ಹಾಸನ

ಜಿಲ್ಲೆಯಲ್ಲಿ ಬಿಜೆಪಿ ಗೆದ್ದಿರೋದು ಕೇವಲ ಆರೇ ಸ್ಥಾನ

Published On :

 ದಯಾಶಂಕರ ಮೈಲಿ
ಹಾಸನ: ರಾಜ್ಯದಲ್ಲೇ ಏಕೆ.. ರಾಷ್ಟ್ರ ಮಟ್ಟದಲ್ಲೂ ಅಧಿಕಾರದ ಚುಕ್ಕಾಣಿ ಹಿಡಿದು ಆಡಳಿತ ನಡೆಸಿರುವ ಬಿಜೆಪಿ  3 ದಶಕಗಳಲ್ಲಿ ಹಾಸನದಲ್ಲಿ ಗೆದ್ದಿರೋದು ಕೇವಲ ಆರೇ ಆರು ಸೀಟು.
1983 ರಿಂದ 2013 ರವರೆಗೆ ಜಿಲ್ಲೆಯ ರಾಜಕೀಯ ಇತಿಹಾಸ ಕೆದಕಿ ನೋಡಿದರೆ 1983 ರಿಂದ ಈವರೆಗೆ ನಡೆದಿರುವ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಗೆದ್ದಿರೋದು ಕೇವಲ 6 ಸ್ಥಾನ ಮಾತ್ರ.
1999 ರಲ್ಲಿ 8 ಕ್ಷೇತ್ರಗಳ ಪೈಕಿ 4 ರಲ್ಲಿ ಗೆದ್ದಿದ್ದು ಅತ್ತುತ್ತಮ ಸಾಧನೆ. ಅದು ಬಿಟ್ಟರೆ 1994 ರಲ್ಲಿ ಸಕಲೇಶಪುರದಿಂದ ಬಿ.ಬಿ.ಶಿವಪ್ಪ, 2004 ರಲ್ಲಿ ಅರಸೀಕೆರೆಯಿಂದ ಎ.ಎಸ್. ಬಸವರಾಜು ಬಿಜೆಪಿಯಿಂದ ಗೆದ್ದಿದ್ದರು.
ಹೊಳೆನರಸೀಪುರ, ಶ್ರವಣಬೆಳಗೊಳ ಕ್ಷೇತ್ರದಲ್ಲಿ ಈವರೆಗೂ ಒಂದು ಬಾರಿಯೂ ಬಿಜೆಪಿ ಗೆದ್ದಿಲ್ಲ. 30 ವರ್ಷಗಳಲ್ಲಿ ರಾಷ್ಟ್ರೀಯ ಪಕ್ಷವೊಂದು ಕೇವಲ 6 ಸ್ಥಾನ ಮಾತ್ರ ಗೆಲ್ಲಲು ಸಾಧ್ಯವಾಗಿದ್ದಕ್ಕೆ ಹಲವು ಕಾರಣಗಳು ಇವೆ.
ಹೀಗೇಕೆ ... ಗೆದ್ದೋರೆಲ್ಲಾ ಪಕ್ಷ ಬಿಟ್ರು:  1999 ರ ವಿಧಾನಸಭೆ ಚುನಾವಣೆಯಲ್ಲಿ ಅರಕಲಗೂಡು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ಎ. ಮಂಜು, ಬೇಲೂರು ಕ್ಷೇತ್ರದಿಂದ ಗೆದ್ದ ಎಸ್.ಎಚ್. ಪುಟ್ಟರಂಗನಾಥ್,  ಹಾಸನ ವಿಧಾನಸಭಾ ಕ್ಷೇತ್ರದಿಂದ ಗೆದ್ದ ಕೆ.ಎಚ್. ಹನುಮೇಗೌಡ ಮತ್ತು ಸಕಲೇಶಪುರದಿಂದ ಗೆದ್ದ ಬಿ.ಬಿ. ಶಿವಪ್ಪ ನಾನಾ ಕಾರಣಗಳನ್ನೊಡ್ಡಿ ಕಾಂಗ್ರೆಸ್‌ಗೆ ಹಾರಿದರು. ಉದ್ಯಮಿ ಮಲ್ಯ ರಾಜ್ಯಸಭೆಗೆ ಆಯ್ಕೆ ಆದ ಸಂದರ್ಭದಲ್ಲಿ ನಾಲ್ವರು ಪಕ್ಷಾಂತರ ಮಾಡಿದರು. ಆಗ ಎಸ್.ಎಂ. ಕೃಷ್ಣ ಮುಖ್ಯಮಂತ್ರಿ ಆಗಿದ್ದರು. ಹೀಗೆ ಒಂದೇ ಸಲ ನಾಲ್ವರು ಶಾಸಕರು  ಪಕ್ಷಾಂತರ ಮಾಡಿದ್ದ ಪರಿಣಾಮ ಹಾಸನ ಜಿಲ್ಲೆಯಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಲು ಸಾಧ್ಯವಾಗಲಿಲ್ಲ.
