ಕತ್ತಿ, ಸಂಭಾಜಿ ಹೇಳಿಕೆಗೆ ಪ್ರತಿಭಟನೆ
ಸಕಲೇಶಪುರ: ಕರ್ನಾಟಕ ವಿಭಜನೆ ಕುರಿತು ಮಾತನಾಡಿರುವ ಉಮೇಶ್ ಕತ್ತಿ ಹಾಗೂ ಸಂಭಾಜಿ ಪಾಟೀಲ್ ಹೇಳಿಕೆ ಖಂಡಿಸಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಪ್ರತಿಭಟನಾ ಘೋಷಣೆ ಕೂಗಿದ ಕಾರ್ಯಕರ್ತರು ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ಗೆ ಮನವಿ ಪತ್ರ ನೀಡಿದರು.
ಕಸಾಪ ತಾಲೂಕು ಅಧ್ಯಕ್ಷ ಎಸ್.ಎಂ. ಮಂಜುನಾಥ್ ಮಾತನಾಡಿ, ಕರ್ನಾಟಕ ವಿಭಜನೆ ಬಗ್ಗೆ ಮಾತನಾಡಿರುವ ಸಮಾಜಘಾತುಕ ಶಾಸಕರ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯ ಕ್ರಮಕ್ಕೆ ಕೈಗೊಳ್ಳಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಉತ್ತರ ಕರ್ನಾಟಕ ವಿಭಜನೆ ಹೇಳಿಕೆ ನೀಡಿರುವ ಉಮೇಶ್ ಕತ್ತಿ ಹಾಗೂ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುವಂತೆ ಆಗ್ರಹಿಸಿ ಕರುನಾಡ ಬಗ್ಗೆ ಅವಹೇಳನವಾಗಿ ಮಾತನಾಡಿರುವ ಸಂಬಾಜಿ ಪಾಟೀಲ್, 6 ಕೋಟಿ ಜನರ ಮನಸ್ಸಿಗೆ ಘಾಸಿ ಮಾಡಿದ್ದಾರೆ ಎಂದರು. ಮಹನೀಯರ ತ್ಯಾಗ, ಬಲಿದಾನದಿಂದ ಏಕೀಕರಣಗೊಂಡಿರುವ ಕರ್ನಾಟಕವನ್ನು ವಿಭಜನೆ ಕುರಿತು ಮಾತನಾಡುವುದು ಅಪರಾಧವಾಗಿದೆ. ಆದರೂ ಇವರ ಹೇಳಿಕೆಯನ್ನು ಕೇಳಿಯೂ ಸುಮ್ಮನಿರುವ ಸರ್ಕಾರದ ಕ್ರಮ ಕನ್ನಡಿಗರ ಪಾಲಿಗೆ ಅವಮಾನದ ಸಂಗತಿಯಾಗಿದೆ ಎಂದರು.
ರೈತ ಸಂಘದ ಅಧ್ಯಕ್ಷ ಸಾ.ಸು. ವಿಶ್ವನಾಥ್ ಮಾತನಾಡಿ, ಇಂತಹ ಶಾಸಕರನ್ನು ತಕ್ಷಣದಿಂದಲೇ ಗಡೀಪಾರು ಮಾಡಿ, ಶಾಸಕತ್ವ ರದ್ದುಗೊಳಿಸಬೇಕು ಹಾಗೂ ಇಂತಹ ಹೇಳಿಕೆಯನ್ನು ನೀಡದಂತೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪತ್ರಕರ್ತರ ಸಂಘದ ಅಧ್ಯಕ್ಷ ಎಸ್. ಚಂದ್ರಶೇಖರ್ ಮಾತನಾಡಿ, ಕರ್ನಾಟಕದ ಇತಿಹಾಸ ತಿಳಿಯದೆ ಪ್ರಚಾರಕ್ಕಾಗಿ ಮಾತನಾಡುವ ಉಮೇಶ್ಕ್ತ್ತಿ ಹಾಗೂ ಸಂಭಾಜಿ ಪಾಟೀಲ್ ವಿರುದ್ಧ ಕ್ರಮಕ್ಕೆ ಮುಂದಾಗದಿದ್ದರೆ, ಮುಂದಿನ ದಿನಗಳಲ್ಲಿ ರಾಜ್ಯ ವಿಭಜನೆಗಾಗಿ ಹಲವು ಸಮಾಜಘಾತುಕ ಶಕ್ತಿಗಳು ಮಾತನಾಡಲು ಅವಕಾಶ ಕಲ್ಪಿಸಿದಂತಾಗುತ್ತದೆ ಎಂದರು.
ಕಸಾಪ ಹಾಗೂ ಪತ್ರಕರ್ತರ ಸಂಘದ ಕಾರ್ಯದರ್ಶಿ ಸಿ.ಪಿ. ಪ್ರಸನ್ನಕುಮಾರ್, ಹೋರಾಟಗಾರ ಮಲ್ನಾಡ್ ಮಹಬೂಬ್ ಮತ್ತು ಆಟೋ ಚಾಲಕರ ಸಂಘದ ರಮೇಶ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

