ಹಾಸನ

ಕಾಫಿ, ಏಲಕ್ಕಿ, ಮೆಣಸು ರೈತರಿಗೆ ಪರಿಹಾರಕ್ಕೆ ಆಗ್ರಹ

Published On :

ಸಕಲೇಶಪುರ: ತಾಲೂಕಿನಲ್ಲಿ ಅತಿವೃಷ್ಟಿಗೆ ಸಿಲುಕಿ ಹಾನಿಗೊಳಗಾಗಿರುವ ಕಾಫಿ, ಏಲಕ್ಕಿ, ಮೆಣಸು ಬೆಳೆಗಳಿಗೆ ಶೀಘ್ರ ಪರಿಹಾರ ನೀಡುವಂತೆ ತಾಲೂಕು ರೈತ ಸಂಘದ ಅಧ್ಯಕ್ಷ ಸಾ.ಸು ವಿಶ್ವನಾಥ್ ಆಗ್ರಹಿಸಿದರು. ಸುಮಾರು 5 ಸಾವಿರ ಹೆಕ್ಟೇರ್ ಬತ್ತದ ಬೆಳೆ ನಾಶವಾಗಿದ್ದು ಪರಿಹಾರ ನೀಡುವ ನಿಟ್ಟಿನಲ್ಲಿ ತಾಲೂಕು ಆಡಳಿತ ನಷ್ಟಕ್ಕೀಡಾಗಿರುವ ರೈತರಿಂದ ಪರಿಹಾರದ ಅರ್ಜಿ ಸ್ವೀಕರಿಸುತ್ತಿದೆ. ಆದರೆ ಈಗ ಹೆಕ್ಟೇರ್‌ಗೆ 8 ಸಾವಿರ ಪರಿಹಾರ ನೀಡಲಾಗುತ್ತಿದ್ದು ಹೆಕ್ಟೇರ್‌ಗೆ ಕನಿಷ್ಠ 25 ಸಾವಿರ ರು. ನೀಡಬೇಕು. ಅಲ್ಲದೆ ತೋಟದ ಬೆಳೆಗಳಾದ ಏಲಕ್ಕಿ ಹಾಗೂ ಕಾಫಿ ಮತ್ತು ಮೆಣಸಿನ ಬಳ್ಳಿಗಳು ಅತಿವೃಷ್ಟಿಗೆ ಸಿಲುಕಿ ನಾಶವಾಗಿದ್ದು, ಈ ಬೆಳೆಗಳಿಗೆ ಪರಿಹಾರ ನೀಡುವಲ್ಲಿ ಇದುವರೆಗೆ ಸರ್ಕಾರದಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಆದ್ದರಿಂದ ಶೀಘ್ರವೇ ತಾಲೂಕಿಗೆ ಉನ್ನತಮಟ್ಟದ ಅಧಿಕಾರಿಗಳ ತಂಡವನ್ನು ಕಳುಹಿಸುವ ಮೂಲಕ ಅತಿವೃಷ್ಟಿಗೆ ಸಿಲುಕಿ ನಾಶವಾಗಿರುವ ತೋಟದ ಬೆಳೆಗಳ ಸಮೀಕ್ಷೆ ನಡೆಸುವ ಮೂಲಕ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ
ಹಾಸನ: ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ ಆ.25 ರಂದು ಬೆಳಗ್ಗೆ 11ಕ್ಕೆ ಜಿಲ್ಲಾಧಿಕಾರಿ ಹಾಗೂ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷ ವಿ.ಅನ್ಬುಕುಮಾರ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಹಾಗೂ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಆರ್.ಡಿ.ಅಲ್ಮೇಡ ತಿಳಿಸಿದ್ದಾರೆ.

ಬ್ರಹ್ಮಕುಮಾರಿ ಸಮಾಜದಲ್ಲಿ ರಕ್ಷಾ ಬಂಧನ
ಹಾಸನ: ರಕ್ಷಾ ಬಂಧನದ ಅಂಗವಾಗಿ ನಗರದ ರಂಗೋಲಿ ಹಳ್ಳದ ಬಳಿ ಇರುವ ಬ್ರಹ್ಮಕುಮಾರಿ ಸಮಾಜದಲ್ಲಿ ಅಕ್ಕಂದಿರು ನಿರ್ಮಿಸಿರುವ ಬೃಹತ್ ಗಾತ್ರದ ರಕ್ಷಾ ಬಂಧನ ಚಿಹ್ನೆ ನೋಡುಗರ ಮನ ಸೆಳೆಯಿತು.  ಮಂಗಳವಾರ ಸಂಜೆ ಏರ್ಪಡಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ನೂರಾರು ಜನ ಪಾಲ್ಗೊಂಡಿದ್ದರು.

