ಹಾಸನ

ಅಮಾಯಕರ ಬಂಧನ: ವಿಎಚ್‌ಪಿ ಖಂಡನೆ

Published On :

ಕ.ಪ್ರ.ವಾರ್ತೆ ಸಕಲೇಶಪುರ ಡಿ. 19
ಅರೇಹಳ್ಳಿ ಹಾಗೂ ಬೇಲೂರಿನಲ್ಲಿ ದತ್ತಾಮಾಲಾ ಮೆರವಣಿಗೆ ಸಮಯದಲ್ಲಿ ನಡೆದ ಅಹಿತಕರ  ಘಟನೆಯಲ್ಲಿ ಕೇವಲ ಅಮಾಯಕ ಹಿಂದೂಗಳ ಮೇಲೆ ಪ್ರಕರಣ ದಾಖಲಿಸುವುದನ್ನು ಖಂಡಿಸಿ ತಾಲೂಕು ವಿಹೆಚ್‌ಪಿ ಹಾಗೂ ಬಜರಂಗದಳ ಕಾರ್ಯಕರ್ತರು ಖಂಡಿಸಿ ತಹಸೀಲ್ದಾರ್ ಪಾವರ್ತಿ ಅವರಿಗೆ ಮನವಿ ಮಾಡಿದರು.
ಅಮಾಯಕರಿಗೆ ನ್ಯಾಯ: ಮಿನಿವಿಧಾನಸೌಧದ ಮುಂದೆ ನೆರೆದಿದ್ದ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ವಿಹೆಚ್‌ಪಿ ಜಿಲ್ಲಾ ಸಹಕಾರ್ಯದರ್ಶಿ ಸಂತೋಷ್ ಮಾತನಾಡಿ, ಡಿ. 16ರಂದು ಬೇಲೂರಿನಲ್ಲಿ ದತ್ತಪೀಠ ಮಾಲಾಧಾರಿಗಳ ಮೆರವಣಿಗೆ ಸಂದರ್ಭದಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ, ಸಕಲೇಶಪುರದ ಬಾಳೆಗದ್ದೆ ವಾಸಿಗಳನ್ನು ಅರೇಹಳ್ಳಿ  ಪೊಲೀಸರು ಬಂಧಿಸಿದ್ದು, ಈ ನಿವಾಸಿಗಳು ದತ್ತಪೀಠಕ್ಕೆ ಹೋಗದೆ ಮನೆಯಲ್ಲಿ ಮಲಗಿದ್ದ  ನಿರಾಪರಾಧಿಗಳನ್ನು ಬಂಧಿಸಿ ದೂರು ದಾಖಲು ಮಾಡಿರುವುದು ಕಂಡುಬಂದಿದೆ. ಈ ರೀತಿ ನಿರಾಪರಾಧಿಗಳನ್ನು ಬಂಧಿಸುತ್ತಿರುವುದರಿಂದ ಕಾನೂನು ಸುವ್ಯವಸ್ಥೆ ಹದಗೆಡುವ ಸಂಭವ ಇರುವುದರಿಂದ ತಕ್ಷಣ, ತಹಸೀಲ್ದಾರ್ ಅವರು ಈ ಬಗ್ಗೆ ಗಮನ ಹರಿಸಿ, ಅಮಾಯಕರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದರು.
ವೋಟ್‌ಬ್ಯಾಂಕ್ ರಾಜಕೀಯ: ಮಾಜಿ ಶಾಸಕ ಹೆಚ್.ಎಂ. ವಿಶ್ವನಾಥ್ ಅವರನ್ನು ಟೀಕಿಸಿದ ಅವರು, ಆರ್.ಎಸ್.ಎಸ್ ಹೆಸರು ಹೇಳಿಕೊಂಡು ರಾಜಕೀಯ ಜೀವನ ಆರಂಭಿಸಿದ ವಿಶ್ವನಾಥ್, ನಂತರ ಜೆಡಿಎಸ್‌ನಲ್ಲಿ ಅಧಿಕಾರ ಅನುಭವಿಸಿ ಉಂಡಮನೆಗೆ ಕನ್ನ ಹಾಕಿ, ಇದೀಗ ಕಾಂಗ್ರೆಸ್ ಸೇರಿಕೊಂಡು ವೋಟ್ ಬ್ಯಾಂಕ್ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಪ್ರಕರಣದಲ್ಲಿ ನೊಂದವರಿಗೆ ಸಾಂತ್ವನ ಹೇಳುವುದನ್ನು ಬಿಟ್ಟು ಕೋಮು ವೈಷಮ್ಯ ಹೆಚ್ಚಿಸಲು ವಿಶ್ವನಾಥ್ ಯತ್ನಿಸುತ್ತಿದ್ದಾರೆ. ಕೇವಲ ಒಂದು ಕೋಮಿನ ಏಜೆಂಟ್ ರೀತಿ ವರ್ತಿಸುತ್ತಿದ್ದಾರೆ. ಇಂತಹ ರಾಜಕಾರಣಿಗಳನ್ನು ತಾಲೂಕಿನ ಜನತೆ ತಿರಸ್ಕರಿಸಬೇಕೆಂದು ಹೇಳಿದರು.
ಸಕಲೇಶ್ವರಸ್ವಾಮಿ ದೇವಸ್ಥಾನದಿಂದ ಮಿನಿ ವಿಧಾನಸೌಧದವರೆಗೆ ಪ್ರತಿಭಟನಾ ಮೆರವಣಿಗೆ ಕಾರ್ಯಕ್ರಮವನ್ನು ವಿಹೆಚ್‌ಪಿ ಬಜರಂಗದಳ ಕಾರ್ಯಕರ್ತರು ಹಮ್ಮಿಕೊಂಡಿದ್ದರು. ಆದರೆ ಪಟ್ಟಣದಲ್ಲಿ ವೃತ್ತ ನಿರೀಕ್ಷಕ ಗುರುರಾಜ್ ಸಂಘಟನೆಯ ಪ್ರಮುಖರ ಮನವೊಲಿಸಿ  ಮನವಿ ಪತ್ರ ನೀಡುವಂತೆ ಮಾಡಿದರು.
ಈ ಸಂದರ್ಭದಲ್ಲಿ ಸಂಘಟನೆಯ ಸಿದ್ದಪ್ಪ, ಜಗದೀಶ್, ಪ್ರಕಾಶ್, ಅರುಣ್, ರಾಮಲಿಂಗಮ್, ನಮೋ ಬ್ರಿಗೇಡ್‌ನ ಪ್ರಮುಖರಾದ ಗಿರೀಶ್ ಕದಬನಹಳ್ಳಿ ಇದ್ದರು.

