ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ: ತಕ್ಷಣ ದಾಖಲಿಸಲು ಸೂಚನೆ
ಕ.ಪ್ರ. ವಾರ್ತೆ ಹಾಸನ ಏ. 5
ಮಾದರಿ ನೀತಿ ಸಂಹಿತೆಯನ್ನು ಕಡ್ಡಾಯ ಹಾಗೂ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಚುನಾವಣೆಯಲ್ಲಿ ತೊಡಗಿರುವ ಎಲ್ಲಾ ಆಧಿಕಾರಿ ಸಿಬ್ಬಂದಿ ಕಟಿಬದ್ಧರಾಗಬೇಕು. ಪ್ರತಿ ಸಭೆ ಸಮಾರಂಭಗಳನ್ನು ಅತ್ಯಂತ ಜಾಗರೂಕತೆಯಿಂದ ಗಮನಿಸಿ ನೀತಿ ಸಂಹಿತೆ ಉಲ್ಲಂಘನೆಯಾಗಿದ್ದು ಕಂಡುಬಂದಲ್ಲಿ ಕೂಡಲೇ ಪ್ರಕರಣ ದಾಖಲಿಸಿ ಕೊಳ್ಳಬೇಕು ಎಂದು ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ಕೆ.ಪಿ. ಮೋಹನರಾಜ್ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯ್ತಿ ಕಟ್ಟಡದ ಎನ್ಐಸಿ ವಿಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ರಾಜ್ಯ ಚುನಾವಣಾ ಆಯುಕ್ತರೊಂದಿಗೆ ಗುರುವಾರ ನಡೆದ ವಿಡಿಯೋ ಕಾನ್ಫರೆನ್ಸ್ ಮುನ್ನ ತಹಸೀಲ್ದಾರರು ಮತ್ತು ಕ್ಷೇತ್ರವಾರು ಚುನಾವಣಾಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ನೀತಿ ಸಂಹಿತೆ ಉಲ್ಲಂಘನೆ ತಡೆಗೆ ಚುನಾವಣಾ ಆಯೋಗ ಸೂಚಿಸಿರುವ ಕ್ರಮಗಳ ಬಗ್ಗೆ ವಿವರಿಸಿದರು.
ಸಾರ್ವಜನಿಕರ ಪದ್ಧತಿ ಪರಂಪರೆ ಆಚರಣೆ ಗೌರವಿಸಬೇಕು. ಆದರೆ ಸಂಸ್ಕೃತಿ ಆಚರಣೆಯ ಹೆಸರಿನಲ್ಲಿ ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ಗಮನ ಹರಿಸಬೇಕು. ಆಚರಣೆ ನೆಪದಲ್ಲಿ ಮತದಾರರ ಓಲೈಕೆಗೆ ಅಥವಾ ಮತದಾರರ ಮೇಲೆ ಪ್ರಭಾವ ಬೀರುವಂತಹ ಸಮಾರಂಭಗಳನ್ನು ಆಯೋಜಿಸುವುದು, ಅಥವಾ ಅಂತಹ ಪ್ರಯತ್ನ ನಡೆಸುವುದರ ಬಗ್ಗೆ ವಿಶೇಷ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ನಾನಾ ಗಣ್ಯರ ಜಯಂತಿಯನ್ನು ಅವರ ಹುಟ್ಟಿದ ದಿನದಂದೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಯಾವುದೇ ಅಡ್ಡಿ ಇಲ್ಲದಂತೆ ಆಚರಿಸಬೇಕು. ಸಂಘ ಸಂಸ್ಥೆಗಳು ಈ ನಿಟ್ಟಿನಲ್ಲಿ ಸಹಕರಿಸಬೇಕು ಎಂದು ತಿಳಿಸಿದರು. ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿಲ್ಲದಿದ್ದವರು ಹೆಸರು ಸೇರಿಸಲು ಏಪ್ರಿಲ್ 7ರಂದು ಕಡೇ ದಿನವಾಗಿದೆ. ಬಂದ ಎಲ್ಲಾ ಅರ್ಜಿಗಳನ್ನು ತ್ವರಿತವಾಗಿ ವಿಲೇಮಾಡಿ ಲೋಪದೋಷ ರಹಿತ ಮತದಾರರ ಪಟ್ಟಿ ಸಿದ್ಧಪಡಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕ್ಷೇತ್ರವಾರು ಆಯ್ಕೆ ಮಾಡಲಾಗಿರುವ ಎಲ್ಲಾ ಮತಗಟ್ಟೆಗಳಿಗೆ ಗ್ರಾಮ ಲೆಕ್ಕಿಗರು ಮತ್ತು ಕಂದಾಯ ಪರಿವೀಕ್ಷಕರು ಖುದ್ದು ಪರಿಶೀಲನೆ ನಡೆಸಿ ಯಾವುದಾದರೂ ಕಟ್ಟಡ ಶಿಥಿಲಗೊಂಡಿದ್ದು ಬದಲಾವಣೆ ಅಗತ್ಯವಿದ್ದರೆ ಸಂಜೆಯೊಳಗೆ ವರದಿ ಮಾಡತಕ್ಕದ್ದು ಎಂದು ಸೂಚನೆ ನೀಡಿದರು.
ಅಪರ ಜಿಲ್ಲಾಧಿಕಾರಿ ಡಾ.ಗೋಪಾಲಕೃಷ್ಣ, ಉಪಭಾಗಾಧಿಕಾರಿ ಜಗದೀಶ್, ಶ್ರೀವಿದ್ಯಾ, ಪ್ರೊಬೇಷನರಿ ಐಎಎಸ್ ಅಧಿಕಾರಿ ಸುನಿಲ್ ಕುಮಾರ್, ತಹಸೀಲ್ದಾರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

