ಹಾಸನ

ಬರಗಾಲ ಘೋಷಣೆ: ಜೆಡಿಎಸ್ ಶಾಸಕರ ಮೌನ ಏಕೆ?

Published On :

ಕ.ಪ್ರ. ವಾರ್ತೆ ,  ಅರಸೀಕೆರೆ, ಆ. 30
 ಜಿಲ್ಲೆಯಲ್ಲಿ ಸಾಕಷ್ಟು ಮಳೆಯಾಗಿರುವ ಕೆಲವು ತಾಲೂಕುಗಳನ್ನು ಬರಪೀಡಿತ ಪಟ್ಟಿಯಲ್ಲಿ ಸೇರಿಸಿದ್ದು, ಅದೇ  ತೀವ್ರ ಬರದಿಂದ ತತ್ತರಿಸುತ್ತಿರುವ ಅರಸೀಕೆರೆ ತಾಲೂಕನ್ನು ಮಾತ್ರ ಬರಗಾಲ ಪೀಡಿತ ಪ್ರದೇಶವೆಂದು ಇನ್ನೂ ಘೋಷಣೆ ಮಾಡದೆ ಇರುವ ಕುರಿತು ಜೆಡಿಎಸ್ ಶಾಸಕರು ಸ್ಪಂದಿಸದಿರುವುದು ವಿಷಾದನೀಯ ಎಂದು ಮಾಜಿ ಶಾಸಕ ಎ.ಎಸ್.ಬಸವರಾಜ್ ಖಂಡಿಸಿದ್ದಾರೆ.
 ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಸೀಕೆರೆ ಮತ್ತು ಚನ್ನರಾಯಪಟ್ಟಣ ಎರಡೂ ತಾಲೂಕುಗಳಲ್ಲಿ ಮಳೆ ಅಭಾವದಿಂದ ರೈತರು ಬೆಳೆಯಿಲ್ಲದೆ ಪರಿತಪಿಸುತ್ತಿದ್ದರೂ ಈ ಎರಡು ಕ್ಷೇತ್ರಗಳ ಜೆಡಿಎಸ್ ಶಾಸಕರು ಈ ಕುರಿತು ಏನೂ ಮಾತನಾಡದಿರುವುದು ಶೋಚನೀಯ ಸಂಗತಿ ಎಂದರು.
 ತಾಲೂಕಿನಾದ್ಯಂತ ಕೆರೆ ಕಟ್ಟೆಗಳಲ್ಲಿ ನೀರಿಲ್ಲದೆ ದನಕರುಗಳ ಮೇವು ನೀರಿಗಾಗಿ ಹಾಹಾಕಾರ ಉಂಟಾಗಿದೆ. ಬೋರ್‌ವೆಲ್‌ಗಳಲ್ಲಿ ನೀರಿಲ್ಲದೆ ಬತ್ತಿಹೋಗಿ ಸುಮಾರು ನಾಲ್ಕೂವರೆ ಲಕ್ಷಕ್ಕೂ ಹೆಚ್ಚು ತೆಂಗಿನ ಮರಗಳು ಸುಳಿ ಬಿದ್ದು ಹೋಗಿ ರೈತರ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿದೆ.
 ಆದರೂ ಶಾಸಕ ಕೆ.ಎಂ.ಶಿವಲಿಂಗೇಗೌಡರಿಗೆ ಸರ್ಕಾರದ ಮೇಲೆ ಒತ್ತಡ ತಂದು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಲು ಸಾಧ್ಯವಾಗಿಲ್ಲ. ಹಾಗೂ ರೈತರ ನಾಶವಾದ ತೆಂಗಿನ ಮರಗಳಿಗೆ  ಸೂಕ್ತ ಪರಿಹಾರ ಒದಗಿಸುವಲ್ಲಿ ಶಾಸಕರು ವಿಫಲರಾಗಿದ್ದಾರೆ ಎಂದು ದೂರಿದರು.
