ಕಾರು ಡಿಕ್ಕಿ: 16 ಕುರಿಗಳ ಸಾವು
ಹೊಳೆನರಸೀಪುರ: ಅತಿವೇಗದಿಂದ ಬಂದ ಕಾರೊಂದು ರಸ್ತೆಯ ಬದಿಯಲ್ಲಿ ಸಂಜೆ ವೇಳೆಯಲ್ಲಿ ಮನೆಗೆ ಹಿಂತಿರುಗುತ್ತಿದ್ದ ಕುರಿ ಮಂದೆಯ ಮೇಲೆ ಹರಿದ ಪರಿಣಾಮವಾಗಿ 16 ಕುರಿಗಳು ಸ್ಥಳದಲ್ಲೇ ಮೃತಪಟ್ಟು, ಮಂದೆಯಲ್ಲಿ ಸಾಗುತ್ತಿದ್ದ ಇನ್ನಿತರ 15 ಕುರಿಗಳು ತೀವ್ರವಾಗಿ ಗಾಯೊಗೊಂಡಿರುವ ದಾರುಣ ಘಟನೆ ತಾಲೂಕಿನ ಯಡೇಗೌಡನಹಳ್ಳಿ ಗ್ರಾಮದ ಬಳಿ ನಡೆದಿದೆ.
ತಾಲೂಕಿನ ಯಡೇಗೌಡನಹಳ್ಳಿ ಗ್ರಾಮದ ಚಿಕ್ಕೇಗೌಡ ಎಂಬುವವರಿಗೆ ಸೇರಿದ ಕುರಿಗಳು ಸಂಜೆಯಾದ ಸಮಯದಲ್ಲಿ ಮನೆಗೆ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಹೊಳೆನರಸೀಪುರ ಕಡೆಯಿಂದ ಮೈಸೂರು ಕಡೆಗೆ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಸಾಗಿ ಬಂದ ಕಾರೊಂದು ಏಕಾಏಕಿ ಕುರಿಗಳ ಮೇಲೆ ಹರಿದ ಪರಿಣಾಮವಾಗಿ 8 ಗರ್ಭಧರಿಸಿದ್ದ ಕುರಿಗಳೂ ಸೇರಿದಂತೆ 16 ಕುರಿಗಳು ಸ್ಥಳದಲ್ಲೇ ಮೃತಪಟ್ಟರೆ, ಜೊತೆಯಲ್ಲಿ ಸಾಗುತ್ತಿದ್ದ ಮಂದೆಯ ಕುರಿಗಳ ಪೈಕಿ 15 ಕುರಿಗಳು ತೀವ್ರವಾಗಿ ಗಾಯೊಗೊಂಡಿವೆ ಎಂದು ವರದಿಯಾಗಿದೆ.
ಆದರೆ, ಅಪಘಾತ ನಡೆದ ಕೂಡಲೇ ಕಾರು ಚಾಲಕ ವಾಹನವನ್ನು ನಿಲ್ಲಿಸದೇ, ಸ್ಥಳದಿಂದ ಪರಾರಿಯಾಗಿದ್ದು, ಅಪಘಾತ ನಡೆದ ಸಂದರ್ಭದಲ್ಲಿ ಕಾರಿನ ಮುಂಭಾಗದ ಬಂಪರ್ ಮುರಿದು ಬಿದ್ದಿದ್ದು, ಇದರಲ್ಲಿದ್ದ ಕಾರಿನ ನೋಂದಣಿ ಸಂಖ್ಯೆ ಲಭ್ಯವಾಗಿದ್ದು, ಸ್ಥಳದಲ್ಲಿದ್ದ ಗ್ರಾಮಸ್ಥರುಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನೆ ನಡೆದ ಕೂಡಲೇ ಇಲ್ಲಿನ ಗ್ರಾಮಾಂತರ ಠಾಣೆಗೆ ದೂರು ನೀಡಲಾಗಿ ಸ್ಥಳಕ್ಕೆ ತೆರಳಿದ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳ ಮಹಜರು ನಡೆಸಿ ಕುರಿಗಳ ಮಾಲೀಕರಾದ ಚಿಕ್ಕೇಗೌಡ ಅವರ ದೂರು ದಾಖಲಿಸಿಕೊಂಡಿದ್ದಾರೆ. ಅಪಘಾತದಲ್ಲಿ ಮೃತಪಟ್ಟ ಕುರಿಗಳನ್ನು ಇಲ್ಲಿನ ಪಶು ವೈದ್ಯಾಧಿಕಾರಿಗಳಿಂದ ಮರಣೋತ್ತರ ಪರೀಕ್ಷೆ ನಡೆಸಿ ನಂತರ ವಾರಸುದಾರರಿಗೆ ಒಪ್ಪಿಸಲಾಯಿತು. ಮೃತಪಟ್ಟಿರುವ ಹಾಗೂ ಗಾಯಗೊಂಡಿರುವ ಕುರಿಗಳ ಒಟ್ಟು ಮೌಲ್ಯ ಸುಮಾರು ರು. 1.28 ಲಕ್ಷ ಎಂದು ಅಂದಾಜಿಸಲಾಗಿದೆ.
