ಹಾಸನ

ಕಾಂಗ್ರೆಸ್ನಲ್ಲಿ ಟಿಕೆಟ್ ತಂದಿಟ್ಟ ಬಂಡಾಯ

Published On :

 ದಯಾಶಂಕರ ಮೈಲಿ
ಹಾಸನ: ಏಕೋ ಏನೋ...ಜಿಲ್ಲೆಯಲ್ಲಿ ಕಾಂಗ್ರೆಸ್ ಗ್ರಹಚಾರ ಸರಿಯಿಲ್ಲ ಎಂದು ಕಾಣಿಸುತ್ತಿದೆ. 10 ವರ್ಷಗಳಿಂದ ಜಿಲ್ಲೆಯಲ್ಲಿ ಹೇಳ ಹೆಸರಿಲ್ಲದಂತಹ ದುಸ್ಥಿತಿಯಲ್ಲಿರುವ ಕಾಂಗ್ರೆಸ್ ಈ ಚುನಾವಣೆಯಲ್ಲಾದರೂ ಚೇತರಿಕೆ ಕಂಡುಕೊಳ್ಳಬಹುದೆಂಬ ನಿರೀಕ್ಷೆ ಇತ್ತು. ಆದರೆ ಈಗ ಆ ಪಕ್ಷದಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ಗಮನಿಸಿದರೆ ಈ ನಿರೀಕ್ಷೆ ಹುಸಿಯಾಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ.
ಕಾಂಗ್ರೆಸ್ ಹೈಕಮಾಂಡ್ ಜಿಲ್ಲೆಯ 6 ವಿಧಾನಸಭೆಗಳ ಟಿಕೆಟ್ ಹಂಚಿಕೆ ಮಾಡಿದೆ. ಇದು ಬಂಡಾಯವನ್ನು ಸೃಷ್ಟಿಸಿದ್ದು, ಈ ಬಂಡಾಯವನ್ನು ಹೇಗೆ ನಿಭಾಯಿಸಲಾಗುವುದು ಎಂಬುದೀಗ ಯಕ್ಷಪ್ರಶ್ನೆ. ಅಲ್ಲದೆ ಬಂಡಾಯ ಎದ್ದಿರುವುದು ಪಕ್ಷದ ಅಧಿಕೃತ ಅಭ್ಯರ್ಥಿಗಳನ್ನು ಧೃತಿಗೆಡಿಸಿದೆ.
ಕೆಲವರು ಪಕ್ಷೇತರಾಗಿ ಸ್ಪರ್ಧಿಸಲು, ಮತ್ತೆ ಕೆಲವರು ಅನ್ಯ ಪಕ್ಷದಿಂದ ಸ್ಪರ್ಧಿಸಲು ಮುಂದಾಗಿದ್ದಾರೆ. ಅಲ್ಲದೆ ಟಿಕೆಟ್ ಸಿಗದ ಮಂದಿ ಅಧಿಕೃತ ಅಭ್ಯರ್ಥಿಗಳ ವಿರುದ್ಧ ತೆರೆಮರೆಯಲ್ಲಿ ಕೆಲಸ ಮಾಡುವ ಮೂಲಕ ಹೈಕಮಾಂಡ್ಗೆ ಸೂಕ್ತ ರೀತಿಯಲ್ಲಿ ಬುದ್ದಿ ಕಲಿಸುವುದಲ್ಲದೇ ತಟಸ್ಥ ನೀತಿ ಅನುಸರಿಸುವ ತಂತ್ರಗಾರಿಯೂ ನಡೆಯುತ್ತಿದೆ. ಈ ಘಟನಾವಳಿಗಳು ಪಕ್ಷದ ನಿಷ್ಠಾವಂತರ ಉತ್ಸಾಹಕ್ಕೆ ತಣ್ಣೀರು ಎರಚಿವೆ ಎಂಬುದು ಸುಳ್ಳಲ್ಲ..  
