ಹಾಸನ

ಜಿಲ್ಲೆಯಲ್ಲಿ ಹೆಚ್ಚಿದ ಗಜ ಸಂತತಿ

Published On :

-ಪಿ.ರವಿಕುಮಾರ್
ಹಾಸನ:
ಜಿಲ್ಲೆಯಲ್ಲಿ ಆನೆಗಳ ಸಂತತಿ ಹೆಚ್ಚಾಗಿದ್ದು, ಸುಮಾರು 30 ಇದ್ದ ಆನೆಗಳ ಸಂಖ್ಯೆ ಪ್ರಸ್ತುತ ಅರಣ್ಯ ಇಲಾಖೆಯ ಪ್ರಕಾರ ಸುಮಾರು 50ರ ಗಡಿದಾಟಿದೆ. ಆನೆಗಳ ಸಂತತಿ ವೃದ್ಧಿಯಾಗುತ್ತಿದ್ದು, ಒಂದು ವರ್ಷದ ಅವಧಿಯಲ್ಲಿ 8 ರಿಂದ 10 ಆನೆಗಳು ಜನ್ಮ ತಾಳಿವೆ. ಆನೆಗಳ ಸಂಖ್ಯೆ ವರ್ಷದಲ್ಲಿ ಹೆಚ್ಚಾಗಿರುವುದರಿಂದ ಮಾನವ ಮತ್ತು ಕಾಡಾನೆಗಳ ನಡುವಿನ ಸಂಘರ್ಷ ಮತ್ತಷ್ಟು ಹೆಚ್ಚಾಗಲಿದೆ ಎಂಬ ಆತಂಕ ಜಿಲ್ಲೆಯ ಜನತೆಯನ್ನು ಕಾಡತೊಡಗಿದೆ. 10 ಆನೆಗಳ ಜನನದಿಂದ ಆನೆ ಸಂತತಿ ಜಿಲ್ಲೆಯೊಂದರಲ್ಲೇ ಸಂಖ್ಯೆ 50 ದಾಟಿರುವುದು ಈ ಭಾಗದ ಜನರಲ್ಲಿ ತೀವ್ರ ಆತಂಕ ಮನೆ ಮಾಡಿದೆ.
ಜಿಲ್ಲೆಯ ಸಕಲೇಶಪುರ, ಆಲೂರು, ಅರಕಲಗೂಡು ತಾಲೂಕುಗಳಲ್ಲಿ ಸುಮಾರು 25ರಿಂದ 30 ಕಾಡಾನೆಗಳು ಬೀಡು ಬಿಟ್ಟಿದ್ದವು. ಅರಣ್ಯ ಇಲಾಖೆ ವರದಿಯ ಪ್ರಕಾರ 1987ರಿಂದ ನಿರಂತರ ಕಾಡಾನೆ ಮತ್ತು ಮಾನವನ ನಡುವಿನ ಸಂಘರ್ಷ ಪ್ರಾರಂಭವಾಗಿದೆ. 2002ರಿಂದ ಪ್ರಸ್ತುತವರೆಗೆ ಸುಮಾರು 18 ಕಾಡಾನೆಗಳು ಸಾವನ್ನಪ್ಪಿದ್ದು, ಈ ಪೈಕಿ 8 ಆನೆಗಳು ವಿದ್ಯುತ್‌ಶಾಕ್‌ನಿಂದ ಮೃತಪಟ್ಟಿವೆ.
1987ರಿಂದ ಇಲ್ಲಿಯವರೆಗೆ ಅರಣ್ಯ ಇಲಾಖೆ ಜಿಲ್ಲೆಯಲ್ಲಿ 27 ಆನೆಗಳನ್ನು ಸೆರೆ ಹಿಡಿದು ಸ್ಥಳಾಂತರಿಸಿದೆ. ಇಷ್ಟಾದರೂ ಕಾಡಾನೆಗಳ ಸಂಖ್ಯೆ 50 ರ ಗಡಿ ದಾಟಿದೆ. ಇದರಿಂದ ಈ ಭಾಗದ ಜನರ ಕಾಡಾನೆಗಳು ಯಾವ ಸಂದರ್ಭದಲ್ಲಿ ಸಂಘರ್ಷ ನಡೆಸುತ್ತವೆಯೋ ಎಂಬ ಭೀತಿ ಈ ಭಾಗದ ಜನರಲ್ಲಿ ಉಂಟಾಗಿದೆ.
