ಹಾಸನ

ಆಲೂರುಆಸ್ಪತ್ರೆ ಮುಂಭಾಗದಲ್ಲಿ ವಾರದ ಸಂತೆ: ಕಿರಿಕಿರಿ

Published On :

ಕನ್ನಡಪ್ರಭ ವಾರ್ತೆ ಆಲೂರು ಏ.14
ಪಟ್ಟಣದಲ್ಲಿ ನಡೆಯುವ ವಾರದ ಸಂತೆ ಸಾರ್ವಜನಿಕರಿಗೆ ಅನುಕೂಲಕ್ಕಿಂತ ಅನಾನುಕೂಲಗಳ ಆಗರವಾಗಿದೆ ಎಂದರೆ ತಪ್ಪಾಗದು. ಸಾರ್ವಜನಿಕ ಆಸ್ಪತ್ರೆ ಮುಂಭಾಗವೇ ನಡೆಯುವ ಸಂತೆಯಿಂದಾಗಿ ಮುಖ್ಯ ರಸ್ತೆಯಲ್ಲಿ  ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗುತ್ತಿದೆ.
ಹೆಚ್ಚಿನ ಜನದಟ್ಟಣೆಯಿಂದಾಗಿ ಈ ಸ್ಥಳದಲ್ಲಿ ಹಲವು ಬಾರಿ ಅಪಘಾತಗಳು ಸಂಭವಿಸಿವೆ. ರಸ್ತೆಗೆ ಅಂಟಿಕೊಂಡಂತೆ ಡೇರೆಗಳು ತರಕಾರಿ ಅಂಗಡಿಗಳನ್ನು ಹಾಕಿಕೊಳ್ಳುವುದರಿಂದಾಗಿ ವಾಹನಗಳ ಸಂಚಾರ ದುಸ್ಥರವಾಗಿದ್ದು, ಚಾಲಕರು ಸ್ವಲ್ಪ ಎಚ್ಚರ ತಪ್ಪಿದರೂ ಭಾರಿ ಅನಾಹುತವೇ ಸಂಭವಿಸುವ ಸಾಧ್ಯತೆಗಳಿವೆ. ಕಿಷ್ಕಿಂಧೆಯಂತಹ ಈ ಸ್ಥಳದಲ್ಲಿ  ವ್ಯಾಪಾರ ವಹಿವಾಟು ನಡೆಸುವುದು ಅಷ್ಟು ಸುಲಭದ ಮಾತಲ್ಲ. ಪಟ್ಟಣ ಪಂಚಾಯ್ತಿಯಿಂದ ಇಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಿಲ್ಲ. ದಿನವಹಿ ತರಕಾರಿ ಮಾರುಕಟ್ಟೆಗೆಂದು ಕೇವಲ ಎರಡು ಶೆಲ್ಟರ್‌ಗಳನ್ನು ನಿರ್ಮಿಸಿರುವುದನ್ನು ಬಿಟ್ಟರೆ ಇಲ್ಲಿ ಬೇರೆ ಯಾವುದೇ ಮುಲಭೂತ ಸೌಕರ್ಯ ಒದಗಿಸಲಾಗಿಲ್ಲ. ಈ ಸ್ಥಳವನ್ನು ಸಮತಟ್ಟುಗೊಳಿಸಿ ಇಕ್ಕೆಲಗಳಲ್ಲಿ ಚರಂಡಿಗಳನ್ನು  ನಿರ್ಮಿಸುವ ಕೆಲಸಕ್ಕಾಗಿ ಹಾಲಿ ಇದ್ದ ಚರಂಡಿ ಮೇಲಿನ ಚಪ್ಪಡಿಗಳನ್ನು  ತೆಗೆದು ಅಲ್ಲಿಯೇ ಬಿಟ್ಟಿರುವುದರಿಂದಾಗಿ ಸಂತೆ ನಡೆಸಲು ತುಂಬಾ ಕಷ್ಟವಾಗುತ್ತಿದೆ. ಇದೇ ಸ್ಧಳದಲ್ಲಿ ಟೆಂಪೋಗಳನ್ನು ತಂದು ನಿಲ್ಲಿಸಲಾಗುತ್ತಿದ್ದು, ಇದೂ ಸಹ ವ್ಯಾಪಾರಿಗಳಿಗೆ ಕಿರಿಕಿರಿ ಉಂಟು ಮಾಡುತ್ತಿದೆ.
ಕುಡಿಯುವ ನೀರಿನ ವ್ಯವಸ್ಥೆಯಿಲ್ಲದೆ ಜನರು ಪರದಾಡಬೇಕಾಗಿದೆ. ನಾಟಿಕೊಳಿ ವ್ಯಾಪಾರ ನಡೆಸುವ ಪಕ್ಕದಲ್ಲೇ  ಬೆಣ್ಣೆ ಮಾರಾಟ ಮಾಡಲಾಗುತ್ತಿದ್ದು, ಬೆಣ್ಣೆ ಮಾರುವವರು ಪಟ್ಟಣ ಪಂಚಾಯ್ತಿಯವರಿಗೆ ಹಿಡಿಶಾಪ ಹಾಕುತ್ತಾ  ವ್ಯಾಪಾರ ನಡೆಸುತ್ತಿದ್ದಾರೆ.
