ಹಾಸನ

ಹಾಸನಕ್ಕೆ ಬಂದ್ರೆ ಗೌಡ್ರನ್ನ ನೆನಪಿಸಿಕೊಳ್ಳದಿರಲು ಸಾಧ್ಯವಿಲ್ಲ

Published On :

-ದಯಾಶಂಕರ ಮೈಲಿ
ಹಾಸನ:
ಇಲ್ಲ, ನನಗಾಗದು... ಅದು ಸಾಧ್ಯವೇ ಆಗುವುದಿಲ್ಲ. ಹಾಸನ ಜಿಲ್ಲೆಗೆ ಬಂದರೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಮತ್ತು ಮಾಜಿ ಸಚಿವ ದಿ. ಎಚ್.ಎನ್ ನಂಜೌಗೌಡರನ್ನು ನೆನಪಿಸಿಕೊಳ್ಳದೇ ಇರುವುದಕ್ಕೆ ನನಾಗುವುದೇ ಇಲ್ಲ...  
ಹೀಗೆ ಭಾವುಕರಾಗಿ ಹೇಳಿದವರು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲರು.
ಹೊಳೆನರಸೀಪುರ ತಾಲೂಕು ಬೆಟ್ಟದ ಗುಳ್ಳದಪುರ ಗ್ರಾಮದಲ್ಲಿರುವ ಬೆಟ್ಟದ ಶ್ರೀ ವೆಂಕಟರಮಣಸ್ವಾಮಿ ದೇವಾಲಯದ ರಸ್ತೆ ಕಾಮಗಾರಿಗಳಿಗೆ ಶನಿವಾರ ಚಾಲನೆ ನೀಡಿ ಮಾತನಾಡಿ, ನಮ್ಮ ಭಾಗಕ್ಕೆ ದೇವೇಗೌಡರು ತಮ್ಮ ಪಕ್ಷದ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ಮಾಡಲು ಬರುತ್ತಿದ್ದರು. ಈ ಸಂದರ್ಭದಲ್ಲಿ ಗೌಡರು, ತಮ್ಮ ಅಭ್ಯರ್ಥಿ ಮತ್ತು ಪಕ್ಷದ ಬಗ್ಗೆ ಮಾತನಾಡುವುದಕ್ಕೂ ಮೊದಲು ಅಪ್ಪಟ ಕಾಂಗ್ರೆಸ್ಸಿಗರಾಗಿದ್ದ ನನ್ನ ತಂದೆಯವರಾದ ದಿ. ಕೆ.ಎಚ್.ಪಾಟೀಲರ ವ್ಯಕ್ತಿತ್ವವನ್ನು ಶ್ಲಾಘಿಸುತ್ತಿದ್ದರು. 'ಇದೇನಿದು ಗೌಡರು, ಪ್ರತಿಪಕ್ಷ ಮುಖಂಡರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರಲ್ಲಾ?' ಎಂದು ದಳದ ಸ್ಥಳೀಯ ಮುಖಂಡರಿಗೆ ಇರುಸು ಮುರುಸಾದರೂ ಗೌಡರು ಲೆಕ್ಕಕ್ಕೇ ತೆಗೆದುಕೊಳ್ಳುತ್ತಿರಲಿಲ್ಲ. ನಾನು ನೀರಾವರಿ ಸಚಿವನಾಗಿದ್ದಾಗ ಕೃಷ್ಣಾ ಮತ್ತು ಕಾವೇರಿ ನದಿ ನೀರಿನ ಹಂಚಿಕೆ ವಿವಾದದ ಬಗ್ಗೆ ಚರ್ಚಿಸಲು ಗೌಡರ ಬಳಿ ಹೋಗುವೆ.
ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಸಲ್ಲದು: ಆಗ ಗೌಡರು, ಪಕ್ಷ ಭೇದವೆಣಿಸದೇ, ನಿರ್ಮಲ ಮನಸಿನಲ್ಲಿ ಚರ್ಚಿಸಿ, ನದಿ ನೀರಿನ ಹಂಚಿಕೆ ವಿವಾದದ ಒಳ ಸುಳಿಗಳ ಬಗ್ಗೆ ತಿಳಿಸಿಕೊಡುತ್ತಿದ್ದರಲ್ಲದೇ ಅಮೂಲ್ಯ ಸಲಹೆ, ಮಾರ್ಗದರ್ಶನಗಳನ್ನು ನೀಡುತ್ತಿದ್ದರು. ನನ್ನ ತಂದೆಯವರೊಡನೆ ಗೌಡರಿಗೆ ಅಗಾಧವಾದ ಸಂಬಂಧ, ಪ್ರೀತಿ ಇತ್ತು. ಪಕ್ಷ ಮತ್ತು ರಾಜಕಾರಣ ಬೇರೆ. ಚುನಾವಣೆ ವೇಳೆ ಜಿದ್ದಾಜಿದ್ದಿ ಇದ್ದದ್ದೇ. ಆದರೆ ಚುನಾವಣೆ ನಂತರದಲ್ಲಿ ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡಬಾರದು ಎಂಬುದಕ್ಕೆ ಇವೆಲ್ಲ ಸಾಕ್ಷಿ ಎಂದರು. ರೈತರ ಬಗ್ಗೆ ಕಾಳಚಿ ಇರುವ ಮನುಷ್ಯ. ಕರ್ನಾಟಕದ ಕನ್ನಡಿಗ ಪ್ರಧಾನಿಯಾಗಿದ್ದು ನನಂಗತೂ ತುಂಬಾ ಸಂತೋಷವನ್ನುಂಟು ಮಾಡಿತ್ತು. ರೈತ ಮಗನಿಗಿಂತ ಹೆಚ್ಚಾಗಿ, ಒಬ್ಬ ಕನ್ನಡಿಗನೂ ಪ್ರಧಾನಿಯಾಗಬಹುದು ಎಂಬುದನ್ನು ತೋರಿಸಿಕೊಟ್ಟವರು ಗೌಡರು. ಹೀಗೆ ಪಾಟೀಲರು ಭಾವುಕ ಲೋಕಕ್ಕೆ ತೆರಳಿದಾಗ ಅಕ್ಕಪಕ್ಕಾ ಕಾಂಗ್ರೆಸ್ ಶಾಸಕ ಎ.ಮಂಜು ಮತ್ತು ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ ಇದ್ದರು. ನಂತರ ಮಂಜು ಹಾಗೂ ಎಚ್.ಡಿ. ರೇವಣ್ಣನವರೊಂದಿಗೆ ಮಾತನಾಡಿದ್ದು ಹೀಗೆ....
'ನೋಡಿ... ನಮ್ಮ ಕಡೆ ರಾಜಕಾರಣಿಗಳು ಕಾರಿನಲ್ಲಿ ಪ್ರೀತಿ, ವಿಶ್ವಾಸದಿಂದ ಮಾತನಾಡಿಕೊಂಡು ಬರುತ್ತಾರೆ. ವೇದಿಕೆಯಲ್ಲಿ ಬಡಿದಾಡುತ್ತಾರೆ. ಆದರೆ, ದಕ್ಷಿಣ ಕರ್ನಾಟಕದವರು ಹಾಗಲ್ಲ. ಕಾರಿನೊಳಗೆ ಜಗಳವಾಡುತ್ತಾರೆ. ವೇದಿಕೆಯಲ್ಲಿ ಪರಸ್ಪರ ಕೊಂಡಾಡುತ್ತಾರೆ. ಅದಕ್ಕೆ ಸಾಕ್ಷಿ ನಮ್ಮ ಶಾಸಕ ಎ.ಮಂಜು ಮತ್ತು ಮಾಜಿ ಸಚಿವ ಎಚ್.ಡಿ.ರೇವಣ್ಣ. ನನ್ನ ಕಾರಿನಲ್ಲಿ ಇಬ್ಬರು ಬರುವಾಗ ಅಭಿವೃದ್ಧಿ ವಿಚಾರದಲ್ಲಿ ಪರಸ್ಪರ ವಾದ ವಿವಾದ ನಡೆಸಿದರು. ಆದರೆ ವೇದಿಕೆಯಲ್ಲಿ ಅವರಿಬ್ಬರು ಪರಸ್ಪರ ಕೊಂಡಾಡುತ್ತಾರೆ. ಹೆಂಗಿದೆ ನೋಡಿ?' ಎಂದು ಪಾಟೀಲರು ಹಾಸ್ಯ ಚಟಾಕಿ ಹಾರಿಸಿದಾಗ ನಗುವಿನ ಅಲೆ. ದಿ. ನಂಜೇಗೌಡರು ಮತ್ತು ಎ.ಮಂಜು ನಡುವೆ ಸಂಬಂಧ ಸರಿ ಇರಲಿಲ್ಲ. ಅದನ್ನು ಸರಿಪಡಿಸಲು ಸಾಕಷ್ಟು ಶ್ರಮಿಸಿದ್ದೇನೆ. ಖರೆ, ಅಲ್ವೋ ಮಂಜಣ್ಣ ಎಂದು ತಮ್ಮ ಬಲಭಾಗದಲ್ಲಿದ್ದ ಮಂಜು ಅವರನ್ನು ಕೇಳಿದರು. ಆಗ ಮಂಜು..ನಗುತ್ತಲ್ಲೆ 'ಹೌದು. ಹೌದು ಸಾರ್‌' ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.