ಈಶಾನ್ಯ ಶಿಕ್ಷಕರ ಕ್ಷೇತ ಚುನಾವಣೆ ಜೆಡಿಎಸ್ ಅಭ್ಯರ್ಥಿ ಅಖೈರು
ಕ.ಪ್ರ. ವಾರ್ತೆ , ಗುಲ್ಬರ್ಗ , ಮೇ 29
ಈಶಾನ್ಯ ಶಿಕ್ಷಕರ ಮತಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆಯಲಿರುವ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಎಂ.ಬಿ ಅಂಬಲಗಿ ಅವರ ಹೆಸರನ್ನು ಪಕ್ಷದ ವರಿಷ್ಠರು ಅಂತಿಮಗೊಳಿಸಿದ್ದಾರೆ. ಇದರೊಂದಿಗೆ ಎಲ್ಲ ಮೂರು ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಅಂತಿಮಗೊಂಡಂತಾಗಿದೆ. ಬಿಜೆಪಿಯಿಂದ ಶಶೀಲ್ ನಮೋಶಿ, ಕಾಂಗ್ರೆಸ್ಸಿನಿಂದ ಶರಣಪ್ಪ ಮಟ್ಟೂರ ಸ್ಪರ್ಧಿಸಲಿದ್ದಾರೆ.
ಚುನಾವಣೆಯಲ್ಲಿ ಸ್ಪರ್ಧಿಸುವ ಹಿನ್ನೆಲೆಯಲ್ಲಿ ಈಗಾಗಲೇ ಅಂಬಲಗಿ ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ. ಇತ್ತೀಚೆಗೆ ಬೆಂಗಳೂರಿಗೆ ತೆರಳಿದ್ದ ಅವರು ಜೆಡಿಎಸ್ ವರಿಷ್ಠ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿದ ನಂತರ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದರು.
ನಿರಂತರ ಹೋರಾಟ: ಈಶಾನ್ಯ ವಲಯ ಶಿಕ್ಷಕರ ವೇದಿಕೆಯ ಅಧ್ಯಕ್ಷರಾಗಿರುವ ಅಂಬಲಗಿ ಹೈದರಾಬಾದ್ ಕರ್ನಾಟಕ ಪ್ರದೇಶದ ಶೈಕ್ಷಣಿಕ ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರದ ಜೊತೆಗೆ ಶಿಕ್ಷಕರ ಬೇಡಿಕೆಗಳ ಈಡೇರಿಕೆಗಾಗಿಯೂ ನಿರಂತರ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಜಿಲ್ಲೆಯ ಚಿಂಚೋಳಿ ತಾಲೂಕಿನ ಗಾರಂಪಳ್ಳಿಯವರಾದ ಅಂಬಲಗಿ ವಿದ್ಯಾರ್ಥಿ ದೆಸೆಯಿಂದಲೇ ಈ ಬಾಗದ ಅಭಿವೃದ್ಧಿಗೆ ಹೋರಾಟ ನಡೆಸಿದವರು.
ಜ್ಞಾನಜ್ಯೋತಿ ತರುಣ ಸಂಘ, ಜನಪರ ಹೋರಾಟ ಸಮಿತಿ, ಸ್ನಾತಕೋತ್ತರ ಪದವೀಧರ ಸಂಘಗಳನ್ನು ಸ್ಥಾಪಿಸಿ ವಿದ್ಯಾರ್ಥಿ ಹಾಗೂ ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಚಳವಳಿ ನಡೆಸಿದರು. ವೇದಿಕೆಯ ಮೂಲಕ ಹೈ.ಕ. ಪ್ರದೇಶದ ಶೈಕ್ಷಣಿಕ ಸಮಸ್ಯೆಗಳಿಗೆ ಸಂಬಂಧಿಸಿದಂತೆ ವಿವಿಧ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಸರ್ಕಾರಿ, ಅನುದಾನಿತ ಖಾಸಗಿ ಪ್ರಾಥಮಿಕ- ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಕ, ಉಪನ್ಯಾಸಕರ ವೇತನ ತಾರತಮ್ಯ ನಿವಾರಣೆಗಾಗಿ ನಿರಂತರ ಹೋರಾಟ ಹಮ್ಮಿಕೊಂಡಿದ್ದಾರೆ. ಹೈ.ಕ. ಪ್ರದೇಶದ ಅಭಿವೃದ್ಧಿಗಾಗಿ ಹತ್ತು ಹಲವು ಬಾರಿ ಹೋರಾಟಗಳನ್ನೂ ನಡೆಸಿದ್ದಾರೆ.
