ಶಿವಲಿಂಗೇಗೌಡ, ಶಿವರಾಂ ಸೇರಿ ನಾಲ್ವರಿಂದ ನಾಮಪತ್ರ ಸಲ್ಲಿಕೆ
ಅರಸೀಕೆರೆ: ಈ ಕ್ಷೇತ್ರದಿಂದ ಸ್ಪರ್ಧಿಸಲು ಸೋಮವಾರ ಜೆಡಿಎಸ್, ಕಾಂಗ್ರೆಸ್, ಬಿಜೆಪಿ, ಸೇರಿದಂತೆ ನಾಲ್ವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಮಾಜಿ ಸಚಿವ ಬಿ ಶಿವರಾಂ ತಮ್ಮ ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಬಂದು ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಜೀಗೆರೆ ಚಂದ್ರಶೇಖರ್, ಶಫಿ ಅಹಮದ್, ರಂಗನಾಥ್, ಪುರಸಭಾ ಸದಸ್ಯ ಶ್ರೀನಿವಾಸಗೌಡ ಇತರರು ಇದ್ದರು.
ಪಕ್ಷೇತರ ಅಭ್ಯರ್ಥಿಯಾಗಿ ವಕೀಲ ಗಂಡಸಿ ದೇವರಾಜೇಗೌಡ ಉಮೇದುವಾರಿಕೆ ಸಲ್ಲಿಸಿದರೆ, ಬಿಜೆಪಿಯಿಂದ ದುಮ್ಮೇನಹಳ್ಳಿ ಗಂಗಾಧರ್ 12.45ಕ್ಕೆ ನಾಮಪತ್ರ ಸಲ್ಲಿಸಿದರು.
ಶಾಸಕ ಕೆ.ಎಂ.ಶಿವಲಿಂಗೇಗೌಡ ಕುಟುಂಬ ಸಮೇತರಾಗಿ ತಮ್ಮ ಅಪಾರ ಬೆಂಬಲಿಗರೊಂದಿಗೆ ಉಮೇದುವಾರಿಕೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಬೆಂಬಲಿಗರ ಹರ್ಷೋದ್ಘಾರ ಮುಗಿಲು ಮುಟ್ಟಿತು. ಕಾರ್ಯಕರ್ತರು ಚುನಾವಣಾ ಕಚೇರಿಯತ್ತ ತೆರಳದಂತೆ ತಡೆಹಿಡಿಯಲು ಸಿಬ್ಬಂದಿ ಹರಸಾಹಸ ಪಡಬೇಕಾಯಿತು.
ನಾಮಪತ್ರ ಸಲ್ಲಿಕೆ ನಂತರ ಶಾಸಕ ಕೆ.ಎಂ.ಶಿವಲಿಂಗೇಗೌಡ ಸುದ್ದಿಗಾರರೊಂದಿಗೆ ಮಾತನಾಡಿ, ತಮ್ಮ ಅಧಿಕಾರಾವಧಿಯಲ್ಲಿ ಕ್ಷೇತ್ರದಲ್ಲಾಗಿರುವ ಅಭಿವೃದ್ಧಿ ಹಾಗೂ ಸಾಧನೆ ಮುಂದಿಟ್ಟುಕೊಂಡು ಈ ಬಾರಿ ಚುನಾವಣೆ ಎದುರಿಸಲಾಗುವುದು. ಮತದಾರರು ತಾವು ಮಾಡಿರುವ ಕೆಲಸ ಕಾರ್ಯಗಳು ಹಾಗೂ ಅವರ ಕಷ್ಟಸುಖಗಳಲ್ಲಿ ಭಾಗಿಯಾಗಿರುವ ತಮ್ಮನ್ನು ಅತಿ ಅಧಿಕ ಮತಗಳಿಂದ ಗೆಲ್ಲಿಸುವ ವಿಶ್ವಾಸ ವ್ಯಕ್ತಪಡಿಸಿದರು.
ವೀರಶೈವರಿಗೆ, ಹಿಂದುಳಿದವರಿಗೆ ಅನ್ಯಾಯವಾಗಿದೆ. ಅವರಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡುವುದಾಗಿ ಕ್ಷೇತ್ರದ ಮಠಮಾನ್ಯಗಳಿಗೆ ಭೇಟಿ ನೀಡಿ ನಿಮ್ಮಲ್ಲಿ ಒಬ್ಬ ನಾಯಕನನ್ನು ನೀಡಿ ನಾನು ನಿಮಗೆ ನ್ಯಾಯ ದೊರಕಿಸುವುದಾಗಿ ಭರವಸೆ ನೀಡಿ ಮಾಜಿ ಶಾಸಕ ಜಿ.ಎಸ್.ಬಸವರಾಜು ಅವರ ಪುತ್ರ ಶಶಿಧರ್ ಅವರಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸುವುದಾಗಿ ಹೇಳಿದ್ದವರೇ ಇಂದು ಮಗನಿಗೆ ಹೆಣ್ಣು ನೋಡಲು ಹೋಗಿ ತಾನೇ ಮದುವೆಯಾದಂತೆ ಅವರೇ ಟಿಕೆಟ್ ಪಡೆದು ಬಂದಿದ್ದಾರೆ ಎಂದು ಮಾಜಿ ಸಚಿವ ಬಿ ಶಿವರಾಂ ಹೆಸರು ಪ್ರಸ್ತಾಪಿಸದೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ತಮ್ಮ ಎದುರಾಳಿ ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಸ್ಪರ್ಧೆ ಯಾರ ನಡುವೆ ಎಂಬುದು ಇನ್ನು ಒಂದೆರಡು ದಿನಗಳ ನಂತರವಷ್ಟೇ ಗೊತ್ತಾಗಲಿದೆ ಎಂದ ಅವರು ಜೆ.ಪಿ.ಜಯಣ್ಣ ಸಂಘಟನಾ ಚತುರ ಅಂತವರಿಗೆ ಅನ್ಯಾಯವಾಗಿದೆ ಎಂದರು. ಉದ್ಯಮಿ ಅರುಣಕುಮಾರ್, ಜಿಪಂ ಉಪಾಧ್ಯಕ್ಷ ಬಿಳಿಚೌಡಯ್ಯ, ಎನ್. ಎಸ್.ಸಿದ್ದರಾಮಶೆಟ್ಟಿ, ವಕೀಲ ಲೋಕೇಶ್ ಇನ್ನಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