ವಾಸನ್ ಕಣ್ಣಿನ ಆಸ್ಪತ್ರೆ ಉದ್ಘಾಟನೆ
ಹಾಸನ: ವಾಸನ್ ಐ ಕೇರ್ ತನ್ನ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯನ್ನು ಪ್ರಾರಂಭಿಸಿದ್ದು, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಈ ಹೊಸ ಆಸ್ಪತ್ರೆಯನ್ನು ಬುಧವಾರ ಉದ್ಘಾಟಿಸಿದರು. ನಂತರ ಆಸ್ಪತ್ರೆಯಲ್ಲಿನ ಹೈಟೆಕ್ ವ್ಯವಸ್ಥೆಯನ್ನು ವೀಕ್ಷಿಸಿದ ಮಾಜಿ ಪ್ರಧಾನಿ, ಇದರ ಸದುಪಯೋಗವನ್ನು ಜಿಲ್ಲೆಯ ಜನತೆ ಪಡೆದುಕೊಳ್ಳಬೇಕು. ಆಸ್ಪತ್ರೆಗೆ ಶುಭವಾಗಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಮಾತನಾಡಿದ ವಾಸನ್ ಹೆಲ್ತ್ಕೇರ್ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಎನ್. ದ್ವಾರಕನಾಥನ್, ಶ್ರೀ ಸಾಮಾನ್ಯರ ಮನೆ ಬಾಗಿಲಿಗೆ ನೇತ್ರ ಆರೈಕೆ ಸೇವೆಗಳನ್ನು ತರುವ ದೃಷ್ಟಿಯಿಂದ ವಾಸನ್ ಐ ಕೇರ್ ನಡೆಸುತ್ತಿರುವ ವಿಸ್ತರಣೆಯ ಭಾಗವಾಗಿದೆ. ದೇಶದಲ್ಲಿರುವ ಎಲ್ಲಾ ಆಸ್ಪತ್ರೆಗಳೂ ನೇತ್ರ ಆರೈಕೆಯ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಹೊಂದಿದ್ದು, ಆರೈಕೆಯ ಅಗತ್ಯವುಳ್ಳವರಿಗೆ ಸಮಾನ ಗಮನ ನೀಡುತ್ತವೆ. ಪ್ರತಿ ಘಟಕವೂ ಸೂಪರ್ ಸ್ಪೆಷಾಲಿಟಿ ಕೇಂದ್ರವಾಗಿದ್ದು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸೂಪರ್ ಸ್ಪೆಷಾಲಿಟಿ ವೈದ್ಯರನ್ನು ಹೊಂದಿವೆ ಎಂದರು. ಲಕ್ಷಾಂತರ ಮಂದಿಯ ಜೀವನದಲ್ಲಿ ಪರಿವರ್ತನೆ ತರುವ ದೃಷ್ಟಿಯಿಂದ ಈ ಸೂಪರ್ ಸ್ಪೆಷಾಲಿಟಿ ಮತ್ತು ಹೈಟೆಕ್ ಕಣ್ಣಿನ ಆಸ್ಪತ್ರೆಯನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಶಾಸಕ ಎಚ್.ಎಸ್. ಪ್ರಕಾಶ್, ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ, ನಗರಸಭೆ ಅಧ್ಯಕ್ಷೆ ಎಚ್.ಎಚ್. ಶ್ರೀವಿದ್ಯಾ ಆನಂದ, ಹಾಸನ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಡಿ.ಜಿ. ಅಂಬಿಕಾ ರಾಮಣ್ಣ ಹಾಗೂ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

