ಇನ್ನಿಲ್ಲ ಸಮಸ್ಯೆ: ನಿಯಂತ್ರಣಾಧಿಕಾರಿ
ಕ.ಪ್ರ.ವಾರ್ತೆ , ಆಲೂರು , ಆ. 23
ಸಾರ್ವಜನಿಕರ ಅಹವಾಲುಗಳ ಮೇರೆಗೆ ಇಲ್ಲಿನ ಬಸ್ ನಿಲ್ದಾಣದ ಸಮಸ್ಯೆಗಳಿಗೆ ಶನಿವಾರದಿಂದಲೇ ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂದು ಹಾಸನ ವಿಭಾಗೀಯ ನಿಯಂತ್ರಣಾಧಿಕಾರಿ ಪಾ. ನಾರಾಯಸ್ವಾಮಿ ತಿಳಿಸಿದ್ದಾರೆ.
ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಇದುವರೆಗೂ ಆಗಿರುವ ಲೋಪದೋಷಗಳಿಗೆ ಕ್ಷಮೆ ಕೋರುವೆ ಎಂತಲೂ ಹೇಳಿದರು.
ನಿಲ್ದಾಣದ ಶೌಚಾಲಯದ ಶೌಚಗುಂಡಿಯನ್ನು ಅವೈಜ್ಞಾನಿಕವಾಗಿ ನಿರ್ಮಿಸಿದ್ದು, ಅದರ ಪುನರ್ ನಿರ್ಮಾಣ ಕಾರ್ಯ ಸೋಮವಾರದಿಂದಲೇ ಆರಂಭಿಸಲಾಗುವುದು. ನಿಲ್ದಾಣದ ಎರಡೂ ಬದಿಗಳಲ್ಲೂ ಹಂಪ್ಸ್ ಹಾಕಿಸ ಲಾಗುವುದು ಎಂದು ಭರವಸೆ ನೀಡಿದರು.
ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಆಸನಗಳ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು. ಸೆ.1 ರಿಂದ ಸೆಕ್ಯುರಿಟಿ ಗಾರ್ಡ್ನ್ನು ಸಹ ನಿಯೋಜಿಸಲಾಗುವುದು. ನಿಲ್ದಾಣದ ಮುಂಭಾಗ ಉದ್ಯಾನವನ ನಿರ್ಮಿಸಿ ನಿಲ್ದಾಣದ ಅಂದಗೆಡಿಸುವಂತೆ ಖಾಸಗಿಯವರು ಪ್ರದರ್ಶಿಸುತ್ತಿರುವ ಫ್ಲೆಕ್ಸ್ ಹಾಗೂ ವಿವಿಧ ಬೋರ್ಡ್ಗಳನ್ನು ತೆರವುಗೊಳಿಸಲಾಗುವುದು. 3 ಪಾಳಿಯಲ್ಲಿ ಕಾರ್ಯ ನಿರ್ವಹಿಸುವಂತೆ 6 ಟಿಸಿಗಳನ್ನು ನಿಯೋಜಿಸಲಾಗುವುದು ಎಂದು ತಿಳಿಸಿದರು.
ಪ್ರತಿ ಅರ್ಧಗಂಟೆಗೊಮ್ಮೆ ಬಸ್: ಗ್ರಾಮೀಣ ಭಾಗಗಳಿಗೆ ಹೆಚ್ಚುವರಿ ಬಸ್ ಸಂಚಾರ ಆರಂಭ ಸೇರಿದಂತೆ ಬೆಳಗ್ಗೆ 7-30 ರಿಂದ 9-30 ರವರೆಗೂ ವಿದ್ಯಾರ್ಥಿಗಳು ಹಾಗೂ ಸರ್ಕಾರಿ, ಖಾಸಗಿ ನೌಕರರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು 7-30 ರಿಂದ 9-30 ರವರೆಗೂ ಪ್ರತಿ ಅರ್ಧಗಂಟೆಗೊಂದರಂತೆ ಹಾಸನದಿಂದ ಬೆಂಗಳೂರಿಗೆ ಹೋಗುವ ಬಸ್ಸುಗಳು ಆಲೂರಿಗೆ ಬಂದು ನಂತರ ಬೆಂಗಳೂರಿಗೆ ಹೋಗುವಂತೆ ವ್ಯವಸ್ಥೆ ಮಾಡಲಾಗುವುದು.
ಬಸ್ ನಾಮ ಫಲಕದಲ್ಲಿ ಆಲೂರು ಮಾರ್ಗ ಎಂದು ನಮೂದಿಸಲಾಗುವುದು. ಇದರ ಜೊತೆಗೆ ಬಹು ಮುಖ್ಯ ಬೇಡಿಕೆಯಾದ ಎಲ್ಲಾ ವಿಭಾಗದ ಬಸ್ಸುಗಳು ಕಡ್ಡಾಯವಾಗಿ ಹಾಸನ ನಗರದೊಳಗಿಂದ ಎನ್.ಆರ್. ಸರ್ಕಲ್ ಮುಖಾಂತರ ಸಂತೇಪೇಟೆ, ತಣ್ಣೀರುಹಳ್ಳ ಮಾರ್ಗವಾಗಿ ಆಲೂರು ಪಟ್ಟಣಕ್ಕೆ ಬಂದು ಹೋಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.
