'ಅಂಬೇಡ್ಕರ್ ಹುಟ್ಟಿರದಿದ್ದರೆ ದಲಿತರ ಸ್ಥಿತಿ ಅಯೋವುಯ'
ಕ.ಪ್ರ. ವಾರ್ತೆ ಬೇಲೂರು ಡಿ.12
ಅಂಬೇಡ್ಕರ್ ಈ ದೇಶ ಕಂಡ ಮಹಾನ್ ಚೇತನ. ಅವರು ಈ ದೇಶದಲ್ಲಿ ಹುಟ್ಟಿರದಿದ್ದಲ್ಲಿ ದಲಿತರು ಮತ್ತು ಹಿಂದುಳಿದವರ ಸ್ಥಿತಿ- ಗತಿ ನೆನಪಿಸಿಕೊಳ್ಳುವುದಕ್ಕೂ ಸಾಧ್ಯವಿತರುತ್ತಿರಲಿಲ್ಲ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ದ ಜಿಲ್ಲಾ ಪ್ರಧಾನ ಸಂಚಾಲಕ ಮಲ್ಲೇಶ್ ಅಂಬುಗ ತಿಳಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ದ ವತಿಯಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 57ನೇ ಪುಣ್ಯತಿಥಿಯ ಅಂಗವಾಗಿ ಇತ್ತೀಚೆಗೆ ಏರ್ಪಡಿಸಿದ್ದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮತ್ತು ಸ್ವಯಂ ಪ್ರೆರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂವಿಧಾನದಲ್ಲಿ ಎಲ್ಲಾ ವರ್ಗಗಳಿಗೂ ಮೀಸಲಾತಿ ನೀಡಿ ಸಮಾನತೆಯ ಹರಿಕಾರರಾಗಿದ್ದರು. ನಮಗೆ ಮೀಸಲಾಲಾತಿ ನೀಡದಿದ್ದಲ್ಲಿ ನಾವು ಬದುಕು ಸಾಗಿಸುವುದು ಕಷ್ಟ ಸಾಧ್ಯವಾಗುತಿತ್ತು ಎಂದು ಹೇಳಿದರು.
ಅಂಬೇಡ್ಕರ್ ಪುಣ್ಯತಿಥಿಯ ದಿನದಂದು ನಮ್ಮ ಸಂಘಟನೆಯ ಕಾರ್ಯಕರ್ತರು ಸ್ವಯಂಪ್ರೇರಿತ ರಕ್ತದಾನ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರಲ್ಲೇ ಮೂಢನಂಬಿಕೆಯನ್ನು ಬಿತ್ತುತ್ತಿರುವುದು ಮುಂದಿನ ಸಮಾಜಕ್ಕೆ ಮಾರಕವಾಗಲಿದೆ. ಆದಷ್ಟು ಶೀಘ್ರವಾಗಿ ಈಂತಹ ಮೂಡನಂಬಿಕೆಯನ್ನು ಸರ್ಕಾರ ನಿಷೇಧಿಸಬೇಕು ಎಂದು ಒತ್ತಾಯಿಸಿದರು.
ಸರ್ಕಾರ ರೈತರ ಪರ, ದಲಿತರ ಪರ ಎಂದು ಘೋಷಣೆ ಮಾಡಿ ಪ್ರಚಾರ ಪಡೆಯುತ್ತಿದೆ ಆದರೆ ರೈತರಿಗಾಗಲೀ, ದಲಿತರಿಗಾಗಲೀ ಯಾವುದೇ ಒಂದು ಜನಪರ ಕಾರ್ಯಕ್ರಮವನ್ನು ಹಾಕಿಕೊಂಡಿಲ್ಲ ಎಂದು ಆರೋಪಿಸಿದರು.
ಗೌರವಾಧ್ಯಕ್ಷ ಸುದರ್ಶನ್ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಸಹ ಅದ್ಧೂರಿಯಾಗಿ ಅಂಬೇಡ್ಕರ್ ಪುಣ್ಯತಿಥಿಯನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ. ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟಲು ಸರ್ಕಾರ ವಿಫಲವಾಗಿದೆ ಎಂದು ವಿಷಾದಿಸಿದರು.
