ಹಾಸನ

ಕೇಂದ್ರದ ಕೆಟ್ಟ ನೀತಿಯಿಂದಲೇ ಭ್ರಷ್ಟಾಚಾರ, ಆರ್ಥಿಕ ಮುಗ್ಗಟ್ಟು

Published On :

ಕ.ಪ್ರ.ವಾರ್ತೆ  ಹಾಸನ  ಆ. 9
ಕೇಂದ್ರ ಸರ್ಕಾರದ ಕೆಟ್ಟ ನೀತಿಗಳಿಂದಲೇ ರಾಷ್ಟ್ರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿ, ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಲು ಕಾರಣ ಎಂದು ಟೀಕಿಸಿರುವ ಸಿಪಿಎಂ ಪಾಲಿಟ್ ಬ್ಯೂರೋ ಸದಸ್ಯ, ರಾಜ್ಯಸಭೆ ಮಾಜಿ ಸದಸ್ಯ ನಿಯೊತ್ಪಾಲ್ ಅವರು, ರಾಜಕೀಯ ಪಕ್ಷಗಳನ್ನು ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಯಿಂದ ಹೊರಗಿಡುವ ನಿರ್ಧಾರವನ್ನು ಅವರು ಸಮರ್ಥಿಸಿಕೊಂಡಿದ್ದಾರೆ.
ಶುಕ್ರವಾರ ನಗರದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರ್‌ಟಿಐನಿಂದ ಭ್ರಷ್ಟಾಚಾರ ಹೊರಗೆ ತೆಗೆಯಲು ಪ್ರಬಲ ಅಸ್ತ್ರ ನಿಜ. ಅದು ಅಧಿಕಾರಸ್ಥ ರಾಜಕಾರಣಿಗಳು, ಅಧಿಕಾರಿಗಳಲ್ಲಿ  ನಡೆಯುವ ಭ್ರಷ್ಟಾಚಾರ ಬಯಲಿಗೆಳೆಯಲು ಅನ್ವಯಿಸುವುದು ಸರಿ. ಆದರೆ ಭ್ರಷ್ಟಾಚಾರದ ವಿರುದ್ಧ ದನಿ ಎತ್ತಲು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳು ಮುಖ್ಯ. ಲೋಕಸಭೆ ಮತ್ತು ವಿಧಾನಸಭೆ ಒಳಗೆ ಆಡಳಿತರೂಢ  ಸರ್ಕಾರಗಳ ಕೆಡಕುಗಳ ಬಗ್ಗೆ ಧ್ವನಿ ಎತ್ತಲು  ವಿರೋಧಪಕ್ಷಗಳು ಬೇಕೆ ಬೇಕು ಎಂದು ಹೇಳಿದರು.
ಚುನಾವಣೆ ವೇಳೆ ರಾಜಕೀಯ ಪಕ್ಷಗಳು ನಾನಾ ಮೂಲಗಳಿಂದ ಹಣ ಪಡೆಯುತ್ತವೆ ನಿಜ. ಆದರ ವೆಚ್ಚಗಳ ಬಗ್ಗೆ ಚುನಾವಣೆ ವೇಳೆ ಆಯೋಗಕ್ಕೆ ಮಾಹಿತಿ ನೀಡಲಾಗುತ್ತದೆ ಮತ್ತು ತೆರಿಗೆ ಸರ್ಕಾರಗಳಿಗೆ ಸಲ್ಲಿಸಲಾಗುತ್ತದೆ. ಇದನ್ನು ಆರ್‌ಟಿಐ ಮೂಲಕ ಅಗತ್ಯ ಬಿದ್ದರೆ ಪಡೆದುಕೊಳ್ಳಬಹುದು. ಹಾಗಾಗಿ ರಾಜಕೀಯ ಪಕ್ಷಗಳು ಆರ್‌ಟಿಐ ವ್ಯಾಪ್ತಿಗೆ ಒಳ ಪಡುವ ಅಗತ್ಯ ಇಲ್ಲ. ಇದೇ ವೇಳೆ ಚುನಾವಣೆ ಪದ್ಧತಿಯಲ್ಲಿ ಭಾರಿ ಬದಲಾವಣೆ ತರಬೇಕಾಗಿದೆ ಎಂದು ಪ್ರತಿಪಾದಿಸಿದರು.
