ಕಾಡಾನೆ ಹಿಂಡು ದಾಳಿ: ಬೆಳೆ ನಷ್ಟ, ರೈತರ ಆಕ್ರೋಶ
ಕ.ಪ್ರ.ವಾರ್ತೆ ರಾಮನಾಥಪುರ ಡಿ. 19
ಇಲ್ಲಿಗೆ ಸಮೀಪದ ಹಂಡ್ರಂಗಿ ಪಂಚಾಯ್ತಿ ವ್ಯಾಪ್ತಿಗೆ ಬರುವ ಕಾರಗಲ್ಲು ಗ್ರಾಮದ ರೈತ ಆನಂದ ಎಂಬವರ ಮೆಕ್ಕೆ ಜೋಳದ ಹೊಲಕ್ಕೆ ಬುಧವಾರ ಮಧ್ಯರಾತ್ರಿ ಕಾಡಾನೆಗಳ ಹಿಂಡು ಲಗ್ಗೆ ಇಟ್ಟು ಕಟಾವಿಗೆ ಬಂದಿದ್ದ ಜೋಳದ ಫಸಲನ್ನು ಸಂಪೂರ್ಣವಾಗಿ ನಾಶ ಮಾಡಿವೆ.
ಅಳಲು: ರೈತ ಆನಂದ ಮಾತನಾಡಿ, ತಮಗೆ ಸೇರಿದ ಜಮೀನಿನ ಸ.ನಂ. 1431ರಲ್ಲಿ ಇರುವ 2 ಎಕರೆ ಹೊಲದಲ್ಲಿ ಒಂದು ಬಿತ್ತನೆ ಬ್ಯಾಗ್ # 1400 ನಂತೆ 3 ಬ್ಯಾಗ್ಬಿತ್ತನೆ ಮೆಕ್ಕೆ ಜೋಳ ಖರೀದಿಸಿ ತಂದು ಬಿತ್ತನೆ ಮಾಡಿ # 15,000 ರಸಗೊಬ್ಬರವನ್ನು ತಂದು ಹಾಕಿ ಈ ಬಾರಿ ಒಳ್ಳೆಯ ಫಸಲು ಬಂದಿದ್ದು, ಸಮೀಪದ ಸಿದ್ದಾಪುರ ಗ್ರಾಮದ ಕಾವೇರಿ ಗ್ರಾಮೀಣ ಬ್ಯಾಂಕಿನಲ್ಲಿ 1 ಲಕ್ಷದ ಅರವತ್ತು ಸಾವಿರ ಬೆಳೆ ಸಾಲವನ್ನು ತೀರಿಸಬಹುದೆಂಬ ಆಶಾಗೋಪುರ ನುಚ್ಚುನೂರಾಗಿದೆ. ಮತ್ತಷ್ಟು ಸಾಲದ ಬಾಧೆಯಲ್ಲಿ ಸಿಲುಕುವಂತಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು. ಸ್ಥಳಕ್ಕೆ ಆಗಮಿಸಿದ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಹೊನಗಾನಹಳ್ಳಿ ಹೆಚ್.ಇ. ಜಗದೀಶ್ ನೊಂದ ರೈತನಿಗೆ ಸಾಂತ್ವನ ಹೇಳಿ ಮಾತನಾಡಿ, ಪ್ರತಿವರ್ಷ ಈ ಭಾಗದ ರೈತರು ಕಷ್ಟಪಟ್ಟು ಬೆಳೆದ ಫಸಲು ಕೈಸೇರುವ ಹೊತ್ತಿಗೆ ಈ ರೀತಿ ಕಾಡುಪ್ರಾಣಿಗಳ ಹಾವಳಿಗೆ ತುತ್ತಾಗುತ್ತಿದ್ದರೂ ಸಂಬಂಧಪಟ್ಟ ಇಲಾಖೆಯವರು ಕ್ರಮಕೈಗೊಳ್ಳದೆ ನಿರ್ಲಕ್ಷಿಸುತ್ತಿರುವುದು ಒಂದು ದುರಂತ ಎನಿಸುತ್ತಿದೆ ಎಂದರು.