ಪೊಲೀಸರ ಕ್ರಮ ಸರ್ಕಾರದ ಮನಸ್ಥಿತಿಯ ಕನ್ನಡಿ
ಕ.ಪ್ರ.ವಾರ್ತೆ ಹಾಸನ ಡಿ. 19

ಬೇಲೂರು ತಾಲೂಕಿನ ಅರೇಹಳ್ಳಿಯಲ್ಲಿ ದತ್ತಮಾಲಾ ಧಾರಿಗಳ ಶೋಭಾಯಾತ್ರೆ ಸಂದರ್ಭದಲ್ಲಿ ನಡೆದ ದುರ್ಘಟನೆಯ ಹಿನ್ನೆಲೆಯಲ್ಲಿ ಪೊಲೀಸರು ತೆಗೆದುಕೊಂಡ ಕ್ರಮ ರಾಜ್ಯ ಕಾಂಗ್ರೆಸ್ ಸರ್ಕಾರದ ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಎನ್.ಡಿ. ಪ್ರಸಾದ್ ಹೇಳಿದ್ದಾರೆ.  ರಾಜ್ಯದಲ್ಲಿ ಹಿಂದೂ ಸಂಘಟನೆಗಳನ್ನು ಮಟ್ಟ ಹಾಕಬೇಕೆಂಬ ದುರುದ್ದೇಶದಿಂದ ರಾಜ್ಯ ಸರ್ಕಾರ ಈ ಸಂಘಟನೆಗಳ ಬಗ್ಗೆ ದಮನಕಾರಿ ನೀತಿಯನ್ನು ಅನುಸರಿಸುತ್ತಿದ್ದು. ಅರೆಹಳ್ಳಿ ಘಟನೆಯಲ್ಲಿ ನಡೆದ ಪೊಲೀಸರ ಕಾರ್ಯಾಚರಣೆ ರಾಜಕೀಯ ಪ್ರೇರಿತವಾಗಿದೆ ಎಂದು ಹೇಳಿದ್ದಾರೆ.
ಉದ್ದೇಶಪೂರ್ವಕ ಕ್ರಮ: ಅಂದು ದುರ್ಘಟನೆಗೆ ಕಾರಣರಾದ ಸಾಮಾಜ ಘಾತುಕ ಶಕ್ತಿಗಳ ಬಗ್ಗೆ ಪೊಲೀಸರಿಗೆ  ಸ್ಪಷ್ಟ ಅರಿವಿದ್ದರೂ ಸಹ ಅವರ ವಿರುದ್ಧ ಯಾವ ಕ್ರಮವನ್ನೂ ಜರುಗಿಸದೇ ದತ್ತ  ಮಾಲಧಾರಿಗಳನ್ನು ಸೂಕ್ತರೀತಿಯಲ್ಲಿ ನಿಯಂತ್ರಿಸಿ, ವಿಕೋಪಕ್ಕೆ ಹೋಗಲಿದ್ದ ಪರಿಸ್ಥ್ಥಿತಿಯನ್ನು  ಹತೋಟಿಗೆ ತಂದು ಬಿಜೆಪಿ ಮುಖಂಡರಾದ ಜಿಲ್ಲಾ ಪಂಚಾಯ್ತಿ  ಸದಸ್ಯರಾದ ಅಮಿತ್ ಶೆಟ್ಟಿ, ನಾಗೇಶ್ ಶೆಟ್ಟಿ, ದಿನೇಶ್ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಮುಂತಾದ 16 ಜನ ನಿರಪರಾಧಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿರುವುದು ಖಂಡನೀಯ ಎಂದು ಹೇಳಿದ್ದಾರೆ.
ಪೊಲೀಸರು ಆಳುವ ಪಕ್ಷದ ಕೈಗೊಂಬೆಗಳಾಗಿ ವರ್ತಿಸಿ ಕರ್ನಾಟಕ ಪೊಲೀಸ್‌ಗೆ ಇರುವ ಹೆಸರಿಗೆ ಕಳಂಕ ತರುವ ಪ್ರಯತ್ನ ಮಾಡದೆ ದೇಶ ನಿಷ್ಠೆ ಮತ್ತು ಪ್ರಾಮಾಣೀಕತೆಯಿಂದ ನಿಸ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಇದರ ಪರಿಣಾಮವನ್ನು ಎದುರಿಸಬೇಕಾದೀತು ಎಂದು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.