ಏಲಕ್ಕಿ ಬೆಳೆಗಾರರ ರು. 9 ಕೋಟಿ ಸಾಲ ಮನ್ನಾ: ಮಾಜಿ ಶಾಸಕ ವಿಶ್ವನಾಥ್ ಆಗ್ರಹ
ಕ.ಪ್ರ.ವಾರ್ತೆ ಹಾಸನ ಆ. 27
ಅತೀಯಾದ ಮಳೆ ಹಾಗೂ ರೋಗದಿಂದ ಏಲಕ್ಕಿ ಬೆಳೆ ಸಂಪೂರ್ಣ ನಾಶವಾಗಿದ್ದು, ಇದರಿಂದ ಬೆಳೆಗಾರರ ಮೇಲಿರುವ ಸುಮಾರು 9 ಕೋಟಿ ರು.ಗಳ ಸಾಲ ಮನ್ನಾ ಹಾಗೂ ಇತರೆ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ತಂಡವೊಂದು ಸದ್ಯವೇ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡುವುದಾಗಿ ಕಾಂಗ್ರೆಸ್ ಮುಖಂಡ ಎಚ್.ಎಂ.ವಿಶ್ವನಾಥ್ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಕಲೇಶಪುರ ತಾಲೂಕಿನ ಹೊಂಗಡಹಳ್ಳ, ವನಗೂರು, ಹೆಗ್ಗದ್ದೆ ಸೇರಿದಂತೆ ಇತರೆ ಗ್ರಾಮಗಳಲ್ಲಿ ಏಲಕ್ಕಿಯನ್ನು ಬೆಳೆಯಲಾಗುತ್ತಿತ್ತು. ಆದರೆ ರೋಗದಿಂದ ಏಲಕ್ಕಿ ಬೆಳೆ ನಷ್ಟವಾಗಿರುವುದರಿಂದ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಕೊಕ್ಕೆ ರೋಗ, ಮಳೆ ಹೆಚ್ಚಾಗಿದ್ದರಿಂದ, ಕಾಡಾನೆ ಹಾಗೂ ಕೋತಿಗಳ ಹಾವಳಿಯಿಂದಲೂ ಬೆಳೆಸಂಪೂರ್ಣವಾಗಿ ನಾಶವಾಗಿದೆ ಎಂದರು.
ಹಾಸನ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಏಲಕ್ಕಿ ಬೆಳೆಗಳು ಸಂಪೂರ್ಣವಾಗಿ ನಾಶವಾಗಿದೆ. ಇದರಿಂದ ಏಲಕ್ಕಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಬೆಳೆಗಾರರು ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ನಲ್ಲಿ ಸುಮಾರು 4.5 ಕೋಟಿ ರು.ನಷ್ಟು ಸಾಲ ಮಾಡಿದ್ದಾರೆ. ಬೆಳೆಗಾರರು ನಷ್ಟ ಅನುಭವಿಸಿರುವುದರಿಂದ ಬ್ಯಾಂಕ್ಗೆ ಸಾಲವನ್ನು ಮರುಪಾವತಿ ಮಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಆದ್ದರಿಂದ ಬೆಳೆಗಾರರ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ಬೆಳೆಗಾರರ ತಂಡ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಬೇಡಿಕೆ ಈಡೇರಿಸುವಂತೆ ಒತ್ತಾಯಿಸುವುದಾಗಿ ಹೇಳಿದರು.
ಕಾಂಗ್ರೆಸ್ ಸೇರ್ಪಡೆ: ಸಕಲೇಶಪುರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಎ.ಬಿ.ಬಸವರಾಜು, ಉಪಾಧ್ಯಕ್ಷ ಕೆ.ಪಿ.ಕೃಷ್ಣೇಗೌಡ, ಜಯಮ್ಮ, ಉದಯ್ ಸೇರಿದಂತೆ 6 ಮಂದಿ ನಿರ್ದೇಶಕರು ಕಾಂಗ್ರೆಸ್ ಸೇರುತ್ತಿದ್ದು, ಶೀಘ್ರವೇ ಜಿಲ್ಲಾಧ್ಯಕ್ಷ ಬಿ.ಶಿವರಾಂ ನೇತೃತ್ವದಲ್ಲಿ ಪಕ್ಷ ಸೇರ್ಪಡೆ ನಡೆಯಲಿದೆ. ಹಾಗೂ ನಿಯೋಗ ತೆರಳಿ ಸಿದ್ದರಾಮಯ್ಯ ಹಾಗೂ ರಾಜ್ಯಾಧ್ಯಕ್ಷ ಜಿ.ಪರಮೇಶ್ವರನ್ನು ಭೇಟಿ ಮಾಡಿ ಬ್ಯಾಂಕಿನ ಅಭಿವೃದ್ಧಿಗಾಗಿ ಸಹಾಯ ಹಸ್ತ ನೀಡುವಂತೆ ಮನವಿ ಮಾಡಲಾಗುತ್ತದೆ ಎಂದರು.
ಜೆಡಿಎಸ್ ವಿರುದ್ಧ ಆರೋಪ: ಜೆಡಿಎಸ್ನವರು ಚುನಾವಣೆಯಲ್ಲಿ ತಾವು ಸೋತರು ಸಹ ಪ್ರತಿಸ್ಪರ್ಧಿಗಳನ್ನು ಮುಗಿಸುವಂತ ಪ್ರವೃತ್ತಿ ಮೈಗೂಡಿಸಿಕೊಂಡಿದ್ದಾರೆ. ನಾನು ಬೇಲೂರಿನಲ್ಲಿ ಸೋಲಲು ಅದೇ ಕಾರಣ ಎಂದ ಅವರು, ಜೆಡಿಎಸ್ ದ್ವಂದ್ವ ನೀತಿ ಜನರಿಗೆ ಅರಿವಾಗಿದೆ. ಅವರಿಗೆ ಮಾನಸಿಕ ಸ್ಧೈರ್ಯ ಕುಸಿದಿದ್ದು, ಜಿಲ್ಲೆಯಲ್ಲಿ ದು:ಸ್ವಪ್ನ ಮೂಡಿದೆ ಎಂದರು.
ಲೋಕಸಭೆಯಲ್ಲಿ ಕಾಂಗ್ರೆಸ್ ಜಯ ಖಚಿತ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡುತ್ತದೆ ಅವರ ಪರ ಕೆಲಸ ಮಾಡುವುದಾಗಿ ಹೇಳಿದ ಅವರು, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವುದು ಖಚಿತ ಎಂದು ಹೇಳಿದರು. ಈ ಸಂದರ್ಭದಲ್ಲಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಎ.ಬಿ.ಬಸವರಾಜು, ಉಪಾಧ್ಯಕ್ಷ ಕೆ.ಪಿ.ಕೃಷ್ಣೇಗೌಡ, ಜಯಮ್ಮ, ಉದಯ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