ಗೆಲ್ಲುವ ವಿಶ್ವಾಸ: ನಾನೊಬ್ಬ ಶಿಕ್ಷಕನಾಗಿದ್ದು, ಶಿಕ್ಷಕರ ಸಮಸ್ಯೆಗಳು ಶಿಕ್ಷಕರಿಗೆ ಗೊತ್ತಿರುತ್ತವೆ. ಶಿಕ್ಷಕನಾಗಿ ಅನೇಕ ವರ್ಷಗಳಿಂದ ಕೆಲಸ ಮಾಡಿದ್ದೇನೆ. ಹೀಗಾಗಿ ಈ ಚುನಾವಣೆಯಲ್ಲಿ ಶಿಕ್ಷಕರು ಶಿಕ್ಷಕರಿಗೆ ಮತ ನೀಡುತ್ತಾರೆಂಬ ವಿಶ್ವಾಸ ಹೊಂದಿದ್ದೇನೆ ಎಂದು ಅಂಬಲಗಿ ತಿಳಿಸಿದರು.
ಶಿಕ್ಷಕರಲ್ಲದವರು ಶಿಕ್ಷಕರ ಪ್ರತಿನಿಧಿಯಾಗುವುದಕ್ಕಿಂತ ಶಿಕ್ಷಕರ ನೋವನ್ನು ಸ್ವತಃ ಅನುಭವಿಸುವ ಒಬ್ಬ ಶಿಕ್ಷಕ ಪ್ರತಿನಿಧಿಯಾದರೆ ಶಿಕ್ಷಕರ ಸಮಸ್ಯೆಗಳ ಪರಿಹಾರ ಸಾಧ್ಯವಾಗುತ್ತದೆ ಎಂಬುದು ನನ್ನ ಅಭಿಪ್ರಾಯ ಎಂದು ಹೇಳಿದರು.
ಈ ಬಾರಿಯ ಚುನಾವಣೆಯಲ್ಲಿ ಶಿಕ್ಷಕರೇ ಸ್ಪರ್ಧಿಸುವುದು ಸೂಕ್ತ ಎಂಬ ಅಭಿಪ್ರಾಯ ಕ್ಷೇತ್ರಾದ್ಯಂತ ವ್ಯಕ್ತವಾಗುತ್ತದೆ. ಯಾವುದೇ ಪಕ್ಷದವರು ಶಿಕ್ಷಕರಿಗೆ ಟಿಕೆಟ್ ನೀಡಿದರೆ ಅವರನ್ನೇ ಬೆಂಬಲಿಸಬೇಕೆಂಬ ಅಭಿಪ್ರಾಯವೂ ಶಿಕ್ಷಕ ಸಮುದಾಯದಲ್ಲಿ ವ್ಯಕ್ತವಾಗಿತ್ತು. ಮೂರು ಪ್ರಮುಖ ಪಕ್ಷಗಳ ಅಭ್ಯರ್ಥಿಗಳಲ್ಲಿ ನಾನೊಬ್ಬನೇ ಶಿಕ್ಷಕ ಸಮುದಾಯದಿಂದ ಬಂದಿದ್ದೇನೆ. ಹೀಗಾಗಿ ಶಿಕ್ಷಕರು ನನಗೆ ಬೆಂಬಲ ನೀಡುವುದರಲ್ಲಿ ಸಂಶಯವೇ ಇಲ್ಲ ಎಂದರು.