ಸ್ವಯಂ ರಕ್ತದಾನ ಶಿಬಿರವನ್ನು ಪ್ರತಿವರ್ಷದಂತೆ ಆಯೋಜಿಸಿ ಒಬ್ಬ ಮನುಷ್ಯ ರಕ್ತದಾನ ಮಾಡಿದಲ್ಲಿ ನಾಲ್ಕು ಜನರ ಜೀವ ಉಳಿಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಪತ್ರಕರ್ತರ ಸಂಘದ ಜಿಲ್ಲಾ ಗ್ರಾಮೀಣ ಉಪಾಧ್ಯಕ್ಷ ಬಿ.ಎಂ. ರವೀಶ್ ಮಾತನಾಡಿ, ಕೇವಲ ಸಂಘಟಿತರಾಗುವುದು ಮುಖ್ಯವಲ್ಲ. ಅದರ ಸದುದ್ದೇಶವನ್ನು ದಲಿತರಿಗೆ ಹಾಗೂ ಸರ್ಕಾರದಿಂದ ಬರುವಂತಹ ಸವಲತ್ತುಗಳನ್ನು ದಲಿತರಿಗೆ ನೇರವಾಗಿ ಸಿಗುವಂತೆ ಮಾಡುವುದು ಉದ್ದೇಶವಾಗಿರಬೇಕು ಎಂದರು.
ರಕ್ತದಾನ ಶಿಬಿರಗಳು ನಗರ ಪ್ರದೇಶಗಳಿಗೆ ಸೀಮಿತವಾಗದೆ ಪ್ರತಿಯೊಂದು ಹಳ್ಳಿಗಳಲ್ಲಿ ಏರ್ಪಡಿಸುವಂತಾಗಬೇಕು. ರಕ್ತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಅಲ್ಲದೇ, ದಲಿತರು ವಿದ್ಯಾವಂತರಾಗಬೇಕು. ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂದು ಅಂಬೇಡ್ಕರ್ ಮಹಾ ಕನಸು ಕಂಡಿದ್ದರು. ಎಲ್ಲರಂತೆ ತಮಗೂ ಸಮಾನತೆ ಇದೆ ಎಂಬುದನ್ನು ತೋರಿಸಿ ಕೊಡಬೇಕು . ಗ್ರಾಮೀಣ ಪ್ರದೇಶದಲ್ಲಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟುವಂತಾಗಬೇಕು ಎಂದು ಹೇಳಿದರು.
ದಲಿತ ಸಂಘರ್ಷ ಸಮಿತಿ ತಾಲೂಕು ಪ್ರಧಾನ ಸಂಚಾಲಕ ಬಿ.ಎಲ್. ಲಕ್ಷ್ಮಣ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಸಮಿತಿ ಸದಸ್ಯ ಕೃಷ್ಣಯ್ಯ, ನಾರಾಯಣ್, ಪೌರಕಾರ್ಮಿಕ ಸಂಘದ ಅಧ್ಯಕ್ಷ ಕುಮಾರ್, ಜಯ ಕರ್ನಾಟಕ ಯುವ ಅಧ್ಯಕ್ಷ ಬಿ.ಬಿ. ಶಿವರಾಜ್, ತಾಲ್ಲೂಕು ಉಪ ಪ್ರಧಾನ ಸಂಚಾಲಕ ರವಿ ಮಧಘಟ್ಟ. ಹಳೇಬೀಡು ಸತೀಶ್, ಸಂಘಟನಾ ಸಂಚಾಲಕರಾದ ಹೊಯ್ಸಳ, ನಿಂಗರಾಜು, ಹಾಲಪ್ಪ, ವಿಧ್ಯಾರ್ಥಿ ಘಟಕದ ಲೋಕೇಶ್, ಉಮೇಶ್, ಮೋಹನ್, ಅಶೋಕ್, ಭದ್ರಯ್ಯ, ಮಲ್ಲೇಶ್ ಹಾಗೂ ಜೀವರಕ್ಷ ರಕ್ತ ನಿಧಿಯ ವ್ಯವಸ್ಥಾಪಕ ಮೋಹನ್ ಮತ್ತು ನೂರಾರು ಕಾರ್ಯಕರ್ತರು ಇದ್ದರು.
ಇದೇ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ಯ ಕಾರ್ಯಕರ್ತರು ಸ್ವಯಂಪ್ರೇರಿತರಾಗಿ 30 ಮಂದಿ ರಕ್ತದಾನ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