ವೀರಶೈವ ಸಂಘದಿಂದ ಶ್ರಾವಣ ಮಾಸಾಚರಣೆ
ಕನ್ನಡಪ್ರಭ ವಾರ್ತೆ , ಹಾಸನ , ಆ.21
ನಗರದ ಅರಳೇಪೇಟೆ ರಸ್ತೆಯಲ್ಲಿರುವ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ವೀರಶೈವ ಸಂಘದ ವತಿಯಿಂದ 2ನೇ ಶ್ರಾವಣ ಮಾಸಾಚರಣೆ ಕಾರ್ಯಕ್ರಮವನ್ನು ಇತ್ತೀಚೆಗೆ ಏರ್ಪಡಿಸಲಾಗಿತ್ತು. ತೆಂಕಲಗೂಡು ಮಠದ ಚನ್ನಮಲ್ಲಿಕಾರ್ಜುನ ಮಹಾಸ್ವಾಮಿ ಮಾತನಾಡಿ, ಧರ್ಮ ಮತ್ತು ಸಂಸ್ಕೃತಿಯನ್ನು ಉಳಿಸಲು ನಾವುಗಳೆಲ್ಲ ಆದ್ಯತೆ ನೀಡಬೇಕು. ಹಿಂದೂ ಧರ್ಮದಲ್ಲಿ ದೇವರ ಪೂಜೆ, ಆರಾಧನೆ, ಧರ್ಮ ಮತ್ತು ಸಂಸ್ಕೃತಿ ಪುರಾತನ ಕಾಲಂದಿಂದಲೂ ನಡೆದು ಬಂದಿದೆ. ಇಂದು ನಮ್ಮ ಸಂಸ್ಕೃತಿ ಹಾಗೂ ಧರ್ಮ ಉಳಿಸಲು ನಾವೆಲ್ಲಾ ಭಾಗಿಯಾಗಬೇಕೆಂದು ಸಲಹೆ ನೀಡಿದರು.  ಕಾರ್ಯಕ್ರಮದಲ್ಲಿ ಶಿಕ್ಷಕರು ಶಾಂತ ಅತ್ನಿ, ಬೇಲೂರು ರೇಣುಕಾ ಎಸ್ಟೇಟ್ ಟ್ರಸ್ಟ್ ಉಪಾಧ್ಯಕ್ಷ ಎಂ.ಎಸ್. ಪರಮಶಿವಪ್ಪ, ವೀರಶೈವ ಸಂಘದ ಅಧ್ಯಕ್ಷ  ಬಿ.ಪಿ. ಐಸಾಮಿಗೌಡ ಅಧ್ಯಕ್ಷತೆ ವಹಿಸಿದ್ದರು.  ಪತ್ರಕರ್ತ ಬಿ.ಆರ್. ಉದಯಕುಮಾರ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯದರ್ಶಿ ಬಿ.ಎಂ. ಭುವನಾಕ್ಷ, ವಿಶ್ವಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಕಟ್ಟಾಯ ಶಿವಕುಮಾರ್, ವೀರಶೈವ ಸಂಘದ ನಿರ್ದೇಶಕರಾದ ಕೀರ್ತಿಕುಮಾರ್ ಹಾಗೂ ಮಾಜಿ ನಗರಸಭೆ ಸದಸ್ಯೆ ಅನ್ನಪೂರ್ಣಮ್ಮ, ಹೆಚ್. ಮಲ್ಲಿಕ್ ಇತರರು ಇದ್ದರು. ಅನಿತಾ  ಪ್ರಾರ್ಥಿಸಿದರು.

