆ ಮನೆಯ ಕಿಟಕಿಯಿಂದಲೇ ಸರಳು ಹಾಕಿ ತಮ್ಮ ಕೈಚಳಕ ಪ್ರದರ್ಶಿಸಿ ಮನೆಯೊಳಗೆ ಹ್ಯಾಂಗರ್‌ಗೆ ನೇತು ಹಾಕಿದ್ದ ಪ್ಯಾಂಟ್‌ನಿಂದ 49 ಸಾವಿರ ಕಳವು ಮಾಡಿರುವ ಪ್ರಕರಣ ಅಶೋಕ ನಗರ ಠಾಣೆ ವ್ಯಾಪ್ತಿಯ ಚಾಣಕ್ಯ ಶಾಲೆಯ ಪಕ್ಕದಲ್ಲಿರುವ ಶರಣಯ್ಯ ವೀರಯ್ಯ ಮಠಪತಿ ಅವರ ಮನೆಯಲ್ಲಿ ಸಂಭವಿಸಿದೆ.
  ಶರಣಯ್ಯ ತಮ್ಮ ವಹಿವಾಟು ಮುಗಿಸಿಕೊಂಡು ರಾತ್ರಿ ಮನೆಗೆ ಬಂದವರೆ ಪ್ಯಾಂಟ್ ಕಳಚಿ ನೇತು ಹಾಕಿದ್ದಾರೆ. ಜೇಬಲ್ಲೇ 49 ಸಾವಿರ ಇದ್ದದ್ದು ತೆಗೆದಿಡಲು ಮರೆತಿದ್ದಾರೆ. ಕಳ್ಳರು ರಾತ್ರಿ ಕಿಟಕಿಯಿಂದಲೇ ಸರಳು ಹಾಕಿ ಪ್ಯಾಂಟ್ ಎಗರಿಸಿದ್ದಾರೆ. ಅದರೊಳಗಿದ್ದ ಹಣ ದೋಚಿ ಪರಾರಿಯಾಗಿದ್ದಾರೆ ಎಂದು ಅಶೋಕ ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
  ಶರಣಯ್ಯ ಇವರು ಕೇಶವರಾವ ದೇಶಪಾಂಡೆ ಇವರ ಮನೆಯಲ್ಲಿ ಬಾಡಿಗೆ ವಾಸವಾಗಿದ್ದರು. ಪ್ಯಾಂಟ್ ಸಹ ಸಿಕ್ಕಿಲ್ಲ ಎಂದು ಶರಣಯ್ಯ ದೂರಿನಲ್ಲಿ ಪೊಲೀಸರಿಗೆ ತಿಳಿಸಿದ್ದು ತಮ್ಮ ಕಳೆದು ಹೋದ ನಗದು ಹಣ ಹುಡುಕಿ ಕೊಡುವಂತೆ ಮನವಿ ಮಾಡಿದ್ದಾರೆ.
ಮಟಕಾ: ವ್ಯಕ್ತಿಯ ಬಂಧನ
ಆಳಂದ ತಾಲೂಕಿನ ಮಾದನಹಿಪ್ಪರಗಾ ಪೊಲೀಸ್ ಠಾಣೆ ವ್ಯಾಪ್ತಿಯ ದರ್ಗಾ ಶಿರೂರ್ ಗ್ರಾಮದ ಬಸವೇಶ್ವರ ದೇವಾಲಯದ ಹತ್ತಿರ ಮಟಕಾ ಚಿಟ್ಟಿ ಬರೆದುಕೊಳ್ಳುವದರಲ್ಲಿ ನಿರತರಾಗಿದ್ದ ರಾಜೇಶ ಮಾಣಿಕರಾವ ಮರಬೆ ಇವರನ್ನು ಬಂಧಿಸಿರುವ ಪೊಲೀಸರು ಅವರ ಬಳಿಯಿದ್ದ 510 ನಗದು, ಚಿಟ್ಟಿ ಜಪ್ತಿ ಮಾಡಿ ಬಂಧಿಸಿದ್ದಾರೆ.
