ಮೀನುಗಾರರ ಶವಪತ್ತೆ, ಗುತ್ತಿಗೆದಾರರ ವಿರುದ್ಧ ಆಕ್ರೋಶ
ಕ.ಪ್ರ.ವಾರ್ತೆ , ಹಾಸನ , ಆ.23
ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ ಗುರುವಾರ ಮೀನು ಹಿಡಿಯಲು ಹೋಗಿ ಸಾವನ್ನಪ್ಪಿದ ಮೂವರು ಮೀನುಗಾರರ ಮೃತ ದೇಹ ಶುಕ್ರವಾರ ಪತ್ತೆಯಾಗಿದೆ. ಈ ದುರಂತಕ್ಕೆ ಮೀನು ಹಿಡಿಯಲು ಗುತ್ತಿಗೆ ಪಡೆದ
ಗುತ್ತಿಗೆಗಾರರು ಸೂಕ್ತ ರಕ್ಷಣೆ ವಸ್ತುಗಳನ್ನು ನೀಡದಿದ್ದುದೇ ಈ ದುರಂತಕ್ಕೆ ಪ್ರಮುಖ ಕಾರಣ ಎಂದು ಮೃತ ಕುಟುಂಬ ಸದಸ್ಯರು ತೀವ್ರ ವಾಗ್ದಾಳಿ ನಡೆಸಿದರು. ಈ ಸಂದರ್ಭದಲ್ಲಿ ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಧ್ಯ ಪ್ರವೇಶಿಸಿದ ಸ್ಥಳೀಯ ಶಾಸಕ ಎಚ್.ಕೆ. ಕುಮಾರಸ್ವಾಮಿ ಅವರು, ಮೃತ ಕುಟುಂಬ ಸದಸ್ಯರನ್ನು ಸಮಾಧಾನಪಡಿಸಿದ ನಂತರ ಪರಿಸ್ಥಿತಿ ತಿಳಿಯಾಯಿತು.
ತಾಲೂಕಿನ ಕಟ್ಟಾಯ ಹೋಬಳಿಯ ಚೌಡಹಳ್ಳಿ ಗ್ರಾಮದ ಹರೀಶ್ (27), ತ್ರಿವೇಣು (32) ಮತ್ತು ಶಂಕರ್ಕುಮಾರ್ (26) ಎಂಬುವರು ಘಟನೆಯಲ್ಲಿ ಸಾವನ್ನಪ್ಪಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಈಜು ಪರಿಣಿತರು ಮೃತರ ಶವ ಪತ್ತೆಯಾಗಿ ತೀವ್ರ ಶೋಧ ಕಾರ್ಯವನ್ನು ನಡೆಸಿ, ನಂತರ ಮೂವರು ಮೀನುಗಾರರ ಮೃತದೇಹ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು.
ಘಟನೆ ವಿವರ: ಹರೀಶ್, ತ್ರೀವೇಣು ಮತ್ತು ಶಂಕರ್ಕುಮಾರ್ ಅವರು ಎಂದಿನಂತೆ ಸೂರ್ಯ ಮುಳುಗುವ ವೇಳೆ ಮೀನು ಹಿಡಿಯಲು ಹೇಮಾವತಿ ಜಲಾಶಯದಲ್ಲಿ ಬಲೆ ಬೀಸುತ್ತಿದ್ದಾಗ ಜೋರಾಗಿ ಗಾಳಿ ಬೀಳಿದ ಪರಿಣಾಮ ಬಿದಿರಿನಿಂದ ಮಾಡಿದ್ದ ನಾಡ ದೋಣಿ (ತೆಪ್ಪ) ನಿಯಂತ್ರಣ ತಪ್ಪಿ ನೀರಿನಲ್ಲಿ ಮುಳುಗಿದೆ. ಈ ಸಂದರ್ಭದಲ್ಲಿ ಮೂವರು ಈಜಿ ದಡ ಸೇರಿ ಪ್ರಾಣ ಉಳಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ ನೀರು ಹೆಚ್ಚಾಗಿದ್ದ ಕಾರಣ ಈಜುವಲ್ಲಿ ವಿಫಲವಾಗಿ ಮೃತಪಟ್ಟಿದ್ದಾರೆ.