ಮಳೆ ಪುನರಾಗಮನ ಹೇಮಾವತಿಗೆ ಹೆಚ್ಚಿದ ಒಳ ಹರಿವು
ಹಾಸನ: ಹಲವು ದಿನಗಳಿಂದ ಬಿಡುವು ನೀಡಿದ್ದ ಮಳೆರಾಯ ಬುಧವಾರ ಮತ್ತೆ ಆರಂಭವಾಗಿದೆ. ಮಧ್ಯಾಹ್ನ 3 ರ ನಂತರ ಜಿಲ್ಯಾದ್ಯಂತ ಮಳೆ ಬಿರುಸುಗೊಂಡಿದ್ದು, ಹೇಮಾವತಿ ಜಲಾಶಯದ ಒಳಹರಿವು ಹೆಚ್ಚಿದೆ. ಈಗ ಜಲಾಶಯಕ್ಕೆ 7853 ಕ್ಯುಸೆಕ್ ಹರಿದು ಬರುತ್ತಿದ್ದರೆ, 11,650 ಕ್ಯುಸೆಕ್ ಹೊರ ಬಿಡಲಾಗುತ್ತಿದೆ. ಇಂದಿನ ಮಟ್ಟ- 2921.95. ಗರಿಷ್ಠ ಮಟ್ಟ 2922 ಅಡಿಗಳು. ಜಲಾಶಯದಲ್ಲಿ ಈಗ 35 ಟಿಎಂಸಿ ನೀರು ಸಂಗ್ರಹವಾಗಿದೆ. ಸಂಗ್ರಹ ಸಾಮರ್ಥ್ಯ 37.107 ಟಿಎಂಸಿ. ಸಕಲೇಶಪುರ, ಬೇಲೂರು, ಆಲೂರು, ಅರಕಲಗೂಡು ಮತ್ತು ಹಾಸನ ತಾಲೂಕುಗಳಲ್ಲಿ ಮಳೆ ಆರಂಭವಾಗಿದ್ದರೆ, ಹಿಂದಿನಂತೆ ಈಗಲೂ ಚನ್ನರಾಯಪಟ್ಟಣ, ಅರಸೀಕೆರೆ ತಾಲೂಕುಗಳಲ್ಲಿ ಮಳೆರಾಯ ಕೃಪೆ ತೋರುತ್ತಿಲ್ಲ. ಅರಸೀಕೆರೆಯ ಬೃಹತ್ ಕೆರೆಗಳು ಎಂದಿನಂತೆ ಭಣಗುಡುತ್ತಿವೆ.

