ಬರಪೀಡಿತ ಪಟ್ಟಿಗೆ ತಾ. ಸೇರ್ಪಡೆಗೆ ಯತ್ನ
ಕನ್ನಡಪ್ರಭ ವಾರ್ತೆ ಅರಸೀಕೆರೆ ಆ. 14
ಸತತ ಬರಗಾಲ ಎದುರಿಸುತ್ತಿರುವ ಅರಸೀಕೆರೆ ತಾಲೂಕನ್ನು ಬರಪೀಡಿತ ಪಟ್ಟಿಯಿಂದ ಕೈ ಬಿಟ್ಟಿರುವುದು ಕಂಡುಬಂದಲ್ಲಿ ಮರುಸೇರ್ಪಡೆಗೆ ಎಲ್ಲಾ ರೀತಿಯ ಪ್ರಯತ್ನ ನಡೆಸುತ್ತೇನೆ. ತಮ್ಮ ಕ್ಷೇತ್ರದ ಜಾವಗಲ್ ಕೂಡಾ ಈ ತಾಲೂಕಿನ ವ್ಯಾಪ್ತಿಯಲ್ಲಿದ್ದು ಪಕ್ಷ ಬೇದವಿಲ್ಲದೆ, ಬರಪೀಡಿತ ಪಟ್ಟಿಗೆ ಸೇರಿಸಲು ಶ್ರಮ ವಹಿಸುವುದಾಗಿ ಬೇಲೂರು ಶಾಸಕ ವೈ.ಎನ್.ರುದ್ರೇಶ್‌ಗೌಡ ಭರವಸೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ವ್ಯಾಪ್ತಿಯಲ್ಲಿ ಯಾವ ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಲಾಗಿದೆ ಅಥವಾ ಕೈಬಿಡಲಾಗಿದೆ ಎಂಬ ಮಾಹಿತಿ ಸರ್ಕಾರದಿಂದ ಜಿಲ್ಲಾಧಿಕಾರಿಗಳಿಗೆ ಮಾಹಿತಿ ಬಂದಿಲ್ಲ.
ಈ ಬಗ್ಗೆ ಮಾಹಿತಿ ಪಡೆದು ಒಂದು ವೇಳೆ ಬರಪೀಡಿತ ಪಟ್ಟಿಯಿಂದ ಅರಸೀಕೆರೆ ತಾಲೂಕು ಕೈ ಬಿಟ್ಟಿದ್ದರೆ ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಹದೇವಪ್ಪರವರೊಂದಿಗೆ ಚರ್ಚಿಸಿ ಬರಪೀಡಿತ ಪಟ್ಟಿಗೆ ತಾಲೂಕನ್ನು ಸೇರಿಸಲು ಪ್ರಯತ್ನಿಸಲಾಗುವುದು ಎಂದರು.
ಬೇಲೂರು ತಾಲೂಕಿನ ಮಾದಿಹಳ್ಳಿ, ಹಳೇಬೀಡು ಏತ ನೀರಾವರಿ ಮೂಲಕ ಜಾವಗಲ್‌ನ 28 ಕೆರೆಗಳಿಗೆ ನೀರು ಹರಿಸುವ ಪ್ರಕ್ರಿಯೆಗೆ 1 ವರ್ಷದೊಳಗೆ ಚಾಲನೆ ನೀಡಲಾಗುವುದು. ಈ ಸಂಬಂಧ ಉಸ್ತುವಾರಿ ಸಚಿವರು ಆ 15ರಂದು ಯಗಚಿ ಜಲಾಶಯಕ್ಕೆ ಬಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ಕಾಮಗಾರಿ ಬಗ್ಗೆ ವಿಷಯ ಪ್ರಸ್ತಾಪಿಸಲಾಗುವುದು ಎಂದು ಹೇಳಿದರು.
ಅರಸೀಕೆರೆ ತಾಲೂಕಿನಲ್ಲಿ ಅಂತರ್ಜಲ ಕುಸಿತದಿಂದ ಕೊಳವೆಬಾವಿಗಳು ಬತ್ತಿಹೋಗಿದ್ದು ತೇವಾಂಶ ಕೊರತೆಯಿಂದ ತೆಂಗಿನ ಮರಗಳ ಸುಳಿ ಬಿದ್ದು ಹೋಗಿ ರೈತರು ಆರ್ಥಿಕ ಸಂಕಷ್ಠದ ಸ್ಥಿತಿ ಎದುರಿಸುತ್ತಿದ್ದು ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಿಕೊಡುವುದಾಗಿ ಹೇಳಿದರು.
ಅರಸೀಕೆರೆಯಲ್ಲಿ ನ್ಯಾಫೆಡ್ ಖರೀದಿ ಕೇಂದ್ರ ತೆರೆಯಲಾಗಿದೆಯಾದರೂ ಇಲ್ಲಿಂದ ಜಾವಗಲ್ 40 ಕಿ.ಮೀ. ದೂರವಿರುವುದರಿಂದ ರೈತರಿಗಾಗುವ ಅನಾನುಕೂಲದ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಲಾಗಿದ್ದು ಶೀಘ್ರದಲ್ಲಿಯೇ ಜಾವಗಲ್‌ನಲ್ಲಿ ನಾಫೆಡ್ ಖರೀದಿ ಕೇಂದ್ರ ಆರಂಭಕ್ಕೆ ಚಾಲನೆ ನೀಡಲಾಗುವುದು. ರೈತರು ಆತಂಕಗೊಳ್ಳದೆ ಕೊಬ್ಬರಿ ಮಾರಾಟ ಮಾಡಬಹುದಾಗಿದೆ. ಉಸ್ತುವಾರಿ ಸಚಿವರ ಭೇಟಿ ಬಗ್ಗೆ ಅನಗತ್ಯ ಗೊಂದಲ ಸೃಷ್ಟಿಸುವುದು ಸರಿಯಲ್ಲ ಎಂದರು.
ಲೋಕಸಭಾ ಉಪಚುನಾವಣೆಯಲ್ಲಿ ಮಂಡ್ಯ ಮತ್ತು ರಾಮನಗರ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುವ ವಿಶ್ವಾಸವಿದ್ದು ಜಿಲ್ಲೆಯಲ್ಲಿಯೂ ಪಕ್ಷವನ್ನು ಸದೃಢಗೊಳಿಸಲು ಜನಪರ ಕಾರ್ಯಕ್ರಮ ರೂಪಿಸಲಾಗುವುದು ಎಂದರು. ಯುವ ಕಾಂಗ್ರೆಸ್ ಅಧ್ಯಕ್ಷ ಅಣ್ಣನಾಯ್ಕನಹಳ್ಳಿ ವಿಜಯಕುಮಾರ್, ಕಲ್ಲಳ್ಳಿ ನಾಗರಾಜ್, ಬೆಳುವಳ್ಳಿ ಮಹದೇವಪ್ಪ, ಕೋಡಿಹಳ್ಳಿ ರಘು, ಧರ್ಮ ಬೋವಿ, ಬಸವರಾಜು, ಪಾಪೇಗೌಡ, ಶ್ರೀನಿವಾಸ್, ಮಹಲಿಂಗಪ್ಪ, ಕುಮಾರ್, ಉದಯ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