ಸಮಸ್ಯೆಗಳು ಪರಿಹಾರ ಕಾಣದೇ ಸಮಸ್ಯೆಗಳಾಗಿಯೇ ಮುಂದುವರಿದಿವೆ. ವೇತನ ತಾರತಮ್ಯ ನೀತಿಯಿಂದ ಶಿಕ್ಷಕರಿಗೆ ಭಾರೀ ಅನ್ಯಾಯವಾಗುತ್ತಿದೆ. ಪಕ್ಕದ ರಾಜ್ಯಗಳಿಗೆ ಹೋಲಿಸಿದಾಗ ರಾಜ್ಯದ ಶಿಕ್ಷಕರು ಅತ್ಯಂತ ಕಡಿಮೆ ವೇತನದಲ್ಲಿ ದುಡಿಯುತಿದ್ದಾರೆ. ಈ ಅನ್ಯಾಯ ಸರಪಪಡಿಸಲು ನಿರಂತರ ಹೋರಾಟ ನಡೆಸುತ್ತಿದ್ದೇನೆ. ಇದು ಶಿಕ್ಷಕರಿಗೂ ಗೊತ್ತಿರುವ ವಿಷಯ ಎಂದರು ಅಂಬಲಗಿ.
ಚುನಾವಣಾ ಅಧಿಸೂಚನೆ ಪ್ರಕಟ
ಗುಲ್ಬರ್ಗ: ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ನಡೆಸುವ ಚುನಾವಣೆಯ ವೇಳಾಪಟ್ಟಿ ಪ್ರಕಟಿಸಲಾಗಿದೆ ಎಂದು ಚುನಾವಣಾಧಿಕಾರಿ ಹಾಗೂ ಪ್ರಾದೇಶಿಕ ಆಯುಕ್ತ ಆದಿತ್ಯ ತಿಳಿಸಿದ್ದಾರೆ.
ಮೇ 27ರಂದು ಅಧಿಸೂಚನೆ ಹೊರಡಿಸಲಾಗಿದೆ. ನಾಮ ನಿರ್ದೇಶನ ಪತ್ರಗಳನ್ನು ಸಲ್ಲಿಸಲು ಜೂ.3 ಕೊನೆಯ ದಿನವಾಗಿದೆ. ನಾಮ ನಿರ್ದೇಶನ ಪತ್ರಗಳ ಪರಿಶೀಲನೆ ಜೂ.4 ರಂದು ನಡೆಯುವುದು. ಉಮೇದುವಾರಿಕೆಯನ್ನು ಹಿಂಪಡೆಯಲು ಜೂ.6 ಕಡೆಯ ದಿನಾಂಕವಾಗಿದ್ದು, ಜೂ.20ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ. ಮತಗಳ ಎಣಿಗೆ ಜೂ.24ರಂದು ಬೆಳಗ್ಗೆ 8 ಗಂಟೆಗೆ ಜರುಗಲಿದೆ. ಚುನಾವಣೆ ನಡುವಳಿಕೆ ಜೂ.28 ರಂದು ಪೂರ್ಣಗೊಳ್ಳಲಿದೆ. ಈ ಚುನಾವಣೆಗೆ ಗುಲ್ಬರ್ಗ ಪ್ರಾದೇಶಿಕ ಆಯುಕ್ತರು ಚುನಾವಣಾಧಿಕಾರಿಯಾಗಿರುತ್ತಾರೆ. ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಯು ಗುಲ್ಬರ್ಗ, ಬೀದರ್, ರಾಯಚೂರು, ಬಳ್ಳಾರಿ, ಕೊಪ್ಪಳ, ಯಾದಗಿರಿ ಹಾಗೂ ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕು ಒಳಗೊಂಡಿದ್ದು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಸಹಾಯಕ ಚುನಾವಣಾಧಿಕಾರಿಯಾಗಿರುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