ಪ್ರತಿ ದಿನ ಸಂಜೆ ವೇಳೆ ಜಲಾಶಯದಲ್ಲಿ ಮೀನು ಹಿಡಿಯಲು ಮೀನುಗಾರರು ಬಲೆ ಬೀಸುತ್ತಾರೆ. ಮಾರನೇ ದಿನ ಮುಂಜಾನೆ ಬಲೆಗೆ ಬಿದ್ದಿರುವ ಮೀನುಗಳನ್ನು ಮಾರಾಟ ಮಾಡಲಾಗುತ್ತದೆ. ಅದೇ ರೀತಿ ಈ ಮೂವರು ಸಹ ಗುರುವಾರ ಸಂಜೆ ಜಲಾಶಯಕ್ಕೆ ತೆರಳಿ ದೋಣಿ ಮೂಲಕ ಬಲೆಯನ್ನು ಬೀಸುವ ಸಂದರ್ಭದಲ್ಲಿ ಗಾಳಿ ಹೆಚ್ಚಾಗಿ ನೀರಿನ ರಭಸ ಉಂಟಾಗಿದ್ದರಿಂದ ಈ ದುರ್ಘಟನೆ ಸಂಭವಿಸಿದೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು, ಅಗ್ನಿಶಾಮಕ ದಳದವರು ಜಲಾಶಯದ ಹಿನ್ನೀರಿನಲ್ಲಿ ಇಳಿದು ಮೃತ ದೇಹಗಳ ಪತ್ತೆ ಕಾರ್ಯ ಕೈಗೊಂಡರು. ರಾತ್ರಿಯಾಗಿದ್ದರಿಂದ ಮೃತದೇಹಗಳ ಶೋಧ ಕಾರ್ಯಕ್ಕೆ ಅಡಚಣೆ ಉಂಟಾಗಿದ್ದರಿಂದ ಶುಕ್ರವಾರ ಬೆಳಗ್ಗಿನಿಂದಲೇ ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ಈಜು ಪರಿಣಿತರು ಜಲಾಶಯಕ್ಕೆ ಇಳಿದು ಶವ ಪತ್ತೆಗೆ ಕಾರ್ಯಕ್ಕೆ ಮುಂದಾದರು.
ಅಗ್ನಿಶಾಮಕ ದಳದ ಸುಮಾರು ಏಳೆಂಟು ಮಂದಿ ಬೆಳಗ್ಗೆಯಿಂದಲೇ ಯಾಂತ್ರಿಕೃತ ದೋಣಿಯ ಮೂಲಕ ಶವಗಳ ಶೋಧ ಕಾರ್ಯ ಪ್ರಾರಂಭಿಸಿದರು. ಹಿನ್ನೀರು ಹೆಚ್ಚಾಗಿದ್ದರಿಂದ ಶೋಧಕಾರ್ಯಕ್ಕೆ ಅಡಚಣೆ ಉಂಟಾಗುತ್ತಿತ್ತು. ಸಿಬ್ಬಂದಿ ಇದಾವುದನ್ನು ಲೆಕ್ಕಿಸದೆ ಶವಗಳನ್ನು ಪತ್ತೆ ಹಚ್ಚಿ ಮೇಲಕ್ಕೆ ತೆಗೆಯುವಲ್ಲಿ ಯಶಸ್ವಿಯಾದರು. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್, ತಹಸೀಲ್ದಾರ್ ಮಂಜುನಾಥ್ ಇತರರು ಭೇಟಿ ನೀಡಿದ್ದರು.