ಏಲ್ಲೆಲ್ಲಿ ಏಕೆ ಬಂಡಾಯ?: ಸಕಲೇಶಪುರ ಮೀಸಲು ಕ್ಷೇತ್ರದಲ್ಲಂತೂ ಅಸಮಾಧಾನದ ಕಾರ್ಮೋಡವೇ ಕವಿದಿದೆ. ಈ ಕ್ಷೇತ್ರದಿಂದ ಸ್ಪರ್ಧಿಸಲು ಡಜನ್ಗಟ್ಟಲೇ ಆಕಾಂಕ್ಷಿಗಳೇ ಇದ್ದರು. ಇದರಿಂದ ಸಹಜವಾಗಿ ಟಿಕೆಟ್ ಪಡೆಯುವ ಯತ್ನದಲ್ಲಿ ಎರಡು ಮೂರು ಬಣಗಳು ಸೃಷ್ಟಿಯಾಗಿದ್ದವು. ಇದನ್ನು ತಪ್ಪಿಸಲು ಮಾಜಿ ಸಚಿವೆ ಮೋಟಮ್ಮರಿಗೆ ಇಲ್ಲಿಂದ ಸ್ಪರ್ಧಿಸಲು ಟಿಕೆಟ್ ನೀಡಬೇಕು. ಆಗ ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಾರೆ. ಇದಾದರೇ ಪಕ್ಷ ಸೋಲಿನ ದವಡೆಯಿಂದ ತಪ್ಪಿಸಿಕೊಂಡು ಗೆಲವು ಸಾಧಿಸಬಹುದು ಎಂದು ಸಕಲೇಶಪುರ ತಾ. ಮುಖಂಡವಿದ್ಯಾಧರ, ಬಿ.ಎ. ಜಗನ್ನಾಥ್, ಎಚ್.ಪಿ. ಮೋಹನ್ ಇತರರು ಹೇಳಿದ್ದರಲ್ಲದೇ ದೂರದ ದೆಹಲಿವರೆಗೂ ಹೋಗಿ ಮೋಟಮ್ಮಗೆ ಟಿಕೆಟ್ ಪಡೆಯುವ ಲಾಬಿಗೆ ಕೈ ಜೋಡಿಸಿದ್ದರು.
ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದ ಡಿ.ಸಿ. ಸಣ್ಣಸ್ವಾಮಿ, ನಾನು ಸ್ಥಳೀಯ. ಕ್ಷೇತ್ರದ ಉದ್ದಗಲ ಗೊತ್ತಿದೆ. ಆದ್ದರಿಂದ ಟಿಕೆಟ್ ನೀಡಬೇಕೆಂದು ಮಾಜಿ ಸಚಿವ ಎಚ್.ಸಿ. ಮಹಾದೇವಪ್ಪ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರ ಮೂಲಕ ಟಿಕೆಟ್ಗೆ ಹೋರಾಟ ನಡೆಸಿದ್ದರು. ಕೆಲ ಸಂಘಟನೆಗಳು ಕ್ಷೇತ್ರದ ಸ್ಥಳೀಯರಿಗೆ ಟಿಕೆಟ್ ನೀಡಬೇಕೆಂದು ಆಗ್ರಹಿಸಿದ್ದವು.
ಲೆಕ್ಕಿಸದ ಕಾಂಗ್ರೆಸ್ ಹೈಕಮಾಂಡ್:  ಆದರೆ ಇದ್ಯಾವುದನ್ನು ಲೆಕ್ಕಿಸದೆ ಕಾಂಗ್ರೆಸ್ ಹೈಕಮಾಂಡ್ ಬೇಲೂರು ಕ್ಷೇತ್ರದಿಂದ ಎರಡು ಬಾರಿ ಸೋತು ಮತ್ತು ಒಂದು ಬಾರಿ ಗೆದ್ದಿದ್ದ ಡಿ. ಮಲ್ಲೇಶ್ಗೆ ಟಿಕೆಟ್ ನೀಡಿ ಅವರನ್ನು ಅಖಾಡಕ್ಕೆ ಇಳಿಸಿದೆ. ಇದರಿಂದ ಕ್ಷೇತ್ರದ ಮುಖಂಡರು ಕಿಡಿಕಾರಿ ತಮ್ಮ ಸಿಟ್ಟನ್ನು ಹೊರ ಹಾಕಿದ್ದಾರೆ.
