ಜನಪ್ರತಿನಿಧಿಗಳಿಂದ ಕಾರ್ಯಾಗಾರ ಬಹಿಷ್ಕಾರ
ಹೊಳೆನರಸೀಪುರ: ಇಲ್ಲಿನ ಪುರಸಭೆಯ ಕಟ್ಟಡದ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಮಾಹಿತಿ ಶಿಕ್ಷಣ ಸಂವಹನ ಚಟುವಟಿಕೆಗಳ ಕಾರ್ಯಾಗಾರ ಗೊಂದಲದ ಗೂಡಾದ ಕಾರಣ ತಾಪಂ ಅಧ್ಯಕ್ಷೆ, ಉಪಾಧ್ಯಕ್ಷರು ಹಾಗೂ ಸದಸ್ಯರು ಬಹಿಷ್ಕರಿಸಿ ಹೊರ ನಡೆದ ಘಟನೆ ನಡೆಯಿತು.
ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ವ್ಯಕ್ತಿಯೊಬ್ಬ ಏಕಾಏಕಿ ಮಾತಿನ ಚಕಮಕಿಗೆ ನಿಂತ ಪರಿಣಾಮವಾಗಿ ಚುನಾಯಿತ ಪ್ರತಿನಿಧಿಗಳು ಹಾಗೂ ವ್ಯಕ್ತಿಯ ನಡುವೆ ವಾಗ್ವಾದ ನಡೆದು ಸಭೆಯು ಗೊಂದಲದ ಗೂಡಾಗಿ ಪರಿಣಮಿಸಿದ ಕಾರಣದಿಂದಾಗಿ, ಸಭೆಯನ್ನು ಸಮರ್ಪಕವಾಗಿ ನಡೆಸುವಲ್ಲಿನ ತಾಪಂ ಕಾರ್ಯ ನಿರ್ವಹಣಾಧಿಕಾರಿಯ ಲೋಪವನ್ನು ಖಂಡಿಸಿ ಜನಪ್ರತಿನಿಧಿಗಳು ಬಹಿಷ್ಕರಿಸಿ ಹೊರನಡೆದದರು.
ನಡೆದಿದ್ದಿಷ್ಟು: ಇಲ್ಲಿನ ತಾಲೂಕು ಪಂಚಾಯ್ತಿ ವತಿಯಿಂದ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ತಾಲೂಕಿನ ಗ್ರಾಮ ಪಂಚಾಯ್ತಿಗಳ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಗ್ರಾಪಂಗಳ ಅಧ್ಯಕ್ಷರು ಹಾಗೂ ಕಾಯಕ ಬಂಧುಗಳಿಗಾಗಿ ಇಲ್ಲಿನ ಪುರಸಭೆಯ ಕಟ್ಟಡದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಹಿತಿ ಶಿಕ್ಷಣ ಸಂವಹನ ಚಟುವಟಿಕೆಗಳ ಕಾರ್ಯಾಗಾರದ ಉದ್ಘಾಟನಾ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಬೆಳಿಗ್ಗೆ 11ಕ್ಕೆ ನಿಗದಿಯಾಗಿದ್ದ ಕಾರ್ಯಾಗಾರ ಒಂದು ಗಂಟೆ ತಡವಾಗಿ ಆರಂಭಗೊಂಡಿತು.
