ಹಾಸನ

ರುಪಾಯಿ ಅಪಮೌಲ್ಯಕ್ಕೆ ಯುಪಿಎ ಕಾರಣ

Published On :

ಕ.ಪ್ರ.ವಾರ್ತೆ ಹಾಸನ ಆ. 28
ದೇಶದ ಗಡಿ ಭಾಗದಲ್ಲಿ ಸೈನಿಕರ ಹತ್ಯೆ ಹಾಗೂ ವಿದೇಶಿ ಕರೆನ್ಸಿಗಳ ಮುಂದೆ ದೇಶ ರೂಪಾಯಿ ಮೌಲ್ಯ ಕುಸಿತ ಕಂಡಿದ್ದರೂ ಕೇಂದ್ರ ಯುಪಿಎ ಸರ್ಕಾರ ಕೈಕಟ್ಟಿ ಕುಳಿತಿರುವುದು ದುರ್ದೈವದ ಸಂಗತಿ. ಪ್ರಸ್ತುತ ದೇಶದಲ್ಲಿ ಬದಲಾವಣೆಯ ಕಾಲ ಮುಖ್ಯವಾಗಿದೆ ಎಂದು ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಸಂತೋಷ್‌ಜೀ ಹೇಳಿದರು.
ನರೇಂದ್ರ ಮೋದಿ ಅಭಿಮಾನಿಗಳ ಸಂಘದಿಂದ ಬುಧವಾರ ನಡೆದ ವಿದೇಶದಲ್ಲಿಟ್ಟಿರುವ ಭಾರತೀಯ ಕಪ್ಪುಹಣದ ಬಗ್ಗೆ ಜನ ಜಾಗೃತಿ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಹಾಗೂ ಬ್ರಿಟಿಷರ ಆಳ್ವಿಕೆಯಲ್ಲಿಯೂ ಕಂಡರಿಯದಂತಹ ಇಷ್ಟೊಂದು ಹತಾಶಕಾರಿ ಮನೋಭಾವ ಹಾಗೂ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿರಲಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ಖಂಡನೀಯ:  ಪಾಕಿಸ್ತಾನದ ಉಗ್ರರು ದೇಶದ ಗಡಿ ಭಾಗವನ್ನು ದಾಟಿ  ಬಂದು ದೇಶದ ಐವರು ಸೈನಿಕರು ಹತ್ಯೆ ಮಾಡಿದ್ದರೂ ಈ ಹತ್ಯೆ ಪಾಕಿಸ್ತಾನದ ಸೈನಿಕರು ಮಾಡಿದ್ದಲ್ಲ. ಸೈನಿಕರ ವೇಷ ಧರಿಸಿ ಭಯೋತ್ಪಾದಕರು ಮಾಡಿರುವ ಕೃತ್ಯ ಎಂದು ಬೇಜವಾಬ್ದಾರಿತನದಿಂದ ಕೇಂದ್ರದ ರಕ್ಷಣ ಸಚಿವ ಎ.ಕೆ.ಅಂಟನಿ ಹೇಳುತ್ತಾರೆ. ಕಳೆದ 45 ದಿನಗಳಲ್ಲಿ ಚೀನಾ ಸೈನಿಕರು ಹಲವು ಬಾರಿ ದೇಶದ ಗಡಿಭಾಗದಲ್ಲಿ ದಾಳಿ ನಡೆಸಿದ್ದರೂ ಯಾವುದೇ ಕ್ರಮಗಳನ್ನು ಕೇಂದ್ರದ ಯುಪಿಎ ಸರ್ಕಾರ ಕೈಗೊಳ್ಳದೆ ದೇಶದ ಜನತೆಗೆ ಅನ್ಯಾಸ ಎಸಗುತ್ತಿದೆ ಎಂದು ಆರೋಪಿಸಿದರು.
