ವಿಶ್ವದಲ್ಲಿ ಪ್ರತಿವರ್ಷ ಕೋಟಿ ಮಂದಿ ಕ್ಯಾನ್ಸರ್ಗೆ ಬಲಿ
ಕ.ಪ್ರ.ವಾರ್ತೆ ಅರಸೀಕೆರೆ ಆ. 16
ವಿಶ್ವದಲ್ಲಿ ಪ್ರತಿ ವರ್ಷ ಒಂದು ಕೋಟಿ ಜನರು ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಿದ್ದು, ಅವರಲ್ಲಿ ಶೇ.50 ರಷ್ಟು ರೋಗಿಗಳು ತಂಬಾಕು ಮತ್ತು ಮದ್ಯಪಾನ ಸೇವನೆಗೆ ಬಲಿಯಾದವರೇ ಆಗಿದ್ದಾರೆ ಎಂದು ಹಾಸನ ಸರ್ಕಾರಿ ವೈದ್ಯಕೀಯ ಕಾಲೇಜಿನ ಕ್ಯಾನ್ಸರ್ ತಜ್ಞ ಡಾ.ಜಗದೀಶ್ ತಿಳಿಸಿದರು.
ತಾಲೂಕು ಸರ್ಕಾರಿ ನೌಕರರ ಸಂಘ ಹಾಗೂ ರೋಟರಿ ಸಂಸ್ಥೆ ಸಹಯೋಗದಲ್ಲಿ ಪಟ್ಟಣದ ಜೆ.ಸಿ.ಆಸ್ಪತ್ರೆಯಲ್ಲಿನ ತಾಲೂಕು ಆರೋಗ್ಯಾಧಿಕಾರಿ ಕಚೇರಿಯಲ್ಲಿ ಏರ್ಪಡಿಸಿದ್ದ ಉಚಿತ ಕ್ಯಾನ್ಸರ್ ತಪಾಸಣೆ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವ್ಯಕ್ತಿಯಲ್ಲಿನ ಆಹಾರ ಸೇವನೆ, ಅಶುದ್ಧತೆ ಮತ್ತು ದುಶ್ಚಟಗಳಿಂದ ಬಹುತೇಕವಾಗಿ ಕ್ಯಾನ್ಸರ್ ಕಾಯಿಲೆ ಹರಡುತ್ತಿವೆ ಎಂದರು.
ಜನರಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಗಳು ನಡೆಯಬೇಕಾಗಿದೆ. ಮುಂಜಾಗ್ರತಾ ಕ್ರಮವಾಗಿ ಕ್ಯಾನ್ಸರ್ ರೋಗವನ್ನು ತಪಾಸಣೆ ಮೂಲಕ ಪತ್ತೆ ಮಾಡಿ ಆರಂಭದ ಹಂತದಲ್ಲಿ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಕಾಯಿಲೆಯನ್ನು ಸಂಪೂರ್ಣ ಗುಣಪಡಿಸಬಹುದು ಎಂದು ಹೇಳಿದರು.
ಮಹಿಳೆಯರಲ್ಲಿ ಗರ್ಭಕೋಶದ ಕೊರಳಿನ ಕ್ಯಾನ್ಸರ್ ಹೆಚ್ಚಾಗಿ ಕಂಡು ಬರುತ್ತಿದ್ದು, ಋತು ಚಕ್ರದ ವ್ಯತ್ಯಾಸ ಮತ್ತು ಆ ಸಂದರ್ಭದಲ್ಲಿ ಹೆಚ್ಚಿನ ರಕ್ತಸ್ರಾವ ಆಗುವುದು, ಬಿಳುಪು ಅಸಹಜವಾಗಿ ಹೋಗುವುದು ಕ್ಯಾನ್ಸರ್ ಲಕ್ಷಣವಾಗಿದ್ದು, ಮಕ್ಕಳಿಗೆ ಎದೆಹಾಲು ಕುಡಿಸದ ತಾಯಂದಿರಲ್ಲಿ ಕಂಡು ಬರುವ ಸ್ತನದ ಕ್ಯಾನ್ಸರ್ ಪತ್ತೆ ಮಾಡಲು ಮಹಿಳೆಯರು ತಮ್ಮ ಎರಡು ಸ್ತನಗಳಲ್ಲಿ ಕಾಣುವ ವ್ಯತ್ಯಾಸ, ಸಣ್ಣ ಗೆಡ್ಡೆಗಳು, ಎದೆಹಾಲಿನ ಜೊತೆಯಲ್ಲಿ ರಕ್ತಸ್ರಾವ ಇತ್ಯಾದಿ ಸಮಸ್ಯೆಗಳು ರೋಗದ ಲಕ್ಷಣ ಆಗಿದೆ ಎಂದು ತಿಳಿಸಿದರು.
