ಈವರೆಗೂ ಒಂದೇ ಒಂದು ಆಶ್ರಯ ನಿವೇಶನ ನೀಡಿಲ್ಲ!
ಕನ್ನಡಪ್ರಭ ವಾರ್ತೆ, ಆಲೂರು, ಏ.16
ಪಟ್ಟಣದಲ್ಲಿ ಕಳೆದ ಹತ್ತು ವರ್ಷಗಳಿಂದ ಒಂದೇ ಒಂದು ಆಶ್ರಯ ಯೋಜನೆಯಡಿ ನಿವೇಶನ ಈವರೆಗೂ ಹಂಚಲಾಗಿಲ್ಲ. ಆಶ್ರಯ ಯೋಜನೆಯ ನಿವೇಶನ ನೀಡಲು ಹಳೆ ಸಂತೇಬೀದಿಯಲ್ಲಿರುವ ಜಾಫರ್ ಸಾಮಿಲ್ ಹಿಂಭಾಗದ ಜಾಗವನ್ನು ಪಟ್ಟಣ ಪಂಚಾಯ್ತಿಯವರು ನಿಗದಿಗೊಳಿಸಿದ್ದಾರೆ. ಇವುಗಳ ಹಂಚಿಕೆಗಾಗಿ ಹಲವು ಬಾರಿ ಅರ್ಜಿಗಳನ್ನು ನಾಗರಿಕರಿಂದ ಪಡೆಯಲಾಗಿದ್ದು, ಇವುಗಳಲ್ಲಿ ಹೆಚ್ಚಿನವುಗಳನ್ನು ಆರ್ಥಿಕವಾಗಿ ಸಬಲರಾಗಿರುವವರೇ ಹಾಕಿದ್ದಾರೆಂಬ ಕಾರಣಕ್ಕಾಗಿ ಜನತೆ ವಿರೋಧ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಅಂತೂ ಈವರೆಗೂ ನಿವೇಶನಗಳ ಹಂಚಿಕೆಯಾಗಿಲ್ಲ. ಈ ನಿಟ್ಟಿನಲ್ಲಿ ನಿವೇಶನ ಹಂಚಿಕೆಯಲ್ಲಿ ಯಾವುದೇ ರೀತಿಯಲ್ಲೂ ಅರ್ಹ ಬಡಜನರಿಗೆ ಮೋಸವಾಗಬಾರದೆಂದು ಈ ಬಾರಿ ಬಂದಿದ್ದ ಸಾವಿರಾರು ಅರ್ಜಿಗಳಲ್ಲಿ ಆಶ್ರಯ ಸಮಿತಿ ಅಧ್ಯಕ್ಷರಾಗಿದ್ದ ಶಾಸಕ ಎಚ್.ಕೆ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಈಗಾಗಲೇ 384 ನಿವೇಶನಗಳ ಹಂಚಿಕೆಗೆ ಮೊದಲ ಹಂತವಾಗಿ ಪಟ್ಟಿ ತಯಾರಿಸಿ ಮಂಜೂರಾತಿಗಾಗಿ ಕಳಿಸಿದ್ದು, ಚುನಾವಣಾ ನೀತಿ ಸಂಹಿತೆ ಜಾರಿಯಾದ ಕಾರಣ ಈ ಕಾರ್ಯ ಸ್ಥಗಿತಗೊಂಡಿದೆ.
ಮೂಲಭೂತ ಸೌಲಭ್ಯ ಕಲ್ಪಿಸಿ: ಬಡ ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆಯಾಗುತ್ತಿರುವುದು ಸಂತಸದ ವಿಷಯವಾಗಿದ್ದು, ಅವರಿಗೆ ಮನೆಗಳನ್ನು ನಿರ್ಮಿಸಿಕೊಂಡು ನೆಮ್ಮದಿಯ ಜೀವನ ನಡೆಸಬಹುದಾಗಿದೆ. ಇದರೊಂದಿಗೆ ಈ ಬಡಾವಣೆಯಲ್ಲಿ ಅಗತ್ಯ ಮೂಲಭೂತ ಸೌಕರ್ಯ ಮೊದಲು ಕಲ್ಪಿಸಿ ನಂತರ ಹಂಚಿಕೆ ಮಾಡುವುದು ಮುಖ್ಯವಾಗಿದೆ.
