ಕೋಟಿ ಮೌಲ್ಯದ ವಸ್ತುಗಳು ವಾರಸುದಾರರಿಗೆ
ಕ.ಪ್ರ.ವಾರ್ತೆ ಹಾಸನ ಡಿ 12
ಟ್ರಾಫಿಕ್ ವಾರ್ಡನ್ ಕಾರ್ಯಾರಂಭಕ್ಕೆ ನಗರದಲ್ಲಿ ದಕ್ಷಿಣ ವಲಯ ಐಜಿಪಿ ಡಾ.ಕೆ. ರಾಮಚಂದ್ರರಾವ್ ಗುರುವಾರ ಚಾಲನೆ ನೀಡಿ, ನಂತರ ವಶಪಡಿಸಿಕೊಂಡ ರು. 1,21,50,805 ಮೌಲ್ಯದ ಚಿನ್ನಾಭರಣ, ವಾಹನಗಳನ್ನು ವಾರಸುದಾರರಿಗೆ ಹಿಂದಿರುಗಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಫಿರ್ಯಾದುದಾರರಿಗೆ ಸ್ವತ್ತು ಹಿಂದಿರುಗಿಸುವ ಕಾರ್ಯಕ್ರಮ ಹಾಗೂ ಟ್ರಾಫಿಕ್ ವಾರ್ಡನ್ ಕಾರ್ಯಾರಂಭ ಕಾರ್ಯಕ್ರಮ ನಡೆಯಿತು.
ನಂತರ ಮಾತನಾಡಿದ ಐಜಿಪಿ, ಹಾಸನ ನಗರದಲ್ಲಿ ವಾಹನ ಸಂಚಾರ ಹೆಚ್ಚಾಗುತ್ತಿದ್ದು, ವಾಹನ ಸಂಚಾರ ದಟ್ಟಣೆಯನ್ನು ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಹಗಲು-ರಾತ್ರಿ ಕಾರ್ಯನಿರ್ವಹಿಸಿ ಸುಗಮ ಸಂಚಾರಕ್ಕೆ ಅನುವು ಮಾಡುತ್ತಿದ್ದಾರೆ. ಸಂಚಾರ ದಟ್ಟಣೆಯನ್ನು ನಿರ್ವಹಿಸಲು ಸಾರ್ವಜನಿಕರ ಸಹಕಾರವನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಆಸಕ್ತ 40 ಎನ್ಎಸ್ಎಸ್, ಎನ್ಸಿಸಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸ್ವಇಚ್ಛೆಯಿಂದ ಹಾಗೂ ಅವರ ಪೋಷಕರ ಒಪ್ಪಿಗೆಯ ಮೇರೆಗೆ ಟ್ರಾಫಿಕ್ ವಾರ್ಡನ್ ಸ್ವಯಂ-ಸೇವಕರು ಸಂಚಾರ ನಿಯಂತ್ರಿಸುವ ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ ಎಂದರು.
ಈ ಟ್ರಾಫಿಕ್ ವಾರ್ಡನ್ಗಳಿಗೆ ಇಲಾಖೆ ವತಿಯಿಂದ ಪೊಲೀಸ್ ಬ್ಯಾಡ್ಜ್ಗಳನ್ನು ನೀಡಲಾಗುತ್ತದೆ. ಆದ್ದರಿಂದ ಸ್ವಯಂ ಸೇವಕರು ಯಾವುದೇ ಕಾರಣಕ್ಕೂ ಈ ಬ್ಯಾಡ್ಜ್ಗಳನ್ನು ದುರುಪಯೋಗಪಡಿಸಿಕೊಳ್ಳಬಾರದು ಎಂದು ಅವರು ಹೇಳಿದರು. ಹಾಸನ ಜಿಲ್ಲಾ ವ್ಯಾಪ್ತಿಯಲ್ಲಿ ಕಳೆದ 3 ತಿಂಗಳಲ್ಲಿ ನಡೆದಂತಹ ಕಳವು ಪ್ರಕರಣಗಳನ್ನು ಇಷ್ಟು ವೇಗವಾಗಿ ಪತ್ತೆ ಹಚ್ಚಿ, ಕಳುವಾದ ವಸ್ತುಗಳನ್ನು ವಾರಸುದಾರರಿಗೆ ಹಿಂದಿರುಗಿಸಲಾಗುತ್ತಿದೆ. 5 ಜಿಲ್ಲೆಗಳ ಪೈಕಿ ಹಾಸನದಲ್ಲಿ ಇಷ್ಟು ಪ್ರಮಾಣದ ಕಳವು ಪ್ರಕರಣ ನಡೆದಿದ್ದು, ಬಹಳ ವೇಗವಾಗಿ ಪತ್ತೆ ಹಚ್ಚಿ ಇಷ್ಟು ದೊಡ್ಡ ಪ್ರಮಾಣದ ಹಣವನ್ನು ವಾಪಸ್ ವಾರಸುದಾದರಿಗೆ ನೀಡಲಾಗುತ್ತಿದೆ. ಶೇ.70ರಷ್ಟು ಪ್ರಕರಣಗಳು ಇತ್ಯರ್ಥವಾಗಿವೆ. ಇದು ಕೇವಲ 5 ಜಿಲ್ಲೆಗಳಲ್ಲಿ ಇಲ್ಲದೆ ರಾಜ್ಯದಲ್ಲಿಯೇ ಇದು ಪ್ರಥಮವಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಶ್ಮಿ ಹಾಗೂ ಇತರರು ಇದ್ದರು.