ಸಾಮಾನ್ಯ ಮಾರ್ಚ್ ನಂತರ ಆನೆಗಳ ವಲಸೆ:  ಆಲೂರು ತಾಲೂಕಿನಲ್ಲಿ ಸುಮಾರು 25 ರಿಂದ 30 ಆನೆಗಳಿದ್ದು, ಅವು ಜನವರಿಯಿಂದ ಮಾರ್ಚ್‌ವರೆಗೆ ಇಲ್ಲಿದ್ದು, ನಂತರ ಇಲ್ಲಿಂದ ವಲಸೆ ಹೋಗುತ್ತವೆ. ಈ ಆನೆಗಳ ಗುಂಪಿನಲ್ಲಿ ಸುಮಾರು 4ರಿಂದ 5 ಆನೆ ಮರಿಗಳ ಸಂಖ್ಯೆ ಹೆಚ್ಚಾಗಿದೆ. ಈ ಮರಿಗಳು ಸುಮಾರು 1 ವರ್ಷದೊಳಗಿನವು. ಈ ಆನೆಗಳು ಹಿಂಡು ಹಿಂಡಾಗಿ ಸಂಚರಿಸುತ್ತಿವೆ. ಸಕಲೇಶಪುರ ತಾಲೂಕಿನ ಯಸಳೂರು, ಕೊತ್ತನಹಳ್ಳಿ, ಚಿಕ್ಕಕಲ್ಲೂರಿನ ಸುತ್ತಮುತ್ತ ಆನೆಗಳ ಗುಂಪಿದೆ.
ಈ ಭಾಗದಲ್ಲಿ ಇರುವ ಆನೆಗಳ ಗುಂಪಿನಲ್ಲಿಯೂ ಸುಮಾರು 3ರಿಂದ 4 ಆನೆ ಮರಿಗಳಿದ್ದು, ಒಂದು ವರ್ಷದಲ್ಲಿ ಸುಮಾರು 8ರಿಂದ 10 ಮರಿಗಳ ಸಂತತಿ ಹೆಚ್ಚಾಗಿದೆ. ಆದೇ ರೀತಿ ಕ್ಯಾಮನಹಳ್ಳಿ, ಮೂರ್ಕಲ್ಲು ಬೆಟ್ಟ ಸೇರಿದಂತೆ ಈ ಭಾಗದಲ್ಲಿ ಸುಮಾರು 6 ರಿಂದ 7 ಆನೆಗಳು ಬಿಡು ಬಿಟ್ಟಿವೆ. ಅಗ್ನಿ ಪ್ರದೇಶದ ಭಾಗದಲ್ಲಿ ಸುಮಾರು 3ರಿಂದ 4 ಆನೆಗಳು ಬೀಡು ಬಿಟ್ಟಿವೆ. ಆದರಿಲ್ಲಿ ಮರಿಯಾನೆಗಳು ಕಾಣಿಸಿಕೊಂಡಿಲ್ಲ.
1974ರಿಂದ 1982ರ ವರೆಗೆ ಹಾರಂಗಿ ಮತ್ತು ಹೇಮಾವತಿ ನದಿಗೆ ಅಣೆಕಟ್ಟನ್ನು ನಿರ್ಮಿಸಿದ ನಂತರ  ಹಿನ್ನೀರಿನಲ್ಲಿ ಆನೆಗಳ ವಲಸೆ ಮಾರ್ಗಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿ ಹೋಗಿದೆ. ಇದರಿಂದ ಆನೆಗಳು ನೀರನ್ನು ದಾಟಿ ಬೇರೆಡೆಗೆ ಸಂಚರಿಸಲು ಸಾಧ್ಯವಾಗಿಲ್ಲ. ಇದರಿಂದಾಗಿ ಆನೆಗಳ ಚಲನವಲನಕ್ಕೆ ಮಾರ್ಗಗಳು ಸಂಪೂರ್ಣವಾಗಿ ಬಂದ್ ಆಗಿವೆ. ಇದರಿಂದ ಆನೆಗಳು ತನ್ನ ಸಂತತಿಯನ್ನು ಇಲ್ಲಿಯೇ ಹೆಚ್ಚಿಸಿಕೊಂಡಿವೆ.
