ಬೈಪಾಸ್ ಬಸ್ ಸಂಚಾರ: ಆಲೂರಲ್ಲಿ ಪ್ರತಿಭಟನೆ
ಆಲೂರು: ಪುತ್ತೂರು, ಕುಂದಾಪುರ, ಧರ್ಮಸ್ಥಳ, ಮಂಗಳೂರು ಡಿಪೋಗೆ ಸೇರಿದ ಬಸ್ಗಳು ಹಾಸನದಿಂದ ಬೈಪಾಸ್ ಮೂಲಕ ಸಂಚರಿಸುತ್ತಿದ್ದು, ಇದರಿಂದ ಆಕ್ರೋಶಗೊಂಡ ನಾಗರಿಕರು ಪಟ್ಟಣದ ಬಸ್ ನಿಲ್ದಾಣದಲ್ಲಿ ಭಾನುವಾರ ಬಸ್ಗಳನ್ನು ತಡೆದು ಪ್ರತಿಭಟನೆ ನಡೆಸಿದರು.
ಕಳೆದ ಶುಕ್ರವಾರವಷ್ಟೇ ಆಲೂರು ಮೂಲಕ ಸಂಚರಿಸುವ ಎಲ್ಲ ಸಾರಿಗೆ ಸಂಸ್ಥೆ ವಿಭಾಗದ ಬಸ್ಗಳ ಡಿಸಿ, ಡಿಟಿಓಗಳ ಸಭೆ ನಡೆಸಿ ಹಾಸನ ಬಸ್ನಿಲ್ದಾಣದಿಂದ ರಾಜಹಂಸ, ವೋಲ್ವೋ, ಐರಾವತ ಸೇರಿದಂತೆ ಎಲ್ಲ ಬಸ್ಗಳು ಆಲೂರು ಮೂಲಕವೇ ಸಂಚರಿಸಬೇಕು ಹಾಗೂ ಆಲೂರಿಗೆ ಬರುವಾಗ ಹಾಸನ ಬಸ್ ನಿಲ್ದಾಣದಿಂದ ಎನ್.ಆರ್. ಸರ್ಕಲ್ ಮೂಲಕ ಸಂತೆಪೇಟೆ ಹಾಗೂ ತಣ್ಣೀರುಹಳ್ಳ ಮಾರ್ಗವಾಗಿ ಆಲೂರಿಗೆ ಸಂಚರಿಸುವಂತೆ ಸೂಚನೆಯನ್ನು ಲಿಖಿತವಾಗಿ ನೀಡಿದ್ದರು.
ಇತರೆ ವಿಭಾಗದ ಡಿಸಿ ಹಾಗೂ ಡಿಟಿಓಗಳೂ ಶುಕ್ರವಾರದಿಂದಲೇ ಎಲ್ಲ ಚಾಲಕ- ನಿರ್ವಾಹಕರಿಗೂ ಕಟ್ಟುನಿಟ್ಟಾಗಿ ಆದೇಶಿಸುವುದಾಗಿ ಭರವಸೆ ನೀಡಿದ್ದರು. ಆದರೆ ಕೆಲವೊಂದು ಬಸ್ಗಳು ಹಾಸನದಿಂದ ಬೈಪಾಸ್ ಮೂಲಕವೇ ಸಂಚರಿಸುತ್ತಿದ್ದು, ಇದನ್ನು ಪ್ರಶ್ನಿಸಿದ ಪ್ರಯಾಣಿಕರಿಗೆ ಕೆಲ ಚಾಲಕ - ನಿರ್ವಾಹಕರು ಉಡಾಫೆಯಿಂದ ವರ್ತಿಸಿದರಲ್ಲದೆ, ಅವಾಚ್ಯ ಶಬ್ದದಿಂದ ನಿಂದಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ನಾಗರಿಕರು ಭಾನುವಾರು ಬಸ್ಗಳನ್ನು ತಡೆದು ಪ್ರತಿಭಟನೆ ನಡೆಸಿದರು.
ಪ್ರತಿ ಬಾರಿ ಪ್ರತಿಭಟನೆ ನಡೆಸಿದಾಗಲೂ ಅಧಿಕಾರಿಗಳು ಕೇವಲ ಪೊಳ್ಳು ಭರವಸೆ ನೀಡಿ ಹೋಗುತ್ತಿದ್ದಾರೆ. ಈ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ಶುಕ್ರವಾರವಷ್ಟೇ ಎಲ್ಲ ವಿಭಾಗದವರೊಂದಿಗೆ ಸಭೆ ನಡೆಸಿ ಲಿಖಿತ ಆದೇಶ ಪಡೆದಿದ್ದರೂ ಎಲ್ಲ ವಿಭಾಗದ ಡಿಸಿಗಳು ಹಾಗೂ ಡಿಟಿಓಗಳು ಅದನ್ನು ಪಾಲಿಸಲು ತಮ್ಮ ಚಾಲಕ ಹಾಗೂ ನಿರ್ವಾಹಕರಿಗೆ ಸೂಕ್ತ ನಿರ್ದೇಶನ ನೀಡಿಲ್ಲ. ಇದರಿಂದಾಗಿಯೇ ಈ ರೀತಿ ಬಸ್ಗಳು ಬೈಪಾಸ್ನಲ್ಲಿ ಸಂಚರಿಸುತ್ತಿದ್ದು, ಚಾಲಕ ನಿರ್ವಾಹಕರು ಅಸಡ್ಡೆಯಿಂದ ವರ್ತಿಸುತ್ತಿದ್ದಾರೆ ಎಂದು ಪ್ರತಿಭಟನಾಕರರು ಆರೋಪಿಸಿದರು.
ತಡೆ ಹಾಕಿರುವ ಎಲ್ಲ ಬಸ್ಗಳ ಚಾಲಕರಿಗೆ ಹಾಸನ ಬಸ್ ನಿಲ್ದಾಣದಲ್ಲಿ ಕಡ್ಡಾಯವಾಗಿ ಎನ್.ಆರ್. ಸರ್ಕಲ್ ಮೂಲಕ ಹೋಗಬೇಕೆಂಬ ಆದೇಶದ ಮೊಹರನ್ನು ಟಿಕೆಟ್ಬುಕ್ಕಿಗೆ ಲಗತ್ತಿಸಿದ್ದು, ಯಾವ ಬಸ್ಸಿನ ಚಾಲಕ -ನಿರ್ವಾಹಕರು ಆದೇಶವನ್ನು ಉಲ್ಲಂಘಿಸಿದ್ದಾರೋ ಅಂತಹವರ ಬಸ್ಗಳನ್ನು ತಡೆ ಹಿಡಿಯಲಾಯಿತು. ತಡೆ ಹಿಡಿದ ಬಸ್ಗಳ ವಿಭಾಗದ ಡಿಸಿಗಳು ತಮ್ಮ ಬಸ್ಗಳನ್ನು ಬಿಡಿಸಿಕೊಂಡು ಹೋಗಲು ಖುದ್ದು ಬರಬೇಕು ಹಾಗೂ ಚಾಲಕ - ನಿರ್ವಾಹಕರ ಅಮಾನತು ಪತ್ರವನ್ನು ತಮ್ಮೊಂದಿಗೆ ತರಬೇಕು. ಆಗ ಮಾತ್ರ ಬಸ್ ಬಿಡುಗಡೆ ಮಾಡಲಾಗುವುದು ಎಂದು ಎಚ್ಚರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

