ವಾಟೆಹೊಳೆ ಖಾಲಿ, ಖಾಲಿ...
ಕನ್ನಡಪ್ರಭವಾರ್ತೆ ಆಲೂರು ಏ.8
ತಾಲೂಕಿನ 18 ಸಾವಿರ ಎಕರೆ ಪ್ರದೇಶದ ಬೆಳೆಗಳಿಗೆ ನೀರು ನೀಡುವ ದೃಷ್ಟಿಯಿಂದ ನಿರ್ಮಿಸಲಾದ ವಾಟೆಹೊಳೆ ಜಲಾಶಯದಲ್ಲಿ ಇದೀಗ ನೀರು ಸಂಪೂರ್ಣವಾಗಿ ಖಾಲಿಯಾಗಿದೆ. ಈ ನೀರನ್ನು ನಂಬಿ ಬೆಳೆ ಬೆಳೆಯುತ್ತಿದ್ದ ನಾಲೆ ಪಾತ್ರದ ರೈತರು ಅನಿವಾರ್ಯವಾಗಿ ತಮ್ಮ ಜಮೀನು ಖಾಲಿ ಬಿಟ್ಟಿದ್ದಾರೆ. ಜತೆಗೆ ಜಲಾಶಯದಲ್ಲಿ ನೀರಿಲ್ಲದ ಕಾರಣ ಆಂತರ್ಜಲ ಕಡಿಮೆ ಆಗಿ ಬೋರ್ವೆಲ್ಗಳಲ್ಲೂ ನೀರು ಸಿಗುತ್ತಿಲ್ಲ.
ಸಾಮಾನ್ಯವಾಗಿ ಜಲಾಶಯ ನದಿಗೆ ಅಡ್ಡಲಾಗಿ ಕಟ್ಟಿದರೆ, ಈ ಜಲಾಶಯವನ್ನು ಮಳೆಗಾಲದಲ್ಲಿ ಹರಿವ ವಾಟೆಹೊಳೆ ಎಂಬ ತೊರೆಗೆ ಅಡ್ಡಲಾಗಿ ಕಟ್ಟಲಾಗಿದೆ.
ಒಟ್ಟು 1, 510 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಈಗ ಕೇವಲ 0.116 ಟಿಎಂಸಿ ನೀರಿದೆ. ಜಲಾಶಯದ ಡೆಡ್ ಸ್ಟೋರೇಜ್ 0.144 ಆಗಿದ್ದು, ಅದಕ್ಕಿಂತಲೂ ಕಡಿಮೆ ನೀರಿರುವ ಈ ಜಲಾಶಯದಲ್ಲಿ ಮುಳುಗಡೆಯಾಗಿದ್ದ ಮರಗಳ ಬುಡಗಳು ಈಗ ಕಾಣುತ್ತಿದ್ದು, ಜಲಾಶಯ ಸಣ್ಣ ಕೆರೆಯಂತೆ ಗೋಚರಿಸುತ್ತಿದೆ.
ಕಳೆದ ಬಾರಿ ಇದೇ ಸಮಯದಲ್ಲಿ ಅಂದರೆ ಮಾರ್ಚ್, ಏಪ್ರಿಲ್ ನಡುವೆ 1.10 ಟಿಎಂಸಿ ನೀರು ಇದ್ದರೆ ಈ ಬಾರಿ ಕೇವಲ 0.116 ಟಿಎಂಸಿ ನೀರಿದೆ.
ಜಲಾಶಯ ನಿರ್ಮಾಣ 1985 ರಲ್ಲಿ ಮುಕ್ತಾಯಗೊಂಡು, 1989 ರಿಂದ ನೀರು ಸಂಗ್ರಹಣೆ ಪ್ರಾರಂಭವಾಯಿತು. ಇಲ್ಲಿ ಒಟ್ಟು ಎರಡು ನಾಲೆಗಳಿದ್ದು, ಎಡದಂಡೆ ನಾಲೆ 10 ಕಿ.ಮೀ. ಎಕರೆಗೆ ನೀರೊದಗಿಸಿದರೆ ಬಲದಂಡೆ ನಾಲೆ 5 ಸಾವಿರ ಎಕರೆ ಪ್ರದೇಶಕ್ಕೆ ನೀರು ಒದಗಿಸುತ್ತಿದೆ.
