ಹಾಸನ

ಗ್ರಾಮ ಪಂಚಾಯ್ತಿ ಕೊಡಗಿಗೆ ಸೇರಿಸಲು ಸದಸ್ಯರ ಆಗ್ರಹ

Published On :

ಸಕಲೇಶಪುರ: ತಾಲೂಕಿನ ಯಸಳೂರು ಹೋಬಳಿಯ 5 ಗ್ರಾಮ ಪಂಚಾಯ್ತಿಗಳನ್ನು  ಕೊಡಗಿಗೆ ಸೇರಿಸುವಂತೆ ಹೋರಾಟ ನಡೆಸುವ ನಿಟ್ಟಿನಲ್ಲಿ ಈ ಭಾಗದ ಗ್ರಾಪಂ ಅಧ್ಯಕ್ಷರು ಹಾಗೂ ರಾಜಕೀಯ ಮುಖಂಡರು ಸೋಮವಾರ ತಾಲೂಕಿನ ಹೊಸೂರು ಗ್ರಾಪಂ ಕಚೇರಿ ಮುಂಭಾಗ ಸಭೆ ನಡೆಸಿ, ಸಂಚಲನ ಸಮಿತಿ ಹುಟ್ಟುಹಾಕಿದ್ದಾರೆ.
ವರದಿ ನೀಡಲಾಗಿದೆ: ಸಭೆಯಲ್ಲಿ ಮಾತನಾಡಿದ ಮುಖಂಡರು 1882ರಲ್ಲಿ ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಚಿಸಲಾಗಿದ್ದ ಹುಂಡೇಕರ್ ಹಾಗೂ ವಾಸುದೇವ್ ಕಮಿಟಿ ಈ ಭಾಗದಲ್ಲಿ ಸಮೀಕ್ಷೆ ನಡೆಸಿ ಸಕಲೇಶಪುರ ತಾಲೂಕಿನ ಯಸಳೂರು, ವಣಗೂರು, ಚಂಗಡಿಹಳ್ಳಿ,ಉಚ್ಚಂಗಿ ಹಾಗೂ ಹೊಸೂರು ಗ್ರಾಪಂಗಳನ್ನು ಕೊಡಗು ಜಿಲ್ಲೆಗೆ ಸೇರಿಸವಂತೆ ವರದಿ ನೀಡಲಾಗಿದೆ.
ಈ ಗ್ರಾಮ ಪಂಚಾಯ್ತಿಗಳು ಕೊಡಗು ಜಿಲ್ಲೆಗೆ ಹತ್ತಿರವಿರುವುದಲ್ಲದೆ, ಈ ಭಾಗದ ಜನರ ಸಂಪೂರ್ಣ ಆರ್ಥಿಕ ವಹಿವಾಟು, ಸಂಸ್ಕತಿ ಹಾಗೂ ಬಾಂಧವ್ಯಗಳು ಕೊಡುಗು ಜಿಲ್ಲೆಯೊಂದಿಗೆ ಹೆಚ್ಚಿನ ಹೊಂದಾಣಿಕೆ ಇರುವ ಕಾರಣ ಈ ಐದು ಗ್ರಾಮ ಪಂಚಾಯ್ತಿಗಳನ್ನು   ಕೊಡಗಿಗೆ ಸೇರಿಸಬೇಕು ಎಂಬ ಕಾರಣ ನೀಡಲಾಗಿತ್ತು.
ವರದಿ ಅನುಷ್ಠಾನಗೊಂಡಿಲ್ಲ: ಈ ಎರಡು ಸಮಿತಿಗಳು ನೀಡಿದ ವರದಿಯನ್ನು ಅನುಷ್ಠಾನಕ್ಕೆ ತರಲು ರಾಜ್ಯ ಸರ್ಕಾರಗಳು ವಿಫಲವಾಗಿರುವುದರಿಂದಾಗಿ ಈ ಭಾಗದ ಜನರು ಸಂಕಷ್ಟಕ್ಕೆ ಸಿಲುಕಿದ್ದು,  ಈ ಗ್ರಾಪಂಗಳ ಜನರು ಸಕಲೇಶಪುರ ತಾಲೂಕು ಕೇಂದ್ರಕ್ಕೆ 45 ಕಿ.