1983, 1985 ಮತ್ತು 1989 ರಲ್ಲಿ ನಡೆದ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಹಾಗೂ ಜನತಾದಳ ನಡುವೆ ತೀವ್ರ ತಿಕ್ಕಾಟ. ಎಷ್ಟರ ಮಟ್ಟಿಗೆ ಇತ್ತೆಂದರೆ, ಕಾಂಗ್ರೆಸ್‌ಗೆ ಸೇರಿದ ಮನೆಯಿಂದ ದಳದವರು ಹೆಣ್ಣು ತರುತ್ತಿರಲಿಲ್ಲ. ದಳಕ್ಕೆ ಸೇರಿದ ಮನೆಯವರಿಂದ ಕಾಂಗ್ರೆಸ್‌ನವರು ಹೆಣ್ಣು ತರಲಿಲ್ಲ. ಅಷ್ಟರ ಮಟ್ಟಿಗೆ ಎರಡೂ ಪಕ್ಷಗಳ ನಡುವೆ ಜಿದ್ದಾ ಜಿದ್ದಿ ಇತ್ತು. ಈ ನಡುವೆಯೂ 1999 ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ನಾಲ್ಕು ಸ್ಥಾನಗಳಲ್ಲಿ ಗೆಲ್ಲುವ ಮೂಲಕ, ಪ್ರಬಲ ಕಾಂಗ್ರೆಸ್, ದಳಕ್ಕೆ ತೀವ್ರ ಪೆಟ್ಟು ನೀಡಿತ್ತು. ಪಕ್ಷವನ್ನು ಕಟ್ಟಿ ಬೆಳೆಸಬೇಕಾದ ಗೆದ್ದ ಎಲ್ಲಾ ನಾಲ್ಕು ಶಾಸಕರು ಬಿಜೆಪಿಗೆ ಗುಡ್ ಬೈ ಹೇಳಿ, ಯಾರನ್ನು ಟೀಕಿಸಿ, ಖಂಡಿಸಿ ಗೆದ್ದಿದ್ದರೋ ಆ ಪಕ್ಷಕ್ಕೆ ಸೇರ್ಪಡೆಯಾದರು.
2004 ರಲ್ಲಿ ಅರಸೀಕೆರೆ ಕ್ಷೇತ್ರದಿಂದ ಬಿಜೆಪಿಯ ಏಕಮಾತ್ರ ಶಾಸಕರಾಗಿ ಗೆದ್ದ ಬಸವರಾಜು ಅವರು ಪಕ್ಷ ಸಂಘಟನೆಗೆ ಒತ್ತು ನೀಡಲಿಲ್ಲ. ಇದು ಕೂಡ ಬಿಜೆಪಿ ಚಿಗುರಿ ಬೆಳೆಯಲು ಸಾಧ್ಯವಾಗದಿರಲು ಕಾರಣ ಎಂದು ಹೇಳಲಾಗುತ್ತಿದೆ.
1983 ರಲ್ಲಿ ಸಕಲೇಶಪುರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮರುಸು ಮಂಜುನಾಥ್, 1985 ಮತ್ತು 1989 ರಲ್ಲಿ ಸ್ಪರ್ಧಿಸಿದ್ದ ಬಿ.ಬಿ. ಶಿವಪ್ಪ ಮೂರನೇ ಸ್ಥಾನ ಪಡೆದಿದ್ದರೆ, 1994 ರಲ್ಲಿ
ಬಿ.ಬಿ.ಶಿವಪ್ಪ  40,761 ಮತ ಪಡೆದು 15 ಸಾವಿರ ಮತಗಳ ಅಂತರದಿಂದ ಗೆದ್ದರೇ, ಅವರ ಸಮೀಪ ಸ್ಪರ್ಧಿ ಕಾಂಗ್ರೆಸ್‌ನ ಜೆ.ಡಿ. ಸೋಮಪ್ಪ 29,852 ಮತಗಳನ್ನು ಪಡೆದಿದ್ದರು. 1999 ರಲ್ಲಿ ಶಿವಪ್ಪ ಬಿಜೆಪಿಯಿಂದಲೇ ಸ್ಪರ್ಧಿಸಿ 31,702 ಮತಗಳಿಂದ ಗೆದ್ದರೇ, ಕಾಂಗ್ರೆಸ್‌ನ ಬಿ.ಆರ್. ಗುರುದೇವ್ 30,358 ಮತ ಪಡೆದು ಸೋತರು. ಬಿ.ಬಿ. ಶಿವಪ್ಪ 2004 ರಲ್ಲಿ ಕಾಂಗ್ರೆಸ್‌ನಿಂದ ನಿಂತು ಸೋತರು. ಆಗ ಬಿಜೆಪಿಯಿಂದ ಇಬ್ಬಡಿ ಚಂದ್ರಶೇಖರ್ ನಾಲ್ಕನೇ ಸ್ಥಾನ ಪಡೆದರು. 2008 ರಲ್ಲಿ ಬಿಜೆಪಿ ನಿರ್ವಾಣಯ್ಯ ಸ್ಪರ್ಧಿಸಿ, 2 ನೇ ಸ್ಥಾನ ಪಡೆದರು