ಕಾರ್ಯಾಗಾರವನ್ನು ತಾಪಂ ಅಧ್ಯಕ್ಷೆ ಪುಷ್ಪಾಗೌಡೇಗೌಡ ಉದ್ಘಾಟಿಸಿದರು. ಸಮಾರಂಭದಲ್ಲಿ ತಾಪಂ ಉಪಾಧ್ಯಕ್ಷ ಎಚ್.ಬಿ. ನಂಜುಂಡಪ್ಪ ಹಾಗೂ ಕೆಲ ಸದಸ್ಯರು ಇದ್ದರು. ಕಾರ್ಯಾಗಾರದ ಉದ್ಘಾಟನೆ ನಂತರ ಅಧ್ಯಕ್ಷೆ, ಉಪಾಧ್ಯಕ್ಷರು ಹಾಗೂ ಕಾರ್ಯನಿರ್ವಹಣಾಧಿಕಾರಿ ತಮ್ಮಣ್ಣೇಗೌಡ ಅವರು ಮಾತನಾಡಿದ ನಂತರ, ಸಭೆಯಲ್ಲಿ ಹಾಜರಿದ್ದ ಬೆರಳೆಣಿಕೆಯಷ್ಟು ಗ್ರಾಪಂ ಅಧ್ಯಕ್ಷರು, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಹಾಗೂ ಕಾಯಕ ಬಂಧುಗಳಲ್ಲಿ ಯಾರಾದರೂ ಕಾರ್ಯಾಗಾರ ಕುರಿತಂತೆ ತಮ್ಮ ಅಭಿಪ್ರಾಯ ಸೂಚಿಸುವಂತೆ ಕೋರಲಾಯಿತು.
ವಾಗ್ವಾದ: ಈ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಏಕಾಏಕಿ ತಾಪಂ ಅಧ್ಯಕ್ಷೆ, ಉಪಾಧ್ಯಕ್ಷರೊಂದಿಗೆ ತಾವು ನಮ್ಮ ಮತ ಪಡೆದು ಗೆದ್ದ ಮೇಲೆ, ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಏನೇನು ಸಮಸ್ಯೆ ಇದೆ ಎಂದು ನೋಡಿದ್ದೀರಾ, ಗ್ರಾಮ ಸಭೆಗಳಿಗೆ ತಾಪಂನ ಚುನಾಯಿತ ಸದಸ್ಯರುಗಳು ಸಮರ್ಪಕವಾಗಿ ಭಾಗವಹಿಸುತ್ತಿಲ್ಲ ಎಂದು, ಅಧ್ಯಕ್ಷೆ ಹಾಗೂ ಸದಸ್ಯರ ಜೊತೆಗೆ ಏರುಧ್ವನಿಯಲ್ಲಿ ವಾಗ್ವಾದಕ್ಕಿಳಿದ.
ಸಮಜಾಯಿಷಿ: ಈ ಸಂದರ್ಭದಲ್ಲಿ ಅಧ್ಯಕ್ಷೆ, ಉಪಾಧ್ಯಕ್ಷೆ ಹಾಗೂ ಸದಸ್ಯರಾದ ಸಿ.ಆರ್. ಮಂಜುನಾಥ್, ಮಾಜಿ ಅಧ್ಯಕ್ಷೆ ಚಂದ್ರಮತಿ, ಭಾಗ್ಯವತಿ ಅವರು ತಾವು ಖುದ್ದು ಗ್ರಾಮಸಭೆಗಳಿಗೆ ಹೋಗಿದ್ದರೂ ಯಾರೂ ಇಲ್ಲದ ಕಾರಣದಿಂದಾಗಿ ಎಷ್ಟೋ ಗ್ರಾಮ ಸಭೆಗಳಿಂದ ಹಿಂದಿರುಗಿರುವುದಾಗಿ ಹೇಳಿದರಲ್ಲದೇ, ತಾಲೂಕಿನ ಯಾವುದೇ ಗ್ರಾಮದಲ್ಲಿ ಸಮಸ್ಯೆ ಇದೆ ಎಂದು ಗ್ರಾಪಂಯ ಅಧ್ಯಕ್ಷರಾಗಲೀ, ಕಾರ್ಯದರ್ಶಿ, ಪಿಡಿಓಗಳಾಗಲೀ ತಮ್ಮ ಗಮನಕ್ಕೆ ತಂದ ಕೂಡಲೇ ತಾವು ಸ್ಪಂದಿಸಿರುವುದಾಗಿ ಸಮಜಾಯಿಷಿ ನೀಡಿದರು.
