ಪುಷ್ಪಗಿರಿ ಬೆಟ್ಟ ಬಳಿ ಕಾರು ಉರುಳಿ ಬಿದ್ದು ವ್ಯಕ್ತಿ ಸಾವು
ಕನ್ನಡಪ್ರಭ ವಾರ್ತೆ, ಬೇಲೂರು , ಏ 12
ಕಾರು ಪಲ್ಟಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಪುಷ್ಪಗಿರಿ ಬೆಟ್ಟದಲ್ಲಿ ಗುರುವಾರ ನಡೆದಿದೆ. ಆಲೂರು ಪಟ್ಟಣದ ಮಹೇಶ ಎಂಬುವರ ತಂದೆ ಸ್ವಾಮಿಶೆಟ್ಟಿ (59) ಸಾವನ್ನಪ್ಪಿದ ದುರ್ದೈವಿ.
ಮಹೇಶ್ ಕಾರಿನಲ್ಲಿ ತಂದೆ ತಾಯಿ ಹೆಂಡತಿ ಮಕ್ಕಳೊಂದಿಗೆ ಹಳೇಬೀಡು ಠಾಣಾ ವ್ಯಾಪ್ತಿ ಪುಪ್ಷಗಿರಿ ಬೆಟ್ಟಕ್ಕೆ ದೇವರ ಪೂಜೆಗೆಂದು ಬಂದು ಪೂಜೆ ಮುಗಿಸಿಕೊಂಡು ವಾಪಸ್ ಬೆಟ್ಟದ ಇಳಿಜಾರಿನಲ್ಲಿ ಹೋಗುತ್ತಿದ್ದಾಗ ಕಾರನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದ ಪರಿಣಾಮ ಕಾರು ನಿಯಂತ್ರಣ ತಪ್ಪಿ ಉರುಳಿ ಬಿದ್ದಿದ್ದು, ಕಾರಿನಲ್ಲಿದ್ದವರಿಗೆ ತೀವ್ರ ಗಾಯವಾಗಿದ್ದು, ಚಿಕಿತ್ಸೆಗಾಗಿ ಹಳೇಬೀಡು ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ ಸೇರಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಸ್ವಾಮಿಶೆಟ್ಟಿ ಸಾವನ್ನಪ್ಪಿದ್ದಾರೆ. ಮೃತರ ಸೊಸೆ ಪವಿತ್ರ ಹಳೇಬೀಡು ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಲಾರಿ - ಬೈಕ್ ಡಿಕ್ಕಿ: ಸವಾರ ಸಾವು
ಅರಕಲಗೂಡು: ಲಾರಿಯೊಂದು ಬೈಕ್ ,ಗೆ ಡಿಕ್ಕಿ ಮಾಡಿದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಕೊಣನೂರು-ಕುಶಾಲನಗರ ರಸ್ತೆಯಲ್ಲಿ ಗುರುವಾರ ನಡೆದಿದೆ. ತಾಲೂಕಿನ ಕೊಣನೂರು ಈದ್ಗಾ ರಸ್ತೆ ವಾಸಿ ಕೆ.ಕೆ.ಸಣ್ಣೇಗೌಡ (72) ಸಾವನ್ನಪ್ಪಿದ ದುರ್ದೈವಿ. ಸಣ್ಣೇಗೌಡರು ಹಿರೋಹೊಂಡಾ ಮೋಟಾರ್ ಸೈಕಲ್ ,ನಲ್ಲಿ ಕೊಣನೂರು-ಕುಶಾಲನಗರ ರಸ್ತೆ, ಭಾರತ್ ಸರ್ವೀಸ್ ಸ್ಟೇಷನ್ ಹತ್ತಿರ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಲಾರಿ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಬೈಕ್ ,ಗೆ ಡಿಕ್ಕಿ ಮಾಡಿದ ಪರಿಣಾಮ ತೀವ್ರ ಗಾಯಗೊಂಡ ಸಣ್ಣೇಗೌಡ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಎಸ್.ಕೆ.ಕೃಷ್ಣ ಕೊಣನೂರು ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿರುವ ಪೊಲೀಸರು ಚಾಲಕನ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.
