ಹಾಸನ

ಜೀವನದಲ್ಲಿ ಗುರಿ ಮುಖ್ಯ: ಸುಧಾಕರ ಶರ್ಮ

Published On :

ಹಾಸನ: ವೇದ ಭಾರತಿ ಸಂಸ್ಥೆಯಿಂದ ಶುಕ್ರವಾರ ವೇದೋಕ್ತ ಜೀವನ ಶಿಬಿರ ನಡೆಯಿತು.ಶಿಬಿರ ಉದ್ಘಾಟಿಸಿ ಮಾತನಾಡಿದ ವೇದಾಧ್ಯಾಯೀ ಸುಧಾಕರ ಶರ್ಮ ಅವರು, ಮನುಷ್ಯ ಜೀವನದಲ್ಲಿ ಗುರಿ ಹಾಗೂ ಸಾಧನೆ ಎರಡೂ ಬಹಳ ಮುಖ್ಯ.   ಇವೆರಡು ಇಲ್ಲದಿದ್ದಲ್ಲಿ ಮನುಷ್ಯನ ಜೀವನದಲ್ಲಿ ನೆಮ್ಮದಿಯನ್ನು ಕಾಣಲು ಸಾಧ್ಯವಿಲ್ಲ ಎಂದ ಅವರು, ಜೀವನದಲ್ಲಿ ಎಷ್ಟೇ ಜ್ಞಾನ ಹೊಂದಿದ್ದರೂ ಶಂಕರಚಾರ್ಯ, ರಾಮಾನುಜಚಾರ್ಯ ಹಾಗೂ ಮಧ್ವಾಚಾರ್ಯರ ಸಿದ್ದಾಂತ, ತತ್ವಗಳನ್ನು ಅರಿಯುವಂತಹ ಅವಶ್ಯಕತೆ ಇದೆ ಎಂದು ಹೇಳಿದರು. ವೇದಗಳ ಕಾಲಯ ವಿಚಾರಗಳನ್ನೇ ಬಸವಣ್ಣನವರು ತಮ್ಮ ವಚನ ಮೂಲಕ ಸಮಾಜವನ್ನು ಎಚ್ಚೆತ್ತುವಂತಹ ಕಾರ್ಯ ಮಾಡಿದ್ದಾರೆ. ಜೊತೆಗೆ ಶರಣ ಮಾತುಗಳಲ್ಲಿ ಮಾನವೀಯತೆ ಮೌಲ್ಯಗಳು ಅಡಗಿದ್ದವು. ಆದ್ದರಿಂದ ವೇದಗಳ ಅಧ್ಯಯನ ಬಹಳ ಮುಖ್ಯ ಎಂದರು. ಕ್ಷೇತ್ರೀಯ ಸಂಪರ್ಕ ಪ್ರಮುಖ ಹಾಗೂ ದಕ್ಷಿಣ ಮಧ್ವಕ್ಷೇತ್ರದ ಕೆ.ಪ್ರಭಾಕರ್ ಭಟ್, ಅಮೋಘ್ ವಾಹಿನಿ ವ್ಯವಸ್ಥಾಪಕ ಕೆ.ಪಿ.ಎಸ್.ಪ್ರಮೋದ್ ಇದ್ದರು.
ದೇವಿಗೆರೆಗೆ ನೀರು ಸಚಿವರೊಂದಿಗೆ   ಚರ್ಚೆ: ರುದ್ರೇಶಗೌಡ
ಜಾವಗಲ್: ಹೊಬಳಿಯ ದೇವಿಗೆರೆಗೆ ನೀರು ಹರಿಸಲು ಈಗಾಗಲೇ ನೀರಾವರಿ ಮಂತ್ರಿಯೊಂದಿಗೆ ಚರ್ಚಿಸಿದ್ದು, ಈ ಭಾಗದ 50 ಹಳ್ಳಿಗಳ ಕೆರೆಗಳಿಗೆ ನೀರು ಹರಿಸುವ ಕಾರ್ಯವನ್ನು ಸದ್ಯದಲ್ಲೇ ಕೈಗೊಳ್ಳುವುದಾಗಿ ಶಾಸಕ ರುದ್ರೇಶಗೌಡ ತಿಳಿಸಿದರು.