ಚಾಲಕ, ನಿರ್ವಾಹಕರ ಅಮಾನತು: ಆಲೂರಿನ ಮೂಲಕ ಸಂಚರಿಸುವ ಎಲ್ಲಾ ವಿಭಾಗದ ನಿರ್ವಾಹಕರು ಕಡ್ಡಾಯವಾಗಿ ಎಂಟ್ರಿ ಹಾಕಿಸಲು ತಕ್ಷಣದಿಂದಲೇ ನಿರ್ದೇಶನ ನೀಡಲಾಗಿದ್ದು, ಎಂಟ್ರಿ ಹಾಕಿಸದ ಚಾಲಕ ನಿರ್ವಾಹಕರನ್ನು ಅಮಾನತು ಮಾಡಲು ಎಲ್ಲಾ ವಿಭಾಗದ ಅಧಿಕಾರಿಗಳು ಒಮ್ಮತ ಸೂಚಿಸಿದರು.
ಇದಕ್ಕೆ ನಿದರ್ಶನವೆಂಬಂತೆ ಗುರುವಾರ ಹಾಸನ ಬೈಪಾಸ್ ಮೂಲಕ ಸಂಚರಿಸಿ ಆದೇಶ ಉಲ್ಲಂಘಿಸಿದ ಹಾಸನ ವಿಭಾಗದ ಚಾಲಕ ಹಾಗೂ ನಿರ್ವಾಹಕರಿಬ್ಬರನ್ನು ಅಮಾನತು ಮಾಡಿರುವ ಆದೇಶದ ಪ್ರತಿಯನ್ನು ಸಭೆಯಲ್ಲಿ ಪ್ರದರ್ಶಿಸಿದರು.
ಮೊಲ್ವೋ, ರಾಜಹಂಸ, ವೈಭವ, ಐರಾವತ ಸೇರಿದಂತೆ ಎಲ್ಲಾ ಬಸ್ಸುಗಳು ಕಡ್ಡಾಯವಾಗಿ ಪಟ್ಟಣದ ಮೂಲಕ ಸಂಚರಿಸಲು ಆದೇಶ ನೀಡಿದರು. ಡಿಪೋ ನಿರ್ಮಾಣಕ್ಕಾಗಿ ಬಿಕ್ಕೋಡು ರಸ್ತೆಯ ಮರಸು ಹೊಸಳ್ಳಿ ಬಳಿ 4 ಎಕರೆ ಭೂಮಿ ಗುರುತಿಸಲಾಗಿದ್ದು, ಜಾಗ ದೊರೆತ ತಕ್ಷಣ ಕಾಮಗಾರಿ ಆರಂಭಿಸಲಾಗುವುದು. ಹಾಸನದಲ್ಲಿ ಸೆಕೆಂಡ್ ಡಿಪೋ ಪ್ರಾರಂಭವಾದ ನಂತರ ಹಾಸನದಿಂದ ಪಾಳ್ಯವರೆಗೂ 10 ನಗರ ಬಸ್ ಸಂಚಾರ ಆರಂಭಿಸಲಾಗುವುದು ಎಂದೂ ಹೇಳಿದರು. ಒಟ್ಟಾರೆ ಆಲೂರಿನ ನಾಗರಿಕರ ಎಲ್ಲಾ ಸಮಸ್ಯೆಗಳನ್ನು ಶೀಘ್ರ ಪರಿಹರಿಸುವುದಾಗಿ ಭರವಸೆ ನೀಡಿದರು.
ಪಿಎಸ್ಐ ಜಯಲಕ್ಷ್ಮಿ ಮಾತನಾಡಿ ಚಾಲಕ, ನಿರ್ವಾಹಕರು ಸಾರ್ವಜನಿಕರೊಂದಿಗೆ ಅಸಭ್ಯವಾಗಿ ನಡೆದು ಕೊಂಡು ಅಥವಾ ನಿಯಮಗಳನ್ನು ಉಲ್ಲಂಘಿಸಿ ಕಾನೂನು ವ್ಯವಸ್ಥೆಗೆ ಧಕ್ಕೆ ತಂದರೆ ಅದಕ್ಕೆ ವಿಭಾಗೀಯ ನಿಯಂತ್ರಣಾಧಿಕಾರಿಗಳೇ ನೇರ ಹೊಣೆಯಾಗಬೇಕಾಗುತ್ತದೆ. ಈ ರೀತಿಯಾಗದಂತೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