ಏಕೆಂದರೆ ವಾಸಿಸಲು ಯೋಗ್ಯ ಸ್ಥಳವಲ್ಲದಿದ್ದರೆ ಈ ಸ್ಥಳ ಹಾಳು ಕೊಂಪೆಯಾಗುವ ಸಂಭವವಿದೆ. ಇದಕ್ಕೆ ಉದಾಹರಣೆ ಎಂದರೆ ಬೇಡಚುವಳ್ಳಿ ಗ್ರಾಮದಲ್ಲಿ ಹಲವು ವರ್ಷಗಳ ಹಿಂದೆ ಹಂಚಿಕೆ ಮಾಡಲಾಗಿರುವ ಆಶ್ರಯ ಯೋಜನೆ ಮನೆಗಳು ದಶಕಗಳ ಹಿಂದೆ ಬಿ.ಆರ್. ಗುರುದೇವ್ ಶಾಸಕರಾಗಿದ್ದ ಸಂದರ್ಭದಲ್ಲಿ 92 ಮನೆಗಳ ಹಂಚಿಕೆಗೆ ನಿರ್ಧರಿಸಲಾಗಿತ್ತು. ಅವರ ಅಧಿಕಾರ ಅವಧಿ ಮುಗಿವ ಹೊತ್ತಿಗೆ ಭೂ ಸೇನಾ ನಿಗಮ 44 ಮನೆಗಳನ್ನು ನಿರ್ಮಿಸಿತು. ಆದರೆ ಈವರೆಗೂ ಉದ್ದೇಶಿಸಿದ್ದ 92 ಮನೆಗಳು ನಿರ್ಮಾಣವಾಗಲೇ ಇಲ್ಲ. ಸೂಕ್ತ ಮೂಲಭೂತ ಸೌಲಭ್ಯಗಳಿಲ್ಲದ ಈ ಬಡಾವಣೆಯಲ್ಲಿ ಜನರು ವಾಸಿಸಲು ಹಿಂಜರಿದ ಕಾರಣ ಬೆರಳೆಣಿಕೆಯಷ್ಟು ಜನ ಮಾತ್ರ ವಾಸಕ್ಕೆ ಬಂದರೂ ಪ್ರಾರಂಭದಲ್ಲಿ 14 ಜನ ಮಾತ್ರ ವಾಸಕ್ಕಿದ್ದರು.
ಅರ್ಹ ಫಲಾನುಭವಿಗಳಿಗೆ ಸಿಗುತ್ತಿಲ್ಲ: ಅಂದರೆ ಉಳಿದ ಮನೆಗಳವರು ಬೇರೆಡೆ ವಾಸಿಸುತ್ತಿದ್ದರೆಂದೇ ಅರ್ಥ. ಅಂದರೆ ಈ ಮನೆಗಳ ಹಂಚಿಕೆಯಲ್ಲಿಯೂ ಉಳ್ಳವರ ಪಾಲು ಅನೇಕ ಮನೆಗಳಾಗಿವೆ. ಆದರೆ ಈಗ ಅವುಗಳಲ್ಲಿ ಹಲವು ಮಂದಿ ಉತ್ತಮ ಮನೆಗಳನ್ನು ನಿರ್ಮಿಸಿಕೊಂಡಿದ್ದು, ಬಹಳಷ್ಟು ಮಂದಿ ಈ ಮನೆಗಳ ಜಾಗವನ್ನು ಮಾರಾಟ ಮಾಡಿದ್ದಾರೆ. ಅಂದರೆ ಬಡವರಿಗೆ ಹಾಗೂ ಹಿಂದುಳಿದ ವರ್ಗದವರಿಗೆ ಸರ್ಕಾರದಿಂದ ನೀಡುವ ಹಲವು ಯೋಜನೆಗಳು ಅರ್ಹ ಫಲಾನುಭವಿಗಳಿಗೆ ದೊರಕುತ್ತಿಲ್ಲ ಎಂಬುದು ಸಾಬೀತಾದಂತಾಗುತ್ತದೆ.
ಜನಪರ ಯೋಜನೆಗಳಿಗೆ ವಿಮುಖವಾಗಿ ಸರ್ಕಾರವನ್ನೇ ದಾರಿ ತಪ್ಪಿಸುವಂತಹ ಜನರನ್ನು ವಂಚಿಸುವ ಕೆಲಸ ಹೇಗೆ ನಡೆಯುತ್ತಿವೆ ಎಂಬುದಕ್ಕೆ ಈ ಬೇಡಚುವಳ್ಳಿಯ ದುರ್ಬಲ ಮನೆಗಳು ಸಾಕ್ಷಿಯಾಗಿ ನಿಂತಿವೆ.
ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಜನರ ಹಿತ ಬೇಕಾಗಿಲ್ಲ. ಕೆಲವು ಸ್ವಹಿತಾಸಕ್ತಿ ಮಾತ್ರ ಮುಖ್ಯ. ಅಧಿಕಾರವಿದ್ದಾಗ ಗೆದ್ದೆತ್ತಿನ ಬಾಲ ಹಿಡಿದು ಓಡಾಡುವ ಅಧಿಕಾರಿಗಳಿಗೂ ಕನಿಷ್ಠ ಕಾಳಜಿ ಇಲ್ಲ.
ಚುನಾವಣೆಗಳು ಬಂದಾಗ ಮಾತ್ರ ಓಟು ಬೇಕು. ಆ ಸಂದರ್ಭದಲ್ಲಿ ಸರ್ಕಾರದ ಭರವಸೆಗಳೆಲ್ಲವೂ ಸುರಿ ಮಳೆಯಾಗಿ ಚೆಲ್ಲಿಕೊಳ್ಳುತ್ತವೆ. ಆದರೆ ನಂತರ ಎಲ್ಲವೂ ಮರೆಯಾಗುತ್ತವೆ. ಬಡವರಿಗೆ ಮನೆ ಕೊಟ್ಟು ವಾಸಕ್ಕೆ ಇರಲೆಂದು ಸರ್ಕಾರ ಕಟ್ಟಿಸಿದ ಮನೆಗಳು ಸಹ ಉಳ್ಳವರ ಪಾಲಾಗಿರುವುದು ಇವರ ಆಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ.
ಫಲಾನುಭವಿಗಳ ಆಯ್ಕೆಯಲ್ಲಿ ಅನ್ಯಾಯ: ನಿಜವಾದ ಫಲಾನುಭವಿಗಳ ಆಯ್ಕೆಯಲ್ಲಿ ಅನ್ಯಾಯವಾಗಿದ್ದು, ಸಂತ್ರಸ್ತರೆಲ್ಲ ಬಾಡಿಗೆ ಕೊಟ್ಟು ವಾಸಿಸುವುದಾದರೆ ಯಾರು ಅರ್ಹ ಫಲಾನುಭವಿಗಳು ಎಂಬ ಮೂಲ ಪ್ರಶ್ನೆ ಕಾಡುತ್ತಿದೆ. ಬಡಜನರು ಕೂಲಿ ಮಾಡಿದರೆ ಮಾತ್ರ ಜೀವನಸಾಧ್ಯ. ಸಾಂಪ್ರದಾಯಿಕ ಕೃಷಿ ನಂಬಿದ ರೈತರಿಗೆ ಬತ್ತ, ರಾಗಿ, ಜೋಳ ಆಲೂಗೆಡ್ಡೆ ಬಿತ್ತನೆ ಸಾಮಾನ್ಯ ಲಾಭದಾಸೆಗೆ ಶುಂಠಿಯ ಗಾಳಿ ಬೇರೆ ಬೀಸುತ್ತಿದೆ. ಮಳೆ ಇಲ್ಲ. ಬೆಳೆದ ಬೆಳೆಗೆ ಸೂಕ್ತ ಬೆಲೆ ಇಲ್ಲ. ಇಂತಹ ಸಂದರ್ಭದಲ್ಲಿ ಗುಡಿಸಲುಗಳಲ್ಲಿ ಬಡಜನತೆ ವಾಸಿಸದಿರಲೆಂದು ಸರ್ಕಾರ ಆಶ್ರಯ ಯೋಜನೆಯ ಮನೆಗಳನ್ನು ಕಟ್ಟಿಸಿಕೊಟ್ಟಿದ್ದರೆ ಅದನ್ನೂ ಮಾರಿಕೊಂಡು ಮತ್ತೆ ಅದೇ ಸ್ಥಿತಿಯಲ್ಲಿ ಉಳಿಯುವುದಾದರೆ ಇಂತಹ ಯೋಜನೆಗಳ ಅವಶ್ಯಕತೆಯಾದರೂ ಏನು?
ಆಶ್ರಯ ನಿವೇಶನ ಅಥವಾ ಮನೆಗಳು ಹಂಚಿಕೆಯಾಗುವಾಗ ಅರ್ಹ ಬಡ ಫಲಾನುಭವಿಗಳಿಗೆ ದೊರೆಯುವಂತೆ ಮಾಡುವುದರ ಜತೆಗೆ ಈಗಿರುವ ನಿಯಮ 20 ವರ್ಷ ಕಳೆದ ನಂತರ ಮಾರಾಟ ಮಾಡಬಹುದೆಂಬುದಕ್ಕೆ ತಿದ್ದುಪಡಿ ತಂದು ಜೀವಿತಾವಧಿಯಲ್ಲಿ ಪರಭಾರೆ ಮಾಡದಂತೆ ನಿಯಮ ಮಾಡಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