ಹೊರನಡೆದ ಜನಪ್ರತಿನಿಧಿಗಳು: ಆದರೂ ವಾಗ್ವಾದ ಜೋರಾಗಿಯೇ ನಡೆಯಲು ಮುಂದಾದರೂ, ಇಷ್ಟೆಲ್ಲಾ ಗೊಂದಲ ಹಾಗೂ ವಾಗ್ವಾದಗಳು ನಡೆಯುತ್ತಿದ್ದರೂ ತಾಪಂ ಇಓ ತಮ್ಮಣ್ಣಗೌಡ ಮಾತ್ರ ಕುರ್ಚಿಯಲ್ಲಿ ಸುಮ್ಮನೆ ಕುಳಿತಿರುವುದನ್ನು ಕಂಡ ಅಧ್ಯಕ್ಷೆ, ಉಪಾಧ್ಯಕ್ಷರು ಹಾಗೂ ಸದಸ್ಯರುಗಳು ತಾಪಂ ಕಾರ್ಯನಿರ್ವಹಣಾಧಿಕಾರಿಗಳ ಧೋರಣೆಯನ್ನು ಖಂಡಿಸಿ ಕಾರ್ಯಾಗಾರವನ್ನು ಅರ್ಧಕ್ಕೇ ಮೊಟಕುಗೊಳಿಸಿ ಹೊರ ನಡೆದರು. ಆಗ ಎಚ್ಚೆತ್ತ ಇಓ ತಾಪಂ ಅಧ್ಯಕ್ಷೆ ಹಾಗೂ ಇನ್ನಿತರರನ್ನು ಸಮಾಧಾನಪಡಿಸಿ ಸಭೆಗೆ ಕರೆತರಲು ಮಾಡಿದ ಯತ್ನ ವಿಫಲವಾಯಿತು.
ಅಲ್ಲದೇ ಇಓ ಅವರು ಸರ್ಕಾರದ ಮಹತ್ವದ ಕಾರ್ಯಾಗಾರಕ್ಕೆ ಗ್ರಾಪಂ ಪಿಡಿಓಗಳು, ಕಾರ್ಯದರ್ಶಿಗಳು ಹಾಗೂ ಅಧ್ಯಕ್ಷರನ್ನು ಸಂಪೂರ್ಣವಾಗಿ ಸೇರಿಸಲು ವಿಫಲವಾಗಿದ್ದುದಲ್ಲದೇ, ಸಮಾರಂಭವನ್ನು ದಕ್ಷತೆಯಿಂದ ನಡೆಸುವಲ್ಲಿ ವಿಫರಾಗಿದ್ದಾರೆ ಎಂದು ಖಂಡಿಸಿ ಕಾರ್ಯಾಗಾರದಿಂದ ಹೊರನಡೆದರು.
ಸಭೆಯಲ್ಲಿ ಜನಪ್ರತಿನಿಧಿಗಳೊಂದಿಗೆ ವಾಗ್ವಾದಕ್ಕಿಳಿದ ವ್ಯಕ್ತಿಯು ಯಾವುದೇ ಜನಪ್ರತಿನಿಧಿಯೂ ಅಲ್ಲ, ಅಧಿಕಾರಿಯೂ ಅಲ್ಲ.
ಆದರೂ ಸಭೆಯಲ್ಲಿ ಏಕಾಏಕಿ ವಾಗ್ವಾದ ನಡೆಸಿದ್ದನ್ನು ಕಂಡು ಅಧ್ಯಕ್ಷೆ ಹಾಗೂ ಇನ್ನಿತರ ಸದಸ್ಯರುಗಳು ಆತ ಯಾರದೋ ಕುಮ್ಮಕ್ಕಿನಿಂದ ಹೀಗೆ ಮಾತನಾಡಿರಬಹುದು. ಆದರೂ ತಾಪಂ ಇಓ ಅವರು ಸುಮ್ಮನೆ ಕುಳಿತು ನಿರ್ಲಕ್ಷತೆ ತೋರಿದ್ದನ್ನು ಎಲ್ಲರೂ ತೀವ್ರವಾಗಿ ಖಂಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