1999 ರಲ್ಲಿ ಬಿಜೆಪಿಯಿಂದ ಗೆದ್ದವರು: 1999 ರಲ್ಲಿ ಬೇಲೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದ ಎಸ್.ಎಚ್. ಪುಟ್ಟರಂಗನಾಥ್ 32,770 ಮತಗಳನ್ನು ಪಡೆದು ಗೆದ್ದರು. ಅವರ ಸಮೀಪ ಸ್ಪರ್ಧಿ ಕಾಂಗ್ರೆಸ್‌ನ ಡಿ. ಮಲ್ಲೇಶ್ 31,724 ಮತ ಪಡೆದು ಸೋತಿದ್ದರು. ಅರಕಲಗೂಡು ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿದ್ದ ಎ. ಮಂಜು 53,732 ಮತ ಗಳಿಸಿ ಗೆದ್ದರೆ, ಕಾಂಗ್ರೆಸ್‌ನ ಎ.ಟಿ.ರಾಮಸ್ವಾಮಿ 38,187 ಮತ ಪಡೆದು ಸೋತರು.
ಹಾಸನ ಕ್ಷೇತ್ರ ಬಿಜೆಪಿಯಿಂದ ಸ್ಪರ್ಧಿಸಿದ್ದ ಕೆ.ಎಚ್. ಹನುಮೇಗೌಡರು 40,378 ಮತ ಪಡೆದು ಗೆದ್ದಿದ್ದರೆ, ಕಾಂಗ್ರೆಸ್‌ನ ಕೆ.ಎಂ. ರಾಜೇಗೌಡರು 34, 774 ಮತ ಪಡೆದು ಸೋಲನ್ನಪ್ಪಿದ್ದರು. ಸಕಲೇಶಪುರದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದ ಬಿ.ಬಿ. ಶಿವಪ್ಪ 31,702 ಮತ ಪಡೆದು ಗೆದ್ದರೆ, ಕಾಂಗ್ರೆಸ್‌ನ ಬಿ.ಆರ್. ಗುರುದೇವ್ 30,358 ಮತಗಳನ್ನು ಪಡೆದು ಸೋತರು.
ಅರಸೀಕೆರೆ ಕ್ಷೇತ್ರ-  1985, 1994, 1999 ರಲ್ಲಿ ಎ.ಎಸ್. ಬಸವರಾಜು ಬಿಜೆಪಿಯಿಂದ ಸ್ಪರ್ಧಿಸಿ ಸೋತರೇ 2004 ರಲ್ಲಿ 36,867 ಮತ ಪಡೆದು ಗೆದ್ದರು. ಕಾಂಗ್ರೆಸ್‌ನ ಜಿ.ವಿ. ಸಿದ್ದಪ್ಪ 30,418 ಮತ ಪಡೆದು ಸೋತರು. 2008 ರಲ್ಲಿ ವಕೀಲ ರವಿ ಬಿಜೆಪಿಯಿಂದ ಸೋತವರು. ಹೊಳೆನರಸೀಪುರ ಮತ್ತು ಶ್ರವಣಬೆಳಗೊಳ ಕ್ಷೇತ್ರದಿಂದ 183 ರಿಂದ ಇಲ್ಲಿಯವರೆಗೆ ಬಿಜೆಪಿಯಿಂದ ಯಾರು ಗೆದ್ದಿಲ್ಲ.
ದೇವೇಗೌಡರಗಿಂತ ಹೆಚ್ಚಾಗಿ ರೇವಣ್ಣ ಹಿಡಿತ:  ಎಚ್.ಡಿ.ದೇವೇಗೌಡರು ಪ್ರಧಾನಿ ಹುದ್ದೆ ಅಲಂಕರಿಸಿದ ನಂತರ ಹಾಸನ ಜಿಲ್ಲೆಯ ಮೇಲೆ ರಾಜಕೀಯವಾಗಿ ಹಿಡಿತ ಸಾಧಿಸಿದ ಜೆಡಿಎಲ್ಪಿ ನಾಯಕ ಎಚ್.ಡಿ.ರೇವಣ್ಣ, ಪಕ್ಷವನ್ನು ಬಲಪಡಿಸುವ ಮೂಲಕ ಕಾಂಗ್ರೆಸ್ ಹಾಗೂ ಬಿಜೆಪಿ ಎರಡನ್ನೂ ಹಿಂದಕ್ಕೆ ಸರಿಸಿದರು. ಈಗಲೂ ಕಾಂಗ್ರೆಸ್ ನಿರೀಕ್ಷಿತ ಮಟ್ಟದಲ್ಲಿ ಅಲ್ಲದಿದ್ದರೂ ಕೊಂಚ ಮಟ್ಟಿಗಾದರೂ ಹೋರಾಟ ನೀಡುತ್ತಿದೆ. ಬಿಜೆಪಿಯಂತೂ ಹೇಳ ಹೆಸರಿಲ್ಲದ ಮಟ್ಟಿಗೆ ಕುಸಿದು ಹೋಗಿದೆ.
