ಹಾಸನ

ಅಪಘಾತ: ವ್ಯಕ್ತಿ ಸಾವು

Published On :

ಹಾಸನ: ಗೂಡ್ಸ್ ವಾಹನ ಪಟ್ಲಿ ಹೊಡೆದ ಪರಿಣಾಮ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆದಿದೆ. ತಾಲ್ಲೂಕಿನ ಶಾಂತಿಗ್ರಾಮ ಹೋಬಳಿ ಬೆಣಘಟ್ಟೆ ಗ್ರಾಮ ವಾಸಿ ಶಿವಣ್ಣ (55) ಸಾವನ್ನಪ್ಪಿದ ದುರ್ದೈವಿ.
ಶಿವಣ್ಣನವರು ಮೊಮ್ಮಗಳು ಕೀರ್ತನ ಮತ್ತು ಅದೇ ಗ್ರಾಮದ ಸುರೇಶ್ ಅವರೊಂದಿಗೆ ಟಾಟಾ ಗೂಡ್ಸ್ ವಾಹನದಲ್ಲಿ ಚನ್ನರಾಯಪಟ್ಟಣ ತಾಲ್ಲೂಕಿನ ಕುಂದೂರು ಮಠಕ್ಕೆ ಹೋಗುವಾದ ತಾಲ್ಲೂಕಿನ ದಂಡಿಗನಹಳ್ಳಿ ಹೋಬಳಿ ಕುಂದೂರು-ದೊಡ್ಡಕರಡೇವು ವೃತ್ತದ ಹತ್ತಿರ ಗೂಡ್ಸ್ ವಾಹನದ ಚಾಲಕನ ನಿರ್ಲಕ್ಷ್ಯತೆಯಿಂದ ಪಲ್ಟಿಯಾದ ಪರಿಣಾಮ ಶಿವಣ್ಣ, ಕೀರ್ತನ ಮತ್ತು ಸುರೇಶ್ ಅವರುಗಳಿಗೆ ತೀವ್ರ ಗಾಯವಾಗಿದೆ. ಚಿಕಿತ್ಸೆಗಾಗಿ ಹಾಸನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಶಿವಣ್ಣ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಪುತ್ರ ಚಂದ್ರಶೇಖರ್ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಮಹಿಳೆ ಹತ್ಯೆ
ಹಾಸನ: ಅಪರಿಚಿತ ಮಹಿಳೆಯನ್ನು ಹತ್ಯೆ ಮಾಡಿರುವ ಘಟನೆ ಮಂಗಳವಾರ ನಡೆದಿದೆ.
ಹೊಳೆನರಸೀಪುರ ಪಟ್ಟಣದ ಬಿ.ಎಂ. ರಸ್ತೆ, ಪಾರ್ಕ್ ಮುಂಭಾಗವಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಾಪೌಂಡ್ ಒಳಗಡೆ ಒಂದು ಹೆಂಗಸಿನ ಶವ ಬಿದ್ದಿದ್ದು, ಕಾಪೌಂಡ್ ಒಳಗಡೆ ಹೋಗಿ ನೋಡಿದಾಗ ಹೆಂಗಸಿನ ಶವ ಪತ್ತೆಯಾಗಿದೆ.
ಶವದ ಪಕ್ಕದಲ್ಲಿ 4 ವರ್ಷದ ಒಂದು ಹೆಣ್ಣು ಮಗು ಅಳುತ್ತಾ ಕುಳಿತಿದ್ದು, ಹೆಂಗಸಿನ ತಲೆಯ ಮೇಲೆ ಕಲ್ಲನ್ನು ಎತ್ತಿಹಾಕಿ ಕೊಲೆ ಮಾಡಲಾಗಿದೆ. ಹೊಳೆನರಸೀಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಳವು: ಬಂಧನ
ಹಾಸನ: ಬಿಎಸ್‌ಎನ್‌ಎಲ್‌ನ ಬ್ಯಾಟರಿ ಕಳವು ಮಾಡಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದು, ಅವರಿಗೆ ಬ್ಯಾಟರಿಯ ಬಿಡಿ ಭಾಗವನ್ನು ವಶಪಡಿಸಿಕೊಳ್ಳಲಾಗಿದೆ.