30 ವರ್ಷಗಳಿಂದ ಕಾಪಾಡಿಕೊಂಡ ಬಂದಿದ್ದಂತಹ ಸಿಯಾಚಿನ್ ಪ್ರದೇಶದಲ್ಲಿ ನಮ್ಮ ಸೈನಿಕರ ಹತ್ಯೆ ನಡೆಯುತ್ತಿದ್ದರೂ ರಕ್ಷಣ ಇಲಾಖೆ ಯಾವುದೇ ಕ್ರಮಕೈಗೊಳ್ಳದಿರುವುದು ಖಂಡನೀಯ. ನಮ್ಮ ಸೈನಿಕ ಬಲ ಅತ್ಯಂತ ಬಲಿಷ್ಠವಾಗಿದ್ದು, ಶತ್ರುಗಳನ್ನು ನಿರ್ನಾಮ ಮಾಡುವಂತಹ ಶಕ್ತಿ ಹೊಂದಿದ್ದರೂ, ಕೇಂದ್ರ ಯುಪಿಎ ಸರ್ಕಾರ ಮೃದು ಧೋರಣೆ ತಾಳುತ್ತಿರುವುದು ತೀವ್ರ ಚರ್ಚೆಗೆ ಎಡೆ ಮಾಡಿದೆ ಎಂದು ನುಡಿದರು.
ತನ್ನ ಬಣ್ಣ ಬಯಲಾಗುತ್ತೆಂಬ ಭಯ ಕಾಂಗ್ರೆಸ್‌ಗೆ:  ಮಾಜಿ ಪ್ರಧಾನಿ ಕುಟುಂಬ ಹೆಸರಿನಲ್ಲಿ ಸ್ವಿಸ್ ಬ್ಯಾಂಕ್‌ನಲ್ಲಿರುವ ಸಾವಿರಾರು ಲಕ್ಷ ಕೋಟಿ ರು. ಮಾಧ್ಯಮಗಳಿಂದ ಬಹಿರಂಗವಾಗಿದೆ. ಹರ್ಷದ್ ಮೆಹತಾ ಸ್ವಿಸ್ ಬ್ಯಾಂಕಿನಲ್ಲಿಟ್ಟಿದ್ದ 1.95 ಲಕ್ಷ ಕೋಟಿ ರು. ಹರ್ಷದ್ ಮೃತಪಟ್ಟ ಮೇಲೆ ಅದನ್ನು ದೇಶಕ್ಕೆ ವಾಪಸ್ ತರುವಂತಹ ಕಾರ್ಯ ಇನ್ನೂ ಮಾಡಿಲ್ಲ. ಸ್ವಿಸ್ ಬ್ಯಾಂಕ್‌ನಿಂದ ಹಣ ವಾಪಸ್ ಬಂದರೆ ತಮ್ಮ ಬಣ್ಣ ಬಯಲಾಗುತ್ತದೆ ಎಂಬ ಭಯ ಕಾಂಗ್ರೆಸ್‌ಗೆ ಇದೆ ಎಂದು ಕಿಡಿಕಾರಿದರು.
ರಾಜ್ ಫೌಂಡೇಷನ್ ಹೆಸರಿನ 1.98 ಲಕ್ಷ ಕೋಟಿ ರು. ಏನಾಗಿದೆ ಅಂತ ಯಾರಿಗೂ ಗೊತ್ತಿಲ್ಲ. ಮೂರು ಸಾವಿರ ಗಣ್ಯಾತಿಗಣ್ಯರು ಲೂಟಿ ಹೊಡೆದ ದೇಶದ ಕೋಟಿ ಕೋಟಿ ಹಣ ಸ್ವಿಸ್ ಬ್ಯಾಂಕ್‌ನಲ್ಲಿ ಕೊಳೆಸಲಾಗುತ್ತಿದೆ. ಕಪ್ಪು ಹಣ ಕುರಿತು ಸಂಸತ್ತಿನಲ್ಲಿ ಚರ್ಚೆಯಾದರೂ ಸರ್ಕಾರ ದಿವ್ಯ ಮೌನ ತಾಳಿದೆ ಎಂದು ಹೇಳಿದರು.
ವಾಜಪೇಯಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ದೇಶದ ಆರ್ಥಿಕ ಖಜಾನೆ ಭರ್ತಿಯಾಗಿತ್ತು. ಆದರೆ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದೇಶದ ಆರ್ಥಿಕ ಖಜಾನೆ ಸಂಪೂರ್ಣವಾಗಿ ಖಾಲಿಯಾಗಿದೆ. ಬಿಜೆಪಿ ಆಡಳಿತಾವಧಿಯಲ್ಲಿ ಒಂದು ಕುಟುಂಬದ ನಿರ್ವಹಣೆ ಎರಡೂವರೆ ಸಾವಿರ ರು.ಇದ್ದದ್ದು ಪ್ರಸ್ತುತ ಎರಡು ಪಟ್ಟು ವೆಚ್ಚ ಹೆಚ್ಚಾಗಿದೆ. ಇದರಿಂದ ದೇಶದಲ್ಲಿ ಆರ್ಥಿಕ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಎಂದು ದೂರಿದರು.
ರುಪಾಯಿ ಮೌಲ್ಯ ಸಂಪೂರ್ಣ ಕುಸಿತ:  ವಿದೇಶಿ ಕರೆನ್ಸಿಗಳ ಮುಂದೆ ದೇಶದ ರುಪಾಯಿ ಮೌಲ್ಯ ಸಂಪೂರ್ಣ ಕುಸಿತ ಕಾಣುತ್ತಿದೆ. ಇದರಿಂದ ದಿನ ನಿತ್ಯದ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿದೆ. ಇದೇ ಪರಿಸ್ಥಿತಿ ದೇಶದಲ್ಲಿ ಮುಂದುವರೆದರೆ ದೇಶದ ಚಿನ್ನದ ಸಂಪತ್ತನ್ನು ಐಎಂಎಫ್‌ಗೆ ಅಡವಿಡುವಂತಹ ಪರಿಸ್ಥಿತಿ ಬಹು ದೂರವೇನು ಇಲ್ಲ ಎಂದ ಅವರು, ದೇಶದಲ್ಲಿ ಬದಲಾವಣೆಯ ಕಾಲ ಹತ್ತಿರವಾಗಿದ್ದು, ಗುಜರಾತನ್ನು ಅಭಿವೃದ್ಧಿ ಮಾಡಿರುವ ಮುಖ್ಯಮಂತ್ರಿ ನರೇಂದ್ರ ಮೋದಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ನರೇಂದ್ರ ಮೋದಿ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಕೃಷ್ಣಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ರೇಣುಕುಮಾರ್, ಸಂಘದ ಉಪಾಧ್ಯಕ್ಷ ಬಿ.ಕೆ.ಮಂಜುನಾಥ್, ಪ್ರಸನ್ನಕುಮಾರ್, ಜಾನಕೆರೆ ಹೇಮಂತ್, ಬಿ.ಕೆ.ರಂಗನಾಥ ಪ್ರಸಾದ್, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಕೃಷ್ಣೇಗೌಡ ಇತರರು ಇದ್ದರು.
ನಾಮಫಲಕ ಅನಾವರಣ: ಕಾರ್ಯಕ್ರಮಕ್ಕೂ ಮುನ್ನ ನಗರದ ಎಂ.ಜಿ.ರಸ್ತೆಯಲ್ಲಿ ಕಪ್ಪುಹಣದ ವಿರುದ್ಧ ಜನಾಂದೋಲನಾ ಪ್ರಥಮ ನಾಮಫಲಕ ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಸಂತೋಷಜೀ ಅನಾವರಣಗೊಳಿಸಿದರು. ನಂತರ ನಗರದ ನಾನಾ ಬೀದಿಗಳಲ್ಲಿ ಬೈಕ್ ರ್ಯಾಲಿ ನಡೆಸಿ ಜಾಗೃತಿ ಮೂಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.