 ಹೋಬಳಿಯ ಕಲ್ಯಾಡಿ ಗ್ರಾಮ ಪಂಚಾಯ್ತಿ ಆವರಣದಲ್ಲಿ ಗೋಶಾಲೆ ಆರಂಭಿಸಿ ಮಾತನಾಡಿದ ಅವರು, ಹೋಬಳಿಯಲ್ಲಿ ತೀವ್ರ ಬರಗಾಲ ಹಿನ್ನೆಲೆಯಲ್ಲಿ ಮೇವು, ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು ಈಗಾಗಲೇ 150 ಕೊಳವೆ ಬಾವಿ ಕೊರೆಸಿದರೂ ನೀರಿನ ಕೊರತೆ ತುಂಬಾ ಇದೆ. ಎಷ್ಟೇ ಆಳಕ್ಕೆ ಕೊರೆದರೂ ಅಂತರ್ಜಲದ ಕೊರತೆ ತೀವ್ರವಾಗಿದೆ. ಗೋಶಾಲೆಗಳು ಚೆನ್ನಾಗಿ ನಡೆಯಲು ಗ್ರಾಮಸ್ಥರ ಸಹಕಾರ ಅತ್ಯಗತ್ಯ ಎಂದರು.
ಕಲ್ಯಾಡಿಯಿಂದ ಬೊಮ್ಮೇನಹಳ್ಳಿಯವರೆಗೆ ರಸ್ತೆ ಮಾಡಿಸುವುದಾಗಿ ಭರವಸೆ ನೀಡಿದ ಅವರು, ಜಾವಗಲ್
ಕಲ್ಹಾರನಹಳ್ಳಿ ರಸ್ತೆ ಕಾಮಗಾರಿ ಶೀಘ್ರ ಆರಂಭಿಸುವುದಾಗಿ ತಿಳಿಸಿದರು.
  ತಹಶೀಲ್ದಾರ್ ಕೇಶವಮೂರ್ತಿ ಈ  ಗೋಶಾಲೆಗೆ 8 ಗ್ರಾಮಗಳು ಸೇರುತ್ತವೆ. ರೈತರು ಮೇವನ್ನು ಪಡೆದು ಸದುಪಯೋಗ ಪಡಿಸಿಕೊಳ್ಳುವಂತೆ ಹೇಳಿದರು. ಜಿಲ್ಲಾ ಪಶುಸಂಗೋಪನಾ ಉಪ ನಿರ್ದೇಶಕ ಡಾ.ಶ್ರೀನಿವಾಸ್,
ಮಾಜಿ ಪ್ರಧಾನ್ ಕಲ್ಲೇಶಪ್ಪ, ಮಾಜಿ ಅಧ್ಯಕ್ಷ ಬಸವರಾಜು, ಡಾ. ಮಂಜುನಾಥ್, ಮಹದೇವಪ್ಪ, ನೀಲಕಂಠಪ್ಪ ಮಾತನಾಡಿದರು. ಅಧ್ಯಕ್ಷತೆ ಗ್ರಾಪಂ ಅಧ್ಯಕ್ಷೆ ಉಮಾಗುರುಮಲ್ಲಯ್ಯ ವಹಿಸಿ ಮಾತನಾಡಿದರು.
ಕನ್ನಿಕಾ ಪರಮೇಶ್ವರಿ ಅಮ್ಮನವರಿಗೆ ನೂತನ ರಜತ ಕವಚ ಸಮರ್ಪಣೆ
ಹೊಳೆನರಸೀಪುರ: ಇಲ್ಲಿನ ಶ್ರೀ ಕನ್ನಿಕಾಪರಮೇಶ್ವರಿ ಅಮ್ಮನವರ ಪುನರ್ ಪ್ರತಿಷ್ಠಾಪನೆ ನಂತರ 48 ದಿನಗಳ ಕಾಲ ನಡೆದ ಮಂಡಲ ಪೂಜೆಯ ಕೊನೆಯ ದಿನವಾದ ಗುರುವಾರ ಕನ್ನಿಕಾಪರಮೇಶ್ವರಿ ಹಾಗೂ ಗಣಪತಿಗೆ ವಿಶೇಷ ಹೋಮ ಹವನ ನಡೆಸಿ ನೂತನ ವಿಗ್ರಹಗಳಿಗೆ ರಜತ ಕವಚ ಅರ್ಪಿಸಲಾಯಿತು.