ಚಿನ್ನಾಭರಣ, ವಾಹನಗಳ ವಿತರಣೆ
ಜಿಲ್ಲೆಯಲ್ಲಿ ಜು. 1ರಿಂದ ನ. 30 ರವರೆಗೆ ಒಟ್ಟು 43 ಪ್ರಕರಣಗಳು ನಡೆದಿದ್ದು, ಈ ಪೈಕಿ 47 ಮಂದಿ ಆರೋಪಿಗಳಿಂದ ರು. 1,70,72,508 ಮೌಲ್ಯದ ಚಿನ್ನಾಭರಣ, ವಾಹನಗಳು ಕಳವಾಗಿದೆ. ಈ ಆರೋಪಿಗಳನ್ನು ಬಂಧಿಸಿ, ಅವರಿಂದ ರು. 1,21,50,805 ಮೌಲ್ಯದ ಚಿನ್ನಾಭರಣ, 1 ಕಾರು, 1 ಲಾರಿ ಹಾಗೂ 10ಕ್ಕೂ ಹೆಚ್ಚು ಬೈಕ್ಗಳನ್ನು ವಾರಸುದಾರರಿಗೆ ಹಿಂದಿರುಗಿಸಲಾಯಿತು.
ಅರಸೀಕೆರೆ ನಗರ ಠಾಣ ವ್ಯಾಪ್ತಿಯಲ್ಲಿ ರು. 6,15,459 ಮೌಲ್ಯದ ಸ್ವತ್ತು ಕಳುವಾಗಿದ್ದು, ಈ ಪೈಕಿ ರು. 4,86 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಹೊಳೆನರಸೀಪುರ ವೃತ್ತ ಠಾಣೆ ವ್ಯಾಪ್ತಿಯಲ್ಲಿ ರು. 6,83,500 ಮೌಲ್ಯದ ಸ್ವತ್ತು ಕಳುವಾಗಿದ್ದು, ಈ ಪೈಕಿ ರು. 3,56 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಚನ್ನರಾಯಪಟ್ಟಣ ವೃತ್ತ ಠಾಣಾ ವ್ಯಾಪ್ತಿಗೆ ಸಂಬಂಧಿಸಿದಂತೆ ರು. 27,97,765 ಮೌಲ್ಯದ ವಸ್ತು ಕಳವಾಗಿದ್ದು, ಈ ಪೈಕಿ 13,20,800 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಅರಸೀಕೆರೆ ಗ್ರಾಮಾಂತರ ಠಾಣಾ ವ್ಯಪ್ತಿಗೆ ಸಂಬಂಧಿಸಿದಂತೆ 4,70 ಲಕ್ಷ ರು.ಮೌಲ್ಯದ ವಸ್ತುಗಳು ಕಳವಾಗಿದ್ದು, ಈ ಪೈಕಿ ರು. 12,92 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆಲೂರು ಠಾಣಾ ವ್ಯಾಪ್ತಿಯಲ್ಲಿ ರು. 9,94,500 ಮೌಲ್ಯದ ವಸ್ತುಗಳು ಕಳವಾಗಿದ್ದು, ಈ ಪೈಕಿ ರು. 10. 51 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಅರಕಲಗೂಡು ಠಾಣಾ ವ್ಯಾಪ್ತಿಯಲ್ಲಿ ರು. 14,51,125 ಮೌಲ್ಯದ ವಸ್ತುಗಳು ಕಳವಾಗಿದ್ದು, ಈ ಪೈಕಿ 10,90,919 ಮೌಲ್ಯ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಹಾಸನ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ರು. 52,55,291 ಮೌಲ್ಯದ ವಸ್ತುಗಳನ್ನು ಕಳವಾಗಿದ್ದು, ಈ ಪೈಕಿ ರು. 