ಕೆಲವರು ಪ್ರತ್ಯೇಕ ಸಭೆ ನಡೆಸಿ ಸಣ್ಣಸ್ವಾಮಿ ಅವರನ್ನು ಪಕ್ಷೇತರರಾಗಿ ನಿಲ್ಲಿಸುವ ಚಿಂತನೆ ನಡೆಸಿದ್ದರೆ, ದಲಿತ ಮುಖಂಡರು ಇದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಣ್ಣಸ್ವಾಮಿ ಪಕ್ಷೇತರರಾಗಿ ಅಖಾಡಕ್ಕೆ ಇಳಿಯುವ ಮೂಲಕ ಕಾಂಗ್ರೆಸ್ಗೆ ಪಾಠ ಕಲಿಸುವ ಸಾಧ್ಯತೆಗಳಿವೆ ಎಂದು ಕಾರ್ಯಕರ್ತರೇ ಹೇಳುತ್ತಿದ್ದಾರೆ.
ಮೂಲ ಕಾಂಗ್ರೆಸಿಗರಲ್ಲಿ ತೀವ್ರ ಆಕ್ರೋಶ:  ಶ್ರವಣಬೆಳಗೊಳ ಕ್ಷೇತ್ರದಲ್ಲಿ ಜೆಡಿಎಸ್ನಿಂದ ವಲಸೆ ಬಂದಿರುವ ಮಾಜಿ ಶಾಸಕ ಸಿ.ಎಸ್. ಪುಟ್ಟೇಗೌಡರಿಗೆ ಟಿಕೆಟ್ ನೀಡುತ್ತಿರುವುದು ಮೂಲ ಕಾಂಗ್ರೆಸಿಗರಲ್ಲಿ ತೀವ್ರ ಆಕ್ರೋಶ ಉಂಟಾಗಿದೆ. ಮಾಜಿ ಸಚಿವ ದಿ. ಎಚ್.ಸಿ. ಶ್ರೀಕಂಠಯ್ಯನವರ ಪುತ್ರ ಎಚ್.ಎಸ್. ವಿಜಯಕುಮಾರ್, ಹಿರಿಯ ಮುಖಂಡ ಕಬ್ಬಳ್ಳಿ ರಂಗೇಗೌಡ, ಸಿ.ವಿ.ರಾಜಪ್ಪ, ಗೋಪಾಲಸ್ವಾಮಿ ಅವರು ಡೆಲ್ಲಿಯಲ್ಲಿ ಮೊಕ್ಕಾಂ ಮಾಡಿದ್ದು, ಪುಟ್ಟೇಗೌಡರಿಗೆ ಟಿಕೆಟ್ ತಪ್ಪಿಸಲು  ವರಿಷ್ಠರ ಮೇಲೆ ತೀವ್ರ ಒತ್ತಡ ಹೇರುತ್ತಿದ್ದಾರೆ.
ಆದರೆ ವಿಶ್ವಾಸಾರ್ಹ ಮೂಲಗಳ ಪ್ರಕಾರ ಪುಟ್ಟೇಗೌಡರಿಗೆ ಟಿಕೆಟ್ ನೀಡಲು ನಿರ್ಧರಿಸಲಾಗಿದೆ. ಇದು ಮೂಲ ಕಾಂಗ್ರೆಸಿಗರಿಗೇನು ಗೊತ್ತಿಲ್ಲದೇ ಇಲ್ಲ. ಪುಟ್ಟೇಗೌಡರಿಗೆ ನೀಡಿದರೆ ಗೋಪಾಲಸ್ವಾಮಿ ಪಕ್ಷೇತರರಾಗಿ ಅಥವಾ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವುದು ಖಚಿತ.