ಕ್ರಿಮಿನಲ್ ವಿಚಾರಣೆ: ಲೋಕಪಾಲ್ ಮಸೂದೆಯನ್ನು ಜಾರಿಗೊಳಿಸಬೇಕಾಗಿದ್ದು ಸರಿ ಎಂದ ಅವರು, ಕ್ರಿಮಿನಲ್ ಆರೋಪ ಹೊತ್ತ ರಾಜಕಾರಣೆ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂಬುದನ್ನು ನಾನು ಒಪ್ಪುವುದಿಲ್ಲ. ದ್ವೇಷ ರಾಜಕಾರಣದ ಹಿನ್ನೆಲೆಯಲ್ಲಿ ಮನಸೋ ಇಚ್ಚೆ ಕ್ರಿಮಿನಲ್ ಕೇಸ್ ಹಾಕಬಹುದು. ಬದಲಿಗೆ ಆರೋಪ ಸಾಬೀತಾಗಿ ಅಪರಾಧಿ ಎಂದು ನ್ಯಾಯಾಲಯ ತೀರ್ಪು ನೀಡಿದ ನಂತರ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು  ಎಂದು ಹೇಳಿದರು.
ನ್ಯಾಯಾಧೀಶರ ನೇಮಕ: ನ್ಯಾಯಾಧೀಶರ ನೇಮಕವೂ ಕೇಂದ್ರದ ವ್ಯಾಪ್ತಿಯಲ್ಲಿ ಇರಬೇಕು. ನ್ಯಾಯಾಂಗ ಕ್ಷೇತ್ರವೇನೂ ಭ್ರಷ್ಟಾಚಾರದಿಂದ ಹೊರತಾಗಿಲ್ಲ. ನ್ಯಾಯಾಂಗ ಆಯೋಗವನ್ನು ಬಲಪಡಿಸುವ ಮೂಲಕ ನ್ಯಾಯಾಂಗ ವ್ಯವಸ್ಥೆಯನ್ನು ಬಲಪಡಿಸಬೇಕೇ ಹೊರತು ನ್ಯಾಯಾಧೀಶರ ನೇಮಕಾತಿ ಅಧಿಕಾರವನ್ನು ನ್ಯಾಯಾಂಗಕ್ಕೆ ನೀಡುವುದು ಸರಿಯಲ್ಲ ಎಂದು ತಿಳಿಸಿದರು.
ಶೇ.50 ಕ್ಕೂ ಹೆಚ್ಚು ಜನರು ಬಿಜೆಪಿ, ಕಾಂಗ್ರೆಸ್ ತಿರಸ್ಕರಿಸಿದ್ದಾರೆ:  ದೇಶದ ಶೇ. 50 ಕ್ಕೂ ಹೆಚ್ಚು ಜನರು ಕಾಂಗ್ರೆಸ್, ಬಿಜೆಪಿಯನ್ನು ತಿರಸ್ಕರಿಸಿದ್ದಾರೆ. ಆದರೆ ಕೆಲ ಮಾಧ್ಯಮದವರು ಜನರನ್ನು ನಿಮ್ಮ ಆಯ್ಕೆ, ಕಾಂಗ್ರೆಸ್ಸೋ, ಬಿಜೆಪಿಯೋ ಎಂದು ಪ್ರಶ್ನಿಸುತ್ತಾರೆ. ಇದು ಸರಿಯಲ್ಲ. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಕೆಟ್ಟ ನೀತಿಗಳ ವಿರುದ್ಧ ಹೋರಾಟ ಮಾಡಲು ಪರ್ಯಾಯ ಸಂಘಟನೆ ಮಾಡಲಾಗುತ್ತದೆ ಹೊರತು ತೃತೀಯ ರಂಗದ ರಚನೆ ಇಲ್ಲ ಎಂದು ಹೇಳಿದರು.
ಕೇಂದ್ರ ಸರ್ಕಾರ ಪ್ರಕೃತಿ ದತ್ತ ಗಣಿಯನ್ನು ಖಾಸಗಿ ಸಂಸ್ಥೆಗಳಿಗೆ ಮಾರಾಟ ಮಾಡುತ್ತಿರುವುದು ಮತ್ತು ಬಂಡವಾಳ ಶಾಹಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆಯಲ್ಲಿ ವಿನಾಯ್ತಿ ನೀಡುವ ಕೆಟ್ಟ ನೀತಿಗಳಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ರುಪಾಯಿ ಮೌಲ್ಯ ಕುಸಿಯುತ್ತಿದ್ದು,  ಭ್ರಷ್ಟಾಚಾರ ಹೆಚ್ಚಾಗಲು ಕಾರಣವಾಗಿದೆ ಎಂದರು.
ಡಿಸೇಲ್ ಬೆಲೆ ಏರಿದರೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತದೆ. ಹಾಗಾಗಿ ಡಿಸೇಲ್‌ಗೆ ಸಬ್ಸಿಡಿ ನೀಡದೇ ಬೆಲೆ ಏರಿಕೆ ಮಾಡುವ ಕೇಂದ್ರ,  ಬೃಹತ್ ಕಂಪನಿಗಳಿಗೆ ತೆರಿಗೆ ಕಡಿಮೆ ಮಾಡುತ್ತದೆ ಎಂದು ಟೀಕಿಸಿದರು.