ಮುಗಿಲು ಮುಟ್ಟಿದ ಆಕ್ರಂದನ: ದುರುಂತಕ್ಕೀಡಾದ ಹರೀಶ್, ತ್ರೀವೇಣು ಮತ್ತು ಶಂಕರ್ಕುಮಾರ್ ಶವ ಪತ್ತೆಯಾದ ಸಂದರ್ಭದಲ್ಲಿ ಜಲಾಶಯದ ಹಿನ್ನೀರಿನ ಬಳಿ ಜಮಾಯಿಸಿದ್ದ ಮೃತ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.
ಜಲಾಶಯದ ಹಿನ್ನೀರಿನಲ್ಲಿ ಮೀನು ಹಿಡಿಯಲು ಗುತ್ತಿಗೆ ಪಡೆದುಕೊಂಡ ಗುತ್ತಿಗೆದಾರ ನಂಜೇಗೌಡ ಜಲಾಶಯ ಗುತ್ತಿಗೆ ಪಡೆದು ಸುಮಾರು 30 ಲಕ್ಷ ಮೀನು ಮರಿಗಳನ್ನು ಜಲಾಶಯಕ್ಕೆ ಬಿಟ್ಟಿದ್ದಾನೆ. ಇಷ್ಟು ದೊಡ್ಡ ಜಲಾಶಯದಲ್ಲಿ ಮೀನು ಹಿಡಿಯುವವರಿಗೆ ರಕ್ಷಣಾ ಕವಚಗಳನ್ನು (ಲೈಫ್ ಜಾಕೆಟ್) ನೀಡದಿದ್ದುದೇ ಈ ದುರಂತಕ್ಕೆ ಕಾರಣವಾಗಿದೆ ಎಂದು ಮೃತರ ಕುಟುಂಬದವರು ಆರೋಪಿಸಿದರು.
ಮೀನುಗಾರರಿಗೆ ರಕ್ಷಾ ಕವಚಗಳನ್ನು ನೀಡದಿದ್ದುದು ದುರಂತಕ್ಕೆ ಕಾರಣ. ಮೀನು ಮಹಾಮಂಡಳಿಯವರು ಮೃತರ ಕುಟುಂಬಕ್ಕೆ ಕೂಡಲೇ ತಲಾ 5 ಲಕ್ಷ ರು. ಪರಿಹಾರ ನೀಡಬೇಕು. ಸರ್ಕಾರದಿಂದಲೂ ಪರಿಹಾರ ಕೊಡಿಸಲು ಕ್ರಮ ಕೈಗೊಳ್ಳಲಾಗುವುದು. ಮೀನು ಮಂಡಳಿ ತೆಗೆದು ಸ್ಥಳೀಯರಿಗೆ ಮೀನು ಹಿಡಿಯಲು ಅವಕಾಶ ಕಲ್ಪಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗುವುದು.
- ಎಚ್.ಕೆ.ಕುಮಾರಸ್ವಾಮಿ, ಶಾಸಕ
ಮೀನು ಹಿಡಿಯಲು ಗುತ್ತಿಗೆ ಪಡೆದವರು ಮೀನುಗಾರರಿಗೆ ಸೂಕ್ತ ರಕ್ಷಾ ಕವಚಗಳನ್ನು ನೀಡಿರಲಿಲ್ಲ. ಇದು ಅನಾಹುತಕ್ಕೆ ಮುಖ್ಯ ಕಾರಣ. ಮೀನುಗಾರರು ಬಲೆ ಹಾಕಿ ಹಿಡಿದ ಮೀನಿಗೆ ಕೆಜಿಗೆ 35 ರು.ನಂತೆ ಪಡೆದುಕೊಳ್ಳುವ ಗುತ್ತಿಗೆದಾರರು 100 ರು. ಗಳಿಗೆ ಮಾರಾಟ ಮಾಡುತ್ತಾರೆ. ಮೀನುಗಾರರ ಸಾವಿಗೆ ಗುತ್ತಿಗೆದಾರರು ನೇರ ಹೊಣೆ. ಪ್ರತಿ ಕುಟುಂಬಕ್ಕೆ ತಲಾ 5 ಲಕ್ಷ ರು. ಪರಿಹಾರ ನೀಡಬೇಕು.
