ಹಾಸನ

19ರಿಂದ 22ರವರೆಗೆ ಆಳ್ವಾಸ್ ನುಡಿಸಿರಿ ಸಮ್ಮೇಳನ

Published On :

ಹಾಸನ: ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ 2013 ವಿಶ್ವ ಸಮ್ಮೇಳನ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಟ್ರಸ್ಟ್ ವತಿಯಿಂದ ಡಿ. 19ರಿಂದ 22ರವರೆಗೆ ನಡೆಯಲಿದೆ ಎಂದು ವಿರಾಸತ್‌ನ ಜಿಲ್ಲಾಧ್ಯಕ್ಷ ಎಚ್.ಬಿ. ಮದನ್ ಗೌಡ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನದ ಅಧ್ಯಕ್ಷರಾಗಿ ಹಂಪಿ ಕನ್ನಡ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಬಿ.ಎ. ವಿವೇಕ ರೈ ವಹಿಸಲಿದ್ದು, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಉದ್ಘಾಟಿಸಲಿದ್ದಾರೆ. ಸಮ್ಮೇಳನದಲ್ಲಿ ಸಾಹಿತಿಗಳಾದ ಡಾ.ಬರಗೂರು ರಾಮಚಂದ್ರಪ್ಪ, ಡಾ.ಎಸ್.ಎಲ್. ಭೈರಪ್ಪ, ಡಾ. ಚಂದ್ರಶೇಖರ ಕಂಬಾರ, ಪ್ರೊ.ಜಿ. ವೆಂಕಟ ಸುಬ್ಬಯ್ಯ, ಡಾ. ಚನ್ನವೀರ ಕಣವಿ, ಡಾ. ಹಂಪ ನಾಗರಾಜಯ್ಯ, ಡಾ.ಎಂ.ಎಂ. ಕಲಬುರ್ಗಿ, ವೈದೇಹಿ, ಡಾ.ಕೆ.ಎಸ್. ನಿಸಾರ್ ಅಹಮ್ಮದ್ ಭಾಗವಹಿಸಲಿದ್ದು, ಅವರನ್ನು ಸನ್ಮಾನಿಸಿ ಗೌರವಿಸಲಾಗುತ್ತದೆ ಎಂದರು.
3 ಗೋಷ್ಠಿಗಳು: ಸಮಾವೇಶದಲ್ಲಿ ಮೂರು ಗೋಷ್ಠಿಗಳು ನಡೆಯಲಿದ್ದು, ಡಿ. 20ರಂದು ಸಾಹಿತ್ಯ ಗೋಷ್ಠಿಯಲ್ಲಿ ಡಾ. ಚಂದ್ರಶೇಖರ್ ಕಂಬಾರ, ಡಾ.ಎಸ್.ಎಲ್. ಭೈರಪ್ಪ ಭಾಗವಹಿಸುವರು.
ಡಿ.21 ರಂದು ನಡೆಯುವ ರಾಜಕಾರಣ ಕುರಿತ ಗೋಷ್ಠಿಯಲ್ಲಿ ಎಂ.ಸಿ. ನಾಣಯ್ಯ, ಬಿ. ಸುರೇಶ್ ಕುಮಾರ್, ಬಿ.ಎಲ್. ಶಂಕರ್ ಭಾಗವಹಿಸುವರು ಹಾಗೂ ಡಿ. 22ರಂದು ನಡೆಯುವ ಮಾಧ್ಯಮಗೋಷ್ಠಿಯಲ್ಲಿ ಕನ್ನಡಪ್ರಭ ಪತ್ರಿಕೆಯ ಸಂಪಾದಕರಾದ ವಿಶ್ವೇಶ್ವರ ಭಟ್, ಪತ್ರಕರ್ತರಾದ ಪದ್ಮರಾಜ ದಂಡವತೆ ಹಾಗೂ ಟಿ.ಎನ್.ಸೀತಾರಂ ಭಾಗವಹಿಸುವರು.