ಪೊಲೀಸ್ ಅಧೀಕ್ಷಕ ರವಿ. ಡಿ ಚನ್ನಣ್ಣನವರ್ ಮತ್ತು ಅಪರ ಪೊಲೀಸ್ ಅಧೀಕ್ಷಕ ರಶ್ಮಿ ಅವರ ಮಾರ್ಗದರ್ಶನದ ಮೇರೆಗೆ ಡಿವೈಎಸ್‌ಪಿ ಪರಮೇಶ್ ಎಚ್. ಭೀಮಕ್ಕನವರ್ ನೇತೃತ್ವದಲ್ಲಿ ಸಿಪಿಐ ಸಂಜೀವೇಗೌಡ, ಬಡಾವಣೆ ಪೊಲೀಸ್ ಠಾಣೆಯ ಕ್ರೈಂ ಪಿಎಸ್‌ಐ ಸಿ. ವೆಂಕಟೇಶ್ ಮತ್ತು ಎಎಸ್‌ಐ ರಾಜೇಗೌಡ, ಮುಖ್ಯಪೇದೆ ರಂಗಸ್ವಾಮಿ, ಕಿರಣ್, ಲೋಹಿತ್, ಸುನೀಲ್ ಅವರೊಂದಿಗೆ ಕಾರ್ಯಾಚರಣೆ ನಡೆಸಿ ಬಿಎಸ್‌ಎನ್‌ಎಲ್‌ನ ಟವರ್‌ಗಳ ಬ್ಯಾಟರಿಗಳನ್ನು ಕಳ್ಳತನ ಮಾಡಿ ಒಡೆದು ಅದರಲ್ಲಿ ಸಿಕ್ಕ ಬೆಲೆಬಾಳುವ ಬಿಡಿ ಭಾಗಗಳನ್ನು ಮಾರಾಟ ಮಾಡುತ್ತಿದ್ದ ರಘು, ಶ್ರೀಧರ ಮತ್ತು ದಯಾನಂದನನ್ನು ಬಂಧಿಸಿಲಾಗಿದೆ.
ಬಂಧಿತರಿಂದ ರು. 25,000 ಬೆಲೆಯ 2 ಬ್ಯಾಟರಿಗಳು ಹಾಗೂ ಬಿಡಿ ಭಾಗಗಳನ್ನು ಆರೋಪಿಗಳು ನೀಡಿದ ಸುಳಿವಿನ ಮೇರೆಗೆ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತದೆ. ಸದರಿ ಪತ್ತೆ ಕಾರ್ಯದಲ್ಲಿ ಕೆಲಸ ನಿರ್ವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಶ್ಲಾಘಿಸಿ ಪೊಲೀಸ್ ಅಧೀಕ್ಷಕರು ಬಹುಮಾನ  ಘೋಷಿಸಿದ್ದಾರೆ.     
 
ಮಟ್ಕಾ: ಬಂಧನ
ಹಾಸನ: ಮಟ್ಕಾ ಜೂಜಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದು, ರು. 760  ವಶಪಡಿಸಿಕೊಂಡಿರುವ ಘಟನೆ ಮಂಗಳವಾರ ನಡೆದಿದೆ.
ಹಾಸನದ ಪೆನ್ಷನ್ ಮೊಹಲ್ಲಾ ಟಿಪ್ಪುನಗರ ವಣತ್ತದಲ್ಲಿ ಸಾರ್ವಜನಿಕರನ್ನು ವಂಚಿಸುವ ಉದ್ದೇಶದಿಂದ ಒಂದು ರುಪಾಯಿಗೆ 80 ರುಪಾಯಿ ಕೊಡುವುದಾಗಿ ಹೇಳಿ ಜನರಿಂದ ಹಣ ವಸೂಲಿ ಮಾಡಿ ಮಟ್ಕಾ ಜೂಜಾಡುತ್ತಿದ್ದ.