ಕೆಸರೆರಚಾಟ ಮಾಡಿಕೊಂಡೇ ವ್ಯಾಪಾರ:  ಮಳೆಗಾಲ ಬಂತೆಂದರೆ ಸಂತೆ ನಡೆಯುವ ಸ್ಥಳ ಕೆಸರುಗದ್ದೆಯಾಗಿ ಮಾರ್ಪಟ್ಟು ಈ ಕೆಸರಿನಲ್ಲಿಯೇ ಗ್ರಾಹಕರು, ವ್ಯಾಪಾರಿಗಳು ಕೆಸರೆರಚಾಟ ಮಾಡಿಕೊಂಡೇ ವಹಿವಾಟು ನಡೆಸಬೇಕಾದ ಪರಿಸ್ಥಿತಿ. ಅಲ್ಲದೇ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ನೀರು ಸಂತೆ ಮೈದಾನದಲ್ಲೇ ಹರಿಯುವಂತಾಗಿದೆ.
ಹಾಲಿ ಇರುವ ಚರಂಡಿ ಅವೈಜ್ಞಾನಿಕ ಮಾದರಿಯದ್ದಾಗಿದ್ದು, ಇದರೊಳಗೆ ತ್ಯಾಜ್ಯ ವಸ್ತುಗಳು ತುಂಬಿಕೊಂಡು ದರ್ನಾತ ಬೀರುತ್ತಿದೆ. ಸಂತೆ ನಡೆಯುವ ಪ್ರದೇಶದಲ್ಲಿ ಮೆಡಿಕಲ್ ಸ್ಟೋರ್ಸ್ ದಿನಸಿ ಸೇರಿದಂತೆ ಹಲವಾರು ವ್ಯಾಪಾರಿ ಮಳಿಗೆಗಳಿದ್ದು, ಅವುಗಳ ಮುಂಭಾಗವೇ ತರಕಾರಿ ಅಂಗಡಿಗಳನ್ನು ಹಾಕಿಕೊಳ್ಳುತ್ತಿದ್ದು, ಇದರಿಂದಾಗಿ  ವ್ಯಾಪಾರ ನಡೆಸಲು ಪರದಾಡಬೇಕಿದೆ.
ನಿಗದಿತ ದಿನದಂದು ಸಂತೆ ಮುಗಿದ ತಕ್ಷಣವೇ ಕಸ ವಿಲೇವಾರಿ ಮಾಡಬೇಕೆಂಬ ಕೂಗು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದರೂ ಪಟ್ಟಣ ಪಂಚಾಯ್ತಿಯವರು ಇತ್ತ  ಗಮನಹರಿಸಿಲ್ಲ.    ಸಂತೆ ಸ್ಥಳಾಂತರಕ್ಕೆ ಹಲವು ಬಾರಿ ಪ್ರಯತ್ನಪಟ್ಟಿದ್ದರೂ ಈವರೆಗೂ ಸ್ಥಳಾಂತರ ಸಾಧ್ಯವಾಗಿಲ್ಲ. ಸಂತೆಗೆಂದು  ನಿಗದಿಗೊಳಿಸಿರುವ ಸ್ಥಳದ ಇತ್ಯರ್ಥ ನ್ಯಾಯಾಲಯದಲ್ಲಿ ಇನ್ನು ಆಗದ ಕಾರಣ ಅನಿವಾರ್ಯತೆಯಿಂದ ಈ ಸ್ಥಳದಲ್ಲೇ ಸಂತೆ ನಡೆಸಲಾಗುತ್ತಿದೆ.
ನಾಲೆಯ ಕವರ್‌ಡಕ್ಟ್ ಮೇಲ್ಭಾಗ ಸೂಕ್ತ ಸ್ಥಳ:  ಸ್ಥಳಕ್ಕೆ ಆಕಸ್ಮಿಕವಾಗಿ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಈ ಸ್ಥಳದಲ್ಲಿ ಸಂತೆ ನಡೆಸಲು ಸಾಧ್ಯವಿಲ್ಲ ಎಂಬ ನಿರ್ಣಯಕ್ಕೆ   ಜಿಲ್ಲಾಧಿಕಾರಿ ಬಂದು ಆಶಾ ಬಡಾವಣೆ ಬಳಿ ಇರುವ ವಾಟೆಹೊಳೆ ಬಲದಂಡೆ ನಾಲೆಯ ಕವರ್‌ಡಕ್ಟ್ ಮೇಲ್ಭಾಗದಲ್ಲಿ ಸಂತೆ ನಡೆಸಲು ಸ್ಥಳ ಸೂಕ್ತವಾಗಿದ್ದು, ಈ ಸ್ಥಳದಲ್ಲಿ ಸಂತೆ ನಡೆಸುವಂತೆ ಸೂಚಿಸಿದ್ದರು.
