ಕಸಾಪ ಸದಸ್ಯತ್ವ ಅಭಿಯಾನಕ್ಕೆ ಚಾಲನೆ
ಕ.ಪ್ರ.ವಾರ್ತೆ ಅರಕಲಗೂಡು ಆ.31
ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಸಕ್ರಿಯವಾಗಿ ನಡೆಯ ಬೇಕಾಗಿರುವುದರಿಂದ ಕೇಂದ್ರ ಸಾಹಿತ್ಯ ಪರಿಷತ್ತಿಗೆ ಬಲವೃದ್ಧಿಸುವ ಕೆಲಸ ಆಗಬೇಕಿದೆ. ಪರಿಷತ್ತಿಗೆ ಸರ್ಕಾರ ನೀಡುವ ಅನುದಾನ ನೆಚ್ಚಿಕೊಂಡು ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ, ಈ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಈ ವರ್ಷ ಪರಿಷತ್ತಿನ ಶತಮಾನೋತ್ಸವ ವರ್ಷ ಆಗಿರುವ ಹಿನ್ನೆಲೆಯಲ್ಲಿ ಇನ್ನೂ ಹೆಚ್ಚಿನ ಸದಸ್ಯತ್ವ ಬಲ ಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಂಟಿ ಕಾರ್ಯದರ್ಶಿ ಹಾಗೂ ಹೊಯ್ಸಳ ಸಿರಿ ಸಂಪಾದಕ ಅರಕಲಗೂಡು ಜಯಕುಮಾರ್ ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಪಟ್ಟಣ ಪಂಚಾಯ್ತಿ ಆವರಣದಲ್ಲಿ ನಡೆಸಿದ ಪರಿಷತ್ತಿನ ಸದಸ್ಯತ್ವ ನೋಂದಣಿ ಅಭಿಯಾನದಲ್ಲಿ ಅವರು ಮಾತನಾಡಿದರು.
ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿಯವರು ಅರಕಲಗೂಡುನವರೆ ಆಗಿದ್ದು ಇಲ್ಲಿ ಸದಸ್ಯತ್ವ ಹೆಚ್ಚಿಸುವ ಮತ್ತು ಕನ್ನಡ ಭವನ ನಿರ್ಮಿಸುವ ಒತ್ತಾಸೆ ತಿಳಿಸಿದ್ದಾರೆ. ಮುಂದಿನ ಸಾಲಿನಿಂದ ತಾಲೂಕು ಮಟ್ಟದ ಅಧ್ಯಕ್ಷರ ಆಯ್ಕೆಗೂ ಚುನಾವಣೆ ನಡೆಯಲಿದೆ. ಹಾಗೂ ಡಿಸೆಂಬರ್ ವೇಳೆಗೆ ಸದಸ್ಯತ್ವ ಶುಲ್ಕ 500 ರು. ಆಗಲಿದ್ದು ಈ ಕುರಿತು ಪರಿಷತ್ತು ಅಧಿಕೃತವಾಗಿ ಪ್ರಕಟಿಸಲಿದೆ ಎಂದು ತಿಳಿಸಿದರು.
ನಾಡು, ನುಡಿ ಉಳಿಸುವ ಕೆಲಸ: ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ರೇವಣ್ಣ ಮಾತನಾಡಿ ವರ್ತಮಾನದಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಬೆಳವಣಿಗೆಗಳಿಗೆ ಹೆಚ್ಚಿನ ಒತ್ತು ನೀಡಬೇಕಿದೆ. ಜಾಗತಿಕ ಯುಗದಲ್ಲಿ ನಮ್ಮತನವನ್ನೇ ನಾವು ಕಳೆದುಕೊಳ್ಳುವಂತಹ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಸಾಹಿತ್ಯ ಪರಿಷತ್ತು ನಮ್ಮ ನಾಡು ನುಡಿಯನ್ನು ಉಳಿಸಿ ಬೆಳೆಸುವ ಕಾಯಕದಲ್ಲಿ ತೊಡಗಿದೆ. ಪರಿಷತ್ತಿಗೆ ಸಾರ್ವಜನಿಕರ ಸಹಕಾರ ಮತ್ತು ಬೆಂಬಲ ಅಗತ್ಯವಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ನೋಂದಾಯಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಕೋರಿದರು.
ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಸುರೇಶ್ಬಾಬು ಕಾರ್ಯಕ್ರಮ ಉದ್ಘಾಟಿಸಿ, ಸದಸ್ಯತ್ವ ನೋಂದಣಿ ಅಭಿಯಾನದಲ್ಲಿ ಪಾಲ್ಗೊಳ್ಳಿ ಎಂದು ಮನವಿ ಮಾಡಿದರು.
ಮುಖ್ಯ ಅತಿಥಿಯಾಗಿದ್ದ ತಹಸೀಲ್ದಾರ್ ಜಗದೀಶ್ ಮಾತನಾಡಿ ರಚನಾತ್ಮಕ ಚಟುವಟಿಕೆಗಳು ಮತ್ತು ಸೃಜಶೀಲತೆ ಅರಳಲು ವಿವೇಕವಂತರು ಹೆಚ್ಚಿನ ಸಂಖ್ಯೆಯಲ್ಲಿ ಪರಿಷತ್ತಿನ ಸದಸ್ಯರಾಗಬೇಕು. ಆ ಮೂಲಕ ಕನ್ನಡ ನಾಡು ನುಡಿ ಕಟ್ಟುವ ಕಾಯಕಕ್ಕೆ ಕೈ ಜೋಡಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಶೈಲಶ್ರೀ ಮಾತನಾಡಿ ಪರಿಷತ್ತು ಶತಮಾನೋತ್ಸವದ ಹೊಸ್ತಿಲಲ್ಲಿದ್ದು ಉತ್ತಮ ಕೆಲಸ ಮಾಡುತ್ತಿದೆ. ಇದನ್ನು ಪ್ರೋತ್ಸಾಹಿಸುವ ಕೆಲಸವಾಗಲಿ, ಹೆಚ್ಚಿನ ಸಂಖ್ಯೆಯಲ್ಲಿ ಪರಿಷತ್ ಸದಸ್ಯರಾಗಿ ಎಂದು ಮನವಿ ಮಾಡಿದರು.
ಕನ್ನಡ ಭವನ ನಿರ್ಮಾಣ ಪ್ರಕ್ರಿಯೆ: ಪಟ್ಟಣದಲ್ಲಿ ಪರಿಷತ್ ನಿವೇಶನ ಹೊಂದಿದ್ದು ಶೀಘ್ರದಲ್ಲೇ ಕನ್ನಡ ಭವನ ನಿರ್ಮಾಣ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು. ಈ ಕುರಿತು ಜಿಲ್ಲಾ ಅಧ್ಯಕ್ಷ ಡಾ. ಜನಾರ್ದನ್ ನೇತೃತ್ವದಲ್ಲಿ ಪೂರ್ವಭಾವಿ ಸಭೆ ಕರೆದು ಕನ್ನಡ ಭವನ ನಿರ್ಮಾಣ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಗುವುದು. ದಾನಿಗಳು ಈ ಪ್ರಯತ್ನಕ್ಕೆ ಬೆಂಬಲಿಸಬೇಕು. ಮುಂದಿನ ವಾರಗಳಲ್ಲಿ ತಾಲೂಕಿನ ಇತರೆ ಹೋಬಳಿಗಳಲ್ಲೂ ಸದಸ್ಯತ್ವ ನೋಂದಣಿ ಅಭಿಯಾನ ನಡೆಯಲಿದೆ ಎಂದರು. ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಹೊಯ್ಸಳ ಸ್ವಾಗತಿಸಿದರು. ಕೋಶಾಧ್ಯಕ್ಷ ಪ್ರಹ್ಲಾದ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

