ಮೈಕ್ರೋ ಇನ್ಸೂರೆನ್ಸ್ನಿಂದ ಮಹಾಮೋಸ
ಕ.ಪ್ರ.ವಾರ್ತೆ , ಹಾಸನ , ಆ. 21
ಜೀವ ವಿಮಾ ನಿಗಮ (ಎಲ್ಐಸಿ) ಸಹಭಾಗಿತ್ವದ ಮೈಕ್ರೋ ಇನ್ಸೂರೆನ್ಸ್ ಕಂಪನಿಯ ಸಮನ್ವಯ ಹೆಲ್ತ್ ಎಜುಕೇಷನ್ ಆಂಡ್ ರೂರಲ್ ಡೆವಲಪ್ಮೆಂಟ್ ಸಂಸ್ಥೆಯಿಂದ ಹಣ ವಂಚನೆಯಾಗಿದೆ ಎಂದು ಆರೋಪಿಸಿ ವಂಚನೆಗೊಂಡ ಮಹಿಳಾ ಏಜೆಂಟರ್ಗಳು ಬುಧವಾರ ಜಿಪಂ ಮಾಜಿ ಅಧ್ಯಕ್ಷೆ ಮಹಾದೇವಮ್ಮ ಮತ್ತು ಶ್ರೀರಾಮಸೇನೆಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕೆಲಸಮಯ ಧರಣಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ಸಮನ್ವಯ ಹೆಲ್ತ್ ಎಜುಕೇಷನ್ ಆಂಡ್ ರೂರಲ್ ಡೆವಲಪ್ಮೆಂಟ್ ಸಂಸ್ಥೆ ಚನ್ನರಾಯಪಟ್ಟಣ, ಹೊಳೆನರಸೀಪುರ, ಹಾಸನ, ಮಂಡ್ಯ, ಕೃಷ್ಣರಾಜಪೇಟೆ, ಬೇಲೂರು, ಸಕಲೇಶಪುರ, ನಾಗಮಂಗಲ, ಮಳವಳ್ಳಿ, ತುರುವೇಕೆರೆ, ಶ್ರೀರಂಗಪಟ್ಟಣ ಹಾಗೂ ರಾಜ್ಯ ನಾನಾ ಭಾಗಗಳಲ್ಲಿ ಈ ಎನ್ಜಿಓ ಸಂಸ್ಥೆ ಬೇರೆ ಬೇರೆ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕೋಟ್ಯಂತರ ರು.ಹಣವನ್ನು ವಂಚನೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೈಕ್ರೋ ಇನ್ಸೂರೆನ್ಸ್ನ ಪಾಲಿಸಿದಾರರು ನೇರವಾಗಿ ಹಾಸನದ ಕಚೇರಿಗೆ ಬಂದು ಎನ್ಜಿಓ ಸಂಸ್ಥೆ ವಂಚನೆ ಮಾಡುತ್ತಿರುವ ಬಗ್ಗೆ ದೂರನ್ನು ನೀಡಲಾಗಿತ್ತು. ಈ ಬಗ್ಗೆ ಮೈಸೂರಿನ ಎಲ್ಐಸಿ ಕಚೇರಿ ಹಾಗೂ ಬೆಂಗಳೂರಿಗೂ ತೆರಳಿ ವಿಚಾರಿಸಿದರೂ ಈ ಬಗ್ಗೆ ಯಾವುದೇ ನ್ಯಾಯ ದೊರೆಯಲಿಲ್ಲ. ಎನ್ಜಿಓ ಸಂಸ್ಥೆಯಾದ ಬಾಳಿಗೊಂದು ಗುರಿ ರೂರಲ್ ಡೆವಲಪ್ಮೆಂಟ್ ಸೊಸೈಟಿಯ ಚನ್ನರಾಯಪಟ್ಟಣ ಶಾಖೆಯಲ್ಲಿ ಪರಿಶೀಲನೆ ನಡೆಸಿದಾಗ ಪಾಲಿಸಿದಾರರಿಗೆ ಮೋಸ ಮಾಡುತ್ತಿರುವುದು ಬೆಳಕಿಗೆ ಬಂದಿದೆ ಎಂದು ಆರೋಪಿಸಿದರು.
