ಪೂಚಂತೇಯವರ ಕರ್ವಾಲೋ ನಾಟಕ ಪ್ರದರ್ಶನ
ಕನ್ನಡಪ್ರಭ ವಾರ್ತೆ ಹಾಸನ ಏ.14
ರಂಗಪ್ರಯೋಗದ ಹೊಸ ಸಾಧ್ಯತೆಯ ಅನ್ವೇಷಣೆಯಲ್ಲಿ ಚಿಂತನಶೀಲರಾಗಿ, ಇತ್ತೀಚಿನ ದಿನಗಳಲ್ಲಿ ಪ್ರಸಿದ್ಧ ಬರಹಗಾರರ ಕಥೆ, ಕಾದಂಬರಿಗಳನ್ನು ರಂಗ ರೂಪಾಂತರಗೊಳಿಸಿ ಯಶಸ್ವಿ ಪ್ರದರ್ಶನದಿಂದ ಗಮನ ಸೆಳೆದಿರುವ ನಿರ್ದೇಶಕ ಕೆ.ಸಣ್ಣೇಗೌಡ ಅನಿಕೇತನ ತಂಡದಿಂದ ನಗರದಲ್ಲಿ ತೇಜಸ್ವಿ ಅವರ ಕರ್ವಾಲೋ ನಾಟಕ ಪ್ರದರ್ಶಿಸಲಾಯಿತು.
1972 ರಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಹೊರಾಂಗಣವನ್ನು ಬಳಸಿಕೊಂಡು ಜೋಕುಮಾರಸ್ವಾಮಿ, ಸಂಕ್ರಾಂತಿ, ಈಡಿಪಸ್ ನಾಟಕಗಳನ್ನು ಪ್ರದರ್ಶಿಸಿ ಹೊಸ ರಂಗ ಸಾಧ್ಯತೆಗಳನ್ನು ತೆರೆದಿಟ್ಟವರು ಕಾರಂತರು.
ಇದೇ ಹಾದಿಯಲ್ಲಿ ಯೋಚಿಸಿ ತಮ್ಮ ಹೊಸ ಪ್ರಯೋಗಗಳಿಗೆ ನಗರದ ವಿವಿಧ ಸ್ಥಳಗಳನ್ನೆ ರಂಗಸ್ಥಳವಾಗಿ ರೂಪಿಸಿಕೊಂಡು ವಿಭಿನ್ನವಾಗಿ ಪ್ರದರ್ಶಿಸುವ ಪ್ರಯತ್ನ ನಡೆಸಿರುವ ನಿರ್ದೇಶಕರು ಕರ್ವಾಲೋ ನಾಟಕಕ್ಕೆ ಸಾಹಿತ್ಯ ಪರಿಷತ್ತಿನ ಒಂದು ಬದಿಯ ಸಣ್ಣ ಉದ್ಯಾನವನವನ್ನು ಕಾಡಿನ ದೃಶ್ಯಕ್ಕೆ ಬಳಸಿಕೊಂಡು, ಇದರ ಮುಂಭಾಗವನ್ನು ರಂಗಸ್ಥಳವಾಗಿ ರೂಪಿಸಿಕೊಂಡು ಯಶಸ್ವಿ ಪ್ರದರ್ಶನ ನೀಡುವಲ್ಲಿ ಸಫಲರಾದರು ಎಂದು ಸಾಹಿತಿ ಗೊರೂರು ಅನಂತರಾಜು ಹೇಳಿದರು.
ಕರ್ವಾಲೋ ಕಥೆ ಕಗ್ಗಾಡಿನ ಹಳ್ಳಿಯೊಂದರಲ್ಲಿ ನಡೆಯುವ ಘಟನೆ. ತಂದೆಗೆ ಜೇನುತುಪ್ಪ ತರಲೆಂದು ಮೂಡಿಗೆರೆ ಜೇನು ಸೊಸೈಟಿಗೆ ಲೇಖಕರು ಭೇಟಿ ಕೊಡುವಲ್ಲಿಂದ ಕಥೆ ಆರಂಭವಾಗುತ್ತದೆ.