ಪಟಾಕಿ ನೀಡುತ್ತಿಲ್ಲ: ಇಲ್ಲಿನ ಸುತ್ತಮುತ್ತಲಿನ ಅರಣ್ಯದಲ್ಲಿ ಕಾಡಾನೆಗಳು ಬೀಡು ಬಿಟ್ಟಿದ್ದು, ಕಳೆದ ಒಂದು ತಿಂಗಳಿನಿಂದ ಕಾಡಾನೆಗಳ ಹಿಂಡು ಈ ಭಾಗದ ಬಾಣಾವರ, ಆಲದ ಮರ ಗೇಟ್, ಸುಳುಗೋಡು ಸೋಮವಾರ, ಇತ್ತಕಡೆಯಿಂದ ಆಗಮಿಸಿ ಬಂದು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಗ್ರಾಮಗಳ ಜಮೀನಿನಲ್ಲಿ ಸತತವಾಗಿ ಹಾವಳಿ ನಡೆಸಿ ಕಷ್ಟಪಟ್ಟು ಬೆಳೆದ ಬೆಳೆಯನ್ನು ನಾಶಪಡಿಸುತ್ತಿದ್ದರೂ ಅರಣ್ಯ ಇಲಾಖೆಯವರು ಮಾತ್ರ ಬೇಜವಾಬ್ದಾರಿ ಪ್ರದರ್ಶಿಸುತ್ತಾ ಇತ್ತ ಕಡೆ ಸುಳಿಯದೆ ಕಾಡಾನಗಳನ್ನು ಓಡಿಸುವ ತಂಟೆಗೂ ಹೋಗದೆ ಇಲ್ಲಿನ ರೈತರಿಗೆ ಆನೆಗಳನ್ನು ಓಡಿಸಲು ಪಟಾಕಿಗಳನ್ನು ನೀಡುತ್ತಿಲ್ಲ.
ರೈತ ಸಮುದಾಯ ಕಂಗಾಲು: ಕಳೆದ ವರ್ಷ ಕಾಡಾನೆಗಳ ಹಿಂಡಿನಿಂದ ಬೆಳೆ ನಷ್ಟ ಹೊಂದಿದ ರೈತರಿಗೆ ಸರಿಯಾಗಿ ಬೆಳೆ ಪರಿಹಾರ ಸಹ ನೀಡದೆ ಶಿಫಾರಸ್ಸು ಮಾಡಿದ ರೈತರಿಗೆ ಮಾತ್ರ ಹೆಚ್ಚು ಪರಿಹಾರ ಸಿಕ್ಕಿದೆ. ಈ ರೀತಿ ತಾರತಮ್ಯದಿಂದಾಗಿ ನಿಜವಾಗಿ ಸಂಕಷ್ಟದಿಂದ ಬೆಳೆ ಬೆಳೆದ ರೈತ ಬೆಳೆ ಹಾನಿಗೊಳಗಾಗಿ ಸರಿಯಾದ ಪರಿಹಾರ ದೊರಕದೆ ಒಪ್ಪತ್ತು ಊಟಕ್ಕೂ ಕಂಗಾಲಾಗಿ ಕೂಲಿ ಮಾಡಿ ತಮ್ಮ ಜೀವನ ಸಾಗಿಸುವಂತಹ ಪರಿಸ್ಥಿತಿ ಉಂಟಾಗಿದೆ.
ಪರಿಹಾರಕ್ಕೆ ಆಗ್ರಹ: ಈ ರೀತಿ ಮಾನವ ಕಾಡು ಪ್ರಾಣಿಗಳ ಸಂಘರ್ಷಕ್ಕೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕೊನೆಯೇ ಇಲ್ಲವಾಗಿದೆ. ಕೂಡಲೇ ಜನಪ್ರತಿನಿಧಿಗಳು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ನೊಂದ ರೈತರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಶ್ರೀನಿವಾಸ್, ಕೆ.ಪಿ. ಪರಮೇಶ್, ವೆಂಕಟೇಶ್, ಧರಣೇಶ್, ಪ್ರದೀಪ್, ರವಿಚಂದ್ರ, ಅರುಣ, ರುಕ್ಮಿಣಿ, ಸಣ್ಣಮ್ಮ, ಶಶಿಕುಮಾರ್, ಕೆ.ಡಿ. ಪರಮೇಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