  ಕಾರ್ಯಕ್ರಮದ ಅಂಗವಾಗಿ ಕನ್ನಿಕಾಪರಮೇಶ್ವರಿ ಅಮ್ಮನವರಿಗೆ ಪಂಚಾಮೃತ ಅಭಿಷೇಕ ಮತ್ತು ಪೂಜೆ ನಡೆಯಿತು.  ಸಾಮೂಹಿಕ ಸಂಕಲ್ಪ ನಂತರ ಮಂಡಳ ಸಂಪನ್ನ ಕಲಾಹೋಮ ಮತ್ತು ದುರ್ಗಾಹೋಮ ನಡೆಯಿತು. ಮಧ್ಯಾಹ್ನ ವಿಶೇಷ ಹೋಮಗಳು ನಡೆದು ಪೂರ್ಣಾಹುತಿ ಕಳಶಾಭಿಷೇಕ ನೂತನ ರಜತ ಕವಚ ಅಲಂಕಾರ ನಡೆಯಿತು.ಹೆಚ್ಚಿನ ಸಂಖ್ಯೆಯ ಭಕ್ತರು ಭಾಗವಹಿಸಿ ದೇವಿಗೆ ಕೃಪೆಗೆ ಪಾತ್ರರಾದರು.
ಅರಕಲಗೂಡು: ಪ್ರೌಢಶಾಲಾ ವಿದ್ಯಾರ್ಥಿನಿ ನಾಪತ್ತೆ
ಅರಕಲಗೂಡು: ಪಟ್ಟಣದ ವಿಜಾಪುರ 2ನೇ ಕಾಲೋನಿಯ ದೇವರಾಜು ಎಂಬುವರ ಪುತ್ರಿ ವಿ.ಡಿ. ಪವಿತ್ರಾ (16) ಕಾಲೋನಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು ಆ. 10ರಂದು ಬೆಳಗ್ಗೆ ಶಾಲೆಗೆ ಹೋಗುವುದಾಗಿ ಹೇಳಿ ಹೋದಾಕೆ  ನಾಪತ್ತೆಯಾಗಿದ್ದಾರೆ. 5 ಅಡಿ ಎತ್ತರ, ಸಾಧಾರಣ ಮೈಕಟ್ಟು, 16 ವರ್ಷ, ಎಣ್ಣೆಗೆಂಪು ಬಣ್ಣ, ಕೋಲು ಮುಖ, ಕನ್ನಡ ಮಾತನಾಡುತ್ತಾರೆ. ನೀಲಿ ಬಣ್ಣದ  ಲಂಗ, ಮಾಸಲು ಬಿಳಿ ಬಣ್ಣದ ಟಾಪ್ ಧರಿಸಿದ್ದು ಈ ಹುಡುಗಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಹಾಸನದ ಆರಕ್ಷಕ ಅಧೀಕ್ಷಕರು 08172-268410, ಮೊಬೈಲ್ 9480804701, ಪೊಲೀಸ್ ಕಂಟ್ರೋಲ್ ರೂಂ. 08172-268845, ಮೊಬೈಲ್ 9480804747, ಪೊಲೀಸ್ ವೃತ್ತ ನಿರೀಕ್ಷಕರು ಅರಕಲಗೂಡು 08175-220285, ಮೊಬೈಲ್ 9480804734, ಅರಕಲಗೂಡು ಪೊಲೀಸ್ ಠಾಣೆ 08175-220249 ಮೊ9480804763 ಸಂಪರ್ಕಿಸಿ.
