ಹಾಸನ

ಸಾಂಭಾಜಿ ವಿರುದ್ಧ ಕರವೇ ಗುಡುಗು

Published On :

ಹಾಸನ: ನಗರದ ವಿವೇಕನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಇತ್ತೀಚೆಗೆ ಅದ್ಧೂರಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ  ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡರು ಮಾತನಾಡಿ, ಬೆಳಗಾವಿ ಅಧಿವೇಶನ ನಡೆಯುತ್ತಿದ್ದ ವೇಳೆ ಅಲ್ಲಿನ ಶಾಸಕ ಸಾಂಭಾಜಿ ಪಾಟೀಲ್ ಅವರು ಕರ್ನಾಟಕ ರಾಜ್ಯದ ಶವಯಾತ್ರೆ ಮಾಡುವುದಾಗಿ ಹೇಳಿಕೆ ನೀಡಿದ್ದರು. ಇದನ್ನು ಕೇಳಿಯೂ ಕನ್ನಡ ನಾಡಿನ ಶಾಸಕರು ಮೌನವಾಗಿರುವುದು ದುರದೃಷ್ಟಕರ ಸಂಗತಿ ಎಂದು ವಿಷಾದಿಸಿದರು.
ಅಂತಹ ಕಿಡಿಗೇಡಿಗಳ ವಿರುದ್ಧ ಒಂದು ದೊಡ್ಡ ಹೋರಾಟದ ಅಗತ್ಯವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಸರ್ಕಾರ ಎಚ್ಚೆತ್ತುಕೊಂಡು ಅಂತಹವರನ್ನು ಗಡಿಪಾರು ಮಾಡಿ ಅವರ ಮೇಲೆ ಶಿಸ್ತುಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು. ಕಾರ್ಯಕ್ರಮದಲ್ಲಿ ಹಲವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶಾಸಕ ಹೆಚ್.ಎಸ್. ಪ್ರಕಾಶ್, ಕರವೇ ಜಿಲ್ಲಾಧ್ಯಕ್ಷ ಸಿ.ಡಿ. ಮನುಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್, ನಗರಸಭೆ ಸದಸ್ಯ ಡಾ.ಹೆಚ್.ಎಸ್. ಅನಿಲ್ ಕುಮಾರ್, ನಟಿಯರಾದ  ಪೂಜಾಗಾಂಧಿ, ಅಶ್ವಿನಿ, ಜಿಲ್ಲಾ ವಕ್ತಾರ ರಾಜೇಂದ್ರ ದೊಡ್ಡಮಗ್ಗೆ,  ತಾಲೂಕು  ಉಪಾಧ್ಯಕ್ಷ ಗಿರೀಶ್, ಉಪಾಧ್ಯಕ್ಷ ಸೀತಾರಾಮ್ ಇತರರು ಇದ್ದರು.

ಸಾವಯವ ಗೊಬ್ಬರ ತಯಾರಿ ಪ್ರಾತ್ಯಕ್ಷಿಕೆ
ಆಲೂರು:
ತಾಲೂಕಿನ ಗೇಕರವಳ್ಳಿ ದಾಖ್ಲೆ ಉಳ್ಳಳ್ಳಿಯಲ್ಲಿ ಇತ್ತೀಚೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಬಸವರಾಜ್ ಕೃಷಿ ಜಮೀನಿನಲ್ಲಿ ಸಾವಯವ ಗೊಬ್ಬರಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ತಯಾರಿ ಮಾಡುವ ವಿಧಾನವನ್ನು ತಿಳಿಸಲಾಯಿತು.
ಈ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಎರೆಗೊಬ್ಬರ ತಯಾರಿ  ವಿಧಾನ, ಜಪಾನ್ ಮಾದರಿ ಕಾಂಪೋಸ್ಟ್, ಜೀವಾಮೃತ, ದ್ರವಗೊಬ್ಬರ, ಸಾವಯವ ಯೂರಿಯಾ  ತಯಾರಿಯ ಬಗ್ಗೆ ಸೂಕ್ತ ಮಾಹಿತಿಯನ್ನು ಕೃಷಿ ಅಧಿಕಾರಿ ಚಿದಾನಂದ್ ಅವರು ಸವಿವರವಾಗಿ ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿದರು. ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷ  ಬಸವರಾಜ್, ಕೃಷಿಕರಾದ ಯತೀಶ್, ಸೇವಾ ಪ್ರತಿನಿಧಿಗಳಾದ ದಾಕ್ಷಾಯಿಣಿ ಹಾಗೂ ಪ್ರಗತಿಬಂಧು ತಂಡದ ಹಾಗೂ ಸ್ವ ಸಹಾಯ ಸಂಘದ ಸದಸ್ಯರು ಇದ್ದರು. 30 ರೈತರು ಸಾವಯವ ಮಾದರಿಗಳನ್ನು ಮಾಡಲು ತಯಾರಿಯಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.