ಮಿನಿಬಸ್ ಡಿಕ್ಕಿ: ಪಾದಚಾರಿ ಸಾವು
ಹೊಳೆನರಸೀಪುರ: ಮಿನಿ ಬಸ್ ಡಿಕ್ಕಿ ಮಾಡಿದ ಪರಿಣಾಮ ಪಾದಚಾರಿ ಸಾವನ್ನಪ್ಪಿರುವ ಘಟನೆ ಗುರುವಾರ ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಉದ್ದೂರು ಗ್ರಾಮದ ಈರಯ್ಯ ಹಬ್ಬಕ್ಕೆಂದು ಮಗಳ ಮನೆ ದೊಡ್ಡಳ್ಳಿಗೆ ಹೋಗಲು ದೊಡ್ಡಳ್ಳಿ ಕೊಪ್ಪಲು ಹತ್ತಿರ ರಸ್ತೆಯ ಎಡಭಾಗದಲ್ಲಿ ನಡೆದುಕೊಂಡು ಹೊಗುತ್ತಿದ್ದಾಗ ಹಿಂಬದಿಯಿಂದ ಬಂದ ಮಿನಿ ಬಸ್ ಚಾಲಕನ ನಿರ್ಲಕ್ಷ್ಯತೆಯಿಂದ ಡಿಕ್ಕಿ ಮಾಡಿದ ಪರಿಣಾಮ ತೀವ್ರ ಗಾಯವಾಗಿದ್ದು, ಈರಯ್ಯ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಪುತ್ರಿ ಲಕ್ಷ್ಮಿ ಹೊಳೆನರಸೀಪುರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಜೂಜಾಟ: 32 ಮಂದಿ ಬಂಧನ
ಅರಸೀಕೆರೆ: ತಾಲೂಕಿನಲ್ಲಿ ಪ್ರತ್ಯೇಕ ಪ್ರಕರಣದಲ್ಲಿ 32 ಮಂದಿಯನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಚಿಕ್ಕೂರು ಬಸ್ ನಿಲ್ದಾಣ ಬಳಿ ಅಂದರ್ಬಾಹರ್ ಜೂಜಾಡುತ್ತಿದ್ದವರ ಮೇಲೆ ದಾಳಿ ನಡೆಸಿದ ಪೊಲೀಸರು ಪ್ರಕಾಶ್ (40), ಮರುಳಯ್ಯ (35), ದ್ಯಾವೇಗೌಡ(65), ರವಿಕುಮಾರ (45) ಮತ್ತು ಸಿದ್ದೇಗೌಡ (45) ಎಂಬವರನ್ನು ಬಂಧಿಸಿದ್ದು, ಪಣಕ್ಕಿಟ್ಟಿದ್ದ 3 ಸಾವಿರ ರು. ನಗದು 3 ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ತಾಲೂಕಿನ ಬಾಣಾವರ ಹೋಬಳಿ, ಬೆಂಡೆಕೆರೆ ಗ್ರಾಮದ ಮಲ್ಲಿಕಾರ್ಜುನ ಎಂಬುವರ ತೋಟದ ಮನೆಯಲ್ಲಿ ಅಂದರ್ಬಾಹರ್ ಜೂಜಾಡುತ್ತಿದ್ದ ಉಮೇಶ್ (30), ಅಶೋಕ (25), ಜಯಣ್ಣ (38), ರಾಜು (28), ಶಶಿ (32), ಉಮೇಶ (30), ಆಶ್ರಿತ್ (21) ಮತ್ತು ದಿನೇಶ (30) ಎಂಬುವರನ್ನು ಬಂಧಿಸಿದ್ದು, ಪಣಕ್ಕಿಟ್ಟಿದ್ದ 15,200 ರು., 10 ಮೋಟಾರ್ ಬೈಕ್, 1 ಟ್ರಾಕ್ಟರ್, 1 ನೋಕೀಯೋ ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಬಾಣಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಅರಸೀಕೆರೆ ನಗರ ಕಂತೇನಹಳ್ಳಿ ಕೆರೆ ಪಕ್ಕದ ಈಶ್ವರಪ್ಪನವರ ತೆಂಗಿನ ತೋಟದಲ್ಲಿ ಅಂದರ್ಬಾಹರ್ ಜೂಜಾಡುತ್ತಿದ್ದ ಕೃಷ್ಣಮೂರ್ತಿ (36), ಇಮಾಮ್ (32), ಪ್ರಕಾಶ (30), ಅಭಿಷೇಕ್ (18), ಮನೋಜ್ (18), ಹರೀಶ (21) ಎಂಬುವರನ್ನು ಬಂಧಿಸಿದ್ದು, ಪಣಕ್ಕಿಟ್ಟಿದ್ದ 2260 ನಗದನ್ನು ವಶಪಡಿಸಿಕೊಂಡು, ಅರಸೀಕೆರೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅರಸೀಕೆರೆ ಶ್ರೀನಿವಾಸನಗರ ಆದಿಚುಂಚನಗಿರಿ ಕಾಲೇಜು ಆವರಣದಲ್ಲಿ ಜೂಜಾಡುತ್ತಿದ್ದ ಮಂಜುನಾಥ (27), ಸಂತೋಷ (26), ಮಂಜುನಾಥ.ಆರ್ (35), ಸಿದ್ದೇಶ (18), ಮೋಹನ್ (26), ಅಬ್ದುಲ್ ಮಜೀದ್ (21), ರಮೇಶ (37), ಶಶಿಧರ (28) ಮತ್ತು ಮಂಜು (28) ಎಂಬುವರನ್ನು ಬಂಧಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