ಆದರೆ ಕೆಲವು ತಾಂತ್ರಿಕ ತೊಂದರೆಗಳಿಂದಾಗಿ ಕವರ್‌ಡಕ್ಟ್ ಮೇಲ್ಭಾಗ ಸಂತೆ ನಡೆಸುವ ಕಾರ್ಯ ನೆನೆಗುದಿಗೆ ಬಿದ್ದಿದೆ. ಇದೇ ಸ್ಥಳದಲ್ಲಿ ಸಂತೆ ಸ್ಥಳಾಂತರ ಮಾಡುವ ದೃಷ್ಟಿಯಿಂದ ಶಾಸಕ ಎಚ್.ಕೆ.ಕುಮಾರಸ್ವಾಮಿ ಸಹ ಸ್ಥಳ ಪರಿಶೀಲನೆ ನಡೆಸಿದ್ದು, ಯಾವ ಕಾರಣಕ್ಕೆ ಸ್ಥಳಾಂತರಿಸಲಿಲ್ಲ ಎಂಬುದನ್ನು ಅವರೇ  ತಿಳಿಸಬೇಕಾಗಿದೆ.
ಈ ಸ್ಥಳ ವಾಟೆಹೊಳೆ ಇಲಾಖೆಗೆ ಸೇರಿದ್ದಾಗಿದ್ದು, ಇಲಾಖೆಯ ಅನುಮತಿ ಪಡೆದರೆ ಸಂತೆಗೆ ಸೂಕ್ತ ಭೂಮಿ ಖರ್ಚಿಲ್ಲದೆ ದೊರೆಯುತ್ತದೆ.
 ಭೂಮಿ ಖರೀದಿಗೆ ನೀಡುವ ಹಣದಲ್ಲಿ ಸಂತೆ ಸ್ಥಳದಲ್ಲಿ ತರಕಾರಿ ಮಾರುಕಟ್ಟೆ,  ಚರಂಡಿ, ಕುಡಿಯುವ ನೀರಿನ  ವ್ಯವಸ್ಥೆ, ಶೌಚಾಲಯ ಮುಂತಾದವುಗಳ ವ್ಯವಸ್ಥೆ ಮಾಡಬಹುದಾಗಿದ್ದರೂ ಯಾರೊಬ್ಬರೂ ಏಕೆ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂಬುದು ತಿಳಿಯದು.
  ಈ ಮೊದಲು 9ನೇ ವಾರ್ಡಿನಲ್ಲಿ ಸಂತೆ ನಡೆಸಲಾಗುತ್ತಿದ್ದು, ಈ ಪ್ರದೇಶಕ್ಕೆ ಈಗಲೂ ಹಳೆ ಸಂತೆ ಬೀದಿಯೆಂಬ ಹೆಸರಿದೆ. ಸಂತೆ ಬಸ್‌ನಿಲ್ದಾಣ ಬಳಿ ನಡೆಸಲು ಪ್ರಾರಂಭಿಸಿದಾಗಿನಿಂದಲೂ ಜನದಟ್ಟಣೆ ಬಸ್ ನಿಲ್ದಾಣದ ಆಸುಪಾಸಿನಲ್ಲಿ  ಮಾತ್ರವಿದ್ದು, ವ್ಯಾಪಾರ ವಹಿವಾಟು ಅಲ್ಲಿಗೆ ಮಾತ್ರ ಸೀಮಿತವಾಗಿದೆ. ಇದರಿಂದಾಗಿ ಕೋರ್ಟ್ ಸರ್ಕಲ್,  ಕೆಇಬಿ ಸರ್ಕಲ್ ಭಾಗದಲ್ಲಿ ವ್ಯಾಪಾರ ವಹಿವಾಟು ಇಲ್ಲದೆ ಬಿಕೋ ಎನ್ನುವಂತಾಗಿದೆ.
ಕವರ್ ಡೆಕ್ಟ್‌ನ ಮೇಲ್ಭಾಗ ಸಂತೆ ಸ್ಥಳಾಂತರವಾದರೆ ಈ ಭಾಗಗಳಲ್ಲೂ ಜನದಟ್ಟಣೆ ಹೆಚ್ಚಿ ವ್ಯಾಪಾರ  ವಹಿವಾಟು ಹೆಚ್ಚಿ ಪಟ್ಟಣ ಅಭಿವೃದ್ಧಿಗೆ ಸಹಕಾರಿ ಆಗುತ್ತದೆ. ಸಂಬಂಧಪಟ್ಟವರು ಸಂತೆ ಸ್ಥಳಾಂತರಕ್ಕೆ ಶೀಘ್ರ ಕ್ರಮ ಕೈಗೊಳ್ಳುವರೇ ಕಾದು ನೋಡಬೇಕಿದೆ.   

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.