ಹಾಸನ

ಸೂಕ್ತ ಬೆಂಬಲ ಬೆಲೆ ಸಿಗದೆ ರೈತರ ಬದುಕು ದುಸ್ಥರ

Published On :

ಕನ್ನಡಪ್ರಭ ವಾರ್ತೆ ಅರಸೀಕೆರೆ ಡಿ.11
ಜಾಗತೀಕರಣ ಪರಿಣಾಮ ಭಾರತದ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಂಬಲ ಬೆಲೆ ದೊರಕದೆ ರೈತರ ಬದುಕು ದುಸ್ತರವಾಗಿದೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ವಿಷಾದಿಸಿದರು.
ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಮತ್ತು ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆಶ್ರಯದಲ್ಲಿ ತಾಲೂಕಿನ ಗಂಡಸಿ ಹ್ಯಾಂಡ್‌ಪೋಸ್ಟ್ ಬಳಿಯ ಕೃಷಿ ಉತ್ಪನ್ನ ಉಪ ಮಾರುಕಟ್ಟೆ ಆವರಣದಲ್ಲಿ ರೈತರಿಂದ ಮೆಕ್ಕೆ ಜೋಳ ಮತ್ತು ರಾಗಿ ಖರೀದಿ ಕೇಂದ್ರವನ್ನು ಇತ್ತೀಚೆಗೆ ಉದ್ಘಾಟಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆತಂಕ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೇಶದ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಪ್ರೋತ್ಸಾಹ ನೀಡದ ಕಾರಣ ಇಂದು ರೈತ ಒಂದು ಕ್ವಿಂಟಾಲ್ ರಾಗಿ ಬೆಳೆಯಲು 15 ಸಾವಿರ ರು ಖರ್ಚು ಮಾಡಬೇಕಾಗಿದೆ. ಆಕಸ್ಮಿಕವಾಗಿ ಬೆಳೆ ಮಳೆಯಿಲ್ಲದೆ ಕೈ ಕೊಟ್ಟರೆ ಆತನ ಗೋಳು ಹೇಳತೀರದಾಗಿದೆ. ಆತ ತುಂಬಾ ಕಷ್ಟಪಟ್ಟು ಬೆಳೆದ ಬೆಳೆಗೆ ಸಕಾಲದಲ್ಲಿ ಸೂಕ್ತ ಬೆಂಬಲ ಬೆಲೆ ಮಾರುಕಟ್ಟೆಯಲ್ಲಿ ದೊರೆಯದಿದ್ದ ಪಕ್ಷದಲ್ಲಿ ಬೇರೆ ದಾರಿ ಕಾಣದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ ಎಂದು ಆತಂಕ ವ್ಯಕ್ತಪಡಿಸಿದರು.
ಆಮದಿನಿಂದ ತೊಂದರೆ: ಜಾಗತೀಕರಣದ ಪರಿಣಾಮ ಬ್ರೆಜಿಲ್ ದೇಶದಿಂದ ಸಕ್ಕರೆಯನ್ನು ಆಮದು ಮಾಡಿಕೊಳ್ಳುತ್ತಿರುವ ಕಾರಣ ಇಲ್ಲಿನ ಸಕ್ಕರೆಗೆ ಮಾರುಕಟ್ಟೆಯಲ್ಲಿ ಬೆಲೆಯಿಲ್ಲದೆ ರೈತರು ಬೆಳೆದ ಕಬ್ಬನ್ನು ಪ್ಯಾಕ್ಟರಿ ಮಾಲೀಕರು ಕಡಿಮೆ ಬೆಲೆಗೆ ಕೇಳುತ್ತಿದ್ದು, ರೈತನಿಗೆ ತಾನು ವ್ಯವಸಾಯಕ್ಕೆ ಮಾಡಿದ ಖರ್ಚು ಕೂಡ ದೊರಕದೆ ಸಾಲದ ಶೂಲಕ್ಕೆ ತುತ್ತಾಗುತ್ತಿದ್ದಾನೆ. ಆದ್ದರಿಂದ ಸರ್ಕಾರ ಇಂತಹ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ರೈತರ ಸಂಕಷ್ಟಕ್ಕೆ ತಕ್ಷಣ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದರು.
ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಹಾಯಕ ನಿರ್ದೇಶಕ ಎಸ್.ಇ. ಮಹದೇವಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರ ರೈತರು ಬೆಳೆದಿರುವ ಮೆಕ್ಕೆಜೋಳ ಮತ್ತು ರಾಗಿ ಧಾನ್ಯಗಳಿಗೆ ಬೆಂಬಲ ಬೆಲೆ ನೀಡಿ ಖರೀದಿ ಮಾಡಲು ಖರೀದಿ ಕೇಂದ್ರವನ್ನು ಪ್ರಾರಂಭಿಸಿದ್ದು, ರಾಗಿ ಕ್ವಿಂಟಾಲ್‌ಗೆ ರು. 1,500 ಇದ್ದು, ಪ್ರೋತ್ಸಾಹ ಧನ ರು. 300ಗಳು ಸೇರಿ ಒಟ್ಟು ರು. 1800ಗಳನ್ನು ನೀಡಲಾಗುವುದು ಎಂದು ಹೇಳಿದರು.
ದೃಢೀಕೃತ ಪಹಣಿ: ಅಂತೆಯೇ ಎಫ್.ಎ.ಕ್ಯೂ. ಗುಣಮಟ್ಟದ ಮೆಕ್ಕೆಜೋಳಕ್ಕೆ ಕ್ವಿಂಟಾಲ್‌ಗೆ ರು. 1,310  ದರದಲ್ಲಿ ಖರೀದಿಸಲಾಗುವುದು. ರೈತರು ಮಧ್ಯವರ್ತಿಗಳ ಹಾವಳಿಗೆ ಬಲಿಯಾಗದೆ ನೇರವಾಗಿ ಖರೀದಿ ಕೇಂದ್ರಕ್ಕೆ ತಂದು ಧಾನ್ಯಗಳನ್ನು ಮಾರಾಟ ಮಾಡಿದರೆ ಅವರಿಗೆ 7 ದಿನಗಳಲ್ಲಿ ಹಣವನ್ನು ಪಾವತಿ ಮಾಡಲಾಗುವುದು. ಧಾನ್ಯಗಳು ಉತ್ತಮ ಗುಣಮಟ್ಟದಿಂದ ಕೂಡಿದ್ದು, ದೃಢೀಕೃತ ಪಹಣಿಯನ್ನು ರೈತರು ಹೊಂದಿರಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಎಪಿಎಂಸಿ ಅಧ್ಯಕ್ಷ ಅಜ್ಜಪ್ಪ ಮಾತನಾಡಿ,  ಶಾಸಕರ ಹೋರಾಟ ಫಲವಾಗಿ ತಾಲೂಕಿನ ಗಂಡಸಿ ಮತ್ತು ಜಾವಗಲ್ ಉಪಮಾರುಕಟ್ಟೆಯಲ್ಲಿ ಖರೀದಿ ಕೇಂದ್ರಗಳು ಆರಂಭವಾಗುತ್ತಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು. ಜಿ.ಪಂ. ಸದಸ್ಯ ಹುಚ್ಚೇಗೌಡ ಮಾತನಾಡಿದರು.
ಜಿಲ್ಲಾ ಉಪ ವಿಭಾಗಾಧಿಕಾರಿ ಶರತ್ ಕಾರ್ಯಕ್ರಮ ಉದ್ಘಾಟಿಸಿದರು. ತಹಸೀಲ್ದಾರ್ ಕೇಶವಮೂರ್ತಿ, ಕೆಪಿಸಿಎಸ್‌ಸಿ ಜಿಲ್ಲಾ ವ್ಯವಸ್ಥಾಪಕ ವಿಠಲ್‌ರಾವ್, ಲಾಳನಕೆರೆ ಗ್ರಾಪಂ ಅಧ್ಯಕ್ಷ ಧರ್ಮಪ್ಪ, ಎಪಿಎಂಸಿ ನಿರ್ದೇಶಕ ಸಿದ್ದಲಿಂಗಪ್ಪ, ಜಯಕುಮಾರ್, ಕುಶಾಲ್ ಬಾಬು, ಕಾರ್ಯದರ್ಶಿ ಸುಧೀಂದ್ರ ಕಾರ್ಯಕ್ರಮದಲ್ಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.