ಶ್ರೀಮಂತ ಕೈಗಾರಿಕೆಗಳಿಗೆ 5 ಲಕ್ಷ 300 ಕೋಟಿ ರು. ತೆರಿಗೆ ಮನ್ನಾ ಮಾಡಲಾಗಿದೆ. ಆದರೆ ಇತರೇ ಮೂಲಗಳಿಂದ ಕಟ್ಟು ನಿಟ್ಟಾಗಿ ತೆರಿಗೆ ಸಂಗ್ರಹಿಸಲಾಗುತ್ತಿದೆ. ಇದು ಕೂಡ ಬೆಲೆ ಏರಿಕೆ ಮತ್ತು ಹಣದುಬ್ಬರದಲ್ಲಿ ಭಾರಿ ಏರಿಳಿತ ಉಂಟಾಗಲು ಕಾರಣ.  ಇದಕ್ಕೆ ಕಾರಣ ಅಧಿಕಾರಸ್ಥರ ರಾಜಕಾರಣಿಗಳು ಮತ್ತು ಅಧಿಕಾರಿಗಳು.  ಶೇ. 40 ರಷ್ಟು ಇರುವ ಅಸಂಘಟಿತ ಕಾರ್ಮಿಕರ ಸ್ಥಿತಿಗತಿ ಬಗ್ಗೆ ಚಿಂತನೆ ನಡೆಯುತ್ತಿಲ್ಲ. ಬದಲಿಗೆ ಶ್ರೀಮಂತ ಕಂಪನಿಗಳ ಏಳಿಗೆಗೆ ಶ್ರಮಿಸುತ್ತಿರುವುದು ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಆರ್ಥಿಕ ರಂಗದಲ್ಲಿ ಸ್ವಾವಲಂಬನೆ:  ದೇಶದ ಅಭಿವೃದ್ಧಿಗೆ ಹಿನ್ನೆಡೆಯಾಗಿರುವ ನೀತಿಗಳಿಂದ ಆರ್ಥಿಕ ರಂಗದಲ್ಲಿ ಸ್ವಾವಲಂಬನೆ ಸಾಧಿಸಲು ಸಾಧ್ಯವಾಗುತ್ತಿಲ್ಲ. ಇದರ ಪರಿಣಾಮ ಆನೇಕ ವಸ್ತುಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಮುಂದಿನ ಲೋಕಸಭೆ ಚುನಾವಣೆ ವೇಳೆ ಕೇಂದ್ರದ ಕೆಟ್ಟ ನಿಯಮಗಳು, ಭ್ರಷ್ಟಾಚಾರ, ನಿರುದ್ಯೋಗ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ವಿಚಾರಗಳು ಪ್ರಮುಖ ವಿಷಯಗಳನ್ನಾಗಿ ಪ್ರಸ್ತಾಪಿಸಿ, ಪ್ರಚಾರ ಮಾಡಲಾಗುವುದು. ಇದೇ ವಿಷಯಗಳ ಆಧಾರದ ಮೇಲೆ ದೇಶಾದ್ಯಂತ ಜನರನ್ನು ಒಗ್ಗೂಡಿಸಿ ಹೋರಾಟಕ್ಕೆ ಅಣಿ ಗೊಳಿಸಲಾಗುವುದು ಎಂದು ತಿಳಿಸಿದರು.
ಶಿಕ್ಷಣ, ಆರೋಗ್ಯ ಮತ್ತಿತರ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರಗಳು ವಿಫಲವಾಗಿವೆ. ಬದಲಿಗೆ ಅಗ್ಗದ ಕಾರ್ಯಕ್ರಮಗಳನ್ನು ಘೋಷಣೆ ಮಾಡಲಾಗುತ್ತಿದೆ. ವ್ಯಕ್ತಿಯ ಜೀವನ ಮಟ್ಟ ಸುಧಾರಣೆಯಾಗುವ ನಿಟ್ಟಿನಲ್ಲಿ ಕಾರ್ಯಕ್ರಮಗಳು ಜಾರಿಯಾಗಬೇಕು. ಆಗ  ಮಾತ್ರ ಪ್ರಗತಿ ಎಂಬುದು ವಾಸ್ತವದಲ್ಲಿ ಸಾಧಿಸಲು ಸಾಧ್ಯ ಎಂದು ಹೇಳಿದರು.
ಸಂವಾದ ಕಾರ್ಯಕ್ರಮದಲ್ಲಿ ಸಿಪಿಎಂ ಮುಖಂಡರಾದ ಜಿ.ವಿ. ಶ್ರೀರಾಮರೆಡ್ಡಿ ಪ್ರಸನ್ಕಕುಮಾರ್, ವಿ. ಸುಕುಮಾರ್, ವಕೀಲ ಎಚ್.ಎ. ಕಿಶೋರ್‌ಕುಮಾರ್, ಅಗ್ನಿ ಸತೀಶ್, ಆರ್. ಪಿ. ವೆಂಕಟೇಶ್‌ಮೂರ್ತಿ ಮತ್ತಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.