-ಮರಿಜೋಸೆಫ್, ಹೋರಾಟಗಾರ
ಮೀನು ಮಹಾಮಂಡಳಿಯವರು ಗುತ್ತಿಗೆದಾರರಿಗೆ ಗುತ್ತಿಗೆ ನೀಡಿದ ತಕ್ಷಣ ತಮ್ಮ ಕಾರ್ಯ ಮುಗಿಯಿತು ಎಂದು ಭಾವಿಸುವುದು ಸರಿಯಲ್ಲ. ಇಲ್ಲಿನ ವ್ಯವಸ್ಥೆ ಹಾಗೂ ನಿಯಮಗಳನ್ನು ಗುತ್ತಿಗೆದಾರರು ಪಾಲಿಸುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸಬೇಕು. ಮೀಗುಗಾರರಿಗೆ ರಕ್ಷಾ ಕವಚಗಳು, ಭದ್ರತೆ ಒದಗಿಸುವುದರ ಬಗ್ಗೆಯೂ ಪರಿಶೀಲಿಸಬೇಕು. ಆದರೆ ಮಹಾಮಂಡಳಿ ತನಗೂ ಇದಕ್ಕೂ ಸಂಬಂಧವಿಲ್ಲದಂತೆ ವರ್ತಿಸುವುದರಿಂದ ಇಂಥ ಘಟನೆಗೆ ಕಾರಣವಾಗಿದೆ ಎಂದು ದೂರಿದರು.
ಪರಿಹಾರಕ್ಕೆ ಪಟೇಲ್ ಶಿವರಾಂ ಆಗ್ರಹ
ಹಾಸನ: ಹೇಮಾವತಿ ಜಲಾಶಯದಲ್ಲಿ ತೆಪ್ಪ ಮುಳುಗಿ ಮೃತಪಟ್ಟ ಮೂವರು ಮೀನುಗಾರರ ಕುಟುಂಬ ಸದಸ್ಯರಿಗೆ ವಿಧಾನ ಪರಿಷತ್ ಪರಿಷತ್ ಸದಸ್ಯ ಪಟೇಲ್ ಶಿವರಾಂ ಮತ್ತು ಜೆಡಿಎಸ್ ಮುಖಂಡರು ಸಾಂತ್ವನ ಹೇಳಿದ್ದಾರೆ. ಹಾಸನ ತಾಲೂಕು ಕಟ್ಟಾಯ ಹೋಬಳಿ ಸಿಡಿಲ ಹೊಸಹಳ್ಳಿ ಮತ್ತು ಚೌಡಹಳ್ಳಿಯಲ್ಲಿರುವ ಮೃತರ ಮನೆಗಳಿಗೆ ಶುಕ್ರವಾರ ಸಂಜೆ ತೆರಳಿದ್ದ ಅವರು, ಸರ್ಕಾರ ಕೂಡಲೇ ಪರಿಹಾರ ನೀಡಬೇಕು. ಹಾಗೂ ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ ಮೀನು ಹಿಡಿಯಲು ಗುತ್ತಿಗೆ ಪಡೆದುಕೊಂಡಿರುವ ವ್ಯಕ್ತಿ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ಆತನಿಂದಲೂ ಪರಿಹಾರ ಕೊಡಿಸಬೇಕೆಂದು ಆಗ್ರಹಿಸಿದ್ದಾರೆ. ಜೆಡಿಎಸ್ ಮುಖಂಡ ಜಿಪಂ ಮಾಜಿ ಅಧ್ಯಕ್ಷ ಎಸ್. ದ್ಯಾವೇಗೌಡ, ಕಾರ್ಲೆ ಇಂದ್ರೇಶ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

