ಹಾಸನ

ತಾಪಂ ಅಧ್ಯಕ್ಷೆಯಾಗಿ ಪುಷ್ಪ, ನಂಜುಂಡಪ್ಪ ಉಪಾಧ್ಯಕ್ಷ

Published On :

ಹೊಳೆನರಸೀಪುರ: ಅಚ್ಚರಿಯ ಬೆಳವಣಿಗೆಯಲ್ಲಿ ಇಲ್ಲಿನ ತಾಲೂಕು ಪಂಚಾಯ್ತಿಗೆ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಸೋಮವಾರ ಚುನಾವಣೆ ನಡೆದು, ಕೆ.ಎಂ.ಪುಷ್ಪ ಅಧ್ಯಕ್ಷೆಯಾಗಿ ಹಾಗೂ ಎಚ್.ಬಿ.ನಂಜುಂಡಪ್ಪ ಅವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡರು.
  ತಾಪಂ ಅಧ್ಯಕ್ಷರಾಗಿದ್ದ ಕೆ.ಎಂ.ಚಂದ್ರಮತಿ ಹಾಗೂ ಉಪಾಧ್ಯಕ್ಷರಾಗಿದ್ದ ಹುಚ್ಚೇಗೌಡ ಹದಿನೈದು ದಿನಗಳ ಹಿಂದೆಯೇ ಜಿಲ್ಲಾಧಿಕಾರಿಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ನಂತರ, ಹಾಸನ ಜಿಲ್ಲಾ ಉಪ-ವಿಭಾಗಾಧಿಕಾರಿ ಕೆ.ಎಚ್.ಜಗದೀಶ್  ಚುನಾವಣಾಧಿಕಾರಿಯಾಗಿ ಸೋಮವಾರ ಚುನಾವಣಾ ಪ್ರಕ್ರಿಯೆ ನಡೆಸಿದರು.
 ಈ ಸಂದರ್ಭದಲ್ಲಿ ಸಂಕನಹಳ್ಳಿ ಕ್ಷೇತ್ರದಿಂದ ತಾ.ಪಂಗೆ ಆಯ್ಕೆಗೊಂಡಿದ್ದ ಕೆ.ಎಂ.ಪುಷ್ಪ ಹಾಗೂ ಎಲೆಚಾಗಹಳ್ಳಿ ಕ್ಷೇತ್ರದಿಂದ ಆಯ್ಕೆಗೊಂಡಿದ್ದ ಹಿರಿಯ ಸದಸ್ಯ ಎಚ್.ಬಿ.ನಂಜುಂಡಪ್ಪ ಮಾತ್ರವೇ ನಾಮಪತ್ರ ಸಲ್ಲಿಸಿದ್ದ ಕಾರಣದಿಂದಾಗಿ, ನಾಮಪತ್ರ ಹಿಂಪಡೆಯಲು ನಿಗಧಿಗೊಳಿಸಲಾಗಿದ್ದ ಕೊನೆಯ ಗಳಿಗೆಯವರೆಗೂ ಯಾರೊಬ್ಬರೂ ನಾಮಪ್ರತವನ್ನು ಸಲ್ಲಿಸದ ಕಾರಣ ಅಂತಿಮವಾಗಿ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷೆ ಸ್ಥಾನಕ್ಕೆ ಕೆ.ಎಂ.ಪುಷ್ಪ ಅವರನ್ನೂ, ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಎಚ್.ಬಿ.ನಂಜುಂಡಪ್ಪ ಅವರು ಆಯ್ಕೆಯಾಗಿರುವುದಾಗಿ ಚುನಾವಣಾ ಪ್ರಕ್ರಿಯೆಯ ಅವಧಿಯು ಮುಗಿದ ನಂತರದಲ್ಲಿ ಉಪ-ವಿಭಾಗಾಧಿಕಾರಿ ಕೆ.ಎಚ್.ಜಗದೀಶ್ ಘೋಷಿಸಿದರು.
 ತಾಪಂಗೆ ಈ ಹಿಂದೆ ಅಧ್ಯಕ್ಷೆಯಾಗಿದ್ದ ಕೆ.ಎಂ.ಚಂದ್ರಮತಿ ಹಾಗೂ ಉಪಾಧ್ಯಕ್ಷರಾಗಿದ್ದ ಹುಚ್ಚೇಗೌಡ ಅವರುಗಳು ಕೇವಲ 10ತಿಂಗಳು ಕಾಲ ಮಾತ್ರವೇ ಅಧಿಕಾರದಲ್ಲಿದ್ದು, ದಿಢೀರನೆ ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನವನ್ನು ಬದಲಾಯಿಸಲಾಗಿದೆ ಎಂದು ಹೇಳಲಾಗುತ್ತಿದ್ದರೂ, ಶಾಸಕ ಎಚ್.ಡಿ.ರೇವಣ್ಣ ನಿರ್ದೇಶನದ ಮೇರೆಗೆ ಈ ಬದಲಾವಣೆ ನಡೆದಿದೆ ಎಂದು ಹೇಳಲಾಗುತ್ತಿದೆ.
  ತಾಲೂಕು ಪಂಚಾಯ್ತಿ ಮೊದಲ ಹತ್ತು ತಿಂಗಳ ಅವಧಿಯಲ್ಲಿಯೇ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಗಳನ್ನು ಬದಲಾಯಿಸಿರುವುದನ್ನು ಕಂಡಾಗ ಮುಂದಿನ ಅವಧಿಯೊಳಗೆ ಇನ್ನೂ ಮೂರು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಗಳು ಬದಲಾವಣೆ ಕಾಣುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
 ನೂತನ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ವೇಳೆ ಮಾಧ್ಯಮದವರಿಗೆ ಮಾಹಿತಿ ನೀಡದಿರುವ ಕುರಿತಂತೆ ಶಾಸಕ ಎಚ್.ಡಿ.ರೇವಣ್ಣ ಹಾಗೂ ಸದಸ್ಯರುಗಳು ತಾ.ಪಂ ಕಾರ್ಯನಿರ್ವಾಹಣಾಧಿಕಾರಿ ತಮ್ಮಣ್ಣಗೌಡ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ಚುನಾವಣಾಧಿಕಾರಿಗಳಾಗಿದ್ದ ಉಪ-ವಿಭಾಗಾಧಿಕಾರಿ ಜಗದೀಶ್ ತಾಪಂ ಕಾರ್ಯ ನಿರ್ವಹಣಾಧಿಕಾರಿ  ಅವರನ್ನು ತರಾಟೆಗೆ ತೆಗೆದುಕೊಂಡು ಬುದ್ದಿ ಹೇಳಿದ ಘಟನೆ ಕೂಡ ನಡೆಯಿತು.
 ಸದಸ್ಯ  ಡಿ.ಕೃಷ್ಣಪ್ಪ, ಕೆ.ಕೆ.ಲೋಕೇಶ್, ಸಿ.ಆರ್.ಮಂಜುನಾಥ್, ತಾ.ಪಂ ಇಓ ತಮ್ಮಣ್ಣಗೌಡ, ಭಾಗ್ಯವತಿ, ಗೀತಮ್ಮ, ಭಾಗ್ಯಮ್ಮ, ಎ.ಪಿ.ಲತ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.