ಸಮ್ಮೇಳನದಲ್ಲಿ ಒಟ್ಟು ನಾಲ್ಕು ವಿಚಾರಗೋಷ್ಠಿ ನಡೆಯಲಿದ್ದು, ವಿಶ್ವ ಕನ್ನಡ ಎಂಬ ಗೋಷ್ಠಿಯಲ್ಲಿ ಹೊರದೇಶದಲ್ಲಿ ಕನ್ನಡ, ಹೊರನಾಡಿನಲ್ಲಿ ಕನ್ನಡ ಮತ್ತು ಗಡಿನಾಡಿನಲ್ಲಿ ಕನ್ನಡ ಎಂಬ ವಿಚಾರಗಳ ಕುರಿತು ಡಾ. ನಾಗ ಐತಾಳ್, ಡಾ.ಪುರುಷೋತ್ತಮ ಬಿಳಿಮಲೆ, ಡಾ.ಬಸವರಾಜ ಜಗಜಂಪಿ ಮಾತನಾಡಲಿದ್ದಾರೆ ಎಂದ ಅವರು, ಡಿ. 19ರಂದು ಮಧ್ಯಾಹ್ನ 3 ಗಂಟೆಗೆ ಜಾನಪದ ನೃತ್ಯ ಹಾಗೂ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ.
ನಂತರ ಸಂಜೆ 6 ಗಂಟೆಗೆ ಸಮ್ಮೇಳನದ ಸಭಾ ಕಾರ್ಯಕ್ರಮ ನಡೆಯಲಿದೆ ಎಂದರು.
ಉಮಾಶ್ರೀ ಅವರಿಂದ ಉದ್ಘಾಟನೆ: ಒಟ್ಟು 9 ವೇದಿಕೆಗಳಲ್ಲಿ ಸಾಹಿತ್ಯ, ಸಾಂಸ್ಕೃತಿಕ ವಿಚಾರ ಗೋಷ್ಠಿಗಳು ನಡೆಯಲಿದ್ದು, ಸಮ್ಮೇಳನದಲ್ಲಿ ಕೃಷಿ ಮೇಳವನ್ನು ಕೂಡ ಆಯೋಜನೆ ಮಾಡಲಾಗಿದೆ. ವಿಶೇಷವಾಗಿ ಮಕ್ಕಳ ಗೋಷ್ಠಿ ಹಾಗೂ ಮಕ್ಕಳ ಚಿಂಥನ ಮಂಥನ ಕಾರ್ಯಕ್ರಮ ನಡೆಯಲಿದೆ. ಡಿ. 20ರಂದು ಆಳ್ವಾಸ್ ವಿರಾಸತ್ ಕಾರ್ಯಕ್ರಮದ ಉದ್ಘಾಟನೆಯನ್ನು ಸಚಿವೆ ಉಮಾಶ್ರೀ ಉದ್ಘಾಟಿಸಲಿದ್ದಾರೆ ಎಂದರು.
ದೇಶದ ನಾನಾ ಭಾಗದ ಕಲೆ ಸಂಸ್ಕೃತಿಯನ್ನು ಬಿಂಬಿಸುವ ಹಾಗೂ ಪ್ರೊತ್ಸಹಿಸುವ ಸಲುವಾಗಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮೋಹನ್ ಆಳ್ವಾ ಸಮ್ಮೇಳನ ಆಯೋಜನೆ ಮಾಡಿದ್ದು, ಸಮ್ಮೇಳನದಲ್ಲಿ ಭಾಗವಹಿಸುವ ಜಿಲ್ಲೆಯ ಆಸಕ್ತ ಸಾಹಿತ್ಯಾಸಕ್ತರು ತಮ್ಮ ಹೆಸರು ರು. 100 ನೀಡಿ ನೊಂದಾವಣೆ ಮಾಡಿಕೊಳ್ಳಬಹುದಾಗಿದೆ. ನೋಂದಾವಣೆ ಮಾಡಿಕೊಂಡವರಿಗೆ ಸಮ್ಮೇಳನದಲ್ಲಿ ವಸತಿ ಸೌಲಭ್ಯ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೊ. 9844281138, 7760119030 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.
ಈ ಸಂದರ್ಭದಲ್ಲಿ ಜಾವಗಲ್ ಪ್ರಸನ್ನ, ಅಶೋಕ್, ರಾಘವೇಂದ್ರ ಬಿ.ಆರ್.ರಾವ್, ಜಯಶ್ರೀ, ರೇಷ್ಮ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.