ಬಾಯಿಯ ಕ್ಯಾನ್ಸರ್ ರೋಗವು ಗುಟ್ಕಾ, ತಂಬಾಕು, ಮದ್ಯಪಾನ ಮತ್ತು ಮಾದಕ ವಸ್ತುಗಳ ಸೇವನೆಯ ಪರಿಣಾಮ ಬರುವ ರೋಗವಾಗಿದ್ದು, ಬಾಯಿಯ ಒಳಗೆ ಬಿಳಿ ಮತ್ತು ಕೆಂಪು ಹುಣ್ಣಿನ ಮಚ್ಚೆಗಳಿದ್ದು, ಅವು ಮೂರು ವಾರದೊಳಗೆ ವಾಸಿಯಾಗದಿದ್ದರೇ ತಕ್ಷಣ ತಜ್ಞ ವೈದ್ಯರನ್ನು ಭೇಟಿ ಮಾಡುವಂತೆ ಸೂಚಿಸಿದರು.
ಈ ಎಲ್ಲಾ ಲಕ್ಷಣಗಳು ಹೊಂದಿರುವರನ್ನು ಕ್ಯಾನ್ಸರ್ ರೋಗಿಗಳು ಎಂದು ಪರಿಗಣಿಸಲು ಸಾಧ್ಯವಿಲ್ಲ. ಅವರನ್ನು ಸೂಕ್ತ ಪರೀಕ್ಷೆಗೆ ಒಳಪಡಿಸುವ ಮೂಲಕ ಮಾತ್ರ ಕ್ಯಾನ್ಸರ್ ಪತ್ತೆ ಮಾಡಲು ಸಾಧ್ಯ ಎಂದು ಹೇಳಿದರು.
ಇಂತಹ ಮಾರಕ ರೋಗಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ತಪಾಸಣೆ ಮೂಲಕ ರೋಗವನ್ನು ಕಂಡು ಹಿಡಿದು ಸೂಕ್ತ ಚಿಕಿತ್ಸೆ ನೀಡಲು ಇಂತಹ ಕಾರ್ಯಕ್ರಮಗಳನ್ನು ಸ್ವಯಂ ಸೇವಾ ಸಂಸ್ಥೆಗಳ ಸಹಕಾರದಲ್ಲಿ ನಡೆಸಲಾಗುತ್ತಿದ್ದು, ಇದರ ಸದುಪಯೋಗ ಸಾರ್ವಜನಿಕರು ಪಡೆಯಬೇಕೆಂದು ಮನವಿ ಮಾಡಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ದಿನೇಶ್ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳ ಮೂಲಕ ಆರೋಗ್ಯ ಸೇವೆಯನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ನೀಡುತ್ತಿದೆ. ಅಲ್ಲದೆ ಸಾರ್ವಜನಿಕ ಸೇವಾ ಸಂಸ್ಥೆಗಳು ಖಾಸಗಿಯಾಗಿ ಆರೋಗ್ಯ ಶಿಬಿರಗಳನ್ನು ನಡೆಸುವ ಮೂಲಕ ಸಮಾಜದಲ್ಲಿನ ಬಡವರಿಗೆ ಆರೋಗ್ಯ ಭಾಗ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಸಾಕಷ್ಟು ಶ್ರಮಿಸುತ್ತಿವೆ. ಇಂತಹ ಕಾರ್ಯಕ್ರಮಗಳಿಗೆ ಪೂರ್ವ ನಿಯೋಜಿತವಾಗಿ ಹೆಚ್ಚಿನ ಪ್ರಚಾರ ನೀಡುವ ಅವಶ್ಯಕತೆ ಇದೆ ಎಂದರು.
ರೋಟರಿ ಸಂಸ್ಥೆ ಅಧ್ಯಕ್ಷ ಪ್ರವೀಣ್ ಕಾರ್ಯಕ್ರಮ ಉದ್ಘಾಟಿಸಿದರು. ಕ್ಯಾನ್ಸರ್ ತಜ್ಞ ಡಾ.ರಘುಪತಿ, ಡಾ.ಆಶಾ, ಡಾ.ಭಾಗ್ಯ ಮತ್ತು ಸ್ವಾಮಿ ವಿವೇಕಾನಂದ ಯೂಥ್ಮೂವ್ಮೆಂಟ್ನ ಕಾರ್ಯಕರ್ತರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

