ಹೊರ ಹೋಗುವ ಕೈದಿಗಳಿಗೆ ಬದುಕಲು ಸಾಕಷ್ಟು ಅವಕಾಶ
ಕ.ಪ್ರ.ವಾರ್ತೆ ಹಾಸನ ಡಿ. 19
ಆರೋಪಿಗಳಾಗಿ ಬರುವ ಕೈದಿಗಳು ಶಿಕ್ಷೆ ಮುಗಿಸಿ ಹೊರ ಹೋಗುವಾಗ ಬದುಕಲು ಸಾಕಷ್ಟು ಅವಕಾಶಗಳಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ತಿಳಿಸಿದರು.
ನಗರದ ಕಾರಾಗೃಹದಲ್ಲಿ ದಲಿತ ಸೇನೆ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಕಾರಾಗೃಹ ಜನಪರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಇರುವ ಉತ್ತಮ ವಾತಾವರಣವನ್ನು ಹಾಳು ಮಾಡುವ ಕೆಲ ಅಪರಾಧಿಗಳು ಇದ್ದಾರೆ. ಅಂತಹವರಿಗೆ ಶಿಕ್ಷೆ ನೀಡಿ ಪರಿವರ್ತನೆ ಮಾಡುವ ಕೆಲಸ ಬಂಧಿಖಾನೆ ಮಾಡುತ್ತಿದೆ ಎಂದು ಹೇಳಿದರು.
ಸುಧಾರಣೆಗೆ ಕ್ರಮ: ಜೈಲುಗಳ ಮೇಲೆ ಕೆಲ ಆರೋಪಗಳು ಕೇಳಿ ಬರುತ್ತಿದ್ದು, ಈ ನಿಟ್ಟಿನಲ್ಲಿ ಕ್ರಮ ಗೈಗೊಳ್ಳಲಾಗುತ್ತಿದೆ ಎಂದು ಅವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.
ಒಬ್ಬ ಮನುಷ್ಯ ಕೆಟ್ಟವನು ಆಗಲು ಕೇವಲ ಮೊಬೈಲ್ ಒಂದು ಇದ್ದರೇ ಸಾಕು. ಒಳ್ಳೆಯವನಾಗಿ ಪರಿವರ್ತನೆ ಹೊಂದಲು ಕೆಲ ಸೀಮಿತ ದಾರಿಗಳಿವೆ. ನಮ್ಮ ಬದುಕಿನಲ್ಲಿ ಏನೇ ಸಮಸ್ಯೆ ಎದುರಾದರೂ ಇನ್ನೊಬ್ಬರ ಬದುಕಿನ ಮೇಲೆ ನಾವು ಹೋಗಬಾರದು ಎಂದ ಅವರು, ಇಲ್ಲಿಯವರೆಗೂ ಇರುವ ಇತಿಹಾಸವನ್ನು ನೋಡಿದಾಗ ಮನುಷ್ಯ ತಪ್ಪು ಮಾಡಿರುವ ಉದಾಹರಣೆಯನ್ನು ಕಾಣಬಹುದು. ಆದರೆ, ಕಾರಾಗೃಹ ಪ್ರಾರಂಭವಾದ ದಿನದಿಂದ ಇಲ್ಲಿಯವರೆಗೂ ತಪ್ಪನ್ನು ಮಾಡಿದ ಮನುಷ್ಯನ ಬದುಕಿನಲ್ಲಿ ಮಾಡಿದ ತಪ್ಪು ತಿದ್ದಿ, ಸುಧಾರಣೆಗೊಂಡು ಹೊರಹೋಗುವಂಥ ಕೆಲಸ ಮಾಡಲಾಗುತ್ತಿದೆ ಎಂದರು.
ಹಕ್ಕು ಯಾರಿಗೂ ಇಲ್ಲ: ಯಾವ ಸಂದರ್ಭದಲ್ಲೂ ಮತ್ತೊಬ್ಬರ ಅಧಿಕಾರವನ್ನು ಯಾವ ಜಾತಿ ಹೆಸರಿನಲ್ಲೂ ಧಕ್ಕೆ ಮಾಡುವಂಥ ಅಧಿಕಾರ ಯಾರಿಗೂ ಇಲ್ಲ. ಪ್ರತಿಯೊಬ್ಬರಿಗೂ ಬದುಕುವ ಹಕ್ಕಿದೆ. ಕಾನೂನು ಅರಿವು ಇಲ್ಲದ ವ್ಯಕ್ತಿ ಮೇಲೆ ಸವಾರಿ ಮಾಡುವಂತ ಹಕ್ಕು ಯಾರಿಗೂ ನೀಡಿಲ್ಲ ಎಂದು ಹೇಳಿದರು.