ಪಶು ವೈದ್ಯ ಕಾಲೇಜುಮಾನ್ಯತೆ ಸುಳ್ಳು ಹೇಳಿಕೆ
ಹಾಸನ: ಪಶು ವೈದ್ಯ ಕಾಲೇಜುಗಳಿಗೆ ಮಾನ್ಯತೆ ಎಂಬ ಸುಳ್ಳು ಹೇಳಿಕೆಗಳನ್ನು ನಿಲ್ಲಿಸಿ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು ಎಂದು ಸಮಾಜ ಸೇವಾಕರ್ತ ಬೇಂದ್ರೆ ಮಂಜುನಾಥ್ ಒತ್ತಾಯಿಸಿದ್ದಾರೆ. ಆಗಸ್ಟ್ 8 ರಂದು ಪಶುಸಂಗೋಪನಾ ಇಲಾಖೆಯ ಸಚಿವರು ನೀಡಿದ ಹೇಳಿಕೆಯ ಅನ್ವಯ ರಾಜ್ಯದ ಬೀದರ್, ಹಾಸನ, ಶಿವಮೊಗ್ಗ ಪಶುವೈದ್ಯಕೀಯ ಕಾಲೇಜುಗಳಿಗೆ ಸಾಮಾನ್ಯ ಸಿ.ಇ.ಟಿ. ಮೂಲಕ ಪಶುವೈದ್ಯ ಕೋರ್ಸ್‌ಗೆ ಈ ವರ್ಷ ದಾಖಲಾತಿ ನಡೆಸಲು ಭಾರತೀಯ ಪಶುವೈದ್ಯ ಪರಿಷತ್ತು ಶಿಫಾರಸು ಮಾಡಿದೆಯಂತೆ. ಆದರೆ  ಇದನ್ನೇ ನಂಬಿ ರಾಜ್ಯ ಪರೀಕ್ಷಾ ಪ್ರಾಧಿಕಾರದ ಕಚೇರಿ ಮತ್ತು ಸಿ.ಇ.ಟಿ. ವೆಬ್‌ಸೈಟ್ ಸಂಪರ್ಕಿಸಿದರೆ ಪಶುವೈದ್ಯಕೀಯ ಕುರಿತಂತೆ ಯಾವುದೇ ದೊರೆಯುತ್ತಿಲ್ಲ ಎಂದು ಅವರು ಖಂಡಿಸಿದ್ದಾರೆ.  ಅವರಿಗೆ ಮಾನ್ಯತೆ ಕುರಿತ ಪತ್ರ ಇನ್ನೂ ಬಂದೇ ಇಲ್ಲ. ಕ್ಯಾಷುಅಲ್ ರೌಂಡ್ ಕೌನ್ಸೆಲಿಂಗ್ ಮುಗಿಯುತ್ತಾ ಬಂದರೂ ಪಶುವೈದ್ಯಕೀಯ ಕೋರ್ಸ್‌ನ 180 ಸೀಟುಗಳಿಗೆ ದಾಖಲಾತಿ ಇಲ್ಲದೆ ಈ ವರ್ಷ ಬಾಗಿಲು ಮುಚ್ಚುವ ಸಾಧ್ಯತೆಯೇ ಕಾಣುತ್ತಿದೆ. ರಾಜ್ಯ ಸರ್ಕಾರದ ಪಶುವೈದ್ಯಕೀಯ ಮತ್ತು ಪಶುಸಂಗೋಪನಾ ಖಾತೆ ಪಶುವೈದ್ಯ ಕಾಲೇಜುಗಳಿಗೆ ಸೂಕ್ತ ಮೂಲಸೌಕರ್ಯ ಒದಗಿಸುತ್ತದೆ ಎಂಬ ಭರವಸೆ ಹಾಗು ಕಾನೂನು ಇಲಾಖೆಯ ಒಪ್ಪಿಗೆಯನ್ನು ಪಶುವೈದ್ಯ ಪರಿಷತ್ತಿಗೆ ಸಲ್ಲಿಸಬೇಕು. ಅಂತಹ ಒಪ್ಪಿಗೆ ಪತ್ರವನ್ನು ಕಳಿಸದೇ ಕೇವಲ  ಹೇಳಿಕೆ ನೀಡಿ ಕೈತೊಳೆದುಕೊಂಡರೆ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯ ತಪ್ಪಿಸುವವರು ಯಾರು ಎಂದು ಪ್ರಶ್ನಿಸಿರುವ ಅವರು, ಇನ್ನಾದರೂ ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಬೇಕು ಎಂದು ತಿಳಿಸಿದ್ದಾರೆ.

ಶುಲ್ಕ ವಾಪಸ್ಸಿಗೆ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಮನವಿ
ಹಾಸನ: ಕಾಲೇಜಿಗೆ ಪಾವತಿಸಿರುವ ಶುಲ್ಕವನ್ನು ಹಿಂತಿರುಗಿಸಬೇಕೆಂದು ಆಗ್ರಹಿಸಿ ನಗರದ ಮಲೆನಾಡು ಎಂಜಿನಿಯರಿಂಗ್ ಾ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್‌ಗೆ ಮನವಿ ನೀಡಿದರು.
ವಿದ್ಯಾರ್ಥಿಗಳು ಕಾಲೇಜಿಗೆ ಸೇರುವ ಸಂದರ್ಭದಲ್ಲಿ ಸರ್ಕಾರದ ಮುಂಗಡ ಹಣ ಸೇರಿ ಒಟ್ಟು 54,350 ರು.ಗಳನ್ನು ಪಾವತಿಸಲಾಗಿದ್ದು, ವಿದ್ಯಾರ್ಥಿಗಳ ಅರ್ಜಿಯನ್ನು ಸರ್ಕಾರಕ್ಕೆ ರವಾನಿಸುವುದು ತಡ ಮಾಡಿರುವುದರಿಂದ ವಾಪಸ್ ಬರಬೇಕಾದ 35 ಸಾವಿರ ರು.ಹಣ ಇದುವರೆಗೂ ಬಂದಿಲ್ಲ ಎಂದು ಆರೋಪಿಸಿದರು. ಈಗಾಗಲೇ ಇತರೆ ಜಿಲ್ಲೆಯ ನಾನಾ ಕಾಲೇಜಿನ ವಿದ್ಯಾರ್ಥಿಗಳಿಗೆ ಹಿಂದಿರುಗಿಸಬೇಕಾದ ಹಣ ಫ್ರೆಬ್ರವರಿ ನಲ್ಲಿಯೇ ವಾಪಸ್ ನೀಡಲಾಗಿದೆ. ವಿದ್ಯಾರ್ಥಿಗಳು ಬ್ಯಾಂಕ್‌ನಲ್ಲಿ ಸಾಲ ಮಾಡಿ ವಿದ್ಯಾಭ್ಯಾಸ ಮಾಡುತ್ತಿದ್ದೇವೆ. ಸರಿಯಾದ ಸಮಯಕ್ಕೆ ಹಣ ಬರದ ಕಾರಣ ಸಂಕಷ್ಟದಲ್ಲಿ ಸಿಲುಕಿದ್ದೇವೆ ಎಂದು ಅಳಲು ತೋಡಿಕೊಂಡರು.
ಆದ್ದರಿಂದ ಕೂಡಲೇ ನಮಗೆ ಬರಬೇಕಾದ ಹಣವನ್ನು ಕೊಡಿಸುವಂತೆ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗೆ ಮನವಿ ನೀಡಿದರು.