ಕೈಯಲ್ಲಿ ಜೀವ ಹಿಡಿದು: ಜಿಲ್ಲೆಯ ಸಕಲೇಶಪುರ, ಆಲೂರು ಮತ್ತು ಅರಕಲಗೂಡು ತಾಲೂಕಿನ ಜನತೆಗಳು ಜೀವ ಕೈಯಲ್ಲಿ ಹಿಡಿದಕೊಂಡು ಜೀವಿಸುಂತಹ ಪರಿಸ್ಧಿತಿ ನಿರ್ಮಾಣವಾಗಿತ್ತು. ಆದರೆ ಪ್ರಸ್ತುತ ಆರಣ್ಯ ಇಲಾಖೆಯ ಪ್ರಕಾರ ಜಿಲ್ಲೆಯಲ್ಲಿ ಆನೆಗಳು ಸಂತತಿ ಹೆಚ್ಚಾಗಿರುವುದರಿಂದ ಈ ಭಾಗದ ಜನತೆಯಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿದೆ. ಮರಿಯಾನೆಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಯಾವ ಸಂದರ್ಭದಲ್ಲಿ ಆನೆಗಳು ದಾಳಿ ನಡೆಸ ಬಹುದೆಂಬ ಭಯದಲ್ಲಿ ಇದ್ದಾರೆ.
ಒಂದೇ ಕಡೆ ಉಳಿಯುವ ಆನೆ ಹಿಂಡು ನಂತರ ಗುಂಪು ಗುಂಪಾಗಿ ಅಲೆದಾಡುವುದರಿಂದ ಈ ಸಂದರ್ಭದಲ್ಲಿ ಮಾರ್ಗ ಮಧ್ಯೆ ಸಿಕ್ಕ ಸಿಕ್ಕವನ್ನಲ್ಲ ಹಾಳು ಮಾಡುತ್ತವೆ. ಬೆಳೆ ಸೇರಿದಂತೆ ಮನೆಗಳನ್ನು ಕೆಡವಿ ಹಾಕುತ್ತವೆ. ಅನ್ನೋ ಭೀತಿ ಜನರಲ್ಲಿ ಆವರಿಸಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಆನೆ ಹಾವಳಿ ತಡೆಗಟ್ಟಲು ಮುಂದಾಗುವಂತೆ ಮನೆನಾಡು ಭಾಗದ ಜನತೆಯ ಒತ್ತಾಸೆ.

ಈವರೆಗೂ ಜಿಲ್ಲೆಯಲ್ಲಿ ಸುಮಾರು 30 ಆನೆಗಳಿದ್ದವು. ಆದರೆ ಒಂದು ವರ್ಷದೊಳಗೆ ಸುಮಾರು 10 ಮರಿಯಾನೆಗಳು ಹೆಚ್ಚಾಗಿವೆ. ಇದರಿಂದ ಆನೆಗಳು ಹಿಂಡು ಹಿಂಡಾಗಿ ಚಲಿಸುತ್ತಿವೆ. ಸಕಲೇಶಪುರ ಹಾಗೂ ಆಲೂರಿನ ಭಾಗದಲ್ಲೂ ಎರಡು ಗುಂಪುಗಳ ಆನೆಗಳಿದ್ದು, ಈ ಭಾಗದಲ್ಲಿ ಮರಿಯಾನೆಗಳು ಕಾಣಿಸಿಕೊಂಡಿವೆ. ಇನ್ನೂ ಮೂಡಿಗೆರೆಯಿಂದ ಸುಮಾರು ಮೂರ್ನಾಲ್ಕು ಆನೆಗಳು ಜಿಲ್ಲೆಗೆ ವಲಸೆ ಬಂದಿದ್ದವು. ಅದನ್ನು ವಾಪಸ್ ಆ ಪ್ರದೇಶಕ್ಕೆ ಓಡಿಸುವ ಕಾರ್ಯ ಮಾಡಲಾಗುತ್ತಿದೆ. ಒಟ್ಟಾರೆಯಾಗಿ ಪ್ರಸ್ತುತ ಜಿಲ್ಲೆಯಲ್ಲಿ  ಆನೆಗಳ ಸಂಖ್ಯೆ 50ರ ಸಂಖ್ಯೆ ದಾಟಿದೆ
-ಲಕ್ಷ್ಮಣ್,  ಉಪ ಅರಣ್ಯ ಸಂರಕ್ಷಣಾಧಿಕಾರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.