ಈ ಸಂದರ್ಭದಲ್ಲಿ, ಪೊಲೀಸರು ದಾಳಿ ನಡೆಸಿ ಮಟ್ಕಾ ಜೂಜಾಡುತ್ತಿದ್ದ ಇಸ್ತಿಯಾಕ್ ಅಹಮದ್ (42) ಎಂಬುವನನ್ನು ಬಂಧಿಸಿದ್ದು, ಮಟ್ಕಾ- ಜೂಜಾಟದಲ್ಲಿ ಪಣಕ್ಕಿಟ್ಟದ್ದ ಸುಮಾರು ರು. 760 ನಗದನ್ನು ವಶಪಡಸಿಕೊಂಡಿದ್ದಾರೆ. ಪೆನ್ಷನ್ ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಯುವತಿ ನಾಪತ್ತೆ
ಆಲೂರು ಪಟ್ಟಣದ ಹಳೇ ಸಂತೇಬೀದಿ ವಾಸಿ ನರಸಿಂಹಮೂರ್ತಿ ರವರ ಪುತ್ರಿ ಕವಿತಾ(23) ಆಲೂರು ಬಸ್ ನಿಲ್ದಾಣದಲ್ಲಿರುವ ಲಾಯರ್ ಮಹೇಶ್ ಅವರ ಕಚೇರಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಎಂದಿನಂತೆ ಕೆಲಸಕ್ಕೆ ಹೋಗುತ್ತೇನೆಂದು ಮನೆಯಲ್ಲಿ ಹೇಳಿ ಹೋದವಳು ಇದುವರೆಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿದ್ದಾಳೆ.
4.9 ಅಡಿ ಎತ್ತರ, ಕೆಂಪು ಮೈಬಣ್ಣ, ದುಂಡುಮುಖ, ಸಾಧಾರಣಾ ಮೈಕಟ್ಟು, ಕನ್ನಡ ಮತ್ತು ಇಂಗ್ಲೀಷ್ ಭಾಷೆ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ಪಾಚಿ ಹಸಿರು ಬಣ್ಣದ ಚೂಡಿದಾರ ಧರಿಸಿರುತ್ತಾಳೆ. ತಂದೆ ನರಸಿಂಹಮೂರ್ತಿ ಅವರು ಆಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಯುವಕ ನಾಪತ್ತೆ
ಬೇಲೂರು ತಾಲ್ಲೂಕಿನ ಬಿಕ್ಕೋಡು ಹೋಬಳಿಯ ಬಿಕ್ಕೋಡು ಗ್ರಾಮದ ವಾಸಿ ರಾಜಶೇಖರ್ ಅವರ ಪುತ್ರ ಗಣೇಶ್(19) ಹಾಸನದ ವೆಂಕಟೇಶ್ವರ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಎಂದಿನಂತೆ ಕಾಲೇಜಿಗೆ ಹೋಗುವುದಾಗಿ ಮನೆಯಲ್ಲಿ ಹೇಳಿ ಹೋದವನು ಇದುವರೆಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿದ್ದಾನೆ.
5. 6 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಕೋಲುಮುಖ, ಸಾಧಾರಣಾ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾನೆ. ಮನೆಯಿಂದ ಹೋಗುವಾಗ ಬಿಸ್ಕತ್ ಬಣ್ಣದ ಶರ್ಟ್ ಮತ್ತು ಜೀನ್ಸ್ ಧರಿಸಿರುತ್ತಾನೆ. ತಾಯಿ ಸಾವಿತ್ರಮ್ಮ ರವರು ಅರೇಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.