'ದೇಶೀ ಪರಂಪರೆಗೆ ಸಂಸ್ಕೃತದ ಮಹತ್ವದ ಕೊಡುಗೆ'
ಅರಕಲಗೂಡು: ಸಂಸ್ಕೃತ ಭಾಷೆ ದೇಶೀಯ ಪರಂಪರೆಗೆ ಮಹತ್ವದ ಕೊಡುಗೆ ನೀಡಿದ್ದು ಅದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಯೋಜನೆಗಳು ಆಗಬೇಕಿದೆ ಎಂದು ದೊಡ್ಡಮ್ಮ ಸೇವಾ ಸಮಿತಿ ಅಧ್ಯಕ್ಷ ಎ.ಎಸ್. ರಾಮಸ್ವಾಮಿ ಹೇಳಿದರು.
ಪಟ್ಟಣದಲ್ಲಿ ಏರ್ಪಡಿಸಿದ್ದ ಸಂಸ್ಕೃತಸಂಭಾಷಣಾ ಶಿಬಿರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ಸಂಸ್ಕೃತ ದೇಶೀಯ ಭಾಷೆಯ ಬೆಳವಣಿಗೆಗೆ ಮಹತ್ತರ ಕೊಡುಗೆಗಳನ್ನು ನೀಡಿದೆ. ಸ್ವಚ್ಛ ಮತ್ತು ಸ್ಪಷ್ಟ ಉಚ್ಛಾರಕ್ಕೆ ಸಂಸ್ಕೃತ ಸಹಾಯ ಮಾಡುತ್ತದೆ. ಆದ್ದರಿಂದ ಈ ಭಾಷೆ ಎಲ್ಲರೂ ಕಲಿಯಬೇಕು ಎಂದರು. ಮುಖ್ಯ ಅತಿಥಿ ಇಂದ್ರಾಣಿ ಮಾತನಾಡಿ ಸಂಸ್ಕೃತ ಕಲಿಯಲು ಜಾತಿ, ಮತ, ಬೇಧಗಳೆಂಬ ಅಂತರವಿಲ್ಲ, ಮುಕ್ತವಾಗಿ ಇದನ್ನು ಕಲಿಯಲು ಅವಕಾಶವಿದ್ದು, ಶಿಬಿರದ ಸದ್ಭಳಕೆ ಮಾಡಿಕೊಳ್ಳಿ ಎಂದರು.
ಪಟ್ಟಣ ಪಂಚಾಯ್ತಿ ಸದಸ್ಯ ರಮೇಶ್ ವಾಟಾಳ್, ಪತ್ರಕರ್ತ ದೇವಕಿ ಚಂದ್ರಶೇಖರ್, ಮುಖಂಡ ಶ್ರೀನಿವಾಸ್, ಸುಧೀರ್, ನಳಿನಿ ಕಣ್ಣನ್, ಮುಖ್ಯೋಪಾಧ್ಯಾಯ ಉಮಾಶಂಕರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.