ಜಲಾಶಯ ನಿರ್ಮಾಣ ಉದ್ದೇಶ ಮಳೆಗಾಲದ ಖಾರಿಫ್ ಬೆಳೆಗೆ ಮೊದಲು 5600 ಎಕರೆ ಪ್ರದೇಶಕ್ಕೆ ನೀರು ನೀಡಿ, ನಂತರ ರಭಿ ಬೆಳೆಗಾಗಿ 12,400 ಎಕರೆ ಪ್ರದೇಶಕ್ಕೆ ನೀರು ನೀಡುವುದಾಗಿತ್ತು. ಅಂದರೆ ಖಾರೀಫ್ ಬೆಳೆಗೆ ಮಾತ್ರ 5,600 ಎಕರೆಗೆ ನೀರು ನೀಡುವುದು, ನಂತರ ಅವರಿಗೆ ಸಂಪೂರ್ಣ ನೀರು ನಿಲ್ಲಿಸಿ ಉಳಿದ 12,400 ಎಕರೆ ಪ್ರದೇಶಕ್ಕೆ ನೀರು ನೀಡುವುದಾಗಿತ್ತು. ಆದರೆ ಈವರೆಗೂ ಜಲಾಶಯ ಬಳಿ ಇರುವ 5600 ಎಕರೆ ಪ್ರದೇಶದವರು ಮಾತ್ರ ನೀರು ಪಡೆದು ಬೆಳೆ ಬೆಳೆಯುತ್ತಿದ್ದಾರೆ. ಇದರಿಂದ ಲಕ್ಷಾಂತರ ರೈತರಿಗೆ ಅನ್ಯಾಯವಾದಂತಾಗಿದೆ. ಜಲಾಶಯದಿಂದ ಒಟ್ಟು 55 ಕೆರೆಗಳಿಗೆ ನೀರು ಬಿಡಲಾಗುತ್ತಿದ್ದು, ಅವುಗಳಲ್ಲಿ 15 ಕೆರೆ ಬಿಟ್ಟರೆ ಉಳಿದೆಲ್ಲ ಕೆರೆಗಳು ಬತ್ತಿ ಹೋಗಿವೆ.
ಜಲಾಶಯ ಅಚ್ಚುಕಟ್ಟು ಪ್ರದೇಶದಲ್ಲಿ ಒಟ್ಟಾರೆ 76 ಕೆರೆಗಳು ಇದ್ದು, ಈ ಕೆರೆಗಳ ಪೈಕಿ ಬಹುತೇಕ ಕೆರೆಗಳ ಒತ್ತುವರಿಯಾಗಿದೆ.
ಕೆರೆಗಳ ಹೂಳೆತ್ತಿದರೆ ಸಾಲದು: ಸರ್ಕಾರವೀಗ ಕೆರೆಗಳ ಹೂಳೆತ್ತುವ ಕಾರ್ಯ ಕೈಗೊಂಡಿದ್ದು, ಹಲವಾರು ಕೆರೆಗಳ ಹೂಳೆತ್ತಿದರೆ ಸಾಲದು. ಒತ್ತುವರಿಯಾಗಿರುವ ಪ್ರದೇಶವನ್ನು ತೆರವುಗೊಳಿಸಿ ಹಾಳಾಗಿರುವ ತೂಬುಗಳನ್ನು ಕೆರೆ ಏರಿಯನ್ನು ದುರಸ್ತಿಗೊಳಿಸಬೇಕಿದೆ.
ಈ ಎಲ್ಲಾ ಕಾರ್ಯ ನಡೆಯಬೇಕಾದರೆ ಸರ್ಕಾರ ವಿಶೇಷ ಅನುದಾನ ಬಿಡುಗಡೆ ಮಾಡಬೇಕಿದೆ. ಆದರೆ ಈವರೆಗೆ ಆಡಳಿತ ನಡೆಸಿರುವ ಯಾವುದೇ ಸರ್ಕಾರದವರು ಮಳೆ ನೀರನ್ನು ಸಂಗ್ರಹಿಸಿ ಅಂತರ್ಜಲ ಮಟ್ಟ ಅಭಿವೃದ್ಧಿಗೊಳಿಸುವತ್ತ ಕಾರ್ಯೋನ್ಮುಖರಾದವರಂತೆ ಕಾಣುತ್ತಿಲ್ಲ.
ಕುಡಿಯುವ ನೀರಿಗಾಗಿ ಬೋರ್ವೆಲ್ ಕೊರೆಸುವುದೊಂದೇ ಮಾರ್ಗ ಎಂದು ಕೊಂಡು ಭೂತಾಯ ಒಡಲನ್ನು ಕೊರೆಯುತ್ತಿರುವ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಮಳೆ ನೀರು ಕೊಯ್ಲು ಏಕೆ ಮರೆತು ಹೋಗಿದೆ ಎಂಬುದು ತಿಳಿಯುತ್ತಿಲ್ಲ.
ಇದಕ್ಕಾಗಿ ಸರ್ಕಾರ ಯೋಜನೆ ರೂಪಿಸಿತ್ತು. ಅದು ಏನಾಯಿತು ಎಂಬುದು ತಿಳಿಯುತ್ತಿಲ್ಲ. ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ ರೀತಿಯಲ್ಲಿ ಅನುಷ್ಠಾನಗೊಳ್ಳುತ್ತಿಲ್ಲ.
ಗ್ರಾಮ ಪಂಚಾಯ್ತಿಯಿಂದ ಮಳೆ ನೀರನ್ನು ಸಂಗ್ರಹಿಸಿ ಸಂಸ್ಕರಿಸಿ ಕುಡಿಯಲು ಹಾಗೂ ಅಂತರ್ಜಲ ಮಟ್ಟ ಹೆಚ್ಚಿಸುವ ಕಾರ್ಯ ಶೀಘ್ರ ಆಗಬೇಕಿದೆ. ಈ ನಿಟ್ಟಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯನ್ನು ಚೆನ್ನಾಗಿ ಬಳಸಿಕೊಳ್ಳುವುದು ಉತ್ತಮ ನಡೆ ಎಂದರೆ ತಪ್ಪಾಗದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