ಇಲ್ಲಿ ಭೇಟಿಯಾಗುವ ಮಂದಣ್ಣ ಎಂಬ ಜೇನು ಕ್ರಿಮಿಕೀಟಗಳ ಮನುಷ್ಯ ತನ್ನ ಮಾತು, ನಡೆಯಿಂದ ಲೇಖಕರನ್ನು ಆಕರ್ಷಿಸುತ್ತಾನೆ. ಜೇನು ಸೊಸೈಟಿಯ ಬೀಮ್ಯಾನ್ ಕೆಲಸಕ್ಕೆ ಅರ್ಜಿ ಬರೆಯಿಸಿಕೊಳ್ಳಲು ಲೇಖಕರ ಬಳಿ ಬರುವ ಮಂದಣ್ಣ ಕರ್ವಾಲೋ ಎಂಬ ದೊಡ್ಡ ಸಸ್ಯ ವಿಜ್ಞಾನಿ ಮತ್ತು ಕೀಟಶಾಸ್ತ್ರಜ್ಞ ನನ್ನ ಗುರುಗಳು ಎಂದು ಹೇಳಿ ಕೊಳ್ಳುತ್ತಾನೆ.
ಇದನ್ನು ಅನುಮಾನಿಸಿ ನೋಡುವ ಲೇಖಕರು ಮಂದಣ್ಣನ ಜೊತೆ ಕರ್ವಾಲೋ ಗೆಳೆತನಕ್ಕೆ ಎಂತೆಂಥೆದೋ ವಿಚಿತ್ರ ಮಾಧ್ಯಮಗಳಿರಬಹುದೆಂಬ ಗ್ರಹಿಕೆ ಸುಳ್ಳಾಗಿ ಮಂದಣ್ಣನಲ್ಲಿ ಸಹಜವಾಗಿ ಅಡಗಿರುವ ಪ್ರಾಕೃತಿಕ ಜ್ಞಾನದ ಬಗ್ಗೆ ಕರ್ವಾಲೋ ವಿವರಿಸಿದಾಗ ಮಂದಣ್ಣ ಲೇಖಕರಿಗೆ ಆಪ್ತನಾಗುತ್ತಾ ಹೋಗುತ್ತಾನೆ. ಡಾ. ಎಚ್.ಎಲ್.ಮಲ್ಲೇಶಗೌಡರು ಲೇಖಕರ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದರು. ಡಾ. ಕರ್ವಾಲೋ ಪಾತ್ರಕ್ಕೆ ಎಚ್.ಎಸ್.ಪ್ರಭಾಕರ್ ನ್ಯಾಯ ಒದಗಿಸಿದರು. ಪ್ಯಾರ ಮತ್ತು ಲಕ್ಷ್ಮಣ ಪಾತ್ರ ಬಿ.ಎಸ್.ವೇದಮೂರ್ತಿ, ರಾಮಯ್ಯ ಹಾಗೂ ಪುಂಗಿ ವೆಂಕ್ಟನ ಪಾತ್ರಗಳನ್ನು ಎಂ.ಚಂದ್ರೇಗೌಡರು ಚೆನ್ನಾಗಿಯೇ ನಿಭಾಯಿಸಿದರು. ಗೋವಿಂದಸ್ವಾಮಿ ಮತ್ತು ಪಿ.ಎಸ್.ಐ ಪಾತ್ರಗಳಲ್ಲಿ ಎನ್.ವಿ.ನಟೇಶ್ ನಟಿಸಿದರು.
ಕೆ.ಸಿ.ಹೇಮಚಂದ್ರ ಅವರು ಪ್ರಭಾಕರನ ಪಾತ್ರವನ್ನು, ಸುಬ್ರಹ್ಮಣ್ಯ ರೈಟರ್ ರಾಜಪ್ಪ ಪಾತ್ರ ನಿರ್ವಹಿಸಿದರು. ರಾಜೇಶ್ವರಿ (ಜಯಂತಿ) ಪಾತ್ರಕ್ಕೆ ಹೆಚ್ಚಿನ ಅವಕಾಶವಿಲ್ಲ. ಪ್ರಭಾಕರ ಬಾಬು ಬೆಳಕಿನ ವ್ಯವಸ್ಥೆ ರಾತ್ರಿಯ ಕಾಡಿನ ದೃಶ್ಯಕ್ಕೆ ಆಕರ್ಷಕವಾಗಿತ್ತು. ಎಚ್.ಪಿ.ವೆಂಕಟೇಶರ ಸಂಗೀತಕ್ಕೆ ಅವಕಾಶವೇ ಸಿಗಲಿಲ್ಲ ಎಂದು ಗೊರೂರು ಅನಂತರಾಜು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

