ಹಾಸನ

ಜಾಗೃತಿಯಿಂದ ಎಚ್‌ಐವಿ ನಿಯಂತ್ರಣ ಸಾಧ್ಯ

Published On :

ಕ.ಪ್ರ.ವಾರ್ತೆ ,  ಹೊಳೆನರಸೀಪುರ ,  ಡಿ. 15
ವೈದ್ಯಕೀಯ ಚಿಕಿತ್ಸೆ ಹಾಗೂ ಸಂಶೋಧನೆಯಿಂದ ಮಾತ್ರ ಎಚ್‌ಐವಿ ಹರಡುವಿಕೆಯನ್ನು ನಿಯಂತ್ರಿಸಲು ಸಾಧ್ಯ ಎಂದು ರೆಡ್‌ಕ್ರಾಸ್ ಸಂಸ್ಥೆಯ ತಾಲೂಕು ಘಟಕದ ಅಧ್ಯಕ್ಷ ರೊ.ಡಾ.ಕೆ.ಸಿ. ಮರಿಯಪ್ಪ ಇಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ತಾಲೂಕಿನ ಹಳೇಕೋಟೆಯಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ, ರೋಟರಿ ಸಂಸ್ಥೆ ಹಾಗೂ ರೆಡ್‌ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಏಡ್ಸ್ ಅರಿವು ಜಾಥಾದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಏಡ್ಸ್ ಎಂಬ ಖಾಯಿಲೆಯನ್ನು ವಿಜ್ಞಾನಿಗಳು ಕಂಡು ಹಿಡಿದಾಗಿನಿಂದಲೂ, ಈ ಸಾಂಕ್ರಾಮಿಕ ರೋಗದ ಬಗ್ಗೆ ಸಮಾಜದಿಂದ ಭಯ, ತಿರಸ್ಕಾರ, ಕಳಂಕ ಮತ್ತು ತಾರತಮ್ಯದ ಭಾವನೆ ವ್ಯಕ್ತವಾಗಿದ್ದು, ತಾರತಮ್ಯದ ಭಯದಿಂದಾಗಿ ಜನರು ರಕ್ತ ಪರೀಕ್ಷೆ ಮಾಡಿಸಿಕೊಳ್ಳಲೂ ಸಹ ಹಿಂಜರಿಯುತ್ತಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ತಮಗೆ ಎಚ್‌ಐವಿ ಸೋಂಕಿರುವ ಅರಿವಿಲ್ಲದೆ ತಮ್ಮ ಪತ್ನಿ ಅಥವಾ ಪತಿಗೆ ಹರಡುತ್ತಾರೆ ಹಾಗೂ ಇತರೆ ಲೈಂಗಿಕ ಸಂಗಾತಿಗಳಿಗೆ ಹರಡಿ ಸಮುದಾಯದಲ್ಲಿ ಹೆಚ್ಚು, ಹೆಚ್ಚು ಜನರಿಗೆ ಏಡ್ಸ್ ಹರಡಲು ಕಾರಣರಾಗುತ್ತಾರೆ ಎಂದು ತಮ್ಮ ಉಪನ್ಯಾಸದಲ್ಲಿ ತಿಳಿಸಿದರು.
ಏಡ್ಸ್ ಬಗ್ಗೆ ಜನರಲ್ಲಿ ಇನ್ನಿಲ್ಲದ ತಪ್ಪು ಕಲ್ಪನೆಯನ್ನು ಹೋಗಲಾಡಿಸಲು ಸ.ಪ.ಪೂ. ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸರ್ಕಾರಿ ಕಿರಿಯ ಮತ್ತು ಹಿರಿಯ ಶಾಲೆಯ ಶಿಕ್ಷಕ ಮತ್ತು ಶಿಕ್ಷಕಿಯರಿಗೆ ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಮಕ್ಕಳಲ್ಲಿ ಅರಿವು ಮೂಡಿಸಿ: ಕಾರ್ಯಕ್ರಮದ ಉದ್ಘಾಟನೆಯನ್ನು ಹಳೇಕೋಟೆ ಪ್ರಾಥಮಿಕ ಆರೋಗ್ಯ  ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಶಮ್ಮಿ ನೆರವೇರಿಸಿ ಮಾತನಾಡಿ, ವಯಸ್ಸು 12 ರಿಂದ 19 ರವರೆಗಿನ ಮಕ್ಕಳಲ್ಲಿ ಆಗುವ ಮಾನಸಿಕ ಬದಲಾವಣೆಗಳು, ದೈಹಿಕ ಬದಲಾವಣೆಗಳು ಸಮಯವಾದ್ದರಿಂದ ಆ ಸಮಯದಲ್ಲಿ ಮಕ್ಕಳು ಜಾಗೃತವಾಗಿರಬೇಕಾಗುತ್ತದೆ. ಇಂತಹ ವಯಸ್ಸಿನಲ್ಲಿ ಅನೇಕ ಮಕ್ಕಳು ಲೈಂಗಿಕ ಕೃತ್ಯಗಳಲ್ಲಿ ತೊಡಗಿ ತಪ್ಪು ಕೆಲಸಗಳನ್ನು ಮಾಡಿರುವ ಅನೇಕ ಉದಾಹರಣೆಗಳುಂಟು.