ಮೀ. ಕ್ರಮಿಸಬೇಕಿದ್ದರೆ, ಕೊಡಗಿನ ಸೋಮವಾರಪೇಟೆಗೆ ಕೇವಲ 15 ಕಿ.ಮೀ. ಹತ್ತಿರದಲ್ಲಿದೆ. ಅಲ್ಲದೆ ಕೊಡಗು ಜಿಲ್ಲೆ ಈ ಗ್ರಾಮ ಪಂಚಾಯ್ತಿಗಳನ್ನು ಆವರಿಸಿದ್ದು ಕೊಡಗು ಜಿಲ್ಲೆಯ ಗ್ರಾಮಗಳಿಗೆ ಹೋಲಿಕೆ ಮಾಡಿದರೆ ಸಕಲೇಶಪುರ ತಾಲೂಕಿನ ಗ್ರಾಮಗಳು ಅಭಿವೃದ್ಧಿಯಲ್ಲಿ 20 ವರ್ಷದಷ್ಟು ಹಿಂದುಳಿದಿದೆ.
ಅನಿವಾರ್ಯ: ಈ ಭಾಗದಲ್ಲಿ ಸಂಪೂರ್ಣ ರಸ್ತೆಗಳು ಹದಗೆಟ್ಟಿದ್ದರೆ, ಕುಡಿಯುವ ನೀರು, ವಿದ್ಯುತ್ ಸಮಸ್ಯೆ ಹಾಗೂ ಆಸ್ಪತ್ರೆಯಂಥ ಮೂಲಭೂತ ಸೌಕರ್ಯಗಳು ಜನರನ್ನು ಕಾಡುತ್ತಿವೆ. ಆದ್ದರಿಂದ, ಈ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳನ್ನು ಕೊಡಗಿಗೆ ಸೇರಿಸುವುದು ಅನಿವಾರ್ಯವಾಗಿದೆ ಎಂದು ಮುಖಂಡರು ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಈ ನಿಟ್ಟಿನಲ್ಲಿ ಹೋರಾಟ ನಡೆಸಲು ಗ್ರಾಪಂ ವ್ಯಾಪ್ತಿಯಿಂದ ಇಬ್ಬರನ್ನು ಒಳಗೊಂಡ ಸಂಚಲನ ಸಮಿತಿ ಹುಟ್ಟುಹಾಕಲಾಗಿದ್ದು, ಮುಂದಿನ ದಿನಗಳಲ್ಲಿ ಸೋಮವಾರಪೇಟೆ ಹಾಗೂ ಸಕಲೇಶಪುರ ತಾಲೂಕು ಕೇಂದ್ರದಲ್ಲಿ ಹೋರಾಟ ನಡೆಸುವುದು ನಂತರ ಜಿಲ್ಲಾ ಕೇಂದ್ರಗಳಿಗೆ ಹೋರಾಟ ವಿಸ್ತರಣೆ ಮಾಡುವ ನಿರ್ಧಾರಕ್ಕೆ ಬರಲಾಯಿತು. ಸಭೆಯಲ್ಲಿ ಉಚ್ಚಂಗಿ ಗ್ರಾಪಂ ಅಧ್ಯಕ್ಷ ಸತೀಶ್, ಹೊಸೂರು ಗ್ರಾಪಂ ಅಧ್ಯಕ್ಷ ಪುಟ್ಟಸ್ವಾಮಿಗೌಡ, ಚಂಗಡಿಹಳ್ಳಿ ಗ್ರಾಪಂ ಅಧ್ಯಕ್ಷೆ ಗೀತಾ,  ಮುಖಂಡರಾದ ಮಾಗೇರಿ ರಾಜೇಗೌಡ, ಹೊಸೂರು ರವಿ, ಸುಂಡಳ್ಳಿ ಬಸಪ್ಪ ಸೇರಿದಂತೆ ನೂರಾರು ಜನರು ಸಭೆಯಲ್ಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.