ನಗರಸಭೆ, ಜಿಲ್ಲಾ, ತಾಪಂ ಚುನಾವಣೆಗಳಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ಮಾಡಲು ಗೋಪಾಲಸ್ವಾಮಿ ಶ್ರಮ ಅಪಾರವಾಗಿದೆ. ಆದ್ದರಿಂದ ಗೋಪಾಲಸ್ವಾಮಿಗೆ ಟಿಕೆಟ್ ನೀಡಿ, ಇಲ್ಲ ಮೂಲ ಕಾಂಗ್ರೆಸಿಗರಿಗೆ ಟಿಕೆಟ್ ನೀಡಿ ಎಂಬುದು ಪುಟ್ಟೇಗೌಡರಿಗೆ ಟಿಕೆಟ್ ಬೇಡ ಎನ್ನುವವರ ವಾದವಾಗಿದೆ.
ಕೆಜೆಪಿಯಿಂದ ಸ್ಪರ್ಧೆ:  ಅರಕಲಗೂಡು ಕ್ಷೇತ್ರದಲ್ಲೂ ಕಾಂಗ್ರೆಸ್ ತನ್ನ ಪಕ್ಷದವರನ್ನೇ ಎದುರಿಸಬೇಕಾಗಿದೆ. ಸಿದ್ದರಾಮಯ್ಯ ಆಪ್ತರು ಹಾಗೂ ನಿವೃತ್ತ ಅಧಿಕಾರಿ ಕೆ.ಎಂ. ಪುಟ್ಟಸ್ವಾಮಿ ಕಾಂಗ್ರೆಸ್ ಟಿಕೆಟ್ ಸಿಗದ ಕಾರಣ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಕೆಜೆಪಿಯಿಂದ ಸ್ಪರ್ಧಿಸಲು ಮುಂದಾಗಿದ್ದಾರೆ. ಇದು ಪಕ್ಷದ ಅಧಿಕೃತ ಅಭ್ಯರ್ಥಿ ಮಂಜು ಅವರಿಗೆ ತಲೆನೋವಾಗಿ ಪರಿಣಮಿಸಿದೆ. ಹೊಳೆನರಸೀಪುರದಿಂದ ಟಿಕೆಟ್ ಪಡೆದಿರುವ ಎಸ್.ಜಿ. ಅನುಪಮಾ ಕೂಡಾ ಬಂಡಾಯ ಎದುರಿಸಬೇಕಾಗಿದೆ. ಕಳೆದ ಬಾರಿಯೂ ಬಂಡಾಯ ಸ್ಪರ್ಧಿಸಿದ್ದ ಶಿವಸ್ವಾಮಿ ಹಾಗೂ ದುದ್ದ ಹೋಬಳಿಯ ಪ್ರಮುಖ ವ್ಯಕ್ತಿಯೊಬ್ಬರು  ಬಂಡಾಯವಾಗಿ ಕಣಕ್ಕೆ ಇಳಿಯುವ ಸಾಧ್ಯತೆಗಳಿವೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಅಧಿಕೃತ ಅಭ್ಯರ್ಥಿ ವಿರುದ್ಧ ಅಡ್ಡ ಮತದಾನ ಮಾಡಿದ್ದರೂ ಬೇಲೂರು ಕ್ಷೇತ್ರದಿಂದ ಟಿಕೆಟ್ ಪಡೆದಿರುವ ಶಾಸಕ ವೈ.ಎನ್. ರುದ್ರೇಶ್ಗೌಡರು ಕೂಡಾ ನಿರುಮ್ಮಲವಾಗಿ ಪ್ರಚಾರ ಮಾಡುವ ಪರಿಸ್ಥಿತಿಯಲ್ಲಿ ಇಲ್ಲ.