ಹೀಗೇನು:   ಈಗ ಹಾಸನ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಬಿಜೆಪಿ ಒಂದರಲ್ಲೂ ಗೆಲ್ಲುವ ಲಕ್ಷಣ ಕಾಣುತ್ತಿಲ್ಲ. ಬಿಜೆಪಿ ಸರ್ಕಾರ ಕಳೆದ 5 ವರ್ಷದ ಅವಧಿಯಲ್ಲಿ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದೆ. ಆದ್ದರಿಂದ ಈ ಚುನಾವಣೆಯಲ್ಲಿ 7 ರಲ್ಲಿ 4 ರಿಂದ 5 ಸ್ಥಾನಗಳಲ್ಲಿ ಗೆಲ್ಲುತ್ತೇವೆ ಎನ್ನುತ್ತಿದ್ದಾರೆ ಬಿಜೆಪಿ ಕಾರ್ಯಕರ್ತರು - ಮುಖಂಡರು.
ಕಮಲ ಪಾಳೆಯದ ಆಶಾ ಭಾವಕ್ಕೆ, ಮತದಾರ ಪ್ರಭು ಹೇಳೋದೇ ಬೇರೆ..ಕಳೆದ ವರ್ಷಗಳ ಅವಧಿಯಲ್ಲಿ ಮೂರು ಮಂದಿ ಸಿಎಂ ಆದರೂ ಜಿಲ್ಲೆಗೆ ಪೂರಕ ಎನ್ನುವ ಯಾವುದೇ ಯೋಜನೆ ಜಾರಿ ಗೊಳಿಸಿಲ್ಲ. ವಿಪರ್ಯಾಸ ಎಂದರೆ  ಹಿಂದಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಅನುಷ್ಠಾನಗೊಳಿಸಿದ್ದ ಏರ್‌ಪೋರ್ಟ್‌ನಂತಹ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ರಾಜಕೀಯ ಹಗೆತನದಿಂದಾಗಿ ನಿರ್ಲಕ್ಷಿಸಲಾಗಿದೆ. ಕೈಸುಟ್ಟು ಕೊಂಡಿರುವ ಆಲೂಗೆಡ್ಡೆ ಬೆಳೆಗಾರರಿಗೆ ಯಾವುದೇ ಪರಿಹಾರ ನೀಡಿಲ್ಲ. ಇದೇ ಬಿಜೆಪಿಗೆ ತಿರುಮಂತ್ರವಾಗಲಿದ್ದು, ಗೆಲುವಿನ ಕನಸು ನನಸಾಗದು ಅನ್ನೋದು ಸಾರ್ವಜನಿಕರ ಅಭಿಪ್ರಾಯ.
ಬಿಜೆಪಿ ಹಿನ್ನಡೆಗೆ ಮತ್ತೊಂದು ನಿದರ್ಶನ ಎಂದರೆ, ಹಾಲಿ ಇರುವ 7 ಕ್ಷೇತ್ರಗಳ ಪೈಕಿ ಅಭ್ಯರ್ಥಿ ಘೋಷಣೆ ಮಾಡಿರುವುದು 2 ಕ್ಷೇತ್ರಗಳಲ್ಲಿ ಮಾತ್ರ. ಬಿಜೆಪಿಯಲ್ಲಿದ್ದ ಕೆಲವರು ಕೆಜೆಪಿಗೆ ಜಾರಿರುವುದರಿಂದ ಉಳಿದ ಕ್ಷೇತ್ರಗಳಲ್ಲಿ ಹುರಿಯಾಳುಗಳ ಹುಡುಕಾಟ ನಡೆದಿದೆ. ಈ ಎಲ್ಲವನ್ನೂ ಗಮನಿಸಿದರೆ ಬೇರೆಡೆ ಹೇಗೋ ಏನೋ ಆದರೆ ಹಾಸನದಲ್ಲಿ ಕಮಲ ಅರಳೋದು ಅಷ್ಟು ಸುಲಭದ ಮಾತಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.