  ಇನ್ನೊಂದು ಮಟಕಾ ಜೂಜಾಟ ಅಡ್ಡೆ ಮೇಲಿನ ದಾಳಿ ಪ್ರಕರಣದಲ್ಲಿ ಪೊಲೀಸರು ಇಸ್ಪೀಟ್ ಜೂಜಾಟದಲ್ಲಿ ನಿರತ 7 ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಬಸವೇಶ್ವರರ ನಗರ ಠಾಣೆ ವ್ಯಾಪ್ತಿಯ ಬಸವಣ್ಣ ದೇವರ ಮಂದಿರದ ಬಳಿ ಜೂಜಾಟದಲ್ಲಿ ತೊಡಗಿದ್ದಾಗ ದಾಳಿ ನಡೆಸಿರುವ ಪೊಲೀಸರು ವಿಜಯಕುಮಾರ ತಂದೆ ಸುರೇಶ ಜೈನ್, ಅಂಬ್ರೀಶ್ ತಂದೆ ಗುರುಶಾಂತಪ್ಪ ಕಡಗಂಚಿ, ರೇವಣಸಿದ್ದ ತಂದೆ ಸಂಗಪ್ಪ ಹತ್ತಿ, ರಾಜೇಂದ್ರ ತಂದೆ ದಸ್ತಯ್ಯ ಚಕ್ರಕಟ್ಟಿ ಹತ್ತಿರ ಗಾಜಿಪುರ, ರೋಹಿತ ತಂದೆ ಅಂಬು ವಳಕೇರಿ ಗಾಜಿರಪುರ, ಮಲ್ಲಿಕಾರ್ಜುನ ತಂದೆ ಚನ್ನಪ್ಪ ಫರತಾಬಾದ ಚಕ್ರಕಟ್ಟಿ ಹತ್ತಿರ ಗಾಜಿಪುರ ಹಾಗೂ ಬಸವೇಶ್ವರ ನಗರದ ಶಷಿವ ಮಂದಿರದ ಬಳಿಯ ವಿನೋದ ತಂದೆ ಮಲ್ಲಪ್ಪ ಸಿದ್ದಗೋಳ ಬಂಧಿತರು.
  ಬಂಧಿತರಿಂದ 10 ಸಾವಿರ ನಗದು, ಇಸ್ಪೀಟ್ ಸೆಟ್ ಜಪ್ತಿ ಮಾಡಲಾಗಿದೆ. ಇವರೆಲ್ಲರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಎಂ.ಬಿ. ನಗರ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ನಂಬರ್ ಇಲ್ಲದ ಬೈಕ್ ಜಪ್ತಿ
ಬಸವೇಶ್ವರ ನಗರ ಠಾಣೆ ಪೊಲೀಸರು ಸಂಶಯಾಸ್ಪದವಾಗಿ ಬೈಕ್ ಜೊತೆಗಿದ್ದ ಯುವಕನನ್ನು ಪ್ರಶ್ನಿಸಿದಾಗ ಸಮರ್ಪಕ ಉತ್ತರ ದೊರಕದ ಕಾರಣ ಆತನ ಬಳಿಯಿದ್ದ ನಂಬರ್ ಪ್ಲೇಟ್ ಇಲ್ಲದ ಬೈಕ್ ಜಪ್ತಿ ಮಾಡಿದ್ದಾರೆ. ಪೊಲೀಸರ ದಾಳಿ ವೇಳೆ ಬೈಕ್ ಸವಾರ ಯುವಕನ ಜೊತೆಗಿದ್ದ ಇನ್ನೊಬ್ಬ ಯುವಕ ಪರಾರಿಯಾಗಿದ್ದಾನೆ.
  ಗಸ್ತಿನಲ್ಲಿರುವಾಗ ನಂಬರ್ ಪ್ಲೇಟ್ ಇಲ್ಲದ ಬೈಕ್ ಪೊಲೀಸರಿಗೆ ಕಂಡಿದೆ. ಅದನ್ನು ನಿಲ್ಲಿಸುವಂತೆ ಸೂಚಿಸಿದರೂ ಸವಾರ ನಿಲ್ಲಿಸಿಲ್ಲ. ಇದರಿಂದ ಶಂಕೆಗೊಂಡ ಪೊಲೀಸರು ಬೆನ್ನಟ್ಟಿದ್ದಾರೆ. ಭಯದಿಂದ ಸವಾರಿಯಲ್ಲಿದ್ದ ಇಬ್ಬರ ಪೈಕಿ ಒಬ್ಬ ಜಿಗಿದು ಓಡಿ ಹೋಗಿದ್ದಾನೆ. ಬೈಕ್ ಚಾಲನೆ ಮಾಡುತ್ತಿದ್ದಾತ ಸಿಕ್ಕಿಬಿದ್ದಿದ್ದಾನೆ. ಹೆಸರು, ಬೈಕ್ ವಿವರ ವಿಚಾರಿಸಲಾಗಿ ಯಾವುದೇ ಸಮರ್ಪಕ ಉತ್ತರ ಆತನಿಂದ ದೊರಕಿಲ್ಲ.
  ಈ ಪ್ರಕರಣದಲ್ಲಿ ಬೈಕ್ ಜೊತೆಗಿದ್ದ ಶೋಯೆಬ್ ಬಾಪುನಿಯಾ ಸಂತ್ರಾಸವಾಡಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಪರಾರಿಯಾದ ಇನ್ನೊಬ್ಬ ಇಮ್ರಾನ್ ಸಂತ್ರಾಸವಾಡಿ ಎಂದು ತಿಳಿದು ಬಂದಿದೆ ಎಂದು ಬಸವೇಶ್ವರ ನಗರ ಠಾಣೆ ಪೊಲೀಸ್ ಮೂಲಗಳು ಹೇಳಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.