ತಟಸ್ಥ ನೀತಿ ಅನುಸರಿಸಲು ಚಿಂತನೆ:   ಅಂತಿಮ ಕ್ಷಣದಲ್ಲಿ ಟಿಕೆಟ್ ವಂಚಿತರಾದ ದಶಕಗಳಿಂದ ಪಕ್ಷದಲ್ಲಿ ದುಡಿದ ಚಂದ್ರಕಲಾ ಮತ್ತು ಪಿ.ಎಫ್. ಸಾಲ್ಡಾನ ಚುನಾವಣಾ ಪ್ರಚಾರದಿಂದ ದೂರ ಉಳಿದು ತಟಸ್ಥ ನೀತಿ ಅನುಸರಿಸಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಹಾಸನದಿಂದ ಎಚ್.ಕೆ. ಮಹೇಶ್ಗೆ ಟಿಕೆಟ್ ನೀಡಿರುವುದು ಎಲ್ಲರಿಗೂ ತೃಪ್ತಿ ತಂದಿಲ್ಲ. ಹಾಗೆಯೇ ಹಿರಿಯ ರಾಜಕಾರಣಿ ಎಸ್.ಎಂ. ಆನಂದ್ಗೆ ಟಿಕೆಟ್ ತಪ್ಪಿರುವುದು ಹಲವರಿಗೆ ಅಸಮಾಧಾನ ತಂದಿದೆ. ವಕೀಲರೂ ಆಗಿರುವ ಆನಂದ್ ಪಕ್ಷಬೇಧ ಮಾಡದೇ ಎಲ್ಲರ ಕೇಸ್ ತೆಗೆದುಕೊಂಡು ವಕಾಲತ್ತು ನಡೆಸುತ್ತಿದ್ದರು. ಹಾಗೂ ಎಲ್ಲಾ ಪಕ್ಷದವರೊಂದಿಗೆ ಪ್ರೀತಿಯಿಂದ ಮಾತನಾಡುವ ಅವರ ಗುಣ. ಅದನ್ನೇ ಕೆಲವರು ಹೈಕಮಾಂಡ್ಗೆ ತಪ್ಪಾಗಿ ಹೇಳಿದ್ದಾರೆ. ಆನಂದ್ ಜೆಡಿಎಸ್ ಮತ್ತಿತರರೊಂದಿಗೆ ಷಾಮೀಲಾಗುತ್ತಾರೆ ಎಂದು ಚಾಡಿ ಹೇಳಿದ್ದು ಟಿಕೆಟ್ ತಪ್ಪಲು ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಆನಂದ್ ಬೆಂಬಲಿಗರು ಪಕ್ಷದ ಅಭ್ಯರ್ಥಿ ವಿರುದ್ಧ ಬಹಿರಂಗವಾಗಿ ಟೀಕೆ ಮಾಡದೇ ಒಳ ಏಟು ನೀಡುವ ಸಂಭವ ಕೂಡಾ ಇವೆ ಎಂಬುದನ್ನು ತಳ್ಳಿ ಹಾಕುವಂತಿಲ್ಲ.
ಕಾಂಗ್ರೆಸ್ನಲ್ಲಿ ಹಣಕ್ಕಾಗಿ ಟಿಕೆಟ್ ಮಾರಾಟ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿರುವ ಅರಸೀಕೆರೆ ಕ್ಷೇತ್ರದಿಂದ ಟಿಕೆಟ್ ವಂಚಿತರಾಗಿರುವ ಜೆ.ಪಿ.ಎನ್. ಜಯಣ್ಣ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಚಿಂತನೆ ನಡೆಸಿದ್ದಾರೆ. ಅದಕ್ಕಾಗಿ ಹಿತೈಷಿಗಳು, ಬೆಂಬಲಿಗರೊಂದಿಗೆ ಸಭೆ ನಡೆಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.