ಜಿಲ್ಲಾ ಬಿಜೆಪಿ ಪದಾಧಿಕಾರಿಗಳ ಆಯ್ಕೆ
ಹಾಸನ: ಜಿಲ್ಲಾ ಬಿಜೆಪಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಜಿಲ್ಲಾ ಉಪಾಧ್ಯಕ್ಷರಾಗಿ ಡಾ.ನಾರಾಯಣಸ್ವಾಮಿ, ಜೈಮಾರುತಿ ದೇವರಾಜು, ರೋಹಿತ್‌ಗೌಡ, ಎಂ.ಆರ್. ನಾಗರಾಜು, ಶೈಲಾ ತ್ರಯಾಂಬಿಕ,  ಕೋಮಲ, ಜಯಣ್ಣ,  ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ನಟೇಶ್‌ಕುಮಾರ್,  ಡಿ.ಪ್ರಸನ್ನಕುಮಾರ್, ಉದಯಕುಮಾರ್, ಶೋಭಾಶುಭಕರ್, ಜಿಲ್ಲಾ  ಕಾರ್ಯದರ್ಶಿಗಳಾಗಿ  ಎ.ಎಸ್. ಬಸವರಾಜು, ಮೈಲಾರಯ್ಯ, ಮಂಜುನಾಥ ಮೋರೆ, ಜಯಶೇಖರ್, ಜಯಶೀಲ, ಗೀತಾ ಕೃಷ್ಣೇಗೌಡ, ಜಿಲ್ಲಾ  ಮಹಿಳಾ ಮೋರ್ಚಾ ಅಧ್ಯಕ್ಷರಾಗಿ  ಸುಶೀಲ ಅಣ್ಣಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.
ಕನ್ನಡ 'ವಿಜ್ಞಾನ' ಲೇಖಕರಿಗೆ  ಪ್ರಶಸ್ತಿಗೆ ಆಹ್ವಾನ
ಹಾಸನ: 2013-14ನೇ ಸಾಲಿನ ರಾಜ್ಯ ಮಟ್ಟದ ಶ್ರೇಷ್ಠ ಲೇಖಕ ಪ್ರಶಸ್ತಿಗೆ ಕೃಷಿ, ವಿಜ್ಞಾನ, ತಂತ್ರಜ್ಞಾನ ಮತ್ತು ವೈದ್ಯಕೀಯ ವಿಷಯಗಳಲ್ಲಿ ಕನ್ನಡದಲ್ಲಿ ಪುಸ್ತಕಗಳನ್ನು ಪ್ರಕಟಿಸಿರುವ ಲೇಖಕರಿಂದ ಅರ್ಜಿ ಆಹ್ವಾನಿಸಲಾಗಿದೆ.  ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಂಗ ಸಂಸ್ಥೆಯಾದ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು 2009ರಿಂದ ಈ ಪ್ರಶಸ್ತಿಯನ್ನು ನೀಡುತ್ತಿದೆ. ಪುಸ್ತಕಗಳ ಸಂಖ್ಯೆಗೆ ಅನುಗುಣವಾಗಿ ಪ್ರತಿ ವಿಷಯಕ್ಕೆ ಗರಿಷ್ಠ 2 ಪ್ರಶಸ್ತಿ ನೀಡಲಾಗುವುದು. ಆಯ್ಕೆಯಾದ ಲೇಖಕರಿಗೆ 25,000 ಪುರಸ್ಕಾರ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು. 2013 ಜನವರಿ-ಡಿಸೆಂಬರ್ ವರೆಗೆ ಮುದ್ರಣಗೊಂಡ ಮೇಲ್ಕಂಡ ವಿಷಯಗಳಲ್ಲಿ ಕನ್ನಡದಲ್ಲಿ ಪ್ರಕಟಗೊಂಡ ಪುಸ್ತಕಗಳನ್ನು ಈ ಪ್ರಶಸ್ತಿಗಾಗಿ ಸಲ್ಲಿಸಬಹುದಾಗಿದೆ. ಲೇಖಕರು ನಿಗದಿತ ಅರ್ಜಿಗಳನ್ನು ನಮೂನೆಯೊಂದಿಗೆ ಪುಸ್ತಕದ ನಾಲ್ಕು ಪ್ರತಿಗಳನ್ನು ಜ.4ರ ಸಂಜೆ 5.30ರೊಳಗೆ ಸದಸ್ಯ ಕಾರ್ಯದರ್ಶಿ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ವಿಜ್ಞಾನ ಭವನ, 24/2, 21ನೇ ಮುಖ್ಯ ರಸ್ತೆ, ಬಿಡಿಎ ಕಾಂಪ್ಲೆಕ್ಸ್ ಹತ್ತಿರ, ಬನಶಂಕರಿ 2ನೇ ಹಂತ, ಬೆಂಗಳೂರು-70 ಸಂಪರ್ಕಿಸಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.