ಹಾಲು ಉತ್ಪಾದಕರ ಮಹಿಳಾ ಸಂಘದ ಕಾರ್ಯಕರ್ತರ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಹಾಸನ ಆ. 24
ಸಹಕಾರ ಸಂಘಗಳ ಚುನಾವಣೆ ನ್ಯಾಯಯುತವಾಗಿ ನಡೆಸುವಂತೆ ಆಗ್ರಹಿಸಿ ಚೋಳಂಬಳ್ಳಿ ಹಾಲು ಉತ್ಪಾದಕರ ಮಹಿಳಾ ಸಂಘದ ಕಾರ್ಯಕರ್ತೆಯರು ಶನಿವಾರ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದ ಮಹಿಳೆಯರು, ಕಾರ್ಯದರ್ಶಿ ಕಾನೂನು ಬಾಹಿರವಾಗಿ ಚುನಾವಣೆ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಹಕಾರ ಸಂಘಗಳಲ್ಲಿ ಚುನಾವಣೆ ನಡೆಯುವ 45 ದಿನಗಳ ಮೊದಲೆ ಮಾಹಿತಿ ನೀಡಬೇಕು. ಚುನಾವಣೆ 10 ದಿನ ಇರುವಂತೆಯೇ ಮಾಹಿತಿ ನೀಡಲಾಗಿದೆ. ಕಾರ್ಯದರ್ಶಿ ಮಾಹಿತಿ ನೀಡದೆ ಚುನಾವಣಾಧಿಕಾರಿ ನೀಡಿದ್ದಾರೆ ಎಂದರು.
ಕಾರ್ಯದರ್ಶಿ ಮನೆಯಲ್ಲಿ ಹಾಲು ಅಳೆಯುವವರು, ಕ್ಯಾನ್ ತೊಳೆಯುವವರು ಹಾಗೂ ಹಾಲಿನ ಲೆಕ್ಕ ಬರೆಯುವವರು, ವಾಹನದಲ್ಲಿ ಹಾಲನ್ನು ಸರಬರಾಜು ಮಾಡುವವರದ್ದೆ ಸ್ವಂತ ಡೈರಿಯಾಗಿದೆ. ಒಂದು ಮನೆಯಲ್ಲಿ ಒಬ್ಬ ಮಹಿಳೆಗೆ ಷೇರು ನೀಡುವ ಬದಲು ಎರಡು ಷೇರು ನೀಡಿದ್ದಾರೆ. ಒಂದು ಮನೆಗೆ 4-5 ಷೇರು ನೀಡಿದ್ದು, ವಿದ್ಯಾಭ್ಯಾಸ ಮಾಡುವ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೂ ಷೇರು ನೀಡಿದ್ದಾರೆ. 180 ದಿನ ಹಾಲು ಹಾಕದ ಸದಸ್ಯರಿಗೆ ಸದಸ್ಯತ್ವ ಕೊಡಲಾಗಿದೆ ಎಂದು ಆರೋಪಿಸಿದರು.
ಷೇರು ರಸೀದಿಯನ್ನು ಯಾವ ಮತದಾರರಿಗೂ ನೀಡಿರುವುದಿಲ್ಲ ಎಂದ ಪ್ರತಿಭಟನಕಾರರು, ರಸೀದಿ ಪುಸ್ತಕ ಕೇಳಲು ಹೋದರೆ ನೀಡಲು ಸಾಧ್ಯವಿಲ್ಲ ಎಂದು ಬೇಜವಾಬ್ದಾರಿಯಿಂದ ಉತ್ತರಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣಾ ಅಭ್ಯರ್ಥಿಗಳು ನಾಮಪತ್ರವನ್ನು ಸಲ್ಲಿಸದೆ ಇರುವವರು ಅಭ್ಯರ್ಥಿಗಳಾಗಿದ್ದಾರೆ. ಇಷ್ಟೆಲ್ಲಾ ಅಕ್ರಮ ಚುನಾವಣೆ ನಡೆಸುತ್ತಿರುವುದರಿಂದ ಇದರ ಬಗ್ಗೆ ತನಿಖೆ ಆಗಬೇಕು. ಅಲ್ಲಿವರೆಗೂ ಚುನಾವಣೆ 6 ತಿಂಗಳ ಕಾಲ ಮುಂದೂಡಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಚೋಳಂಬಳ್ಳಿ ಹಾಲು ಉತ್ಪಾದಕರ ಮಹಿಳಾ ಸಂಘದ ರಾಣಿ, ನಂಜಮ್ಮ, ಲಕ್ಷ್ಮಮ್ಮ, ಸರೋಜಮ್ಮ, ತಾಯಮ್ಮ, ಚಂದ್ರಕಲಾ ಹಾಗೂ ಇತರರು ಇದ್ದರು.