ಇದರಿಂದ ಈ ಕಚೇರಿಗೆ ಬೀಗ ಜಡಿದು ಚನ್ನರಾಯಪಟ್ಟಣ ಪೊಲೀಸ್ ಠಾಣೆಗೆ ದೂರನ್ನು ನೀಡಿ ಬೀಗವನ್ನು ಒಪ್ಪಿಸಲಾಗಿತ್ತು. ಆದೇ ರೀತಿ ಬೇಲೂರಿನ ಕಚೇರಿಯಲ್ಲಿ ಇದ್ದಂತಹ ಕಂಪ್ಯೂಟರ್, ಟೇಬಲ್ ಹಾಗೂ ಇತರೆ ದಾಖಲೆಗಳನ್ನು ಸಂಸ್ಥೆಯವರು ಲಾರಿಗೆ ತುಂಬಿಸುತ್ತಿದ್ದಾಗ ಅಲ್ಲಿಗೂ ದಾಳಿ ನಡೆಸಿ ಲಾರಿ ಸಮೇತ ಪೊಲೀಸರಿಗೆ ಒಪ್ಪಿಸಲಾಗಿತ್ತು. ಈ ಬಗ್ಗೆ ಮುಖ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರನ್ನು ನೀಡಿಲಾಯಿತು. ಈ ಮೇರೆಗೆ ಎನ್ಜಿಓ ಅಧಿಕಾರಿಗಳನ್ನು ಪೊಲೀಸರು ಬಂಧಿಸಿದರು. ನಂತರ ನಾವು ಮೈಸೂರಿನ ಕಚೇರಿಗೆ ಹೋಗಿ ಪಾಸ್ಬುಕ್ನಲ್ಲಿ ಪಾವತಿಯಾಗಿರುವ ಹಣವನ್ನು ವಾಪಸ್ ನೀಡುವಂತೆ ಪ್ರತಿಭಟನೆ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.
ಹಲವರಿಂದ ಲಕ್ಷಾಂತರ ರು. ಪಾಲಿಸಿ: 2008ರಿಂದ 2013ರವರೆಗೆ ಪಾಲಿಸಿದಾರರು ಪಾವತಿಸಿರುವಂತಹ ಹಣವನ್ನು ವಾಪಸ್ ನೀಡಬೇಕು ಎಂದು ಒತ್ತಾಯಿಸಲಾಗಿದೆ. ಏಜೆಂಟರ್ಗಳಾದ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಮಹಾದೇವಮ್ಮ ಅವರು 53 ಪಾಲಿಸಿಗಳನ್ನು ಮಾಡಿಸಿದ್ದು, ಸುಮಾರು 2 ಲಕ್ಷ ರು. ಹಣ ಪಾವತಿಸಿದ್ದಾರೆ. ರತ್ನ 40 ಪಾಲಿಸಿಗಳಿಂದ ಸುಮಾರು 2 ಲಕ್ಷ ರು., ರೇಣುಕಾ 90 ಪಾಲಿಸಿಗಳಿಂದ ಸುಮಾರು 4.5 ಲಕ್ಷ ರು., ಅನ್ನಪೂರ್ಣ 200 ಪಾಲಿಸಿಗಳಿಂದ ಸುಮಾರು 16 ಲಕ್ಷ ರು., ಸುಂದರಮ್ಮ 20 ಪಾಲಿಸಿಗಳಿಂದ ಸುಮಾರು 1.5 ಲಕ್ಷ ರು., ಚಂದ್ರಮ್ಮರ 60 ಪಾಲಿಸಿಗಳಿಂದ 3 ಲಕ್ಷ ರು. ವೀಣಾರ 40 ಪಾಲಿಸಿಗಳಿಂದ 3 ಲಕ್ಷ ರು., ಕಮಲಮ್ಮರ 56 ಪಾಲಿಸಿಗಳಿಂದ 1 ಲಕ್ಷ ರು., ಗೀತರ 20 ಪಾಲಿಸಿಗಳಿಂದ 