ಇಂತಹ ಕಾರ್ಯಕ್ರಮಗಳ ಮುಖಾಂತರ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಮಕ್ಕಳಲ್ಲಿ ಹದಿ ಹರೆಯದ ಸಮಸ್ಯೆಗಳ ಕುರಿತು ಕಾರ್ಯಾಗಾರ ನಡೆಸುವಂತೆ ಸರ್ಕಾರದಿಂದ ಸುತ್ತೋಲೆಯಿರುವುದರಿಂದ ನಮ್ಮ ಪ್ರಾ.ಆ. ಕೇಂದ್ರದ ವ್ಯಾಪ್ತಿಯ ಎಲ್ಲಾ ಶಾಲೆಯ ಶಿಕ್ಷಕ ವೃಂದದವರು ಈ ಬಗ್ಗೆ ಹೆಚ್ಚಿನ ಜ್ಞಾನವನ್ನು ತಿಳಿದುಕೊಂಡು ಶಾಲೆ ಪ್ರಾರಂಭವಾಗುವ ಪ್ರಾರ್ಥನೆ ಸಮಯದಲ್ಲೇ ರಕ್ತ ಹೀನತೆ, ಸ್ನೇಹ ಕ್ಲಿನಿಕ್, ವೈಯಕ್ತಿಕ ಸ್ವಚ್ಛತೆ, ಮದುವೆಯ ವಯಸ್ಸು, ಆರ್.ಟಿ.ಐ. ಹಾಗೂ ಎಸ್.ಟಿ.ಡಿ. ಸೋಂಕು ರೋಗಗಳ ಬಗ್ಗೆ ತಿಳಿದುಕೊಂಡು ಮಕ್ಕಳಿಗೆ ಅರಿವು ಮೂಡಿಸುವ ಪ್ರಯತ್ನ ಮಾಡಬೇಕೆಂದು ತಿಳಿಸಿದರು.
ಸದುಪಯೋಗ ಪಡೆದುಕೊಳ್ಳಬೇಕು: ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಳೆಕೋಟೆ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ವಿಂಧ್ಯಾ ಮಾತನಾಡಿ, ಬದುಕುವುದು ಎಲ್ಲಾ ಜೀವಿಯ ಹಕ್ಕು ಅದರಂತೆ ಮಾನವರಾದ ನಮಗಿರುವ ಮೆದುಳಿನಿಂದ ಸರಿಯಾದ ವಿವೇಚನೆಗಳುಳ್ಳ ಮಾಹಿತಿಗಳನ್ನು ತಿಳಿದು ಇತರರಿಗೂ ಅರಿವು ಮೂಡಿಸಿ ಆರೋಗ್ಯವಂತರಾಗಿ ಬಾಳೋಣ ಎಂದರು.
ಕಾರ್ಯಕ್ರಮವನ್ನು ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕ ಹಾಗೂ ಹೊಳೆನರಸೀಪುರ ರೋಟರಿ ಅಧ್ಯಕ್ಷ ರೊ.ಆರ್.ಬಿ. ಪುಟ್ಟೇಗೌಡ ಪ್ರಾಸ್ತಾವಿಕ ನುಡಿಯೊಂದಿಗೆ ಆಗಮಿಸಿದ್ದ ಎಲ್ಲರನ್ನೂ ಸ್ವಾಗತಿಸಿ ಈ ಕಾರ್ಯಕ್ರಮದ ಸದುಪಯೋಗವನ್ನು ಎಲ್ಲರೂ ಪಡೆಯಬೇಕೆಂದರು.  
ಶಿಕ್ಷಕಿ ಕೆ.ಕೆ. ನಾಗರತ್ನ ಕಾರ್ಯಕ್ರಮ ನಿರೂಪಿಸಿ, ಪ್ರಾರ್ಥನೆಯನ್ನು ವಿದ್ಯಾರ್ಥಿ ಗಿರೀಶ್  ಹಾಗೂ ರೋಟರಿ ಕಾರ್ಯದರ್ಶಿ ರೊ.ಹೆಚ್.ಆರ್. ಶಿವಕುಮಾರ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.