ಚನ್ನರಾಯಪಟ್ಟಣ ತಾಲೂಕು ಕಚೇರಿ ಮುಂದೆ ಧರಣಿ
ಚನ್ನರಾಯಪಟ್ಟಣ: ತಾಲೂಕಿನ ಹಿರೀಸಾವೆ ಹೋಬಳಿ ಚೋಳಂಬಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ನ್ಯಾಯಯುತ ಚುನಾವಣೆಗೆ ಆಗ್ರಹಿಸಿ ಸಂಘದ ಸದಸ್ಯರು ಪಟ್ಟಣದಲ್ಲಿ ಮೆರವಣಿಗೆ ನಡೆಸಿದರು. ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶೋಭಾ ನೇತೃತ್ವದಲ್ಲಿ ಗ್ರಾಮದ 70ಕ್ಕೂ ಹೆಚ್ಚು ಮಹಿಳಾ ಸದಸ್ಯರುಗಳು ಗ್ರಾಮದ ಹಾಲು ಉತ್ಪಾದಕರ ಸಂಘದ ಚುನಾವಣೆಗಾಗಿ ಕೆಲವರು ಚಿತಾವಣೆ ನಡೆಸಿ ತಮಗೆ ಅಗತ್ಯವಿರುವ ಸದಸ್ಯರನ್ನು ಮಾತ್ರ ಚುನಾವಣಾ ಮತದಾರರ ಪಟ್ಟಿಯಲ್ಲಿ ಸೇರಿಸಿಕೊಂಡಿರುವುದನ್ನು ಖಂಡಿಸಿ ಪಟ್ಟಣದ ಹೊಸ ಬಸ್ನಿಲ್ದಾಣದಿಂದ ಮೆರವಣಿಗೆಯಲ್ಲಿ ಸಾಗಿ ತಾಲೂಕು ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
25ರಂದು ನಡೆಯಲಿರುವ ಚುನಾವಣೆಯ ಮತದಾರರ ಪಟ್ಟಿಯಲ್ಲಿ ಕಳೆದ 5ವರ್ಷಗಳಿಂದ ಸಂಘಕ್ಕೆ ಹಾಲು ನೀಡಿರುವವರ ಹೆಸರನ್ನು ಕೈಬಿಟ್ಟು ಹಾಲು ಹಾಕದಿರುವವರನ್ನು ಸಂಘದ ಸದಸ್ಯರಾಗಿಸಿಕೊಂಡು ಅವರನ್ನು ಚುನಾವಣೆಗೆ ಸ್ಪರ್ಧಿಸಲು ಕಾರ್ಯದರ್ಶಿ ನಳಿನಾ ಅವರು ಅವಕಾಶ ನೀಡಿದ್ದಾರೆ ಎಂದು ಆರೋಪಿಸಿದರು.
18 ವರ್ಷದೊಳಗಿನವರನ್ನು ಸಂಘದ ಸದಸ್ಯರನ್ನಾಗಿ ತೆಗೆದುಕೊಳ್ಳುವಂತಿಲ್ಲ ಎಂದು ಆದೇಶದಲ್ಲಿದ್ದರೂ 16 ಮಂದಿಯನ್ನು ಸದಸ್ಯರನ್ನಾಗಿ ಪಡೆದುಕೊಂಡು ಅವರಿಗೆ ಮತದಾನದ ಹಕ್ಕು ನೀಡಿರುವುದು ಖಂಡನೀಯ ಎಂದು ದೂರಿದರು. ಮನವಿ ಸ್ವೀಕರಿಸಿದ ತಹಸೀಲ್ದಾರ್ ನಟರಾಜ್ ಚುನಾವಣೆ ನಡೆಸಲು ಇಲಾಖೆಯೇ ಪ್ರತ್ಯೇಕವಾಗಿ ಚುನಾವಣಾಧಿಕಾರಿ ನೇಮಕ ಮಾಡುವುದರಿಂದ ಸಂಬಂಧಪಟ್ಟ ಇಲಾಖೆಯವರನ್ನು ಭೇಟಿ ಮಾಡುವಂತೆ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

