'ಬದುಕಿನ ಸಾರ್ಥಕತೆಗೆ ಸತ್ಸಂಗ ಅಗತ್ಯ'
ಕ.ಪ್ರ.ವಾರ್ತೆ ಹಾಸನ ಡಿ. 19
ಬದುಕಿನಲ್ಲಿ ಸಾರ್ಥಕತೆ ಪಡೆಯಲು ಸತ್ಸಂಗ ಬಹಳ ಅಗತ್ಯ ಎಂದು ಮಂಗಳೂರಿನ ಆದಿಚುಂಚನಗಿರಿ ಶಾಖಾ ಮಠದ ಪೀಠಾಧ್ಯಕ್ಷ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಹೇಳಿದರು.
ನಗರದ ಆದಿಚುಂಚನಗಿರಿ ಶಾಖಾ ಮಠದಲ್ಲಿ ಇತ್ತೀಚೆಗೆ ನಡೆದ ಗುರು ತೋರಿದ ದಾರಿ ತಿಂಗಳ ಮಾಮನ ತೇರು ಹುಣ್ಣಿಮೆ ಕಾರ್ಯಕ್ರಮದಲ್ಲಿ ಪ್ರವಚನ ನೀಡಿದ ಶ್ರೀಗಳು, ಒಳ್ಳೆಯವರ ಸಹವಾಸದಿಂದ ಕೆಟ್ಟವರೂ ಒಳ್ಳೆಯವರಾಗುವ ಅವಕಾಶಗಳಿರುತ್ತವೆ. ಆದ್ದರಿಂದ ಬದುಕಿನಲ್ಲಿ ಸತ್ಸಂಗ ಬಹಳ ಮುಖ್ಯ ಎಂದರು.
ಜಗತ್ತಿನ ಎಲ್ಲ ಪ್ರಾಣಿ, ಪಕ್ಷಿ, ಗಿಡಮರಗಳು ತಮ್ಮ ಕರ್ತವ್ಯವನ್ನು ಚಾಚೂ ತಪ್ಪದೆ ನಿರ್ವಹಿಸುತ್ತಿವೆ. ನಿಸರ್ಗದ ನಿಯಮದಂತೆ ನಡೆದುಕೊಳ್ಳುತ್ತಿವೆ. ಆದರೆ ವಿವೇಚನಾ ಶಕ್ತಿ ಇರುವ ಮನುಷ್ಯ ಮಾತ್ರ ಕರ್ತವ್ಯದಿಂದ ವಿಮುಖನಾಗಿ ಪ್ರಾಣಿಗಳಿಗಿಂತಲೂ ಕಡೆಯಾಗುತ್ತಿದ್ದಾನೆ. ನಿಸರ್ಗ ವಿರೋಧಿ ಚಟುವಟಿಕೆಗಳಿಂದ ಮನುಕುಲಕ್ಕೆ ಕಂಟಕನಾಗುತ್ತಿದ್ದಾನೆ ಎಂದು ವಿಷಾದಿಸಿದರು.
ಅಜ್ಞಾನ, ಅಂಧಕಾರ ಮತ್ತು ಮೌಢ್ಯದಲ್ಲಿ ಮುಳುಗಿರುವ ಮನುಷ್ಯನು ಸರಿದಾರಿಯಲ್ಲಿ ನಡೆಯಲು ಗುರುವಿನ ಮಾರ್ಗದರ್ಶನ ಅಗತ್ಯ. ಗುರುವಿನ ಮಾರ್ಗದರ್ಶನವಿಲ್ಲದೆ ಗುರಿ ಸಾಧಿಸುವುದು ಕಷ್ಟ. ಭಾರತೀಯ ಸಂಸ್ಕತಿಯಲ್ಲಿ ಗುರು- ಶಿಷ್ಯ ಪರಂಪರೆ ಬಹಳ ವಿಶಿಷ್ಟವಾದುದು ಎಂದು ಹೇಳಿದರು.
ಸೋಮಾರಿತನ ಯಶಸ್ಸಿನ ದೊಡ್ಡ ಶತ್ರು. ಸೋಮಾರಿಯಾದವರೊಂದಿಗೆ ಸೋಲಿನ ಜತೆಗೆ ಹಲವಾರು ರೋಗಗಳೂ ಗೆಳೆತನ ಬೆಳೆಸುತ್ತವೆ. ಆದ್ದರಿಂದ ಯಾವುದೇ ವಯೋವಾನದವರಾದರೂ ಸದಾ ಚಟುವಟಿಕೆಯಿಂದ ಆರೋಗ್ಯಪೂರ್ಣ ಬದುಕು ನಡೆಸಬೇಕು. ಅದೇ ಬದುಕಿನ ಸಾರ್ಥಕತೆ ಎಂದು ಕಿವಿಮಾತು ಹೇಳಿದರು.
ನಗರದ ಆದಿಚುಂಚನಗಿರಿ ಶಾಖಾ ಮಠದ ಪೀಠಾಧ್ಯಕ್ಷ ಶ್ರೀ ಶಂಭುನಾಥ ಸ್ವಾಮೀಜಿ ಪಾವನ ಸಾನಿಧ್ಯ ವಹಿಸಿದ್ದರು. ಶೃಂಗೇರಿಯ ಆದಿಚುಂಚನಗಿರಿ ಶಾಖಾ ಮಠದ ಪೀಠಾಧ್ಯಕ್ಷ ಶ್ರೀ ಗುಣನಾಥ ಸ್ವಾಮೀಜಿ ಮತ್ತು ಆದಿಹಳ್ಳಿ- ಕಬ್ಬಳಿ ಶಾಖಾ ಮಠದ ಶಿವಪುತ್ರ ಸ್ವಾಮೀಜಿ ಇದ್ದರು.
ಕಾಲಭೈರವೇಶ್ವರ ಭಜನಾ ಮಂಡಳಿ ಮತ್ತು ಕುವೆಂಪುನಗರದ ಬೆನಕ ಭಜನಾ ಸುಧಾ ತಂಡದವರು ಭಜನೆ ಮಾಡಿದರು. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಹೆಚ್.ಬಿ. ಮದನಗೌಡ ಸ್ವಾಗತಿಸಿದರು. ನಗರದ ಆದಿಚುಂಚನಗಿರಿ ಶಾಖಾ ಮಠದ ವ್ಯವಸ್ಥಾಪಕ ಹೆಚ್.ಕೆ. ಚಂದ್ರಶೇಖರ್ ವಂದಿಸಿದರು. ಬಿಜಿಎಸ್ ಕಾಲೇಜು ಉಪನ್ಯಾಸಕ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