 ಜಿಲ್ಲೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ಸಂಸದರಾಗಿದ್ದು, ಐವರು ಶಾಸಕರಿದ್ದರೂ ಬರಪರಿಸ್ಥಿತಿಯಿಂದ ತೀವ್ರ ತೊಂದರೆಗೊಳಗಾಗಿರುವ ರೈತರಿಗೆ ಪರಿಹಾರ ಒದಗಿಸುವಲ್ಲಿ ಇವರೆಲ್ಲ ವಿಫಲರಾಗಿದ್ದಾರೆ. ತಾವು ಈ ಹಿಂದೆ ಶಾಸಕರಾಗಿದ್ದಾಗ ಅಂದಿನ ಕಂದಾಯ ಸಚಿವ ಜಗದೀಶ್ ಶೆಟ್ಟರ್ ಅವರ ಮೇಲೆ ಒತ್ತಡ ತಂದು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿಸಿ ಸಾಕಷ್ಟು ಪರಿಹಾರ ಕಲ್ಪಿಸಿದ್ದೆ ಎಂದು ಹೇಳಿದರು.
 ಅಂತೆಯೇ ಶಾಸಕರು ಬಿಜೆಪಿ ಸರ್ಕಾರದಲ್ಲಿ ಸದನದ ಒಳಗೆ, ಹೊರಗೆ ಹೋರಾಟ ಮಾಡಿ ಸಾಕಷ್ಟು ಅನುದಾನ ತಂದು ಎರಡನೇ ಬಾರಿಗೆ 76 ಸಾವಿರ ಮತಗಳನ್ನು ಪಡೆದು ಆಯ್ಕೆಯಾದ ಅವರಿಗೆ ಈ ಬಾರಿ ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿಸಲು ಏಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದರು.
 ತಾವು ಶಾಸಕರಾಗಿದ್ದ ಅವಧಿಯಲ್ಲಿ ಕಾರ್ಯರೂಪಕ್ಕೆ ತಂದ ಮೊರಾರ್ಜಿ ವಸತಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಪ್ರಥಮ ದರ್ಜೆ ಕಾಲೇಜು, ಹೊನವಳ್ಳಿ ಏತ ನೀರಾವರಿ, ಯಗಚಿ ಕುಡಿಯುವ ನೀರು ಯೋಜನೆ ಸೇರಿದಂತೆ ಅನೇಕ ಯೋಜನೆಗಳಿಗೆ ಚಾಲನೆ ನೀಡಲಾಗಿತ್ತು ಎಂದರು.
  ಕ್ಷೇತ್ರದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ ಆ ಮೂಲಕ ಸಾವಿರಾರು ಜನರಿಗೆ ಉದ್ಯೋಗ ದೊರಕಿಸಬೇಕು. ಹಾಗೂ ಎಂಜಿನಿಯರಿಂಗ್, ಡೆಂಟಲ್ ಕಾಲೇಜು ಆರಂಭಿಸಲು ಮತ್ತು ಭದ್ರಾ ಮೇಲ್ದಂಡೆ ಮೂಲಕ ಕಡೂರಿಗೆ ನೀರು ಬರಲಿದ್ದು ಅದು ಅಲ್ಲಿಂದ ಶಿರಾಕ್ಕೆ ಹೋಗಲಿದ್ದು ಕಡೂರಿಗೆ ಬಂದ ನೀರು ಅರಸೀಕೆರೆಯ ಮೂಲಕವೇ ಶಿರಾ ತಾಲೂಕಿಗೆ ಹೋದರೆ ಈ ಕ್ಷೇತ್ರಕ್ಕೆ ಅನುಕೂಲವಾಗುತ್ತದೆ. ಆದ್ದರಿಂದ ಮಾಜಿ ಪ್ರಧಾನಿ ದೇವೇಗೌಡರ ಸಹಕಾರದೊಂದಿಗೆ ಹೋರಾಟಕ್ಕೆ ಇಳಿಯಬೇಕಿದೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.