11,09,150 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಹಾಸನ ನಗರ ವೃತ್ತದ ಠಾಣಾ ವ್ಯಾಪ್ತಿಯಲ್ಲಿ ರು. 39,67,568 ಮೌಲ್ಯದ ವಸ್ತುಗಳು ಕಳುವಾಗಿದ್ದು, ಈ ಪೈಕಿ ರು. 33,31,236 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಸಕಲೇಶಪುರ ಠಾಣಾ ವ್ಯಾಪ್ತಿಯಲ್ಲಿ ರು. 8,37,300 ಮೌಲ್ಯದ ವಸ್ತುಗಳು ಕಳವಾಗಿದ್ದು, ಈ ಪೈಕಿ ರು. 11,13,700 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು ವಾರಸುದಾರಿರಿಗೆ ಹಿಂದಿರುಗಿಸಲಾಯಿತು.
ಎರಡು ಟ್ರಾಫಿಕ್ ಠಾಣೆ
ಚನ್ನರಾಯಪಟ್ಟಣ ಹಾಗೂ ಸಕಲೇಶಪುರ ತಾಲೂಕುಗಳಲ್ಲಿ ಇತ್ತೀಚೆಗೆ ಅಪಘಾತಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎರಡು ಹೆಚ್ಚಿನ ಟ್ರಾಫಿಕ್ ಠಾಣೆಗಳನ್ನು ತೆರೆಯಲಾಗುತ್ತದೆ. ಜೊತೆಗೆ ಹಾಸನ ಬಡಾವಣೆ ಪೊಲೀಸ್ ಠಾಣೆ ಹಾಗೂ ಹಿರೀಸಾವೆ ಪೊಲೀಸ್ ಠಾಣೆಯಗಳಿಗೆ ಸರ್ಕಲ್ ಇನ್ಸ್ಪೆಕ್ಟರ್ಗಳನ್ನು ನಿಯೋಜಿಸುವ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ದಕ್ಷಿಣ ವಲಯ ಐಜಿಪಿ ಡಾ.ಕೆ. ರಾಮಚಂದ್ರರಾವ್ ತಿಳಿಸಿದರು.
ನಕ್ಸಲ್ ನಿಗ್ರಹ ದಳ ರಚನೆ
ಪ್ರಸ್ತುತ ನಕ್ಸರ ತಂಡ ಕೇರಳ ರಾಜ್ಯದಲ್ಲಿ ಬೀಡು ಬಿಟ್ಟಿದ್ದು, ಅವರ ಚಲನವಲವು ಹಾಸನ ಮತ್ತು ಕೊಡಗು ಜಿಲ್ಲೆಯಲ್ಲಿ ಕಾಣಿಸಿಕೊಂಡ ಪರಿಣಾಮ ಎರಡು ಬಾರಿ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಗಿದೆ. ಅದಕ್ಕಾಗಿಯೇ ನಕ್ಸಲಲ್ನಿಗ್ರಹ ದಳ ತಂಡವನ್ನು ರಚಿಸಲಾಗುತ್ತಿದ್ದು, ಈ ತಂಡದಲ್ಲಿ 2 ಸಬ್ ಇನ್ಸ್ಪೆಕ್ಟರ್, 15 ಮಂದಿ ಸಿಬ್ಬಂದಿಗಳಿದ್ದು, ಅವರಿಗೆ ಎಕೆ 47 ಗನ್, ಬುಲೆಟ್ ಪ್ರೂಫ್ ಪ್ಯಾಕೆಟ್ ಹಾಗೂ ಹೆಲ್ಮೆಟ್ಗಳನ್ನು ನೀಡಲಾಗುತ್ತದೆ ಎಂದು ಎಂದು ದಕ್ಷಿಣ ವಲಯ ಐಜಿಪಿ ಡಾ.ಕೆ. ರಾಮಚಂದ್ರರಾವ್ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