ಗುರಿ ಹೊಂದಿದ್ದೇವೆ: ನಗರದ ಬಂಧಿಖಾನೆಯಲ್ಲಿ 337 ಜನ ಖೈದಿಗಳಿದ್ದು, ಪ್ರತಿಯೊಬ್ಬರೂ ಪರಿವರ್ತನೆಗೊಂಡು ಹೊರ ಹೋಗಬೇಕೆಂಬುದು ನಮ್ಮ ಆಶಯವಾಗಿದೆ ಎಂದು ಹೇಳಿದರು.
ಮನಪರಿವರ್ತನೆಯ ಗುರಿ: ಬಂಧಿಖಾನೆ ಅಧಿಕಾರಿ ಕೃಷ್ಣಮೂರ್ತಿ ಮಾತನಾಡಿ, ನಗರದ ಬಂಧಿಖಾನೆಯಲ್ಲಿರುವ 337 ಖೈದಿಗಳಲ್ಲಿ 8 ಜನರು ಬಿಟ್ಟರೆ ಉಳಿದವರು ಉತ್ತಮರೇ ಆಗಿದ್ದಾರೆ. ಇವರನ್ನು ಪರಿವರ್ತನೆ ಮಾಡಿ ಮನುಷ್ಯರಾಗಿ ಮಾಡುವ ಗುರಿ ಹೊಂದಿದ್ದೇವೆ ಎಂದು ಹೇಳಿದರು. ಈ ಹಿಂದೆ ಜೈಲಿನಲ್ಲಿ ಗಾಂಜಾ, ಮೊಬೈಲ್ ಇರುವುದು ಕಂಡು ಬಂದಿದ್ದು, ಪ್ರಸ್ತುತದಲ್ಲಿ ಇಂತಹ ಪ್ರಕರಣಗಳು ಕಂಡು ಬಂದಿಲ್ಲ. ನಿಯಂತ್ರಣಕ್ಕೆ ತರಲಾಗಿದೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್, ಉತ್ತಮವಾಗಿ ಕೆಲಸ ನಿರ್ವಹಿಸುವ ಮೂಲಕ ಆಗುತ್ತಿದ್ದ ಅಪರಾದವನ್ನು ಕಡಿಮೆಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ದಕ್ಷ ಅಧಿಕಾರಿ ಬಂದಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು.
ನಗರಸಭೆ ಅಧ್ಯಕ್ಷೆ ಶ್ರೀವಿದ್ಯಾ ಆನಂದ್, ಹಿರಿಯ ಪತ್ರಕರ್ತ ಆರ್.ಪಿ. ವೆಂಕಟೇಶ್ ಮೂರ್ತಿ, ದಲಿತ ಸೇನೆ ರಾಜ್ಯ ಕಾನೂನು ಸಲಹೆಗಾರ ಸತೀಶ್ ಕಟ್ಟಾಯ, ವಿಶ್ವಹಿಂದು ಪರಿಷತ್ ಕಾರ್ಯದರ್ಶಿ ಕಟ್ಟಾಯ ಶಿವಕುಮಾರ್, ಕರವೇ ಜಿಲ್ಲಾಧ್ಯಕ್ಷ ಸಿ.ಡಿ. ಮನುಕುಮಾರ್, ಹರೀಶ್ ಗೌಡ, ಸಕೀಬ್, ಶಿವು, ರವಿಕುಮಾರ್, ವಕೀಲರಾದ ಭಾಸ್ಕರ್ ರಾವ್, ದಲಿತ ಹಿರಿಯ ಮುಖಂಡ ರಾಜೇಂದ್ರ, ದಸಾರ ಕೊಪ್ಪಲು ಗ್ರಾಪಂ ಸದಸ್ಯ ಕುಮಾರ್, ಚಂದ್ರು, ಕೈದಿಗಳು ಇದ್ದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