1 ಲಕ್ಷ ರು., ಗೌರಮ್ಮರ 180 ಪಾಲಿಸಿಗಳಿಂದ 12 ಲಕ್ಷ ರು., ಚಯಲಕ್ಷ್ಮಿ 280 ಪಾಲಿಸಿಗಳಿಂದ ಸುಮಾರು 11.5 ಲಕ್ಷ ರು., ಕಮಲಮ್ಮರ 77 ಪಾಲಿಸಿಗಳಿಂದ ಸುಮಾರು 7.5 ಲಕ್ಷ ರು., ಮಲ್ಲಮ್ಮರ 25 ಪಾಲಿಸಿಗಳಿಗಿಂದ ಸುಮಾರು 1.5 ಲಕ್ಷ ರು., ನಾಗರತ್ನರ 250 ಪಾಲಿಸಿಗಳಿಂದ ಸುಮಾರು 10 ಲಕ್ಷ ರು.ಹಣವನ್ನು ಬಾಳಿಗೊಂದು ಗುರಿ ರೂರಲ್ ಡೆವಲಪ್ಮೆಂಟ್ ಸೊಸೈಟಿಗೆ ಪಾವತಿಸಿದ್ದರು.
ಆದರೆ ಈ ಸಂಸ್ಥೆಯು ಸಂಪೂರ್ಣವಾಗಿ ಮುಚ್ಚಿ ಹೋಗಿದ್ದು, ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಚಿದಾನಂದ್, ಸಂತೋಷ್, ಗೋಪಿನಾಥ್, ಮೋಹನ್, ಮಮತ, ರೋಹಿತ್ ಎಂಬವರು ನಾಪತ್ತೆಯಾಗಿದ್ದಾರೆ. ಆದ್ದರಿಂದ ಕೂಡಲೇ ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಪಟ್ಟು ಹಿಡಿದರು.
ಎಲ್ಐಸಿ ಸಂಸ್ಥೆಯು 12 ತಿಂಗಳ ಹಣವನ್ನು ಪಾವತಿಸುವ ಬಗ್ಗೆ ಪತ್ರಿಕೆಗಳಲ್ಲಿ ಹೇಳಿಕೆಯನ್ನು ನೀಡಿದ್ದರು. ಆದರೆ ಈ ಬಗ್ಗೆ ಪಾಲಿಸಿದಾರರೊಂದಿಗೆ ಯಾವುದೇ ರೀತಿಯ ಪತ್ರ ವ್ಯವಹಾರವನ್ನು ನಡೆಸಿಲ್ಲ. ಆದ್ದರಿಂದ ಕೂಡಲೇ ಈ ಬಗ್ಗೆ ಜಿಲ್ಲಾಡಳಿತ ಮುತುವರ್ಜಿ ವಹಿಸಿ ನ್ಯಾಯ ದೊರಕಿಸಿಕೊಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ಮೋಸ ಹೋದ ಏಜೆಂಟರ್ಗಳಾದ ಜಿಲ್ಲಾ ಪಂಚಾಯತ್ತಿ ಮಾಜಿ ಅಧ್ಯಕ್ಷೆ ಮಹಾದೇವಮ್ಮ, ರತ್ನ, ರೇಣುಕಾ, ಅನ್ನಪೂರ್ಣ, ಸುಂದರಮ್ಮ, ಚಂದ್ರಮ್ಮ, ವೀಣಾ, ಕಮಲಮ್ಮ, ಗೀತ, ಗೌರಮ್ಮ, ಜಯಲಕ್ಷ್ಮಿ, ಕಮಲಮ್ಮ, ಮಲ್ಲಮ್ಮ, ನಾಗರತ್ನ, ಶ್ರೀರಾಮಸೇನೆಯ ಜಿಲ್ಲಾಧ್ಯಕ್ಷ ಹೇಮಂತ್ ಹಾಗೂ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

