'ಸರ್ಕಾರಿ' ವಿಳಾಸವಿಲ್ಲದ ಕಚೇರಿಗಳು...!
ಕ.ಪ್ರ.ವಾರ್ತೆ , ಸಕಲೇಶಪುರ , ಆ.25
ಪಟ್ಟಣದ ಬಹುತೇಕ ಪ್ರಮುಖ ಸರ್ಕಾರಿ ಕಚೇರಿಗಳು ಖಾಸಗಿ ಕಟ್ಟಡಗಳಲ್ಲಿ ವಿಳಾಸವಿಲ್ಲದೆ ಇರುವುದರಿಂದ ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ಕಚೇರಿ ಹುಡುಕಾಟ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಪಟ್ಟಣದಲ್ಲಿ ಕಂದಾಯ ಇಲಾಖೆ ಅಧೀನದಲ್ಲಿರುವ ಭೂಮಾಪಕರ ಕಚೇರಿ ಅಶೋಕ ರಸ್ತೆಯ ಅಡ್ಡ ರಸ್ತೆಯಲ್ಲಿರುವ ಎರಡನೇ ಮಹಡಿಯಲ್ಲಿದೆ.
ಇಲ್ಲಿಗೆ ಹೋಗಲು ಯಾವುದೇ ನಾಮಫಲಕಗಳಾಗಲಿ ಅಥವಾ ಸೂಚನಾ ಫಲಕಗಳಾಗಲಿ ಇಲ್ಲದೆ ಇರುವುದು ಸಮಸ್ಯೆಯನ್ನು ತಂದೊಡ್ಡಿದೆ.
ಉಪ ನೋಂದಣಾಧಿಕಾರಿ ಕಚೇರಿ ಬಿ.ಎಂ ರಸ್ತೆಯ ಖಾಸಗಿ ಕಟ್ಟಡದ ಎರಡನೇ ಅಂತಸ್ತಿನಲ್ಲಿದೆ. ಈ ಕಚೇರಿಯನ್ನು ಜನ ಸಾಮಾನ್ಯರು ಸುಲಭವಾಗಿ ಗುರುತು ಹಿಡಿಯುವುದು ತೀರಾ ಕಷ್ಟದ ವಿಚಾರ.
ಇದಲ್ಲದೆ ಸಹಕಾರ ಸಂಘಗಳ ನಿಬಂಧಕರ ಕಚೇರಿ, ಸಮಾಜಕಲ್ಯಾಣ ಇಲಾಖೆ ಹಾಗೂ ಜಲಾನಯನ ಇಲಾಖೆ ಕಚೇರಿಗಳು ಆಜಾದ್ ರಸ್ತೆಯ ಖಾಸಗಿ ಕಟ್ಟಡದ ಎರಡು ಹಾಗೂ ಮೂರನೇ ಅಂತಸ್ತಿನಲ್ಲಿದೆ.
ಈ ಕಚೇರಿಗಳಿರುವ ಕಟ್ಟಡವನ್ನು ಹುಡುಕಿ ಹೋದರೂ ಕಚೇರಿಗೆ ಹೋಗಲು ದಾರಿ ಹುಡುಕ ಬೇಕಾಗಿದೆ.
ಕಿರಿದಾದ ಮೆಟ್ಟಿಲುಗಳ ಕಟ್ಟಡದ ದಾರಿಯಲ್ಲಿ ದಢೂತಿ ದೇಹದ ವ್ಯಕ್ತಿಗಳು ಹೋಗುವುದು ಅಸಾಧ್ಯವಾಗಿದೆ. ಇದಲ್ಲದೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಹಕಾರಿ ಲೆಕ್ಕಪರಿಶೋಧಕರ ಕಚೇರಿ ಅಶೋಕ ರಸ್ತೆಯ ಖಾಸಗಿ ಕಟ್ಟಡದ ಎರಡನೇ ಮಹಡಿಯಲ್ಲಿದೆ. ಈ ಕಚೇರಿಗಳನ್ನು ಹುಡುಕುವುದು ಸಾರ್ವಜನಿಕರಿಗೆ ಸಾಹಸವೇ ಸೈ.
ಅಲ್ಲದೆ ಗ್ರಂಥಾಲಯ, ಜಿಪಂ ಎಂಜಿನಿಯರ್ ಕಚೇರಿಗಳೂ ಖಾಸಗಿ ಕಟ್ಟಡದಲ್ಲಿದ್ದು, ಗ್ರಂಥಾಲಯದ ಕಟ್ಟಡ ದುಸ್ಥಿತಿಗೆ ಈಡಾಗಿದ್ದರೂ ಪರ್ಯಾಯ ಕಟ್ಟಡದ ಭಾಗ್ಯ ಇಲ್ಲದಾಗಿದೆ. ಈ ಸರ್ಕಾರಿ ಕಚೇರಿಗಳಿಗೆ ಅಂಗವಿಕಲರು ಸುಲಭವಾಗಿ ಹೋಗಬೇಕು ಎಂಬ ಕಾರಣದಿಂದ ಅಂಗವಿಕಲರ ಪಾದಚಾರಿಮಾರ್ಗ ಕಲ್ಪಿಸುವುದಕ್ಕೆ ಮೊದಲ ಅದ್ಯತೆ ನೀಡಿದೆ. ಆದರೆ ಈ ಖಾಸಗಿ ಕಟ್ಟಡದಲ್ಲಿರುವ ಯಾವ ಕಚೇರಿಗಳಿಗೂ ಅಂಗವಿಕಲರು ಹೋಗುವುದು ಅಸಾಧ್ಯ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

